ಗೌಡ-ನಾಯ್ಡು ಭೇಟಿ

ಬೆಂಗಳೂರು: ಕುತೂಹಲಕರ ರಾಜಕೀಯ ಬೆಳವಣಿಗೆಯೊಂದರಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿ, ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ದು ನ. 8ರಂದು ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ. ಅವರು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಹಾಗೂ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಗುರುವಾರ ಮಧ್ಯಾಹ್ನ 3.30ಕ್ಕೆ ಪದ್ಮನಾಭನಗರದಲ್ಲಿರುವ ಎಚ್.ಡಿ. ದೇವೇಗೌಡರ ನಿವಾಸದಲ್ಲಿ ಭೇಟಿ ಮಾಡಿ, ಚರ್ಚೆ ನಡೆಸಲಿದ್ದಾರೆ.

ದೇಶದಲ್ಲಿ ಎನ್​ಡಿಎಯೇತರ ರಾಜಕೀಯ ಪಕ್ಷಗಳನ್ನು ಒಳಗೊಂಡ ಮಹಾಘಟಬಂಧನ್ ರಚಿಸುವ ಸಂಬಂಧ ಉಭಯ ನಾಯಕರು ಮಹತ್ವದ ಚರ್ಚೆ ನಡೆಸಲಿದ್ದಾರೆ ಎನ್ನಲಾಗುತ್ತಿದೆ. ಇದೇ ವೇಳೆ ಮಾಜಿ ಸಚಿವ ಜನಾರ್ದನ ರೆಡ್ಡಿ ವಿರುದ್ಧ ಬೆಂಗಳೂರು ಸಿಸಿಬಿ ಪೊಲೀಸರು ನಡೆಸುತ್ತಿರುವ ಕಾರ್ಯಾಚರಣೆ ಸಂಬಂಧ ನಾಯ್ಡು ಜತೆ ದೇವೇಗೌಡ ಮತ್ತು ಕುಮಾರಸ್ವಾಮಿ ರ್ಚಚಿಸುವರು ಎನ್ನಲಾಗುತ್ತಿದೆ. ಜನಾರ್ದನ್ ರೆಡ್ಡಿ ಅವರ ಆಪ್ತ ಸ್ನೇಹಿತ ಆಂಧ್ರಪ್ರದೇಶದ ವೈಎಸ್​ಆರ್ ಕಾಂಗ್ರೆಸ್ ಮುಖಂಡ ಜಗನ್ ಮೋಹನ್ ರೆಡ್ಡಿ ವಿರುದ್ಧದ ಪ್ರಕರಣ ಆಂಧ್ರಪ್ರದೇಶದಲ್ಲೂ ಜೀವ ಪಡೆದುಕೊಳ್ಳುತ್ತಿದ್ದು, ಉಭಯ ರಾಜ್ಯಗಳಲ್ಲಿ ಉಂಟಾಗಬಹುದಾದ ರಾಜಕೀಯ ಪರಿಣಾಮಗಳ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆಗಳು ದಟ್ಟವಾಗಿವೆ.

ಲೋಕಸಭಾ ಚುನಾವಣೆಗೂ ದೋಸ್ತಿ ಫೈಟ್

ರಾಜ್ಯದ 5 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಜೆಡಿಎಸ್- ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಮೈತ್ರಿಪಕ್ಷಗಳ ಸರ್ಕಾರವನ್ನು ಜನತೆ ಒಪ್ಪಿದ್ದಾರೆ. ಹೀಗಾಗಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಒಟ್ಟಾಗಿಯೇ ಹೋರಾಡುತ್ತೇವೆ ಎಂದು ಎಚ್.ಡಿ. ದೇವೇಗೌಡ ಹೇಳಿದ್ದಾರೆ. ಉಪ ಚುನಾವಣೆ ಫಲಿತಾಂಶದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಉಪ ಚುನಾವಣೆಯಲ್ಲಿ ಕಾಂಗ್ರೆಸ್- ಜೆಡಿಎಸ್​ನ ಎಲ್ಲ ಕಾರ್ಯಕರ್ತ-ಮುಖಂಡರ ಒಗ್ಗಟ್ಟಿನ ಕೆಲಸದಿಂದ 4 ಕ್ಷೇತ್ರಗಳಲ್ಲಿ ಗೆದ್ದಿದ್ದೇವೆ. ಹೀಗಾಗಿ ಮತದಾರರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಕಾಂಗ್ರೆಸ್ ಜತೆಗಿನ ಹಳೇ ಭಿನ್ನಾಭಿಪ್ರಾಯಗಳನ್ನು ಮರೆತು ಒಟ್ಟಾಗಿ ಕೆಲಸ ಮಾಡುತ್ತೇವೆ. ಮುಂದಿನ ಲೋಕಸಭೆ ಚುನಾವಣೆಯನ್ನೂ ಕಾಂಗ್ರೆಸ್ ಜತೆ ಎದುರಿಸುತ್ತೇವೆ. ರಾಹುಲ್ ಗಾಂಧಿ ಸೇರಿ ಸ್ಥಳೀಯ ನಾಯಕರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಟಿಕೆಟ್ ಹಂಚಿಕೆ ಅಂತಿಮಗೊಳಿಸುತ್ತೇವೆ ಎಂದರು.