ಕರ್ನಾಟಕಕ್ಕೆ ಶರಣಾದ ಆಂಧ್ರ

ಬೆಂಗಳೂರು: ಪಂದ್ಯದ ಎಲ್ಲ ವಿಭಾಗದಲ್ಲೂ ಶಿಸ್ತಿನ ನಿರ್ವಹಣೆ ತೋರಿದ ಕರ್ನಾಟಕ ತಂಡ ವಿಜಯ್ ಹಜಾರೆ ಟ್ರೋಫಿ ದೇಶೀಯ ಏಕದಿನ ಟೂರ್ನಿಯ ಎಲೈಟ್ ಎ ವಿಭಾಗದಲ್ಲಿ ತನ್ನ 5ನೇ ಪಂದ್ಯದಲ್ಲಿ ಆಂಧ್ರ ತಂಡವನ್ನು 53 ರನ್​ಗಳಿಂದ ಮಣಿಸಿದೆ. ಅದರೊಂದಿಗೆ ಎಲೈಟ್ ಎ-ಬಿ ಗುಂಪಿನ ಅಂಕಪಟ್ಟಿಯಲ್ಲಿ 16 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದ್ದು, ನಾಕೌಟ್ ಹಂತಕ್ಕೆ ಇನ್ನಷ್ಟು ಸನಿಹವಾಗಿದೆ.

ಯಲಹಂಕದಲ್ಲಿರುವ ಜಸ್ಟ್ ಕ್ರಿಕೆಟ್ ಅಕಾಡೆಮಿಯಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಟಾಸ್ ಸೋತ ಕರ್ನಾಟಕ ತಂಡಕ್ಕೆ ಮೊದಲು ಬ್ಯಾಟಿಂಗ್ ಆಹ್ವಾನ ನೀಡಲಾಯಿತು. ನಾಯಕ ಮನೀಷ್ ಪಾಂಡೆ (50ರನ್, 56 ಎಸೆತ, 1 ಬೌಂಡರಿ, 1 ಸಿಕ್ಸರ್) ಅವರಿಂದ ಮಾತ್ರವೇ ಅರ್ಧಶತಕ ದಾಖಲಾದರೂ, ಉಳಿದ ಆಟಗಾರರ ಉಪಯುಕ್ತ ಕಾಣಿಕೆಗಳಿಂದ 7 ವಿಕೆಟ್​ಗೆ 278 ರನ್​ಗಳ ಗೌರವಯುತ ಮೊತ್ತ ದಾಖಲಿಸಿತ್ತು. ಆದರೆ, ನಿಧಾನಗತಿಯ ಪಿಚ್​ನಲ್ಲಿ ಚೇಸಿಂಗ್ ಮಾಡಲು ತಡವರಿಸಿದ ಆಂಧ್ರ ತಂಡ, ಶ್ರೇಯಸ್ ಗೋಪಾಲ್ (48ಕ್ಕೆ 4) ಹಾಗೂ ಪ್ರಸಿದ್ಧ ಕೃಷ್ಣ (40ಕ್ಕೆ 3) ದಾಳಿಗೆ ನಲುಗಿ 46.5 ಓವರ್​ಗಳಲ್ಲಿ 225 ರನ್​ಗೆ ಆಲೌಟ್ ಆಯಿತು. ಪ್ರಮುಖ ಬ್ಯಾಟ್ಸ್​ಮನ್​ಗಳ ವೈಫಲ್ಯದ ನಡುವೆ, ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್ ಪ್ರಶಾಂತ್ ಕುಮಾರ್ (78 ರನ್, 104 ಎಸೆತ, 6 ಬೌಂಡರಿ, 2 ಸಿಕ್ಸರ್) ಅರ್ಧಶತಕ ಬಾರಿಸಿದರೂ ಗೆಲುವಿಗೆ ಸಾಕಾಗಲಿಲ್ಲ. ಕರ್ನಾಟಕ ತಂಡಕ್ಕೆ ಆರಂಭಿಕರಾದ ಕೆಎಲ್ ರಾಹುಲ್ (33) ಹಾಗೂ ದೇವದತ್ ಪಡಿಕಲ್ (44) ಮೊದಲ ವಿಕೆಟ್​ಗೆ 68 ರನ್ ಜತೆಯಾಟವಾಡಿ ಬೇರ್ಪಟ್ಟರು. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿದ ಕರುಣ್ ನಾಯರ್ (24) ದೊಡ್ಡ ಮೊತ್ತ ಪೇರಿಸಲು ಸಾಧ್ಯವಾಗಲಿಲ್ಲ. ಈ ಹಂತದಲ್ಲಿ ನಾಯಕ ಮನೀಷ್ ಪಾಂಡೆ ತಂಡದ ಇನಿಂಗ್ಸ್​ಗೆ ಚೇತರಿಕೆ ನೀಡಿದರು. ಪಡಿಕಲ್ ಹಾಗೂ ಕರುಣ್ ನಾಯರ್ 10 ರನ್​ಗಳ ಅಂತರದಲ್ಲಿ ಔಟಾದಾಗ ತಂಡ ಹಿನ್ನಡೆ ಕಾಣಲಿದೆ ಎಂದು ಅಂದಾಜಿಸಲಾಗಿತ್ತು.

ಈ ಹಂತದಲ್ಲಿ ಜವಾಬ್ದಾರಿಯುತ ಆಟವಾಡಿದ ಮನೀಷ್ ಪಾಂಡೆ, 56 ಎಸೆತಗಳ ಇನಿಂಗ್ಸ್ ಹೆಚ್ಚಿನ ದೊಡ್ಡ ಶಾಟ್​ಗಳನ್ನು ಬಾರಿಸಿರಲಿಲ್ಲ. ಅಭಿಷೇಕ್ ರೆಡ್ಡಿ ಹಾಗೂ ಶ್ರೇಯಸ್ ಗೋಪಾಲ್​ರೊಂದಿಗೆ ಅಮೂಲ್ಯ ಜತೆಯಾಟದಲ್ಲಿ ಭಾಗಿಯಾಗಿದ್ದ ಮನೀಷ್ ಪಾಂಡೆ ತಂಡದ ಮೊತ್ತವನ್ನು 210ರ ಗಡಿ ದಾಟಿಸಿ ಔಟಾದರು. ಈ ವೇಳೆ ವಿಕೆಟ್ಕೀಪರ್ ಬಿಆರ್ ಶರತ್ (45*ರನ್, 38 ಎಸೆತ, 4 ಬೌಂಡರಿ, 1 ಸಿಕ್ಸರ್) ಹಾಗೂ ಕೆ. ಗೌತಮ್ (34*ರನ್, 16 ಎಸೆತ, 4 ಸಿಕ್ಸರ್) 7ನೇ ವಿಕೆಟ್​ಗೆ ಆಡಿದ 60 ರನ್​ಗಳ ಅಮೂಲ್ಯ ಜತೆಯಾಟದಿಂದ ತಂಡದ ಮೊತ್ತ 275ರ ಗಡಿ ದಾಟಿತು.

ಕರ್ನಾಟಕದ ನಾಕೌಟ್ ಹಾದಿ ಸರಳ

ಈ ಗೆಲುವಿನಿಂದಾಗಿ ಕರ್ನಾಟಕದ ನಾಕೌಟ್ ಹಾದಿ ಇನ್ನಷ್ಟು ಸರಳವಾಗಿದೆ. ಮುಂದಿನ ಮೂರು ಪಂದ್ಯಗಳಲ್ಲಿ ರಾಜ್ಯ ತಂಡ ಕ್ರಮವಾಗಿ ಮುಂಬೈ, ಸೌರಾಷ್ಟ್ರ ಹಾಗೂ ಗೋವಾ ವಿರುದ್ಧ ಪಂದ್ಯ ಆಡಬೇಕಿದೆ. ಈ ಪೈಕಿ 2 ಪಂದ್ಯ ಗೆದ್ದರೂ ತಂಡದ ಮುಂದಿನ ಹಂತದ ಸ್ಥಾನ ಖಚಿತವಾಗಲಿದೆ. ಎಲೈಟ್ ಎ ಹಾಗೂ ಬಿ ಗುಂಪಿನ ಜಂಟಿ ಅಂಕಪಟ್ಟಿಯಲ್ಲಿ ರಾಜ್ಯ ತಂಡ ಸದ್ಯ 2ನೇ ಸ್ಥಾನಿಯಾಗಿದ್ದು, ಅಗ್ರಸ್ಥಾನದೊಂದಿಗೆ ಮುಂದಿನ ಹಂತಕ್ಕೇರುವ ಅವಕಾಶವೂ ಇದೆ.

ಆಂಧ್ರಕ್ಕೆ ಕಾಡಿದ ಶ್ರೇಯಸ್, ಪ್ರಸಿದ್ಧ

ಚೇಸಿಂಗ್ ಆರಂಭಿಸಿದ ಆಂಧ್ರ, 2ನೇ ಓವರ್​ನಲ್ಲಿಯೇ ಪ್ರಮುಖ ಆರಂಭಿಕ ಆಟಗಾರ ಅಶ್ವಿನ್ ಹೆಬ್ಬಾರ್​ರ್ನು ಶೂನ್ಯಕ್ಕೆ ಕಳೆದುಕೊಂಡಿತು. ಈ ಹಂತದಲ್ಲಿ ರಾಷ್ಟ್ರೀಯ ತಂಡದ ಸ್ಥಾನದ ನಿರೀಕ್ಷೆಯಲ್ಲಿರುವ ಕೆಎಸ್ ಭರತ್ (38) ಹಾಗೂ ಪ್ರಶಾಂತ್ ಕುಮಾರ್ 2ನೇ ವಿಕೆಟ್​ಗೆ 70 ರನ್ ಜತೆಯಾಟವಾಡಿ ಚೇತರಿಕೆ ನೀಡುವ ಪ್ರಯತ್ನ ನಡೆಸಿದರು. ಕೆ. ಗೌತಮ್​ ಭರತ್ ಎಲ್​ಬಿ ಆದ ಬಳಿಕ ಆಂಧ್ರದ ವಿಕೆಟ್ ಪತನ ಆರಂಭಗೊಂಡಿತು. ಪ್ರಶಾಂತ್ ಕುಮಾರ್ ಹೊರತಾಗಿ ಯಾರೊಬ್ಬರೂ ಪ್ರತಿರೋಧ ತೋರಲಿಲ್ಲ.

Leave a Reply

Your email address will not be published. Required fields are marked *