ನವದೆಹಲಿ: ಸುದ್ದಿವಾಹಿನಿಗಳಲ್ಲಿ ಸುದ್ದಿಗಳನ್ನು ಲೈವ್ನಲ್ಲಿ ಪ್ರಸಾರ ಮಾಡಲಾಗುತ್ತದೆ. ಕೆಲವೊಮ್ಮೆ ಸುದ್ದಿವಾಚಕರು (ಆ್ಯಂಕರ್) ಮಾಡುವ ತಪ್ಪುಗಳು ಕೂಡ ಲೈವ್ನಲ್ಲಿ ಕಾಣಿಸಿಕೊಳ್ಳುತ್ತವೆ. ಆದರೆ, ತಪ್ಪುಗಳಾದಾಗ ಸಾವರಿಸಿಕೊಂಡು ವೀಕ್ಷಕರಿಗೆ ಗೊತ್ತಾಗದ ರೀತಿ ಸುದ್ದಿವಾಚನ ಮುಂದುವರಿಸುವುದು ಪರಿಣತ ಸುದ್ದಿವಾಚಕರ ಲಕ್ಷಣವಾಗಿದೆ.
ಉಕ್ರೇನ್ನ ಸುದ್ದಿವಾಹಿನಿಯಲ್ಲಿ ಇತ್ತೀಚೆಗೆ ಸಂಭವಿಸಿದ ಘಟನೆ ಮೇಲಿನ ಮಾತಿಗೆ ಒಳ್ಳೆಯ ಉದಾಹರಣೆಯಾಗಿದೆ. ಅಂದಾಜು 22 ವರ್ಷಗಳಿಂದ ಆ್ಯಂಕರ್ ಆಗಿ ಕಾರ್ಯನಿರ್ವಹಿಸುತ್ತಿರುವ ಮರಿಚ್ಕಾ ಪಡಾಲ್ಕೋ ಅದೊಂದು ದಿನ ಸುದ್ದಿ ಓದುತ್ತಿದ್ದರು. ಸುದ್ದವಾಚನ ಮಾಡುತ್ತಿರುವ ಮಧ್ಯದಲ್ಲೇ ಅವರ ಮುಂಬದಿಯ ಮೇಲ್ಭಾಗದ ಹಲ್ಲೊಂದು ಕಳಚಿತು. ಅದನ್ನು ತಕ್ಷಣವೇ ಬಲಗೈನಲ್ಲಿ ಹಿಡಿದುಕೊಂಡ ಅವರು ಏನೂ ಆಗದವರಂತೆ ಸುದ್ದಿವಾಚನ ಮುಂದುವರಿಸಿದರು.
ಇದನ್ನೂ ಓದಿ: ವಾರಾಣಸಿಯಲ್ಲಿ ವ್ಯಕ್ತಿಯ ತಲೆಬೋಳಿಸಿ, ಜೈ ಶ್ರೀರಾಂ ಘೋಷಣೆ ಕೂಗಿಸಿದ್ದು ಈ ಕಾರಣಕ್ಕೆ…
ಸ್ವತಃ ಅವರೇ ಈ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಅಳವಡಿಸಿದ್ದು, 20 ವರ್ಷಗಳ ವೃತ್ತಿಜೀವನದಲ್ಲಿ ಇದೊಂದು ಅತ್ಯಂತ ವಿಲಕ್ಷಣವಾದ ಕ್ಷಣವಾಗಿತ್ತು. ಇದನ್ನು ಯಾರೊಬ್ಬರೂ ಗಮನಿಸುವುದಿಲ್ಲ ಎಂದು ಭಾವಿಸಿದ್ದೆ. ಆದರೆ, ವೀಕ್ಷಕರು ಇದನ್ನು ಗಮನಿಸಿ, ಸಾಕಷ್ಟು ಚರ್ಚೆ ಮಾಡುತ್ತಿದ್ದಾರೆ ಎಂದು ಇನ್ಸ್ಟಾಗ್ರಾಂ ಸಂದೇಶದಲ್ಲಿ ಹೇಳಿದ್ದಾರೆ.
ಹಲ್ಲು ಬೀಳಲು ಕಾರಣವನ್ನು ವಿವರಿಸಿರುವ ಅವರು, ತಮ್ಮ ಪುತ್ರಿ 10 ವರ್ಷಗಳ ಹಿಂದೆ ಲೋಹದ ಅಲರಾಂ ಗಡಿಯಾರದೊಂದಿಗೆ ಆಟವಾಡುತ್ತಿದ್ದಾಗ ಜೋರಾಗಿ ಇವರ ಮುಖಕ್ಕೆ ಹೊಡೆದಿದ್ದಳಂತೆ. ಇದರಿಂದಾಗಿ ಅವರ ಮುಂಬದಿಯ ಮೇಲ್ಭಾಗದ ಹಲ್ಲು ಸಡಿಲಗೊಂಡಿತ್ತಂತೆ. ಅದು ಈಗ ಬಿದ್ದಿದೆ, ಇದಕ್ಕೆ ದಂತಕುಳಿ ಅಥವಾ ಮತ್ತಾವುದೇ ಕಾರಣವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇವರ ಈ ಇನ್ಸ್ಟಾಗ್ರಾಂ ಪೋಸ್ಟ್ ಸಾಕಷ್ಟು ವೈರಲ್ ಆಗಿದ್ದು, ವೀಕ್ಷಕರು ತಮ್ಮ ನೆಚ್ಚಿನ ಆ್ಯಂಕರ್ ಸ್ವಲ್ಪವೂ ಮುಜುಗರಕ್ಕೆ ಒಳಗಾಗದಂತೆ ಸುದ್ದಿ ಓದುವುದನ್ನು ಮುಂದುವರಿಸಿದ್ದಕ್ಕೆ ಅಭಿನಂದಿಸಿದ್ದಾರೆ.