ಶಿವಮೊಗ್ಗ: ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರ ಮೊಮ್ಮಗಳು, ಬೆಂಗಳೂರು ಮೂಲದ ಬ್ರಿಟನ್ ನಿವಾಸಿ ಅನನ್ಯಾ ಪ್ರಸಾದ್ ಅವರು ಅಟ್ಲಾಂಟಿಕ್ ಮಹಾಸಾಗರದಲ್ಲಿ ಏಕಾಂಗಿಯಾಗಿ 5 ಸಾವಿರ ಕಿ.ಮೀ ದೂರವನ್ನು ಹಾಯಿದೋಣಿ ಮೂಲಕ ಕ್ರಮಿಸಿ ವಿಶ್ವಮಟ್ಟದಲ್ಲಿ ದಾಖಲೆ ಮಾಡಿದ್ದಾರೆ.
ಮಹಿಳೆಯೊಬ್ಬರು ಸತತವಾಗಿ 52 ದಿನ 5 ಗಂಟೆ 44 ನಿಮಿಷ ಸಮುದ್ರದಲ್ಲಿ ಏಕಾಂಗಿಯಾಗಿ ಸಾಗಿರುವುದು ಇದೇ ಪ್ರಥಮ. ಅವರು ಸ್ಪಾೃನಿಷ್ ಕ್ಯಾನ್‌ರೀ ದ್ವೀಪದಿಂದ 2024ರ ಡಿ.11ರಂದು ಹೊರಟು ಕೆರೆಬಿಯನ್‌ನ ಆ್ಯಂಟಿಗುವಾ ದ್ವೀಪವನ್ನು ಫೆ.1ರಂದು ತಲುಪಿದ್ದಾರೆ. ಈ ಸಾಹಸಕ್ಕಾಗಿ ಅವರು 3 ವರ್ಷ ತರಬೇತಿ ಪಡೆದಿದ್ದಾರೆ. ದಕ್ಷಿಣ ಭಾರತದ ಬಡ ಮಕ್ಕಳಿಗೆ ಮನೆ ಮತ್ತು ಶಿಕ್ಷಣ ನೀಡಲು, ಬಡ ಮಕ್ಕಳಿಗೆ ಆರೋಗ್ಯ ಶಿಕ್ಷಣ ನೀಡುತ್ತಿರುವ ದೀನಬಂಧು ಪ್ರತಿಷ್ಠಾನಕ್ಕೆ ಸಹಾಯ ಮಾಡುವ ಉದ್ದೇಶದಿಂದ ಸಾಹಸ ಮಾಡಿದ್ದಾಗಿ ಅನನ್ಯಾ ಪ್ರಸಾದ್ ತಿಳಿಸಿದ್ದಾರೆ.