ಸೌಲಭ್ಯಕ್ಕೆ ಎಎನ್​ಎಫ್ ಸಿಬ್ಬಂದಿಗೆ ಮನವಿ ಮಾಡಿದ ಗುಳ್ಯ ಗ್ರಾಮಸ್ಥರು

ಕಳಸ: ಗಿರಿಜನರ ಹೆಸರಲ್ಲಿ ಬೇರೆಯವರು ಸೌಲಭ್ಯ ಪಡೆಯುತ್ತಿದ್ದಾರೆ. ಆದರೆ ನಾವು ಮಾತ್ರ ನಿಕೃಷ್ಟ ಜೀವನ ನಡೆಸುತ್ತಿದ್ದೇವೆ ಎಂದು ಸಂಸೆ ಗ್ರಾಪಂ ವ್ಯಾಪ್ತಿಯ ಗುಳ್ಯ ಗ್ರಾಮಸ್ಥರು ಎಎನ್​ಎಫ್ ಸಿಬ್ಬಂದಿ ಬಳಿ ಅಳಲು ತೋಡಿಕೊಂಡರು.

ಎಎನ್​ಎಫ್ ತಂಡ ಮಂಗಳವಾರ ಗುಳ್ಯ ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿ ಕೂಂಬಿಂಗ್ ನಡೆಸಿತು. ನಂತರ ಗಿರಿಜನರನ್ನು ಒಗ್ಗೂಡಿಸಿ ಜನಸಂಪರ್ಕ ಸಭೆ ನಡೆಸಿದರು. ಈ ಸಂದರ್ಭ ಗ್ರಾಮಸ್ಥರು ತಮ್ಮ ಸಮಸ್ಯೆ ಸಿಬ್ಬಂದಿಯೊಂದಿಗೆ ಹಂಚಿಕೊಂಡಿದ್ದಾರೆ.

ಮುಖ್ಯ ರಸ್ತೆಯಿಂದ ಗುಳ್ಯಕ್ಕೆ ಸಂರ್ಪಸುವ ರಸ್ತೆ ಸಂಪೂರ್ಣ ಹದಗೆಟ್ಟಿದೆ. ನದಿಗೆ ಸೇತುವೆ ನಿರ್ವಿುಸಬೇಕೆಂಬ ಬೇಡಿಕೆ ಇನ್ನೂ ಈಡೇರಿಲ್ಲ. ಬಿದಿರಿನ ದಬ್ಬೆ ಕಟ್ಟಿ ಅದಕ್ಕೇ ಬೀಳುಗಳನ್ನು ಸುರಿದು ನಾವೇ ಸೇತುವೆ ನಿರ್ವಿುಸಿಕೊಂಡಿದ್ದೇವೆ. ಮಳೆಗಾಲದಲ್ಲಿ ಶಾಲೆಗೆ ಹೋಗುವುದೇ ಸಮಸ್ಯೆ. ಹಾಗಾಗಿ ಬಹುತೇಕ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಕಾಯಿಲೆ ಬಂದರೆ ಸಾವೇ ಗತಿ ಎಂಬಂತಾಗಿದೆ ಎಂದು ಅಹವಾಲು ಸಲ್ಲಿಸಿದರು.

ನಮಗೆ ಬರುವ ಸರ್ಕಾರಿ ಸವಲತ್ತುಗಳು ಬೇರೆಯವರು ಬಳಸಿಕೊಳ್ಳುತ್ತಿದ್ದಾರೆ. ನಮಗೆ ಇಲ್ಲಿ ಆಶ್ರಯ ಮನೆ ಕೊಡುತ್ತಾರೆ. ಆದರೆ ಅದರಲ್ಲಿ ಸಿಗುವ ಅನುದಾನ ಇಲ್ಲಿಗೆ ಬರುವ ವಾಹನದ ಖರ್ಚಿಗೆ ಸರಿಯಾಗಬಹುದು. ಹಾಗಾಗಿ ನಾವು ಅದನ್ನು ಪಡೆದಿಲ್ಲ. ಅರಣ್ಯ ಮತ್ತು ಕಂದಾಯ ಇಲಾಖೆ ಕಿತ್ತಾಟದಿಂದ ನಮಗೆ ಹಕ್ಕುಪತ್ರಗಳೇ ಸಿಕ್ಕಿಲ್ಲ ಎಂದು ದೂರಿದರು.

ಎಲ್ಲ ಮಾಹಿತಿ ಪಡೆದು ಪ್ರತಿಕ್ರಿಯಿಸಿದ ಎಎನ್​ಎಫ್ ಸಿಬ್ಬಂದಿ, ಜಿಲ್ಲಾಧಿಕಾರಿಗೆ ವರದಿ ನೀಡುತ್ತೇವೆ ಎಂದು ಭರವಸೆ ನೀಡಿದರು.