ಅಪಾಯದಲ್ಲಿ ಆನೆಕೆರೆ ಬಂಡ್

ಹಾನಗಲ್ಲ: ಪಟ್ಟಣದ 40 ಸಾವಿರ ಜನತೆಗೆ ಕುಡಿಯುವ ನೀರಿನ ಮೂಲ ಹಾಗೂ ನೂರಾರು ಎಕರೆ ಅಡಕೆ, ಬಾಳೆ ತೋಟಗಳಿಗೆ ಆಸರೆಯಾಗಿರುವ ಆನೆಕೆರೆಯ (ಏರಿ)ಬಂಡ್ ಕುಸಿಯುತ್ತಿದ್ದು, ಪುರಸಭೆ, ಸಣ್ಣ ನೀರಾವರಿ ಇಲಾಖೆಯ ನಿರ್ಲಕ್ಷ್ಯ್ಕೆ ಸಾಕ್ಷಿಯಾಗಿದೆ.

ಸುಮಾರು 200ಕ್ಕಿಂತ ಅಧಿಕ ಎಕರೆ ಪ್ರದೇಶದ ಆನೆಕೆರೆಯಲ್ಲಿ ಅರ್ಧ ಟಿಎಂಸಿ ನೀರು ಸಂಗ್ರಹವಾಗಿದೆ. ನಾಲ್ಕು ವರ್ಷಗಳ ನಂತರ ಈ ಕೆರೆ ತುಂಬಿ ನಿಂತಿದೆ. ಹಾನಗಲ್ಲ ಹಾಗೂ ಮುಂಡಗೋಡ ತಾಲೂಕಿನ ಝುಡತಿ ಕಾಲುವೆಯಿಂದ ಅಪಾರ ನೀರು ಹರಿದು ಬರುತ್ತಿದೆ. ಕೆರೆ ತುಂಬಿದ ಬಳಿಕ ಕೋಡಿಯ ಮೂಲಕ ಧರ್ವ ನದಿ ಹಾಗೂ ಅಚಗೇರಿ ಕೆರೆಗೆ ಸೇರುತ್ತದೆ.

ಕೆರೆ ಒಡೆಯುವ ಆತಂಕ: ಇತ್ತೀಚಿನ ವರ್ಷಗಳಲ್ಲಿ ಅಚಗೇರಿ ಕೆರೆಗೆ ನೀರು ಹರಿದು ಹೋಗಬೇಕಿದ್ದ ಕೋಡಿ ಮುಚ್ಚಿರುವುದರಿಂದ ನೀರಿನ ಒತ್ತಡಕ್ಕೆ ಆನೆಕೆರೆಯ ಮೇಲಿನ ರಸ್ತೆ (ಏರಿ) ಕುಸಿಯುತ್ತಿದೆ. ಈ ರಸ್ತೆ ಕುಸಿತವಾದರೆ ಕೆರೆಯ ಕೆಳಗಿನ ಪ್ರದೇಶದಲ್ಲಿನ ನೂರಾರು ಎಕರೆ ಅಡಕೆ, ಬಾಳೆ ತೋಟ, ಭತ್ತದ ಗದ್ದೆಗಳಿಗೆ ಅಪಾಯ ತಪ್ಪಿದ್ದಲ್ಲ.

ಆನೆಕೆರೆಯ ನೀರನ್ನು ಶುದ್ಧೀಕರಿಸಿ ಪಟ್ಟಣಕ್ಕೆ ಪುರಸಭೆ ಸರಬರಾಜು ಮಾಡುತ್ತದೆ. ಈ ಆನೆಕೆರೆ ನಿರ್ವಹಣೆ ಸಣ್ಣ ನೀರಾವರಿ ಇಲಾಖೆ ಸುಪರ್ದಿಯಲ್ಲಿದೆ. ಈಗ ಕೆರೆಯ ರಸ್ತೆ ಕುಸಿತವಾಗಿದ್ದು, ಸಣ್ಣ ನೀರಾವರಿ ಇಲಾಖೆ ಒಂದಷ್ಟು ಮಣ್ಣು ಹಾಕಿ ಕೈತೊಳೆದುಕೊಂಡಿದೆ. ಇದು ಕುಸಿತಕ್ಕೆ ಪರಿಹಾರವಲ್ಲ ಎಂಬುದು ರೈತರ ವಾದವಾಗಿದೆ. ಪುರಸಭೆ ನೀರು ಕಾಯ್ದುಕೊಳ್ಳುವ ಉದ್ದೇಶದಿಂದ ತೋಟಗಳಿಗೆ ಹೋಗುವ ನೀರಿನ ತೂಬುಗಳಿಗೆ ಪ್ರತಿವರ್ಷ ಮಣ್ಣು ಹಾಕಿ ಮುಚ್ಚುತ್ತ ಬಂದಿದೆ.

ತಾಲೂಕಿನ ಹಿರೇಕಣಗಿ, ಮಂತಗಿ ಗ್ರಾಮಗಳ ಭಾಗದಿಂದ ಅಪಾರ ನೀರು ಹರಿದು ಬರುವುದರಿಮದ ಆನೆಕೆರೆಯಲ್ಲಿ ಸಂಗ್ರಹವೂ ಅಧಿಕಗೊಳ್ಳುತ್ತಿದೆ. ಕೆರೆಯ ಪೂರ್ವ ಭಾಗದ ಕೋಡಿ ಮಣ್ಣು ಹಾಕಿ ಮುಚ್ಚಲಾಗಿದೆ. ಹೆಚ್ಚುವರಿ ನೀರು ಅಚಗೇರಿ ಕೆರೆ ಸೇರಲು ನಿರ್ವಿುಸಿದ್ದ ರಾಜಕಾಲುವೆ ನಾಗರಿಕರು ಒತ್ತುವರಿ ಮಾಡಿಕೊಂಡಿದ್ದಾರೆ. ಇದು ಕೆರೆಯ ಮೇಲಿನ ಬಂಡ್ ಕುಸಿತಕ್ಕೆ ಕಾರಣವಾಗಿದೆ.

ಕೆರೆ ಬಂಡ್ ಒಡೆದು ಅನಾಹುತ ಸಂಭವಿಸಿದರೆ, ಪಟ್ಟಣದ ನಾಗರಿಕರಿಗೆ ಕುಡಿಯುವ ನೀರಿನ ಸಮಸ್ಯೆ, ತೋಟಗಳು ಕೊಚ್ಚಿ ಹೋಗುವ ಅಪಾಯವಿದೆ. ಹೀಗಾದರೆ, ಜನತೆ, ರೈತರು ಸಂಕಷ್ಟ ತಪ್ಪಿದ್ದಲ್ಲ. ಇದೆಲ್ಲಕ್ಕೂ ಪುರಸಭೆ ಹಾಗೂ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಪರಿಹಾರ ಕಂಡುಕೊಳ್ಳುತ್ತಿಲ್ಲವೇಕೆ ಎಂಬ ಹಲವು ಪ್ರಶ್ನೆ ಎದ್ದು ನಿಂತಿವೆ.

ಈಗಾಗಲೇ ಹಲವು ಬಾರಿ ಕೆರೆಯ ಕೋಡಿ ತೆರವುಗೊಳಿಸುವಂತೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಹಾಗೂ ಪುರಸಭೆ ಅಧಿಕಾರಿಗಳಿಗೆ ರೈತ ಸಮುದಾಯದಿಂದ ಮನವಿ ಸಲ್ಲಿಸಲಾಗಿದೆ. ಆದರೆ, ಯಾವ ಅಧಿಕಾರಿಗಳೂ ಗಂಭೀರವಾಗಿ ಪರಿಗಣಿಸಿಲ್ಲ. ಕೆರೆಯ ಕೋಡಿ ತೆರವುಗೊಳಿಸಿಲ್ಲ. ರಾಜಕಾಲುವೆ ಒತ್ತುವರಿ ತೆರವುಗೊಳಿಸದಿದ್ದರೆ ನ್ಯಾಯಾಲಯದ ಮೆಟ್ಟಿಲೇರುವುದು ಅನಿವಾರ್ಯವಾಗುತ್ತದೆ.
-ಶರಶ್ಚಂದ್ರ ದೇಸಾಯಿ ತೋಟದ ರೈತ

ಕೆರೆಯಲ್ಲಿ ಮೊದಲಿದ್ದಂತೆ 11.5 ಅಡಿಗಳಿಗೆ ಕೋಡಿ ನಿರ್ವಿುಸಿದ್ದೇವೆ. ಎತ್ತರ ಹೆಚ್ಚಿಸಿಲ್ಲ. ಕೆರೆಯಲ್ಲಿ ಒಳಹರಿವು ಹೆಚ್ಚಾಗಿ ನೀರಿನ ಒತ್ತಡ ಹೆಚ್ಚಾಗುತ್ತಿದೆ. ಕೆರೆಯ ಮಧ್ಯಭಾಗದಲ್ಲಿ ಒತ್ತಡ ಉಂಟಾಗುತ್ತಿರುವುದರಿಂದ ಕೆರೆಯ ಒಳಭಾಗದಲ್ಲಿ ಏರಿಗೆ ಕಾಂಕ್ರೀಟ್ ಲೈನಿಂಗ್ ಮಾಡುವ ಅಗತ್ಯವಿದೆ. ಇಲ್ಲದಿದ್ದರೆ ಪ್ರತಿವರ್ಷ ಈ ಸಮಸ್ಯೆ ಕಾಡುತ್ತದೆ. 
– ಎನ್.ಕೆ. ಮಿರ್ಜಿ ಇಂಜಿನಿಯರ್ ಪುರಸಭೆ ಹಾನಗಲ್ಲ