ರಾಮಾರ್ಜುನ ಬಳಗದಲ್ಲಿ ನಿಶ್ವಿಕಾ

ಬೆಂಗಳೂರು: ಅನೀಶ್ ತೇಜೇಶ್ವರ್ ನಟಿಸಿ, ಮೊದಲ ಬಾರಿಗೆ ನಿರ್ವಿುಸಿದ್ದ ‘ವಾಸು ನಾನ್ ಪಕ್ಕಾ ಕಮರ್ಷಿಯಲ್’ ಚಿತ್ರದ ಮೂಲಕ ಚಂದನವನಕ್ಕೆ ಕಾಲಿಟ್ಟಿದ್ದರು ನಿಶ್ವಿಕಾ ನಾಯ್ಡು. ಅನೀಶ್ ಇದೀಗ ಮೊದಲ ಸಲ ನಿರ್ದೇಶನ ಮಾಡುತ್ತಿರುವ ‘ರಾಮಾರ್ಜುನ’ ಚಿತ್ರದಲ್ಲೂ ನಾಯಕಿಯಾಗಿ ನಿಶ್ವಿಕಾ ಮುಂದುವರಿದಿದ್ದಾರೆ.

‘ವಾಸು..’ ಚಿತ್ರದಲ್ಲಿ ಕಮರ್ಷಿಯಲ್ ಅಂಶಗಳಿಗೆ ಹೆಚ್ಚು ಒತ್ತು ನೀಡಲಾಗಿತ್ತು. ಆದರೆ, ಈ ಬಾರಿ ಕಥೆಗೆ ಪ್ರಾಮುಖ್ಯತೆ ನೀಡಿ ಸಿನಿಮಾ ಶುರು ಮಾಡಿದ್ದಾರಂತೆ ನಟ, ನಿರ್ದೇಶಕ ಅನೀಶ್. ಸದ್ಯ ಶೇ. 30 ಚಿತ್ರೀಕರಣ ಮುಕ್ತಾಯವಾಗಿದ್ದು, ಜ.12ರಂದು ಚಿತ್ರದ ಮೊದಲ ಟೀಸರ್ ರಿಲೀಸ್ ಆಗಲಿದೆ. ‘ಇದನ್ನು ಇಂಥದ್ದೇ ಶೈಲಿಯ ಸಿನಿಮಾ ಎಂದು ಹೇಳಲು ಸಾಧ್ಯವಿಲ್ಲ. ಕಂಟೆಂಟ್​ಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಕಮರ್ಷಿಯಲ್-ಸಸ್ಪೆನ್ಸ್ ಶೈಲಿ ಅಂತ ಹೇಳಿದರೆ, ನೋಡುಗರು ಅದೇ ಶೈಲಿಯನ್ನೇ ಗಮನದಲ್ಲಿಟ್ಟುಕೊಂಡು ಸಿನಿಮಾ ನೋಡುತ್ತಾರೆ. ಅದಕ್ಕಾಗಿ ಇಂಥದ್ದೇ ಶೈಲಿ ಎಂದು ಹೇಳುವುದಿಲ್ಲ’ ಎಂಬುದು ನಿಶ್ವಿಕಾ ಮಾತು.

‘ವಾಸು..’ ಮತ್ತು ‘ಅಮ್ಮ ಐ ಲವ್ ಯೂ’ ಸಿನಿಮಾಗಳಿಗಿಂತ ಭಿನ್ನವಾದ ಪಾತ್ರ ಇಲ್ಲಿ ಅವರಿಗೆ ಸಿಕ್ಕಿದೆಯಂತೆ. ‘ತುಂಬ ಸವಾಲಿನಿಂದ ಕೂಡಿರುವ ಸರಳ ಹುಡುಗಿಯ ಪಾತ್ರ ನಿಭಾಯಿಸುತ್ತಿದ್ದೇನೆ. ಮಧ್ಯಮ ವರ್ಗದ ಹುಡುಗಿಗೆ ಅವಳದೇ ಆದ ಜವಾಬ್ದಾರಿಗಳಿರುತ್ತವೆ. ವಯಸ್ಸಿನಲ್ಲಿ ಚಿಕ್ಕವಳಾದರೂ ಪ್ರಬುದ್ಧ ಮನಸ್ಥಿತಿಯುಳ್ಳವಳು. ಅಷ್ಟೆಲ್ಲ ಗುಣಗಳಿರುವ ಹುಡುಗಿಯ ಪಾತ್ರ ನಿಭಾಯಿಸುವುದು ನಿಜಕ್ಕೂ ನನಗೆ ಸವಾಲು’ ಎನ್ನುತ್ತಾರೆ ನಿಶ್ವಿಕಾ.

ಚಿತ್ರದ ಎಳೆಯ ಬಗ್ಗೆ ಗುಟ್ಟು ಬಿಟ್ಟುಕೊಡದ ಅವರು, ‘ರಾಮನಷ್ಟು ಒಳ್ಳೆಯವರಾಗಬಾರದು, ಅರ್ಜುನನಂತೆ ಧರ್ಮಕ್ಕೆ ಬದ್ಧರಾಗಿರಬಾರದು. ಈ ಇಬ್ಬರು ಮಹಾಪುರುಷರ ಅಂದಿನ ಕಥೆಯನ್ನು ಈಗಿನ ಕಾಲಘಟ್ಟಕ್ಕೆ ತಕ್ಕಂತೆ ಚಿತ್ರದಲ್ಲಿ ಹೇಳಲಾಗಿದೆ. ಪ್ರತಿಯೊಬ್ಬ ವ್ಯಕ್ತಿಗೂ ‘ರಾಮಾರ್ಜುನ’ ಚಿತ್ರದಿಂದ ಸಂದೇಶವೊಂದು ಸಿಗಲಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಎರಡು ವಾರದ ಬಳಿಕ ಎರಡನೇ ಹಂತದ ಶೂಟಿಂಗ್​ನಲ್ಲಿ ಅನೀಶ್ ಮತ್ತು ತಂಡ ಪಾಲ್ಗೊಳ್ಳಲಿದೆ. ಬಹುತೇಕ ಚಿತ್ರೀಕರಣ ಬೆಂಗಳೂರಿನಲ್ಲಿಯೇ ನಡೆಯಲಿದೆ.

ಅನೀಶ್​ಗೆ ಮತ್ತೊಮ್ಮೆ ಜೋಡಿಯಾಗಿ ನಟಿಸಿದ್ದೇನೆ. ಸೌಮ್ಯ ಸ್ವಭಾವದ, ಸಂಪ್ರದಾಯಸ್ಥ ಹುಡುಗಿಯಾಗಿ ‘ರಾಮಾರ್ಜುನ’ ಚಿತ್ರದ ಮೂಲಕ ಪ್ರೇಕ್ಷಕರನ್ನು ಎದುರುಗೊಳ್ಳಲಿದ್ದೇನೆ. ಎಲ್ಲ ಬಗೆಯ ಪ್ರೇಕ್ಷಕರಿಗೆ ಈ ಚಿತ್ರ ಇಷ್ಟವಾಗುತ್ತದೆ.

| ನಿಶ್ವಿಕಾ ನಾಯ್ಡು ನಟಿ

Leave a Reply

Your email address will not be published. Required fields are marked *