More

    ಅಂಗನವಾಡಿ ಮಕ್ಕಳ ಭೌತಿಕ ಕಲಿಕಾಮಟ್ಟ ಹೆಚ್ಚಿಸಲು ಮುಂದಾದ ಜಿಪಂ : ಉಪಯುಕ್ತ ಕ್ರಮಗಳ ಬಗ್ಗೆ ಅಧ್ಯಯನ

    ರಾಮನಗರ : ಈಗಾಗಲೇ ಜಿಲ್ಲೆಯ ಅಂಗನವಾಡಿಗಳನ್ನು ಮಕ್ಕಳ ಸ್ನೇಹಿ ಆಗಿಸುವಲ್ಲಿ ಮಹತ್ವದ ಕಾರ್ಯನಿರ್ವಹಿಸಿರುವ ಜಿಲ್ಲಾ ಪಂಚಾಯಿತಿ ಮತ್ತಷ್ಟು ಉಪಯುಕ್ತ ಕ್ರಮಗಳನ್ನು ಕೈಗೊಳ್ಳಲು ನೆರೆಯ ತೆಲಂಗಾಣ ರಾಜ್ಯಕ್ಕೆ ಭೇಟಿ ಅಧ್ಯಯನ ನಡೆಸಿದೆ. ಜಿಲ್ಲಾ ಪಂಚಾಯಿತಿ ಸಿಇಒ ಇಕ್ರಂ ನೇತೃತ್ವದಲ್ಲಿ ತೆಲಂಗಾಣ ರಾಜ್ಯದ ವಿವಿಧ ಅಂಗನವಾಡಿಗಳಿಗೆ ಮೂರು ದಿನಗಳ ಕಾಲ ಭೇಟಿ ನೀಡಿ ಮಕ್ಕಳ ಕಲಿಕೆಗಾಗಿ ಅನುಸರಿಸಿರುವ ಕ್ರಮಗಳ ಬಗ್ಗೆ ಅಧ್ಯಯನ ನಡೆಸಿದ್ದಲ್ಲದೇ, ಸ್ಥಳೀಯರಿಂದ ಮಾಹಿತಿಯನ್ನು ಕಲೆ ಹಾಕಿದೆ.

    ಅಜಿಂ ಪ್ರೇಮ್‌ಜೀ ಸಾಧನೆ: ಬಾಲ್ಯ ಶಿಕ್ಷಣ ಮಕ್ಕಳ ಭವಿಷ್ಯದ ಶಿಕ್ಷಣಕ್ಕೆ ಬುನಾದಿ ಆಗಿರುವ ಕಾರಣ ತೆಲಂಗಾಣದ ಹಲವಾರು ಜಿಲ್ಲೆಗಳಲ್ಲಿ ಅಜೀಂ ಪ್ರೇಮ್‌ಜೀ ೌಂಡೇಷನ್ ಬಾಲ್ಯ ಶಿಕ್ಷಣದ ಉಪಕ್ರಮಗಳನ್ನು ಅಂಗನವಾಡಿಗಳಲ್ಲಿ ಅಳವಡಿಸಿದೆ. ಈ ಮೂಲಕ ಮಕ್ಕಳು ಶಾಲೆಗೆ ಸೇರುವ ಮುನ್ನವೇ ಕಲಿಕೆಯಲ್ಲಿ ಅವರನ್ನು ಸದೃಢ ಮಾಡುವ ಕೆಲಸವನ್ನು ಫೌಂಡೇಷನ್ ಮಾಡುತ್ತಿದೆ. ಇದನ್ನು ರಾಮನಗರ ಜಿಲ್ಲೆಯಲ್ಲಿಯೂ ಅಳವಡಿಸಬೇಕು ಎನ್ನುವ ಕಾರಣಕ್ಕೆ ಜಿಪಂ ಸಿಇಒ ಇಕ್ರಂ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಸಿ.ವಿ. ರಾಮನ್ ಅವರು ತೆಲಂಗಾಣದ ಸಂಘರೆಡ್ಡಿ ಜಿಲ್ಲೆಗೆ ಭೇಟಿ ನೀಡಿ ಅಧ್ಯಯನ ನಡೆಸಿದೆ.

    ನೆರವಿಗೆ ಮೊರೆ: ಈಗಾಗಲೇ ಜಿಲ್ಲೆಯಲ್ಲಿ ಬಾಷ್, ಟೊಯೋಟಾ ಸೇರಿದಂತೆ ವಿವಿಧ ದೊಡ್ಡ ಕಂಪನಿಗಳ ಸಿಎಸ್‌ಆರ್ ನಿಧಿ ಅಡಿ ಹಾಗೂ ಸಂಸ್ಥೆಯ ಫೌಂಡೇಷನ್ ನಿಧಿಯಡಿ ಜಿಲ್ಲೆಯ ವಿವಿಧ ಅಂಗನವಾಡಿಗಳನ್ನು ಹೈಟೆಕ್ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ಇದಕ್ಕೆ ಕಂಪನಿಗಳಿಂದಲೂ ಉತ್ತಮ ಸಹಕಾರ ದೊರೆತಿರುವ ಕಾರಣ ಅಂಗನವಾಡಿಗಳು ಮಕ್ಕಳ ನೆಚ್ಚಿನ ತಾಣವಾಗಿ ಬದಲಾಗಿವೆ. ಇದರ ನಡುವೆ ತೆಲಂಗಾಣದಲ್ಲಿ ಶಾಲಾ ಪೂರ್ವ ಶಿಕ್ಷಣಕ್ಕೆ ಕಳೆದ 4 ವರ್ಷಗಳಿಂದಲೂ ತನ್ನದೇ ಆದ ಕೊಡುಗೆ ನೀಡುತ್ತಿರುವ ನೆರವು ಪಡೆಯಲು ಜಿಪಂ ಮುಂದಾಗಿದೆ.

    ಜಿಲ್ಲೆಯಲ್ಲಿ 3-6 ವರ್ಷದೊಳಗಿನ ಮಕ್ಕಳ ಭೌತಿಕ ಶಿಕ್ಷಣ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಸ್ನೇಹ ಎಂಬ ಎನ್‌ಜಿಒ ಕೆಲಸ ಮಾಡುತ್ತಿದ್ದು, ಇದರ ಜತೆಗೆ ಅಜೀಂ ಪ್ರೇಮ್‌ಜೀ ಜಿ ಫೌಂಡೇಷನ್ ನೆರವು ಪಡೆದುಕೊಳ್ಳಲಿದೆ. ಅಂಗನವಾಡಿಗಳಲ್ಲಿನ ದೋಷಗಳಿಂದಾಗಿ ಹೆಚ್ಚಿನವರು ಮಕ್ಕಳನ್ನು ಕಿಂಡರ್‌ಗಾರ್ಡನ್ ಮತ್ತು ಪ್ರೀಸ್ಕೂಲ್‌ಗಳಿಗೆ ಮಕ್ಕಳನ್ನು ದಾಖಲು ಮಾಡುತ್ತಿದ್ದರು.

    ಆದರೆ ಇದಕ್ಕೆ ಸೆಡ್ಡು ಹೊಡೆಯುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಾರ್ಯೋನ್ಮುಖವಾದ ನಂತರ ಅಂಗವಾಡಿಗಳ ಸ್ವರೂಪವೇ ಬದಲಾಗಿದೆ. ಜಿಲ್ಲೆಯಲ್ಲಿ ಕಲಿಕಾ ವಾತಾವರಣ, ಗೋಡೆಗಳ ಮೇಲೆ ಚಿತ್ತಾರ, ನೆಲದಲ್ಲಿ ಅಕ್ಷರ ಮತ್ತು ಗಣಿತ ಜ್ಞಾನದ ಚಿತ್ತಾರ ಹೀಗೆ ವಿವಿಧ ಪ್ರಯತ್ನಗಳನ್ನು ಮಾಡಿದೆ. ಇದೀಗ ತೆಲಂಗಾಣ ಮಾದರಿಯಲ್ಲಿ ಅಂಗವಾಡಿಗಳಿಗೆ ಮತ್ತಷ್ಟು ಹೈಟೆಕ್ ಸ್ಪರ್ಶ ನೀಡಲು ಮುಂದಾಗಿರುವುದು ಸಂತಸದ ವಿಚಾರವಾಗಿದ್ದು, ಈ ಕಾರ್ಯ ಶೀಘ್ರ ಕಾರ್ಯರೂಪಕ್ಕೆ ಬರಬೇಕಿದೆ.

     

    ಜಿಲ್ಲೆಯಲ್ಲಿನ ಅಂಗವಾಡಿಗಳ ಸ್ವರೂಪವನ್ನು ಬದಲಿಸುವ ನಿಟ್ಟಿನಲ್ಲಿ ತೆಲಂಗಾಣ ರಾಜ್ಯದಲ್ಲಿ ಅಧ್ಯಯನ ಮಾಡಿಕೊಂಡು ಬರಲಾಗಿದೆ. ಅಲ್ಲಿ ಕೆಲ ಫೌಂಡೇಷನ್‌ಗಳು ಉತ್ತಮವಾಗಿ ಕೆಲಸ ಮಾಡಿವೆ.
    ಇಕ್ರಂ ಜಿಪಂ ಸಿಇಒ, ರಾಮನಗರ

    ಮಕ್ಕಳ ಭೌತಿಕ ಕಲಿತಾ ಮಟ್ಟ ಹೆಚ್ಚಿಸುವ ಸಲುವಾಗಿ ಸ್ನೇಹಾ ಎನ್‌ಜಿಒ ಜತೆಗೂಡಿ ತೆಲಂಗಾಣದಲ್ಲಿ ಅಧ್ಯಯನ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಅಧ್ಯಯನ ಪ್ರವಾಸ ನಡೆಸಲಾಗುವುದು.
    ಸಿ.ವಿ.ರಾಮನ್ ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts