42 ವರ್ಷದ ಶಿಕ್ಷಕನಿಂದ 2ನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ

ಹೈದರಾಬಾದ್: 42 ವರ್ಷದ ಶಾಲಾ ಶಿಕ್ಷಕ 2ನೇ ತರಗತಿಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ್ದು, ಆತನನ್ನು ಬಂಧಿಸಲಾಗಿದೆ.

ಹೈದರಾಬಾದ್‌ನ ಕೃಷ್ಣ ಜಿಲ್ಲೆಯ ಸರ್ಕಾರಿ ಉನ್ನತ ಪ್ರಾಥಮಿಕ ಶಾಲೆಯ ಶಿಕ್ಷಕ, ಯಾರೂ ಇಲ್ಲದ ಶಾಲೆಯ ಕೊಠಡಿಗೆ 8 ವರ್ಷದ ಬಾಲಕಿಯನ್ನು ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ.

ಬಾಲಕಿಯು ಅಳುತ್ತ ಮನೆಗೆ ತೆರಳಿದಾಗ ಗಾಯ ಮತ್ತು ಬಟ್ಟೆಯಲ್ಲಿ ರಕ್ತದ ಕಲೆ ಇರುವುದು ಕಂಡು ಬಂದಿದೆ. ನೋವಾಗುತ್ತಿರುವ ಮತ್ತು ಶಿಕ್ಷಕನ ಕೃತ್ಯದ ಕುರಿತು ತನ್ನ ತಾಯಿ ಬಳಿ ಹೇಳಿಕೊಂಡಿದ್ದಾಳೆ. ಬಳಿಕ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವಾಗಿರುವ ಕುರಿತು ವೈದ್ಯರು ದೃಢಪಡಿಸಿದ್ದಾರೆ.

ರಕ್ತಸ್ರಾವವು ನಿಲ್ಲಲು ಬಾಲಕಿಗೆ ನಾಲ್ಕು ಹೊಲಿಗೆಗಳನ್ನು ಹಾಕಲಾಗಿದೆ. ವಿಚಾರವನ್ನು ಬಹಿರಂಗಗೊಳಿಸಿದರೆ ಬಾಲಕಿ ಮತ್ತು ಕುಟುಂಬದ ಮೇಲುಂಟಾಗುವ ಪರಿಣಾಮಗಳ ಭಯದಿಂದ ಹೇಳಿಕೊಂಡಿಲ್ಲ. ಬಳಿಕ ವಿಷಯ ತಿಳಿದ ಸಾಮಾಜಿಕ ಕಾರ್ಯಕರ್ತರೊಬ್ಬರು ಅತ್ಯಾಚಾರ ಕುರಿತ ದೂರನ್ನು ದಾಖಲಿಸುವಂತೆ ಪಾಲಕರ ಮನವೊಲಿಸಿದ್ದಾರೆ.

ಸದ್ಯ ಶಿಕ್ಷಕನನ್ನು ಶಾಲೆಯಿಂದ ಅಮಾನತುಗೊಳಿಸಲಾಗಿದೆ. ಆಂಧ್ರಪ್ರದೇಶದ ಮಾನವ ಸಂಪನ್ಮೂಲ ಸಚಿವ ಗಂತಾ ಶ್ರೀನಿವಾಸ್‌ ಅವರು ಘಟನೆ ಕುರಿತು ತನಿಖೆಗೆ ಆದೇಶಿಸಿದ್ದಾರೆ. (ಏಜೆನ್ಸೀಸ್)