Photo| ಪಟೇಲ್​ ಪ್ರತಿಮೆಗಿಂತಲೂ ಎತ್ತರವಿರಲಿದೆ ಆಂಧ್ರ ವಿಧಾನಸಭೆ ಕಟ್ಟಡ: ವಿನ್ಯಾಸ ಸಿದ್ಧಪಡಿಸಿದ್ದಾರೆ ನಾಯ್ಡು

ಅಮರಾವತಿ: ಗುಜರಾತ್​ನಲ್ಲಿ ಸರ್ದಾರ್​ ವಲ್ಲಭಭಾಯಿ ಪಟೇಲರ ಅತ್ಯಂತ ಎತ್ತರದ ಪ್ರತಿಮೆ ನಿರ್ಮಾಣವಾಗಿದ್ದೇ ದೇಶದಲ್ಲಿ ಅತಿ ಎತ್ತರದ ಕಟ್ಟಡಗಳನ್ನು ನಿರ್ಮಿಸುವ ಟ್ರೆಂಡ್​ ಆರಂಭವಾದಂತೆ ಕಾಣುತ್ತಿದೆ. ಆಂಧ್ರ ತನ್ನ ವಿಧಾನಸಭೆಯ ಕಟ್ಟಡವನ್ನು ಪಟೇಲ್​ ಪ್ರತಿಮೆಗಿಂತಲೂ ಎತ್ತರಕ್ಕೆ ನಿರ್ಮಿಸಲು ನಿರ್ಧರಿಸಿದೆ.

ಅಖಂಡ ಆಂಧ್ರಪ್ರದೇಶವು ಆಂಧ್ರಪ್ರದೇಶ ಮತ್ತು ತೆಲಂಗಾಣ ಎಂದು ಎರಡು ರಾಜ್ಯಗಳಾಗಿ ವಿಂಗಡಣೆಯಾದ ನಂತರ ಆಂಧ್ರಪ್ರದೇಶ ತನಗೆ ಹೊಸ ರಾಜಧಾನಿ ಮತ್ತು ವಿಧಾನಸಭೆಗಳನ್ನು ನಿರ್ಮಿಸಿಕೊಳ್ಳುತ್ತಿದೆ. ಅದರಂತೆ ವಿಧಾನಸಭೆಯ ಕಟ್ಟಡವನ್ನು ಪಟೇಲ್​ ಪ್ರತಿಮೆಗಿಂತಲೂ ಎತ್ತರವಾಗಿ ನಿರ್ಮಿಸಲು ಚಂದ್ರಬಾಬು ನಾಯ್ಡು ಅವರು ನಿರ್ಧರಿಸಿದ್ದಾರೆ. ಸರ್ದಾರ್​ ಪ್ರತಿಮೆಗಿಂತಲೂ 68 ಮೀಟರ್​ ಎತ್ತರದ ಕಟ್ಟಡ ನಿರ್ಮಾಣದ ಕುರಿತು ನಾಯ್ಡು ಈಗಾಗಲೇ ಆಂಧ್ರದ ವಿಧಾನಸಭೆಯಲ್ಲೂ ಪ್ರಸ್ತಾಪಿಸಿದ್ದಾರೆ.

ಅಷ್ಟೇ ಅಲ್ಲ, ಕಟ್ಟಡದ ವಿನ್ಯಾಸ, ನೀಲ ನಕ್ಷೆ ಎಲ್ಲವನ್ನೂ ಸಿದ್ಧಪಡಿಸಿರುವ ನಾಯ್ಡು, ಅದನ್ನು ಬ್ರಿಟನ್​ ಮೂಲದ ನಿರ್ಮಾಣ ಸಂಸ್ಥೆ ನೋರ್ಮಾ ಫೋಸ್ಟರ್​ಗೆ ಶೀಘ್ರದಲ್ಲೇ ಸಲ್ಲಿಸಲಿದ್ದಾರೆ ಎಂದು ರಾಷ್ಟ್ರ ಮಟ್ಟದ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ. ಮೂಲಗಳ ಪ್ರಕಾರ ಮೂರು ಅಂತಸ್ತುಗಳ ಈ ಕಟ್ಟಡದ ಮೇಲೆ 250 ಮೀಟರ್​ ಎತ್ತರದ ಚೂಪಾದ ಗೋಪುರ ವಿರಲಿದೆ. ಅದು ಸರ್ದಾರ್​ ಪ್ರತಿಮೆಗೂ ಎತ್ತರವಾಗಿರಲಿದೆ ಎನ್ನಲಾಗಿದೆ.