More

  ಜಂಕ್‌ಫುಡ್‌ನಿಂದ ಯುವಜನತೆಯಲ್ಲಿ ರಕ್ತಹೀನತೆ

  ಕೃಷ್ಣರಾಜಸಾಗರ : ಇಂದಿನ ಜಂಕ್‌ಫುಡ್ ಆಹಾರ ಪದ್ಧತಿಯಿಂದ ಯುವ ಜನತೆಯಲ್ಲಿ ರಕ್ತಹೀನತೆ ಕಂಡುಬರುತ್ತಿದೆ. ಹೀಗಾಗಿ ರಕ್ತದ ಪ್ರಮಾಣ ಹೆಚ್ಚಿಸಲು ಪೌಷ್ಟಿಕ ಆಹಾರ ಸೇವನೆ ಅಗತ್ಯ ಎಂದು ಹಿರಿಯ ಆರೋಗ್ಯ ಸಹಾಯಕಿ ಸೌಮ್ಯಾ ತಿಳಿಸಿದರು.
  ಕೆ.ಆರ್.ಸಾಗರ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಕೆ.ಆರ್.ಸಾಗರ ಪದವಿ ಪೂರ್ವಕಾಲೇಜು ಎನ್‌ಎಸ್‌ಎಸ್ ಘಟಕದ ಸಹಯೋಗದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ‘ರಕ್ತಹೀನತೆ ಮುಕ್ತ ಆರೋಗ್ಯ ಕರ್ನಾಟಕ’ ಕಾರ್ಯಕ್ರಮದಡಿ ಏರ್ಪಡಿಸಿದ್ದ ರಕ್ತಹೀನತೆ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
  ಇಂದಿನ ಯುವಕರು, ವಿದ್ಯಾರ್ಥಿಗಳು ಹೆಚ್ಚಾಗಿ ಮನೆಯಲ್ಲಿ ಮಾಡಿದ ಊಟ, ತಿಂಡಿಗಳಿಗಿಂತ ಹೊರಗಿನ ಫಾಸ್ಟ್‌ಫುಡ್, ಜಂಕ್‌ಫುಡ್‌ಗಳಿಗೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಹೀಗಾಗಿ ಹೆಚ್ಚಿನ ಜನರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಆಹಾರ ಕೇವಲ ರುಚಿಯಾಗಿದ್ದರಷ್ಟೇ ಸಾಲದು. ದೇಹದ ಆರೋಗ್ಯ ಬೇಕಾದ ಪೋಷಕಾಂಶಗಳು ಸಹ ಅಗತ್ಯ. ಹೀಗಾಗಿ ರಕ್ತ ವೃದ್ಧಿಗಾಗಿ ಕಬ್ಬಿಣ ಅಂಶವುಳ್ಳ ಸೊಪ್ಪು, ತರಕಾರಿ ಹೆಚ್ಚು ಸೇವನೆ ಮಾಡುವ ಮೂಲಕ ನಿಮ್ಮ ಆರೋಗ್ಯದ ಬಗ್ಗೆ ಎಚ್ಚರ ವಹಿಸಬೇಕು ಎಂದು ಕಿವಿಮಾತು ಹೇಳಿದರು.
  ವೈದ್ಯೆ ಡಾ.ಪ್ರಪುಲ್ಲಾ ಅವರು ಜನರಲ್ಲಿ ಯಾವ ಕಾರಣಕ್ಕೆ ರಕ್ತದಲ್ಲಿ ಎಚ್.ಬಿ. ಕೊರತೆ ಉಂಟಾಗುತ್ತದೆ ಎಂಬುದನ್ನು ತಿಳಿಸಿದರು. ನಂತರ ಕಾಲೇಜಿನ ವಿದ್ಯಾರ್ಥಿಗಳಿಗೆ ರಕ್ತ ಪರೀಕ್ಷೆ ಮಾಡಿ, ಕೊರತೆ ಕಂಡು ಬಂದ ವಿದ್ಯಾರ್ಥಿಗಳಿಗೆ ಅರೋಗ್ಯಾಧಿಕಾರಿಗಳು ಪೌಷ್ಟಿಕ ಆಹಾರ ಸೇವನೆ ಕುರಿತು ಸಲಹೆ ನೀಡಿದರು.
  ಕೆ.ಆರ್.ಸಾಗರ ಗ್ರಾಪಂ ಅಧ್ಯಕ್ಷೆ ಶೃತಿ ಶ್ರೀನಿವಾಸ್, ಉಪಾಧ್ಯಕ್ಷ ರವಿಶಂಕರೇಗೌಡ, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಂ.ಬಿ.ಕುಮಾರ್, ಪ್ರಾಂಶುಪಾಲ ಲಿಂಗರಾಜು, ಆಯುಷ್ ವೈದ್ಯಾಧಿಕಾರಿ ಡಾ. ಸುದೀಪ್, ಹಿರಿಯ ಆರೋಗ್ಯ ಸಹಾಯಕಿ ಸಿ.ಗೀತಾ, ಸಿಎಚ್‌ಒ ಬಸವಣ್ಣ, ಉಪನ್ಯಾಸಕರು, ವಿದ್ಯಾರ್ಥಿಗಳು ಆಶಾ ಕಾಯಕರ್ತೆಯರು ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts