More

    ಆನೆ ದಾಳಿಗೆ ರೈತ ಬಲಿ: ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಏಕಾಏಕಿ ದಾಳಿ

    ಚನ್ನಪಟ್ಟಣ : ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಆನೆ ದಾಳಿ ಮಾಡಿ ರೈತ ಮೃತಪಟ್ಟಿರುವುದು ದೊಡ್ಡನಹಳ್ಳಿಯಲ್ಲಿ ಮಂಗಳವಾರ ಸಂಜೆ ನಡೆದಿದೆ.
    ಸತೀಶ್ (35) ಮೃತ. ಮಾವಿನ ತೋಟದಲ್ಲಿ ಬೇಲಿ ಕತ್ತರಿಸುವಾಗ ಸೊಂಡಿಲಿನಿಂದ ಹೊಡೆದು ಸಾಯಿಸಿದೆ. ಈ ವೇಳೆ ಅಕ್ಕಪಕ್ಕದ ಜಮೀನಿನಲ್ಲಿದ್ದವರು ಕಿರುಚಾಡಿದ್ದರಿಂದ ಆನೆ ಅಲ್ಲಿಂದ ತೆರಳಿದೆ. ಸತೀಶ್‌ಗೆ ಪತ್ನಿ, ಇಬ್ಬರು ಮಕ್ಕಳಿದ್ದಾರೆ.
    ಮೃತನ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಮೃತನ ಸಾವಿಗೆ ತಾಲೂಕು ಆಡಳಿತ ಹಾಗೂ ಅರಣ್ಯ ಇಲಾಖೆಯೇ ಹೊಣೆ. ಈ ಭಾಗದಲ್ಲಿ ನಿರಂತರವಾಗಿ ಆನೆಗಳು ಉಪಟಳ ಇದ್ದರೂ ಕ್ರಮ ಕೈಗೊಳ್ಳಲು ವಿಫಲವಾಗಿರುವುದೇ ಸತೀಶ್ ಸಾವಿಗೆ ಕಾರಣ. ತಾಲೂಕು ಆಡಳಿತ ಹಾಗೂ ಅರಣ್ಯ ಇಲಾಖೆಯೇ ಸಾವಿನ ಹೊಣೆ ಹೊರಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

    ತೆಂಗಿನಕಲ್ಲು ಅರಣ್ಯಪ್ರದೇಶದಲ್ಲಿ ಹತ್ತಾರು ಆನೆಗಳು ಬೀಡುಬಿಟ್ಟಿವೆ. ರಾತ್ರಿ ಸಮಯದಲ್ಲಿ ಕಾಡಂಚಿನ ಗ್ರಾಮಗಳಿಗೆ ಲಗ್ಗೆಯಿಟ್ಟು ರೈತರ ಬೆಳೆ ನಾಶಪಡಿಸುತ್ತಿವೆ. ಅರಣ್ಯ ಇಲಾಖೆಯವರು ಆನೆಗಳನ್ನು ಓಡಿಸುವ ಕಾರ್ಯಾಚರಣೆಯನ್ನು ನೆಪಮಾತ್ರಕ್ಕೆ ನಡೆಸುತ್ತಾರೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಸೇರಿ ಹಿರಿಯ ಅಧಿಕಾರಿಗಳು ಆಗಮಿಸಬೇಕು. ಮೃತನ ಕುಟುಂಬಕ್ಕೆ ಆರ್ಥಿಕ ನೆರವು ಘೋಷಿಸಬೇಕು ಎಂದು ಆಗ್ರಹಿಸಿದರು.ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿದ್ದರು. ತಹಸೀಲ್ದಾರ್ ಎಲ್.ನಾಗೇಶ್, ಡಿಎಫ್‌ಒ ದೇವರಾಜು, ಆರ್‌ಎಫ್‌ಒ ದಿನೇಶ್, ಗ್ರಾಮಾಂತರ ಪಿಎಸ್‌ಐ ಎಚ್.ಎಂ.ಶಿವಕುಮಾರ್ ಸ್ಥಳ ಪರಿಶೀಲಿಸಿದರು.

    7.5 ಲಕ್ಷ ರೂ. ಪರಿಹಾರ : ಅಧಿಕಾರಿಗಳೊಂದಿಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ದೂರವಾಣಿ ಮೂಲಕ ಮಾತನಾಡಿ, ಇಲಾಖೆಯಿಂದ ಸಿಗಬಹುದಾದ ಸಂಪೂರ್ಣ ನೆರವು ನೀಡುವಂತೆ ಸೂಚಿಸಿದರು. ಅದರಂತೆ ಮೃತನ ಕುಟುಂಬಕ್ಕೆ 7.5 ಲಕ್ಷ ರೂ. ಪರಿಹಾರ ಹಾಗೂ 5 ವರ್ಷಗಳ ಕಾಲ ಪ್ರತಿ ತಿಂಗಳು 2 ಸಾವಿರ ರೂ. ಮಾಸಾಶನ ೋಷಿಸಲಾಯಿತು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ನಗರದ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಯಿತು.

    ಪ್ರಾಣಕ್ಕೂ ಕುತ್ತು ತಂದ ಗಜರಾಯ : ಕಾಡಂಚಿನ ಗ್ರಾಮಗಳಲ್ಲಿ ಹಲವಾರು ವರ್ಷಗಳಿಂದ ಆನೆ ದಾಳಿ ಪ್ರಮುಖವಾಗಿ ಕಾಡುತ್ತಿದೆ. ಅದರಲ್ಲೂ ತೆಂಗಿನಕಲ್ಲು ಹಾಗೂ ಕಬ್ಬಾಳು ವಲಯದ ಅರಣ್ಯ ಪ್ರದೇಶದಲ್ಲಿ ಇದು ದಿನನಿತ್ಯದ ಸಮಸ್ಯೆಯಾಗಿದೆ. ಇಷ್ಟು ದಿನ ಬೆಳೆ ನಾಶಕ್ಕೆ ಸೀಮಿತವಾಗಿದ್ದ ಆನೆಗಳ ದಾಳಿ ಈಗ ಮಾನವನ ಪ್ರಾಣಹಾನಿಗೂ ಕಾರಣವಾಗಿದೆ. ಕೆಲ ವರ್ಷಗಳ ಹಿಂದೆ ತಾಲೂಕಿನ ಹನಿಯೂರು-ರಾಮೇಗೌಡನದೊಡ್ಡಿ ಬಳಿ ದಾರಿಹೋಕನನ್ನು ಆನೆ ತುಳಿದು ಸಾಯಿಸಿತ್ತು. ಕಳೆದ ವರ್ಷ ಕನ್ನಿದೊಡ್ಡಿ ಗ್ರಾಮದ ಬಳಿ ಮಹಿಳೆ ಮೇಲೆ ಮಾರಣಾಂತಿಕ ದಾಳಿ ನಡೆದಿತ್ತು. ಇದೀಗ ದೊಡ್ಡನಹಳ್ಳಿ ಗ್ರಾಮದಲ್ಲಿ ರೈತನನ್ನು ಬಲಿಪಡೆದಿದೆ.

     

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts