ಅಭಿವೃದ್ಧಿ ಪಥದತ್ತ ಆನೆಕೆರೆ

< ಪ್ರವಾಸೋದ್ಯಮ ಇಲಾಖೆಯಿಂದ 1 ಕೋಟಿ ರೂ. ಅನುದಾನ ಬಿಡುಗಡೆ>

ಆರ್.ಬಿ.ಜಗದೀಶ್ ಕಾರ್ಕಳ

ಕರಿಯಕಲ್ಲು ನಾಡೇ ಎಂದೇ ಖ್ಯಾತಿ ಹೊಂದಿರುವ ಕಾರ್ಕಳವನ್ನಾಳಿದ ಬೈರವರಸರ ಕಾಲಘಟ್ಟದಲ್ಲಿ ನಿರ್ಮಿಸಿದ ಆನೆಕೆರೆ ಅಭಿವೃದ್ಧಿಗಾಗಿ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯಿಂದ 1 ಕೋಟಿ ರೂ. ಅನುದಾನ ಬಿಡುಗಡೆಗೊಂಡಿದೆ.

ಶಾಸಕ ವಿ.ಸುನೀಲ್ ಕುಮಾರ್ ಅವರ ಪ್ರಯತ್ನದ ಫಲವಾಗಿ ಅನುದಾನ ಬಿಡುಗಡೆಗೊಂಡಿದ್ದು, ಐತಿಹಾಸಿಕ ಆನೆಕೆರೆಯಲ್ಲಿ ಇನ್ನಷ್ಟು ಅಭಿವೃದ್ಧಿ ಕಾಮಗಾರಿ ನಡೆಯುವ ಮೂಲಕ ಪ್ರವಾಸಿ ಕೇಂದ್ರವಾಗಿ ಮಾರ್ಪಡಲಿದೆ.

ಏನೆಲ್ಲ ಕಾಮಗಾರಿ?: ಆನೆಕೆರೆಯ ಮಧ್ಯಭಾಗದಲ್ಲಿ ಬೃಹತ್ ಆಕಾರದ ವಿದ್ಯುತ್ ಅಲಂಕೃತ ಸಂಗೀತ ಕಾರಂಜಿ ನಿರ್ಮಾಣವಾಗಲಿದೆ. ಸನಿಹದಲ್ಲಿರುವ ಐತಿಹಾಸಿಕ ಪ್ರಸಿದ್ಧ ಕೆರೆ ಬಸದಿಯ ಸುತ್ತಲು ವಾಕ್‌ಟಾಕ್ ನಿರ್ಮಿಸುವ ಯೋಜನೆ ಒಳಗೊಂಡಿದೆ. ಆ ಮೂಲಕ ಪ್ರವಾಸಿಗರನ್ನು ತನ್ನತ್ತ ಸೆಳೆಯುವ ಶಕ್ತಿಯನ್ನು ಆನೆಕೆರೆ ಹೊಂದಲಿದೆ. ಆರೋಗ್ಯ ಹಿತದೃಷ್ಟಿಯಿಂದ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗಾಗಿ ಎಲ್ಲ ವಯೋಮಾನದವರು ಇದೇ ಪರಿಸರವನ್ನು ಆಯ್ಕೆ ಮಾಡಿಕೊಳ್ಳುವ ಸುಯೋಗ ಕೂಡಿ ಬರಲಿದೆ.

ಕೆರೆ ಬಸದಿ ಇತಿಹಾಸ: ಆರನೇ ಪಾಂಡ್ಯರಾಜನು ಇದೇ ಕೆರೆಯ ಮಧ್ಯದಲ್ಲಿ ಬಸದಿಯನ್ನು ಕಟ್ಟಿಸಿದ್ದು, ಹೀಗಾಗಿ ಇದಕ್ಕೆ ಕೆರೆಬಸದಿ ಎಂಬ ಹೆಸರು ಚಾಲ್ತಿಗೆ ಬಂದಿದೆ. ಬೈರವರಸ ಕಾಲದಲ್ಲಿ ಈ ಕೆರೆಯಲ್ಲಿ ಆನೆಗಳು ನೀರಾಟವಾಡುತ್ತಿದ್ದುದರಿಂದ ಇದಕ್ಕೆ ಆನೆಕೆರೆ ಎಂಬ ಹೆಸರು ಬಂತು.

ಸಣ್ಣ ನೀರಾವರಿ ಇಲಾಖೆಯಿಂದಾಗಿ 24 ಎಕರೆಯಷ್ಟು ವಿಸ್ತೀರ್ಣ ಇದ್ದ ಆನೆಕರೆ 14 ಎಕರೆ ಪ್ರದೇಶಕ್ಕೆ ಕುಗ್ಗಿದೆ. ಬಹುತೇಕ ಪ್ರದೇಶ ಯಾರ‌್ಯಾರದೋ ಬಗಲಿಗೆ ಸೇರಿದೆ.

ಪ್ರಸ್ತುತ ಇರುವಂತಹ ಆನೆಕೆರೆ ಹಾಗೂ ಸಿಗಡಿಕೆರೆ ನಗರದ ಜಲಆಸರೆಯ ಮೂಲ. ಕಡುಬೇಸಿಗೆ ಕಾಲದಲ್ಲೂ ಈ ಕೆರೆಯಲ್ಲಿ ಜಲ ಬತ್ತಿಹೋಗದೇ ಇರುವುದರಿಂದಾಗಿ ಪರಿಸರದ ಬಾವಿಯಲ್ಲಿ ಸಮೃದ್ಧ ಜಲವಿರುತ್ತದೆ. ಇದರಿಂದಾಗಿ ಇಲ್ಲಿನ ನಾಗರಿಕರಿಗೆ ಕುಡಿಯುವ ನೀರಿನ ತತ್ವಾರ ಕಂಡುಬರದಿದ್ದರೂ, ಒಳಚರಂಡಿ ಯೋಜನೆ ನಿಷ್ಕ್ರಿಯವಾಗಿರುವುದರಿಂದಾಗಿ ಬಾವಿ ನೀರು ಕಲುಷಿತಗೊಂಡಿದೆ.

ಇದೇ ಕರೆಯಲ್ಲಿ ಕೆಂಪು ತಾವರೆ ಅರಳುತ್ತಿರುವುದು ಇನ್ನೊಂದು ವಿಶೇಷ. ವಿವಿಧ ಜಾತಿಯ ಮೀನುಗಳು, ಪಕ್ಷಿ ಸಂಕುಲ, ಸಸ್ಯ ಸಂಕುಲಗಳಿಗೆ ಈ ಕೆರೆ ಆಶ್ರಯ ತಾಣವೂ ಆಗಿದೆ.