ದೆಹಲಿ ಪ್ರತಿಭಟನೆಗೆ ಜನ ಕರೆದೊಯ್ಯಲು 2 ರೈಲು ಬುಕ್​ ಮಾಡಿದ ಚಂದ್ರಬಾಬು ನಾಯ್ಡು

ಅಮರಾವತಿ: ಕೇಂದ್ರ ಸರ್ಕಾರದ ವಿರುದ್ಧ ದೆಹಲಿಯಲ್ಲಿ ಪ್ರತಿಭಟನೆ ನಡೆಸಲು ಆಂಧ್ರಪ್ರದೇಶದಿಂದ ಜನರನ್ನು ಕರೆದೊಯ್ಯಲು ಸಿಎಂ ಚಂದ್ರಬಾಬು ನಾಯ್ಡು 1.12 ಕೋಟಿ ರೂ. ಕೊಟ್ಟು 2 ವಿಶೇಷ ರೈಲುಗಳನ್ನು ಬುಕ್​ ಮಾಡಿದ್ದಾರೆ.

ಫೆಬ್ರವರಿ 11ರಂದು ದೆಹಲಿಯಲ್ಲಿ ಒಂದು ದಿನದ ಪ್ರತಿಭಟನೆ ನಡೆಯಲಿದೆ. ಪ್ರತಿಭಟನೆಯಲ್ಲಿ ಭಾಗವಹಿಸುವ ರಾಜಕೀಯ ಮುಖಂಡರು, ಕಾರ್ಯಕರ್ತರು, ವಿವಿಧ ಸಂಘ ಸಂಸ್ಥೆಗಳು, ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳನ್ನು ಕರೆದೊಯ್ಯಲು ರೈಲುಗಳನ್ನು ಬುಕ್​ ಮಾಡಲಾಗಿದೆ. ಒಂದು ರೈಲು ಅನಂತಪುರಂನಿಂದ ಹೊರಡಲಿದ್ದರೆ, ಮತ್ತೊಂದು ರೈಲು ಶ್ರೀಕಾಕುಲಂನಿಂದ ಹೊರಡಲಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡದ ಮತ್ತು ಆಂಧ್ರ ಪ್ರದೇಶದ ವಿಭಜನೆಯ ಸಂದರ್ಭದಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದೆ. ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಚಂದ್ರಬಾಬು ನಾಯ್ಡು ಪ್ರತಿಪಕ್ಷಗಳ ನಾಯಕರಿಗೂ ಕರೆ ನೀಡಿದ್ದಾರೆ. (ಏಜೆನ್ಸೀಸ್​)