12 ಗಂಟೆ ಪ್ರತಿಭಟನೆಗೆ 10 ಕೋಟಿ ರೂ. ಖರ್ಚು ಮಾಡಿದ ಆಂಧ್ರಪ್ರದೇಶ ಸರ್ಕಾರ

ಅಮರಾವತಿ: ಆಂಧ್ರಪ್ರದೇಶಕ್ಕೆ ಕೇಂದ್ರ ಸರ್ಕಾರ ವಿಶೇಷ ರಾಜ್ಯ ಸ್ಥಾನಮಾನ ನೀಡಲಿಲ್ಲ ಎಂಬ ಕಾರಣಕ್ಕಾಗಿ ಸಿಎಂ ಚಂದ್ರಬಾಬು ನಾಯ್ಡು ನವದೆಹಲಿಯಲ್ಲಿ ಸೋಮವಾರ (ಫೆ.11) ಆಯೋಜಿಸಿದ್ದ 12 ತಾಸುಗಳ ಪ್ರತಿಭಟನೆಗೆ 10 ಕೋಟಿ ರೂ. ಖರ್ಚು ಮಾಡಿದ್ದಾರೆ. ಧರ್ಮ ಹೋರಾಟ ದೀಕ್ಷೆ ಎಂಬ ಹೆಸರಿನಲ್ಲಿ ನಡೆದ ಈ ಪ್ರತಿಭಟನೆಯು ಬೆಳಗ್ಗೆ 8ರಿಂದ ರಾತ್ರಿ 8 ಗಂಟೆಯವರೆಗೆ ನಡೆದಿತ್ತು.

ಈ ಪ್ರತಿಭಟನೆಗಾಗಿ ಜನರನ್ನು ಕರೆದೊಯ್ಯಲು ಶ್ರೀಕಾಕುಲಂ ಮತ್ತು ಅನಂತಪುರದಿಂದ ಎರಡು ವಿಶೇಷ ರೈಲುಗಳನ್ನು ವ್ಯವಸ್ಥೆ ಮಾಡಲಾಗಿತ್ತು. ರೈಲಿನಲ್ಲಿ ಬಂದಿದ್ದ ಜನರು ಹಾಗೂ ಗಣ್ಯವ್ಯಕ್ತಿಗಳಿಗಾಗಿ ಊಟೋಪಚಾರ ವ್ಯವಸ್ಥೆ ಮಾಡಲಾಗಿತ್ತು. ಜತೆಗೆ ಉಳಿದುಕೊಳ್ಳಲು ವಿವಿಧ ಹೋಟೆಲ್​ಗಳಲ್ಲಿ 1,100 ಕೊಠಡಿಗಳನ್ನು ವ್ಯವಸ್ಥೆ ಮಾಡಲಾಗಿತ್ತು. ಈ ಎಲ್ಲ ಖರ್ಚು ವೆಚ್ಚಗಳಿಗಾಗಿ ಸರ್ಕಾರಿ ಬೊಕ್ಕಸದಿಂದ ಹಣ ಬಿಡುಗಡೆ ಮಾಡುವಂತೆ ಸಿಎಂ ಚಂದ್ರಬಾಬು ನಾಯ್ಡು ಫೆ.6ರಂದು ಆದೇಶ ಹೊರಡಿಸಿದ್ದರು.