Monday, 17th December 2018  

Vijayavani

ಸುಳ್ವಾಡಿ ವಿಷಪ್ರಸಾದ ದುರಂತ ಪ್ರಕರಣ-ಆರೋಗ್ಯ ಸಚಿವರ ಉಡಾಫೆ ಹೇಳಿಕೆ ಪ್ರಸ್ತಾಪ-ಪರಿಷತ್​ನಲ್ಲಿ ಬಿಜೆಪಿಯಿಂದ ನಿಲುವಳಿ ಸೂಚನೆ        ಶುರುವಾಯ್ತು ಪೆಥಾಯ್ ಪ್ರತಾಪ-ಆಂಧ್ರ, ತಮಿಳುನಾಡು ಕರಾವಳಿಯಲ್ಲಿ ಅಲೆಗಳ ಅಬ್ಬರ-ಚೆನ್ನೈ ಸೇರಿ ಹಲವೆಡೆ ಭಾರಿ ಮಳೆ ಸಾಧ್ಯತೆ        ಒಂದೇ ರಸ್ತೆ, ಎರಡು ಇಲಾಖೆ ಬಿಲ್-ಭೂಸೇನೆ, ಪಿಡಬ್ಲ್ಯೂಡಿ ಇಲಾಖೆ ಬಿಲ್​​ಗಾಗಿ ಪೈಪೋಟಿ-ಮುಗಿದ ರಸ್ತೆಗೆ ಗುದ್ದಲಿ ಪೂಜೆ ನೆರವೇರಿಸಿದ ಕೈ ಶಾಸಕ        ಇನ್ನೂ ನಿಂತಿಲ್ಲ ‘ವಿಷ’ಪ್ರಸಾದದ ಎಫೆಕ್ಟ್-ಚಿಕಿತ್ಸೆ ಪಡೀತಿರೋ 30 ಜನ್ರ ಸ್ಥಿತಿ ಗಂಭೀರ-ಆರೋಪಿತರ ಪರ ವಕಾಲತ್ತು ವಹಿಸದಿರಲು ವಕೀಲರ ನಿರ್ಧಾರ        ಇಂದು 3 ರಾಜ್ಯ ಸಿಎಂಗಳ ಪದಗ್ರಹಣ-ರಾಜ್ಯದಿಂದ ಸಿಎಂ ಎಚ್​ಡಿಕೆ, ಸಿದ್ದುಗೆ ವಿಶೇಷ ಆಹ್ವಾನ-ಕೈ ಸಮಾರಂಭದಲ್ಲಿ ತೃತೀಯ ಶಕ್ತಿ ಪ್ರದರ್ಶನ        37ನೇ ವಸಂತಕ್ಕೆ ‘ಉಗ್ರಂ’ ಸ್ಟಾರ್ ಮುರಳಿ-37ನೇ ಬರ್ತಡೇ.. 37 ಕೆಜಿ ಕೇಕ್ ಕಟ್-ಫ್ಯಾನ್ಸ್​​ಗೆ ಭರಾಟೆ ಟೀಸರ್, ಮದಗಜ ಫಸ್ಟ್ ಪೋಸ್ಟರ್ ಗಿಫ್ಟ್       
Breaking News

ಸ್ಯಾಂಡಲ್​ವುಡ್​ನಲ್ಲಿ ನಾಯಕಿಯಾಗಿ ಮಿಂಚಲು ತಯಾರಾದ ಈ ಅನನ್ಯಾ ಯಾರು?

Friday, 10.08.2018, 1:50 PM       No Comments

ಬೆಂಗಳೂರು: ವಿಜಯ್ ಪ್ರಸಾದ್ ನಿರ್ದೇಶನದ ‘ಸಿದ್ಲಿಂಗು’ ಚಿತ್ರದಲ್ಲಿ ಹೈಸ್ಕೂಲ್ ವಿದ್ಯಾರ್ಥಿನಿ ಶಶಿಕಲಾ ಪಾತ್ರ ಮತ್ತು ‘ನೀರ್​ದೋಸೆ’ ಸಿನಿಮಾದ ಬಾಲಕಿ ಕುಮುದಾ ಪಾತ್ರವನ್ನು ಪ್ರೇಕ್ಷಕರು ಮರೆಯುವುದಕ್ಕೆ ಸಾಧ್ಯವಿಲ್ಲ. ಆ ಪಾತ್ರಗಳು ತೆರೆಮೇಲೆ ಕೆಲಹೊತ್ತು ಕಾಣಿಸಿಕೊಂಡರೂ, ಗಮನ ಸೆಳೆದಿದ್ದವು. ಅಷ್ಟಕ್ಕೂ ಆ ಬಗ್ಗೆ ಈಗ ಮಾತನಾಡುವುದಕ್ಕೆ ಕಾರಣ, ಅನನ್ಯಾ ಕಶ್ಯಪ್! ಆ ಎರಡೂ ಪಾತ್ರಗಳಿಗೆ ಜೀವ ತುಂಬಿದ್ದು ಇದೇ ಅನನ್ಯಾ. ಇದುವರೆಗೂ ಬಾಲ ನಟಿಯಾಗಿ ಗುರುತಿಸಿಕೊಂಡಿದ್ದ ಅವರೀಗ ನಾಯಕಿಯಾಗಿದ್ದಾರೆ. ಈಗಾಗಲೇ ಒಂದು ಸಿನಿಮಾದ ಚಿತ್ರೀಕರಣವನ್ನೂ ಮುಗಿಸಿದ್ದಾರೆ.

ಹರಿಪ್ರಿಯಾ ಮುಖ್ಯಭೂಮಿಕೆಯಲ್ಲಿರುವ ‘ಛ/ಟ ಪಾರ್ವತಮ್ಮ’ ಸಿನಿಮಾದಲ್ಲಿ ಅನನ್ಯಾಗೂ ಪ್ರಮುಖ ಪಾತ್ರವಿದೆ. ‘ಈ ಚಿತ್ರದಲ್ಲಿ ಎರಡು ಕಥೆಗಳು ಸಾಗುತ್ತವೆ. ಒಂದರಲ್ಲಿ ಹರಿಪ್ರಿಯಾ ಪ್ರಧಾನ ಪಾತ್ರವಹಿಸಿದ್ದರೆ, ಇನ್ನೊಂದು ಕಥೆಯಲ್ಲಿ ನಾನಿದ್ದೇನೆ. ಪಾರ್ವತಮ್ಮನ ಮಗಳಾಗಿ, ಪೊಲೀಸ್ ಅಧಿಕಾರಿ ಹರಿಪ್ರಿಯಾ ನಟಿಸಿದ್ದರೆ, ನಾನು ವೈದ್ಯೆಯಾಗಿದ್ದೇನೆ. ತುಂಬ ಮೃದು ಸ್ವಭಾವದ ಸೂಕ್ಷ್ಮ ಮನಸ್ಥಿತಿಯುಳ್ಳ, ಇನ್ನೊಬ್ಬರ ಕಷ್ಟಗಳಿಗೆ ಬೇಗನೇ ಸ್ಪಂದಿಸುವ ಗುಣವುಳ್ಳ ಪಾತ್ರದಲ್ಲಿ ನಾನು ಕಾಣಿಸಿಕೊಂಡಿದ್ದೇನೆ. ತುಂಬ ಶೇಡ್​ಗಳಿರುವಂತಹ ಪಾತ್ರ. ಆ ಕಾರಣಕ್ಕಾಗಿ ಈ ಸಿನಿಮಾ ಒಪ್ಪಿಕೊಂಡೆ. ಸದ್ಯ ಚಿತ್ರೀಕರಣವೆಲ್ಲ ಮುಗಿದಿದ್ದು, ಡಬ್ಬಿಂಗ್ ಮಾಡಬೇಕಿದೆ’ ಎಂದು ತಮ್ಮ ಚಿತ್ರದ ಬಗ್ಗೆ ಹೇಳಿಕೊಳ್ಳುತ್ತಾರೆ ಅನನ್ಯಾ.

ಇದಕ್ಕೂ ಮೊದಲು ‘ನೀರು ತಂದವರು’ ಕಲಾತ್ಮಕ ಚಿತ್ರದಲ್ಲೂ ಅನನ್ಯಾ ಬಣ್ಣ ಹಚ್ಚಿದ್ದರು. ಅದು ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪ್ರದರ್ಶನ ಕಂಡಿತ್ತು. ಆದರೆ, ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡ ಚೊಚ್ಚಲ ಕಮರ್ಷಿಯಲ್ ಚಿತ್ರ ‘..ಪಾರ್ವತಮ್ಮ’ ಎಂಬ ಖುಷಿ ಅನನ್ಯಾ ಅವರದ್ದು.

ಅಂದಹಾಗೆ, ಅನನ್ಯಾ ಮೂಲತಃ ರಂಗಭೂಮಿ ಪ್ರತಿಭೆ. ಮೈಸೂರಿನಲ್ಲಿರುವ ಮಂಡ್ಯ ರಮೇಶ್ ಅವರ ನಟನಾ ಶಾಲೆಯಲ್ಲಿ 12 ವರ್ಷಗಳಿಂದ ಸಕ್ರಿಯರಾಗಿದ್ದರು. ‘ನಮ್ಮ ನಟನಾ ಸಂಸ್ಥೆಗೆ ಒಮ್ಮೆ ನಿರ್ದೇಶಕ ವಿಜಯ್ ಪ್ರಸಾದ್ ಬಂದಿದ್ದರು. ಆಗ ಅವರು ನನಗೆ ತಮ್ಮ ಸಿನಿಮಾಗಳಲ್ಲಿ ಅವಕಾಶ ನೀಡಿದರು. ಅದಕ್ಕೂ ಮೊದಲು ನಾನು ‘ವೀರಬಾಹು’ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದೆ’ ಎಂದು ಹೇಳಿಕೊಳ್ಳುತ್ತಾರೆ ಅವರು. ಸದ್ಯ ನಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಅನನ್ಯಾ ಮೈಸೂರಿನಿಂದ ಬೆಂಗಳೂರಿಗೆ ವಾಸ್ತವ್ಯ ಬದಲಾಯಿಸಿದ್ದಾರೆ. ಸಾಕಷ್ಟು ಸಿನಿಮಾ ಅವಕಾಶಗಳು ಬರುತ್ತಿದ್ದರೂ, ‘..ಪಾರ್ವತಮ್ಮ’ ಹೊರತುಪಡಿಸಿ ಸದ್ಯಕ್ಕೆ ಬೇರಾವುದನ್ನೂ ಅವರು ಒಪ್ಪಿಕೊಂಡಿಲ್ಲವಂತೆ.

Leave a Reply

Your email address will not be published. Required fields are marked *

Back To Top