ಹೊಸನಗರ: ತಾಲೂಕಿನ ಅಡಗೋಡಿಯ ಶ್ರೀ ಮೂಕಾರ್ತೇಶ್ವರ ದೇಗುಲದ ಪುರಾತನ ಶಿವಲಿಂಗ ಪತ್ತೆಯಾಗಿದೆ. ಇದು 14, 15ನೇ ಶತಮಾನಕ್ಕೆ ಸೇರಿದ ಶಿವಲಿಂಗ ಎಂದು ಅಂದಾಜಿಸಲಾಗಿದೆ. ಶ್ರೀ ಮೂಕಾರ್ತೇಶ್ವರ ದೇಗುಲ ಶಿಥಿಲಗೊಂಡಿದ್ದು ಜೀರ್ಣೋದ್ಧಾರಕ್ಕೆ ದೇಗುಲ ಸಮಿತಿ ಮುಂದಾಗಿತ್ತು. ಈ ಸಂದರ್ಭದಲ್ಲಿ ಲಿಂಗದ ವಿನ್ಯಾಸದ ಕಲ್ಲು ದೊರೆತಿದೆ. ಇತಿಹಾಸ ತಜ್ಞರ ಪ್ರಕಾರ ಇದು ಪುರಾತನ ಶಿವಲಿಂಗ ಎಂದು ಗುರುತಿಸಲಾಗಿದೆ. 2.5 ಅಡಿಗೂ ಹೆಚ್ಚು ಸುತ್ತಳತೆ ಹೊಂದಿದ್ದು, ಪೀಠ ಸೇರಿ 4 ಅಡಿ ಎತ್ತರವಿದೆ. ಪೀಠದಿಂದ ಶಿವಲಿಂಗ 1.5 ಅಡಿ ಎತ್ತರವಿದೆ. ತೀರ್ಥ ಹರಿಯುವ ಜಾಗ ವಿಶಾಲವಾಗಿದೆ.
ಪೀಠದ ಅಧಾರದ ಮೇಲೆ 1301-1500ರ ಕಾಲಘಟ್ಟಕ್ಕೆ ಸೇರಿರಬಹುದಾಗಿದ್ದು, ಕರ್ಣಾಟ ಸಾಮ್ರಾಜ್ಯದ (ವಿಜಯನಗರ) ಕಾಲಮಾನದ ಶಿವಲಿಂಗ ಎಂದು ಇತಿಹಾಸ ತಜ್ಞ ಡಾ. ಜಗದೀಶ್ ಅಗಸಿಬಾಗಿಲು, ಪುರಾತತ್ವ ಇಲಾಖೆಯ ಡಾ. ಶೇಜೇಶ್ವರ, ಅಜಯ ಕುಮಾರ ಶರ್ಮಾ ಗುರುತಿಸಿದ್ದಾರೆ.