ಜಯದ ಗುಂಗಿನಲ್ಲಿ ಗಾಲ್ಫ್​ ಆಡಲು ಹೋದ ಆಂಡರ್​ಸನ್​ ಮಾಡಿಕೊಂಡ ಎಡವಟ್ಟೇನು?

ಲಂಡನ್​: ಭಾರತದ ವಿರುದ್ಧದ ಮೊದಲ ಟೆಸ್ಟ್​ನಲ್ಲಿ ಜಯ ದಾಖಲಿಸಿದ ಖುಷಿಯಲ್ಲಿ ಗಾಲ್ಫ್​ ಆಡಲು ತೆರಳಿದ್ದ ಇಂಗ್ಲೆಂಡ್​ನ ವೇಗಿ ಜೇಮ್ಸ್​ ಆಂಡರ್​ಸನ್​ ಎಡವಟ್ಟು ಮಾಡಿಕೊಂಡಿದ್ದಾರೆ.

ಮೊದಲ ಟೆಸ್ಟ್​ ಪಂದ್ಯದಲ್ಲಿ ಇಂಗ್ಲೆಂಡ್​ ತಂಡ 31 ರನ್​ಗಳಿಂದ ಜಯ ಗಳಿಸಿತ್ತು. ಇದು ಇಂಗ್ಲೆಂಡ್​ಗೆ 1000ನೇ ಟೆಸ್ಟ್​ ಪಂದ್ಯವಾಗಿದ್ದರಿಂದ ಗೆಲುವಿನ ಸಂಭ್ರಮವನ್ನು ವಿಶೇಷವಾಗಿ ಆಚರಿಸಲು ಆಂಡರ್​ಸನ್​ ಗಾಲ್ಫ್​ ಆಡಲು ತೆರಳಿದ್ದರು. ಬಕಿಂಗ್​ಹ್ಯಾಮ್​ಶೈರ್​ನ ಸ್ಟೋಕ್​ ಪಾರ್ಕ್​ ಗಾಲ್ಫ್​ ಕೋರ್ಸ್​ಗೆ ತೆರಳಿದ್ದರು.

ಆಂಡರ್​ಸನ್​ ಗಾಲ್ಫ್​ ಆಡುವಾಗ ಚೆಂಡು ಮರಗಳ ಮಧ್ಯೆ ಬಿದ್ದಿತ್ತು. ಮರಗಳ ಮಧ್ಯೆ ಗಾಲ್ಫ್​ ಚೆಂಡು ಹೊಡೆಯಲು ಯತ್ನಿಸಿದಾಗ ಚೆಂಡು ಮರಕ್ಕೆ ಬಡಿದು ವಾಪಸ್​ ಬಂದು ಆಂಡರ್​ಸನ್​ ಮುಖಕ್ಕೆ ಬಡಿದಿದೆ. ಈ ಸಂದರ್ಭದಲ್ಲಿ ಅಲ್ಲೇ ಬಿದ್ದ ಸ್ಟುವರ್ಟ್​ ಬ್ರಾಡ್​ ಘಟನೆಯನ್ನು ಚಿತ್ರೀಕರಿಸಿದ್ದು, ತಮ್ಮ ಟ್ವಿಟರ್​ ಖಾತೆಯಲ್ಲಿ ವಿಡಿಯೋವನ್ನು ಅಪ್​ಲೋಡ್​ ಮಾಡಿದ್ದಾರೆ.

ಆಂಡರ್​ಸನ್​ಗೆ ಆಗಿರುವ ಗಾಯದ ಕುರಿತು ಇನ್ನೂ ಯಾವುದೇ ಖಚಿತ ಮಾಹಿತಿ ಲಭ್ಯವಾಗಿಲ್ಲ. ಆದರೆ, ಬ್ರಾಡ್​ ಯಾರೂ ಆತಂಕಕ್ಕೆ ಒಳಗಾಗಾಬೇಕಾಗಿಲ್ಲ, ಆಂಡರ್​ಸನ್​ಗೆ ಹೆಚ್ಚಿನ ಗಾಯಗಳಾಗಿಲ್ಲ ಎಂದು ತಿಳಿಸಿದ್ದಾರೆ.

ಆಗಸ್ಟ್​ 9 ರಿಂದ 2ನೇ ಟೆಸ್ಟ್​ ಪಂದ್ಯ ಪ್ರಾರಂಭವಾಗಲಿದ್ದು, ಪಂದ್ಯದಲ್ಲಿ ಆಂಡರ್​ಸನ್​ ಆಡುವ ಕುರಿತು ತೀರ್ಮಾನ ಹೊರಬೀಳಬೇಕಿದೆ. (ಏಜೆನ್ಸೀಸ್​)