ಅಂಗನವಾಡಿಗಳಿಗೆ ಖೋ ಭೀತಿ

ಪ್ರಕಾಶ್ ಮಂಜೇಶ್ವರ ಮಂಗಳೂರು
ಸರ್ಕಾರಿ ಶಾಲೆಗಳ ಬಲವರ್ಧನೆ ಉದ್ದೇಶದಿಂದ ಎಲ್‌ಕೆಜಿ, ಯುಕೆಜಿ ತರಗತಿಗಳನ್ನು ಆರಂಭಿಸುವ ರಾಜ್ಯ ಸರ್ಕಾರದ ತೀರ್ಮಾನ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಲ್ಲಿ ಆತಂಕ ಹುಟ್ಟಿಸಿದೆ.
ಸರ್ಕಾರದ ಹೊಸ ನಡೆಯಿಂದ ಅಂಗನವಾಡಿ ಕೇಂದ್ರಗಳು ಅಸ್ತಿತ್ವ ಕಳೆದುಕೊಳ್ಳುವ ಭೀತಿ ಗೌರವಧನದಲ್ಲಿ ದೀರ್ಘಕಾಲದಿಂದ ದುಡಿಯುತ್ತಿರುವ ಬಡ ಹಾಗೂ ಮಧ್ಯಮ ವರ್ಗದ ಹೆಣ್ಣುಮಕ್ಕಳಿಗೆ ಎದುರಾಗಿದೆ.

ಸರ್ಕಾರಿ ಶಾಲೆಗಳ ಬಲವರ್ಧನೆಗೆ ಕರ್ನಾಟಕ ಪಬ್ಲಿಕ್ ಶಾಲೆ(ಕೆಪಿಎಸ್)ಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ಹಾಗೂ ರಾಜ್ಯದ 1,000 ಸರ್ಕಾರಿ ಶಾಲೆಗಳಲ್ಲಿ ಈ ವರ್ಷ ಆಂಗ್ಲ ಮಾಧ್ಯಮ ತರಗತಿ ಆರಂಭಿಸಲು ಸರ್ಕಾರ ಮುಂದಾಗಿದೆ. ಭವಿಷ್ಯದಲ್ಲಿ ಈ ವ್ಯವಸ್ಥೆ ವಿಸ್ತರಣೆಗೊಳ್ಳುವ ಕಾರಣ ಅಂಗನವಾಡಿಗಳಲ್ಲಿ ಈಗ ಇರುವ ಮಕ್ಕಳು ಕೂಡ ಕಡಿಮೆಯಾಗಿ, ಅಲ್ಲಿರುವ ಹುದ್ದೆಗಳು ನಷ್ಟವಾಗಬಹುದು ಎನ್ನುವುದು ಅಂಗನವಾಡಿ ನೌಕರರ ದಿಗಿಲು.

ಸಂಯೋಜನೆ ಸಾಧ್ಯ: ಸರ್ಕಾರಿ ಶಾಲೆ ಮತ್ತು ಅಂಗನವಾಡಿ ಕೇಂದ್ರಗಳು ಒಂದಕ್ಕೊಂದು ಪೂರಕವಾಗಿ ಕಾರ‌್ಯನಿರ್ವಹಿಸಲು ಸಾಧ್ಯ. ಪ್ರಥಮ ಹಂತದಲ್ಲಿ ಶಾಲಾ ಆವರಣದಲ್ಲಿರುವ ಅಂಗನವಾಡಿ ಕೇಂದ್ರಗಳ ಮಕ್ಕಳಿಗೆ ಎಲ್‌ಕೆಜಿ ಮತ್ತು ಯುಕೆಜಿ ಶಿಕ್ಷಣ ಒದಗಿಸುವ ಜವಾಬ್ದಾರಿಯನ್ನು ಶಾಲಾ ಶಿಕ್ಷಕರು ವಹಿಸಿಕೊಳ್ಳಬಹುದು. ಮಕ್ಕಳ ಪೌಷ್ಟಿಕತೆ, ಆರೋಗ್ಯ, ಪಾಲನೆ ಸಹಿತ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಇತರ ಜವಾಬ್ದಾರಿಗಳನ್ನು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ನಿರ್ವಹಿಸಬಹುದು ಎನ್ನುವುದು ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿ ಎನ್.ಶಿವಪ್ರಕಾಶ್ ಅಭಿಪ್ರಾಯ.
ಶಾಲಾ ಕ್ಯಾಂಪಸ್ಸಿನಿಂದ ದೂರವಿರುವ ಅಂಗನವಾಡಿಗಳನ್ನೇ ಮೇಲ್ದರ್ಜೆಗೇರಿಸಿ ಅಲ್ಲಿಯೇ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳನ್ನು ಆರಂಭಿಸಬಹುದು. ಅಲ್ಲಿಗೆ ಹತ್ತಿರದ ಸರ್ಕಾರಿ ಶಾಲೆಯ ಶಿಕ್ಷಕರ ನೆರವನ್ನು ಪಡೆಯಬಹುದು. ಇದರಿಂದ ಅಂಗನವಾಡಿ ಕೇಂದ್ರಗಳು ಹಾಗೂ ಸರ್ಕಾರಿ ಶಾಲೆಗಳು ಜತೆಯಾಗಿ ಬಲವರ್ಧನೆಯಾಗಬಹುದು ಎನ್ನುತ್ತಾರವರು.

ಸರ್ಕಾರಿ ಶಾಲೆ ಉಳಿಸಲು ಯತ್ನ:  ವಿದ್ಯಾರ್ಥಿಗಳ ಕೊರತೆಯಿಂದ ವರ್ಷದಿಂದ ವರ್ಷಕ್ಕೆ ಕಡಿತಗೊಳ್ಳುತ್ತಿರುವ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳಲು, ಆಂಗ್ಲ ಮಾಧ್ಯಮದ ವ್ಯಾಮೋಹದಿಂದ ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗಿರುವ ಬಡ ಕುಟುಂಬಗಳ ರಕ್ಷಣೆಗೆ ಹೊಸ ಯೋಜನೆ ಸೂಕ್ತವಾಗಿದೆ ಎನ್ನುವ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿದೆ.

ಅಂಗನವಾಡಿಗಳಲ್ಲೂ ಮಕ್ಕಳ ಸಂಖ್ಯೆ ಇಳಿಕೆಯಾಗುತ್ತಿದೆ. ಅಂಗನವಾಡಿಗಳಲ್ಲಿ ಕಲಿತ ಮಕ್ಕಳೂ ಖಾಸಗಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ಪಡೆಯುತ್ತಿದ್ದಾರೆ. ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿ, ಸಾಹಿತಿಗಳು, ಹೋರಾಟಗಾರರು ತಮ್ಮ ಮಕ್ಕಳನ್ನು ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಕಳುಹಿಸಿ ಕನ್ನಡ ಶಾಲೆಗಳ ಉಳಿವಿಗೆ ಹೋರಾಟ ನಡೆಸುತ್ತಿರುವುದರಿಂದ ಅದು ಉಪಯೋಗವಾಗಿಲ್ಲ. ಗುಣಮಟ್ಟ, ಪರಿಣಿತ ಸಂಪನ್ಮೂಲ ವ್ಯಕ್ತಿಗಳು ಇಲ್ಲದ ಆಂಗ್ಲ ಮಾಧ್ಯಮ ಶಾಲೆಗಳು ಕೂಡ ದುಬಾರಿ ಶುಲ್ಕ ವಿಧಿಸಿ ಬಡವರ ಕೊಳ್ಳೆ ಹೊಡೆಯುತ್ತಿದೆ ಎಂಬುದು ಸಾರ್ವತ್ರಿಕವಾಗಿ ಕೇಳಿಬರುತ್ತಿರುವ ಆಕ್ಷೇಪಣೆಗಳು.

ಆಂಗ್ಲ ಮಾಧ್ಯಮ ತರಗತಿ ಆರಂಭಿಸುವುದರಿಂದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚುತ್ತದೆ ಎಂದು ನಿರೀಕ್ಷಿಸಲಾಗಿದೆ. ಕೆಪಿಎಸ್ ಹಾಗೂ ಇಂಗ್ಲಿಷ್ ಮಾಧ್ಯಮ ಆರಂಭಿಸಲು ಆಯ್ಕೆಯಾದ ಇತರ ಶಾಲೆಗಳಲ್ಲಿ ಬದಲಾವಣೆಗೆ ಪೂರಕ ಸಿದ್ಧತೆ ನಡೆದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಅಧಿಕಗೊಂಡ ಮಕ್ಕಳ ಸಂಖ್ಯೆ ಬಗ್ಗೆ ಜುಲೈ ವೇಳೆಗೆ ತಿಳಿಯಬಹುದು.
– ವೈ.ಶಿವರಾಮಯ್ಯ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ, ದ.ಕ.

ಸರ್ಕಾರಿ ಶಾಲೆಗಳಲ್ಲಿ ಆರಂಭಗೊಳ್ಳುವ ಪ್ರಿಸ್ಕೂಲ್‌ಗಳಲ್ಲಿ ನಡೆಸಲು ಉದ್ದೇಶಿಸಿರುವ ಚಟುವಟಿಕೆಗಳನ್ನು ನಾವು ಅಂಗನವಾಡಿ ಕೇಂದ್ರಗಳಲ್ಲಿ ಈಗಾಗಲೇ ನಡೆಸುತ್ತಿದ್ದೇವೆ. ಆದ್ದರಿಂದ ಹೊಸ ವ್ಯವಸ್ಥೆಯಿಂದ ಈಗಾಗಲೇ ಇರುವ ಅಂಗನವಾಡಿ ಕೇಂದ್ರಗಳ ಅಸ್ತಿತ್ವಕ್ಕೆ ಧಕ್ಕೆ ಬರುವ ಸಾಧ್ಯತೆಯೇ ಹೆಚ್ಚು. ಇದರ ಬದಲು ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ ಅಲ್ಲಿ ನಮಗೆ ಎಲ್‌ಕೆಜಿ, ಯುಕೆಜಿ ನಡೆಸಲು ಅವಕಾಶ ಒದಗಿಸಬೇಕು.
– ಜಯಲಕ್ಷ್ಮೀ ಬಿ.ಆರ್, ಅಧ್ಯಕ್ಷೆ, ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘ

Leave a Reply

Your email address will not be published. Required fields are marked *