LIVE | ಜೀವನ ಯಾನ ಮುಗಿಸಿದ ‘ಅನಂತ’: ಪಂಚಭೂತಗಳಲ್ಲಿ ಲೀನ

2.41: ಅನಂತಕುಮಾರ್​ ಅವರ ಪಾರ್ಥಿವ ಶರೀರಕ್ಕೆ ಸಹೋದರ ನಂದಕುಮಾರ್​ ಅವರು ಬ್ರಾಹ್ಮಣ ಸಂಪ್ರದಾಯದ ಪ್ರಕಾರ ಅಗ್ನಿಸ್ಪರ್ಶ ಮಾಡಿದರು.  ಇದಕ್ಕೂ ಮೊದಲು ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ನಮನ ಸಲ್ಲಿಸಲಾಯಿತು. ಬಿಜೆಪಿ ರಾಷ್ಟ್ರ ನಾಯಕರು ಸೇರಿ ಹಲವು ಗಣ್ಯರು ಅಂತಿಮ ನಮನ ಸಲ್ಲಿಸಿದರು.

ಕೇಂದ್ರ ಸಚಿವ ಅನಂತ್​ ಕುಮಾರ್​ ಅವರು  ಬಹು ಅಂಗಾಂಗ ವೈಫಲ್ಯದಿಂದ ಸೋಮವಾರ ಬೆಳಗಿನ ಜಾವ 3 ಗಂಟೆಗೆ ಮೃತಪಟ್ಟಿದ್ದರು.  ಶ್ವಾಸಕೋಶದ ಕ್ಯಾನ್ಸರ್​ಗೆ ತುತ್ತಾಗಿದ್ದ ಅವರು ಅಮೆರಿಕಾದಲ್ಲಿ ಚಿಕಿತ್ಸೆ ಪಡೆದು ವಾಪಸ್​ ಆಗಿದ್ದರು. ಕಳೆದ 20 ದಿನಗಳಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು.

ನಿನ್ನೆ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಪ್ರಧಾನಿ ಮೋದಿಯವರು ಆಗಮಿಸಿ ಅಂತಿಮ ದರ್ಶನ ಪಡೆದಿದ್ದರು. ಇಂದು ಕೂಡ ಹಲವು ಗಣ್ಯರು, ಕೇಂದ್ರ ಸಚಿವರು, ರಾಷ್ಟ್ರ ನಾಯಕರು ಆಗಮಿಸಿ ಪುಷ್ಪನಮನ ಸಲ್ಲಿಸಿದರು. ಎಲ್.ಕೆ.ಆಡ್ವಾಣಿ, ಅಮಿತ್​ ಷಾ ಸೇರಿ ಹಲವು ಗಣ್ಯರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು.

ಅನಂತಕುಮಾರ್​ ಅವರು ರಾಸಾಯನಿಕ, ಸಂಸದೀಯ ವ್ಯವಹಾರಗಳ ಖಾತೆ ಸಚಿವರಾಗಿದ್ದು ತನ್ನ ಸಂಪುಟ ಸಹೋದ್ಯೋಗಿಗಳಿಗೆ ಅಚ್ಚುಮೆಚ್ಚಾಗಿದ್ದರು. ಅವರೊಬ್ಬ ಧೀಮಂತ, ದೂರದೃಷ್ಟಿಯುಳ್ಳ ನಾಯಕ ಎಂದು ಹಲವರು ಹೊಗಳಿದ್ದಾರೆ. ಅದರಲ್ಲೂ ಕರ್ನಾಟಕದಲ್ಲಿ ಬಿಜೆಪಿ ಪಕ್ಷ ಕಟ್ಟುವಲ್ಲಿ ಅವರ ಪಾತ್ರ ತುಂಬ ಮಹತ್ವದ್ದಾಗಿತ್ತು.

2.11: ಬ್ರಾಹ್ಮಣ ಸಂಪ್ರದಾಯದಂತೆ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಲಾಯಿತು.

1.58: ಅನಂತಕುಮಾರ್​ ಅವರ ಮೃತದೇಹಕ್ಕೆ ಹೊದೆಸಿದ್ದ ರಾಷ್ಟ್ರಧ್ವಜವನ್ನು ತೆಗೆದು ಕುಟುಂಬ ವರ್ಗಕ್ಕೆ ಹಸ್ತಾಂತರಿಸಿದ ಸೇನಾಪಡೆ.

1.57: ಕೇಂದ್ರ ಸಚಿವರಾದ ಹರ್ಷವರ್ಧನ್​, ಧರ್ಮೇಂದ್ರ ಪ್ರಧಾನ್​, ಪೀಯುಷ್​ ಗೋಯೆಲ್​, ರಾಮದಾಸ್​ ಅಠಾವಳೆ, ವಿಧಾನ ಪರಿಷತ್​ ಹಂಗಾಮಿ ಸಭಾಪತಿ ಬಸವರಾಜ ಹೊರಟ್ಟಿ, ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​, ರಾಜ್ಯ ಸಚಿವ ಸಾ.ರಾ.ಮಹೇಶ್, ಬೆಂಗಳೂರು ಮಹಾನಗರ ಪಾಲಿಕೆ ಮೇಯರ್​ ಗಂಗಾಂಬಿಕೆ,  ರಾಜ್ಯ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್​ ಅಂತಿಮ ನಮನ ಸಲ್ಲಿಸಿದರು. ಮೂರು ಸೇನೆಗಳ ಪ್ರಮುಖರು ಸರ್ಕಾರಿ ಗೌರವ ಸಲ್ಲಿಸಿದರು.

1.51: ಎಲ್​.ಕೆ.ಆಡ್ವಾಣಿ,  ಅಮಿತ್​ ಷಾ, ರಾಜನಾಥ ಸಿಂಗ್​, ಆರ್​ಎಸ್​ಎಸ್​ ಪ್ರಧಾನ ಕಾರ್ಯದರ್ಶಿ ಭಯ್ಯಾಜಿ ಜೋಷಿ, ಬಿ.ಎಸ್​.ಯಡಿಯೂರಪ್ಪ, ಸದಾನಂದ ಗೌಡ, ಕೇಂದ್ರ ಕಾನೂನು ಸಚಿವ ರವಿಶಂಕರ ಪ್ರಸಾದ್​ ಅವರು ಅನಂತಕುಮಾರ್​ ಅವರಿಗೆ ಅಂತಿಮ ನಮನ ಸಲ್ಲಿಸಿದರು. ಕೇಂದ್ರ ನಿರ್ಮಲಾ ಸೀತಾರಾಮನ್​, ಸಚಿವ ಡಿ.ಕೆ.ಶಿವಕುಮಾರ್​ ಪುಷ್ಪ ನಮನ ಸಲ್ಲಿಸಿದರು.

1.44: ಪಾರ್ಥಿವ ಶರೀರಕ್ಕೆ ಸಕಲ ಸರ್ಕಾರಿ ಗೌರವ ಸಮರ್ಪಿಸಲಾಯಿತು.

1.40: ಸ್ಥಳಕ್ಕೆ ಆಗಮಿಸಿದ ಎಲ್​.ಕೆ.ಆಡ್ವಾಣಿ ತೇಜಸ್ವಿನಿಯವರಿಗೆ ಸಾಂತ್ವನ ಹೇಳಿದರು. ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್​ ಕೂಡ ರುದ್ರಭೂಮಿಗೆ ಬಂದಿದ್ದಾರೆ.

1.39:  ರುದ್ರಭೂಮಿಗೆ ಆಗಮಿಸಿದ ಗೃಹಸಚಿವ ರಾಜನಾಥ ಸಿಂಗ್, ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಶಾ ಅನಂತಕುಮಾರ್​ ಅವರ ಪಾರ್ಥಿವ ಶರೀರಕ್ಕೆ ನಮನ ಸಲ್ಲಿಸಿದರು.

1.36: ವಿಧಿವಿಧಾನದ ಮಂತ್ರ ಪಠಣ ನಡೆಯುತ್ತಿದೆ. ಸಹೋದರ ನಂದಕುಮಾರ್​ ಅವರು ಕಾರ್ಯಗಳನ್ನು ನಡೆಸುತ್ತಿದ್ದಾರೆ.

1.34: ಭೋಲೋ ಭಾರತ ಮಾತಾಕಿ, ಅಮರ್​ ರಹೇ, ಅಮರ್​ ರಹೇ ಎಂಬ ಘೋಷಣೆಗಳನ್ನು ಕೂಗಲಾಗುತ್ತಿದೆ. ಕೇಂದ್ರ ನಾಯಕರು ಬಂದ ಬಳಿಕ ಶ್ರದ್ಧಾಂಜಲಿ ಸಭೆ ನಡೆಯಲಿದ್ದು ಅದಾದ ನಂತರ ಅಂತ್ಯಕ್ರಿಯೆ ನಡೆಯಲಿದೆ.

1.33: ಚಾಮರಾಜಪೇಟೆ ರುದ್ರಭೂಮಿಗೆ ಎಲ್​.ಕೆ.ಆಡ್ವಾಣಿ, ಅಮಿತ್​ ಷಾ , ನಿರ್ಮಲಾ ಸೀತಾರಾಮನ್​, ರಾಜನಾಥ ಸಿಂಗ್​ ಮತ್ತಿತರರು ಕೆಲವೇ ಕ್ಷಣಗಳಲ್ಲಿ ಆಗಮಿಸಲಿದ್ದಾರೆ.

1.32: ಚಾಮರಾಜಪೇಟೆಗೆ ಆಗಮಿಸಿದ ಕೇಂದ್ರ ಸಚಿವ, ಧರ್ಮೇಂದ್ರ ಪ್ರಧಾನ್​, ಸದಾನಂದ ಗೌಡ, ಸಚಿವ ಡಿ.ಕೆ.ಶಿವಕುಮಾರ್​, ಬಸವರಾಜ ಹೊರಟ್ಟಿ, ಜಗದೀಶ್​ ಶೆಟ್ಟರ್​ .

1.17: ಅನಂತಕುಮಾರ್​ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ. ಬ್ರಾಹ್ಮಣ ಸಂಪ್ರದಾಯದಂತೆ ವಿಧಿವಿಧಾನ ನೆರವೇರಿಸಿ ಅಗ್ನಿಸ್ಪರ್ಶ ಮಾಡಲಿರುವ ಕಿರಿಯ ಸಹೋದರ ನಂದಕುಮಾರ್​.

1.02: ಚಾಮರಾಜ ಪೇಟೆ ತಲುಪಿದ ಅನಂತಕುಮಾರ್​ ಪಾರ್ಥಿವ ಶರೀರ. ಕೆಲವೇ ಹೊತ್ತಲ್ಲಿ ಅಂತ್ಯಕ್ರಿಯೆ

12.48: ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿರುವ ರಾಷ್ಟ್ರೀಯ, ರಾಜ್ಯ ಮಟ್ಟದ ಆರ್​ಎಸ್​ಎಸ್​ ಮುಖಂಡರಿಗಾಗಿ ಪ್ರತ್ಯೇಕ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಪುರೋಹಿತರ ಪಕ್ಕದಲ್ಲೇ ಕುಳಿತುಕೊಳ್ಳಲು ಅನುವು ಮಾಡಲಾಗಿದೆ.

12.42: ಎಚ್​ಎಎಲ್​ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಅಮಿತ್​ ಶಾ, ಎಲ್​.ಕೆ.ಆಡ್ವಾಣಿ, ನಿರ್ಮಲಾ ಸೀತಾರಾಮನ್​.

12.31: ಚಾಮರಾಜಪೇಟೆ ಚಿತಾಗಾರದ ಬಳಿ ಆಗಮಿಸಿದ ಬಿ.ಎಸ್​.ಯಡಿಯೂರಪ್ಪ, ಬಿ.ವೈ.ರಾಘವೇಂದ್ರ, ಬಸವರಾಜ ಬೊಮ್ಮಾಯಿ ಮತ್ತಿರರು. ಅಮಿತ್​ ಷಾ, ಎಲ್.ಕೆ.ಆಡ್ವಾಣಿ, ರಾಜನಾಥ್​ ಸಿಂಗ್​, ನಿರ್ಮಲಾ ಸೀತಾರಾಮನ್​ ಅವರು ನೇರವಾಗಿ ರುದ್ರಭೂಮಿಗೆ ಆಗಮಿಸಲಿದ್ದಾರೆ ಎನ್ನಲಾಗಿದೆ.

12.18: ನ್ಯಾಷನಲ್​ ಕಾಲೇಜು ಮೈದಾನದಲ್ಲಿ ಅಂತಿಮ ದರ್ಶನಕ್ಕೆ ತೆರೆಬಿದ್ದಿದ್ದು, ಪಾರ್ಥಿವ ಶರೀರದ ಮೆರವಣಿಗೆ ಚಾಮರಾಜಪೇಟೆಯ ರುದ್ರಭೂಮಿಯತ್ತ ಸಾಗಿದೆ.

12.07: ವಂದೇ ಮಾತರಂ ಗೀತೆ ಹಾಡಲಾಗುತ್ತಿದ್ದು ಅದಾದ ಬಳಿಕ ಪಾರ್ಥಿವ ಶರೀರದ ಮೆರವಣಿಗೆ ಅಲ್ಲಿಂದ ಹೊರಡುತ್ತದೆ.

11.53: ಕೇಂದ್ರ ಸಚಿವ ಅಶ್ವಿನಿ ಕುಮಾರ್ ಚೌಬೆ ಅವರು ನ್ಯಾಷನಲ್​ ಕಾಲೇಜು ಮೈದಾನಕ್ಕೆ ಆಗಮಿಸಿ ಅನಂತಕುಮಾರ್​ ಅವರಿಗೆ ಅಂತಿಮ ನಮನ ಸಲ್ಲಿಸಿದರು. ಅನಂತ್​ ನಮ್ಮೊಂದಿಗೆ ಇಲ್ಲ ಎಂಬುದನ್ನು ಊಹಿಸಿಕೊಳ್ಳಲೂ ಆಗುತ್ತಿಲ್ಲ ಎಂದು ಹೇಳಿದ ಅವರು, ಕುಟುಂಬದವರಿಗೆ ಸಾಂತ್ವನ ಹೇಳಿದರು.

11.48: ಸುಮಾರು 12 ಗಂಟೆ ಹೊತ್ತಿಗೆ ವಂದೇ ಮಾತರಂ ಹಾಡುವ ಮೂಲಕ ಸಾರ್ವಜನಿಕ ದರ್ಶನಕ್ಕೆ ತೆರೆನೀಡಲಾಗುತ್ತದೆ.  ಅಲ್ಲಿಂದ ಚಾಮರಾಜಪೇಟೆ ರುದ್ರಭೂಮಿಗೆ ಮೆರವಣಿಗೆ ಹೊರಡಲಿದೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಅಮಿತ್​ ಷಾ ಆಗಮಿಸಲಿದ್ದಾರೆ.

11.43: ಅದಮ್ಯ ಚೇತನದಡಿ ಬರುವ ಶಾಲೆಗಳ ಮಕ್ಕಳು ಆಗಮಿಸಿ ಅನಂತಕುಮಾರ್​ ಅವರ ಅಂತಿಮ ದರ್ಶನ ಪಡೆದರು. ಶಿಕ್ಷಕರೂ ಆಗಮಿಸಿದ್ದರು.

11.41:  ಅಂತಿಮ ವಿಧಿವಿಧಾನಗಳ ನೇತೃತ್ವವನ್ನು ಎಂ.ಜಿ.ಶ್ರೀನಾಥ ಶಾಸ್ತ್ರಿ ವಹಿಸಲಿದ್ದು, ಡಾ. ಭಾನುಪ್ರಕಾಶ್​ ಶರ್ಮ, ಪ್ರಸನ್ನಕುಮಾರ್​, ಸುಶಾಂತ್​ ಶರ್ಮ, ವೆಂಕಟಾಚಲಪತಿ ಶಾಸ್ತ್ರಿಗಳು ಎಲ್ಲ ಕಾರ್ಯಕ್ರಮಗಳನ್ನು ನೆರವೇರಿಸುವರು.

11.30: ಮಧ್ಯಾಹ್ನ 1 ಗಂಟೆಗೆ ಅಂತಿಮ ಕ್ರಿಯೆ ವಿಧಿ ವಿಧಾನ ಆರಂಭ. ಅನಂತಕುಮಾರ್​ ಅವರು ಕೌಶಿಕ ಗೋತ್ರಕ್ಕೆ ಸೇರಿದವರಾಗಿದ್ದು, ಸುಮಾರು ಒಂದು ಗಂಟೆಗಳ ಕಾಲ ಅಂತಿಮ ವಿಧಿವಿಧಾನಗಳು ನಡೆಯಲಿವೆ. ಹಾಲು, ಮೊಸರು, ಗಂಜಲದಿಂದ ದೇಹದ ಶುದ್ಧತೆ ಮಾಡಲಾಗುತ್ತದೆ ಎಂದು ಭಾನುಪ್ರಕಾಶ ಶರ್ಮ ತಿಳಿಸಿದ್ದಾರೆ.

11.10: ನ್ಯಾಷನಲ್​ ಕಾಲೇಜು ಮೈದಾನದಲ್ಲಿ ಅನಂತಕುಮಾರ್​ ಅಂತಿಮ ದರ್ಶನ ಪಡೆದ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು, ರಾಜ್ಯಪಾಲ ವಿ.ಆರ್​.ವಾಲಾ, ಮಾಜಿ ಸಚಿವ ಕಳಕಪ್ಪ ಬಂಡಿ, ಬೇಳೂರು ಗೋಪಾಲಕೃಷ್ಣ, ಸಚಿವ ಪುಟ್ಟರಾಜು. ಮೃತದೇಹ ನೋಡಿದ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ತುಂಬ ಗದ್ಗದಿತರಾದರು.

ಮಕ್ಕಳಿಗೆ ಏಕಲವ್ಯ ಕತೆ ಹೇಳಿದ್ದ ಅನಂತಕುಮಾರ್

ಅದಮ್ಯ ಚೇತನ ಅನಂತಕುಮಾರ್​ ಅವರ ಬಗೆಗಿನ ಕೌತುಕಗಳಿವು

ಫೇಸ್​ಬುಕ್​ನಲ್ಲಿ ಅನಂತಕುಮಾರ್​ ವಿರುದ್ಧ ಅವಹೇಳನಕಾರಿ ಪೋಸ್ಟ್​

VIDEO| ಇಲ್ಲಿದೆ ನೋಡಿ ಅನಂತಕುಮಾರ್​ ಜೀವನ ಯಾನದ ಕುರಿತ ಕಿರು ಸಾಕ್ಷ್ಯ ಚಿತ್ರ

ಅದಮ್ಯ ಚೇತನ ಅನಂತ

ಅನಂತ ಯಾನ

11.07: ನ್ಯಾಷನಲ್​ ಕಾಲೇಜು ಮೈದಾನದಲ್ಲಿ ಬ್ರಾಹ್ಮಣ ಸಮುದಾಯ ಪ್ರಕಾರ ಮಂತ್ರ ಪಠಣ ಮಾಡಲಾಗುತ್ತಿದೆ. ಸಾರ್ವಜನಿಕರು, ಕಾರ್ಯಕರ್ತರು ಭಾವೋದ್ವೇಗಕ್ಕೆ ಒಳಗಾಗುತ್ತಿರುವ ದೃಶ್ಯವೂ ಕಂಡುಬರುತ್ತಿದೆ.

10.54: ಚಾಮರಾಜಪೇಟೆ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ. ಸ್ಥಳ ಸ್ವಚ್ಛ ಗೊಳಿಸುತ್ತಿರುವ ಸಿಬ್ಬಂದಿ. ಅಂತಿಮ ಸಂಸ್ಕಾರಕ್ಕೆ 35 ಕೆ.ಜಿ. ತುಪ್ಪ, 1 ಟನ್​ ಸರ್ವೆ ಮರದ ಕಟ್ಟಿಗೆ, 5 ಕೆ.ಜಿ. ಕರ್ಪೂರ ಬಳಕೆ.

10.44: ನ್ಯಾಷನಲ್​ ಕಾಲೇಜು ಮೈದಾನ ತಲುಪಿದ ಪಾರ್ಥಿವ ಶರೀರ.

10.41: ಬಸವನಗುಡಿ ನ್ಯಾಷನಲ್​ ಕಾಲೇಜು ಮೈದಾನದಲ್ಲಿ ಅನಂತಕುಮಾರ್ ಅಂತಿಮ ದರ್ಶನಕ್ಕೆ ಸರತಿ ಸಾಲಿನಲ್ಲಿ ನಿಂತು ಕಾಯುತ್ತಿರುವ ಸಾರ್ವಜನಿಕರು, ಶಾಲಾ ಮಕ್ಕಳು.

10.25: ಬಿಜೆಪಿ ಕಚೇರಿಯಿಂದ ಅನಂತಕುಮಾರ್​ ಪಾರ್ಥಿವ ಶರೀರವನ್ನು ರವಾನೆ ಮಾಡಲಾಗುತ್ತಿದೆ. ಕಾಡುಮಲ್ಲೇಶ್ವರ, ಸಂಪಿಗೆ ರಸ್ತೆ, ಸ್ಯಾಂಕಿ ಟ್ಯಾಂಕ್​, ಭಾಷ್ಯಂ ಸರ್ಕಲ್​ ಮೂಲಕ ಹೊರಟಿದ್ದು, ಮಹಾರಾಣಿ ಕಾಲೇಜು ರಸ್ತೆ, ಕೆ.ಆರ್​.ಸರ್ಕಲ್​, ನೃಪತುಂಗ ರಸ್ತೆ, ಕಾರ್ಪೋರೇಷನ್, ದೇವಾಂಗ ಜಂಕ್ಷನ್​, ಪೂರ್ಣಿಮಾ ಜಂಕ್, ಊರ್ವಶಿ ಜಂಕ್ಷನ್​ ಹಾದಿಯಲ್ಲಿ ನ್ಯಾಷನಲ್​ ಕಾಲೇಜು ಮೈದಾನಕ್ಕೆ ತಲುಪಲಿದೆ.

10.21: ಅಂತ್ಯಕ್ರಿಯೆ ವೇಳೆ 50 ಜನ ಗಣ್ಯರಿಗೆ ಮಾತ್ರ ಅವಕಾಶ. ರಾಜ್ಯಪಾಲ ವಜುಬಾಯಿ ವಾಲಾ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಷಾ, ಬಿಜೆಪಿ ಹಿರಿಯ ಮುಖಂಡ ಎಲ್​.ಕೆ.ಆಡ್ವಾಣಿ, ಗೃಹ ಸಚಿವ ರಾಜನಾಥ ಸಿಂಗ್​, ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಪ್ರಮುಖರು ಉಪಸ್ಥಿತಿ ಇರುವರು.

10.16: ಗೃಹಸಚಿವ ರಾಜನಾಥ ಸಿಂಗ್​ ಅವರು ಅನಂತಕುಮಾರ್​  ಅಂತ್ಯಕ್ರಿಯೆ ನಡೆಯಲಿರುವ ಚಾಮರಾಜಪೇಟೆ ರುದ್ರಭೂಮಿ ಸ್ಥಳಕ್ಕೆ ನೇರವಾಗಿ ಆಗಮಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

10.07: ಬಿಜೆಪಿ ಕಚೇರಿಯಲ್ಲಿ ಅನಂತಕುಮಾರ್​ಗೆ ಶ್ರದ್ಧಾಂಜಲಿ ಸಲ್ಲಿಸಿದ  ಕೇಂದ್ರ ಸಚಿವ ಪ್ರಕಾಶ್​ ಜಾವಡೇಕರ್​, ಧರ್ಮೇಂದ್ರ ಪ್ರದಾನ್​ ಅನುರಾಗ್​ ಠಾಕೂರ್​, ಡಿ.ವಿ. ಸದಾನಂದ ಗೌಡ ಮತ್ತಿತರ ಗಣ್ಯರು.

10.o4: ಇನ್ನು ಕೆಲವೇ ಕ್ಷಣಗಳಲ್ಲಿ ಬಿಜೆಪಿ ಕಚೇರಿಯಿಂದ  ನ್ಯಾಷನಲ್​ ಕಾಲೇಜು ಮೈದಾನಕ್ಕೆ ಹೊರಡಲಿರುವ ಅನಂತಕುಮಾರ್​ ಪಾರ್ಥಿವ ಶರೀರ ಮೆರವಣಿಗೆ.  ಮೈದಾನದಲ್ಲಿ ಬಿಗಿ ಭದ್ರತೆ 1,300ಕ್ಕೂ ಹೆಚ್ಚು ಪೊಲೀಸರ ನಿಯೋಜನೆ. ಪೆಂಡಾಲ್​ ಹಾಕಿ ವೇದಿಕೆ ನಿರ್ಮಾಣ. ಸಾರ್ವಜನಿಕರಿಗೆ, ವಿಐಪಿಗಳಿಗೆ ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರ ಹಾಗೂ ಗಣ್ಯರ ಪ್ರವೇಶಕ್ಕೆ ಪ್ರತ್ಯೇಕ ಮಾರ್ಗ ಕಲ್ಪಿಸಲಾಗಿದೆ.

9.42: ಮಧ್ಯಾಹ್ನ 1.30ರೊಳಗೆ ಅಂತ್ಯಕ್ರಿಯೆ ನಡೆಸಲು ಅವಕಾಶ ಮಾಡಿಕೊಡುವಂತೆ ಕುಟುಂಬಸ್ಥರು ಮನವಿ ಸಲ್ಲಿಸಿದ್ದಾರೆ. ಹೀಗಾಗಿ 12.30ರೊಳಗೆ ಚಾಮರಾಜಪೇಟೆಯ ರುದ್ರಭೂಮಿಗೆ ಪಾರ್ಥಿವ ಶರೀರ ರವಾನೆಯಾಗಲಿದೆ. 50 ಜನ ಗಣ್ಯರಿಗೆ ಕೊನೆಯ ನಮನ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ. ಬಳಿಕ ಮಿಲಿಟರಿ ಪಡೆ ಸರ್ಕಾರಿ ಗೌರವ ಸಲ್ಲಿಸಲಿದ್ದು ನಂತರ ಕುಟುಂಬಸ್ಥರು ಅಂತಿಮ ವಿಧಿ ವಿಧಾನ ನಡೆಸಲಿದ್ದಾರೆ.

9.30: ಬಿಜೆಪಿ ಕಚೇರಿಯಲ್ಲಿ ಅನಂತ್​ಕುಮಾರ ಅವರ ಅಂತಿಮ ದರ್ಶನ ಪಡೆಯುತ್ತಿರುವ ಅಭಿಮಾನಿಗಳು, ಕಾರ್ಯಕರ್ತರು, ಮುಖಂಡರು. ಪತ್ನಿ ತೇಜಸ್ವಿನಿ, ಪುತ್ರಿಯೂ ಸ್ಥಳದಲ್ಲಿದ್ದಾರೆ. ಬಿ.ಎಸ್​.ಯಡಿಯೂರಪ್ಪ, ಕೆ.ಎಸ್​.ಈಶ್ವರಪ್ಪ, ಬಿ.ಎಲ್​.ಸಂತೋಷ್​ ಮತ್ತಿರರು ಅನಂತ್​ ಅವರಿಗೆ ಅಂತಿಮ ನಮನ ಸಲ್ಲಿಸಿದರು.

9.00: ಬಿಜೆಪಿ ಕಚೇರಿ ತಲುಪಿದ ಅನಂತಕುಮಾರ್​ ಪಾರ್ಥಿವ ಶರೀರ.

8.46: ಬಿಜೆಪಿ ಕಚೇರಿಗೆ ಆಗಮಿಸಿದ ಕೇಂದ್ರ ಸಚಿವ ಸದಾನಂದ ಗೌಡ, ಬಿ.ಎಸ್​.ಯಡಿಯೂರಪ್ಪ, ಶಾಸಕರಾದ ಸಿ.ಟಿ.ರವಿ, ವಿಶ್ವೇಶ್ವರ ಹೆಗಡೆ ಕಾಗೇರಿ, ರಾಮದಾಸ್​, ಆರ್​ಎಸ್​ಎಸ್​ ರಾಷ್ಟ್ರೀಯ ಕಾರ್ಯದರ್ಶಿ ರಾಮಲಾಲ್​, ಅರಗ ಜ್ಞಾನೇಂದ್ರ, ಬಸವರಾಜ್ ಬೊಮ್ಮಾಯಿ, ಅರವಿಂದ ಕಾರಜೋಳ, ಕೋಟಾ ಶ್ರೀನಿವಾಸ ಪೂಜಾರಿ, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್, ಶಾಸಕ ಸುನಿಲ್ ಕುಮಾರ್ ಮತ್ತಿತರ ಮುಖಂಡರು.

08-05: ಅನಂತ್​ ಕುಮಾರ್​ ಪಾರ್ಥಿವ ಶರೀರ ಸಾಗುವ ಮಾರ್ಗ: ಬಿಜೆಪಿ ಕಚೇರಿಯತ್ತ ಅನಂತಕುಮಾರ್​ ಪಾರ್ಥಿವ ಶರೀರವನ್ನು ಸಾಗಿಸಲಾಗುತ್ತಿದ್ದು ಎಸ್​.ಪಿ.ಸಮಾಜ ರಸ್ತೆ, ಬಸವನಗುಡಿ ಮೆಡಿಕಲ್​ ಸೆಂಟರ್​, ಲಾಲ್​ಬಾಗ್​ ವೆಸ್ಟ್​ಗೇಟ್​, ಆರ್​.ವಿ.ರಸ್ತೆ, ಮಿನರ್ವ ಸರ್ಕಲ್​, ಶಿವಾಜಿ ವೃತ್ತ ಅಲ್ಲಿಂದ ಎನ್​.ಆರ್​.ವೃತ್ತ, ಹೈಗ್ರೌಂಡ್​ ಜಂಕ್ಷನ್​ನಿಂದ ಪಿ.ಜಿ.ಹಳ್ಳಿ ಜಂಕ್ಷನ್​, ಕಾವೇರಿ ಜಂಕ್ಷನ್​ನಿಂದ ಭಾಷ್ಯಂ ಸರ್ಕಲ್​, ಮಾರಮ್ಮ ಸರ್ಕಲ್​ ಸಂಪಿಗೆ ರಸ್ತೆ ಮೂಲಕ ರವಾನೆ ಮಾಡಲಾಗುತ್ತಿದೆ.

ಅನಂತಕುಮಾರ್​ ಅಮರ್​ ರಹೇ, ಅಮರ್​ ರಹೇ ಎಂದು ಅಭಿಮಾನಿಗಳು ಘೋಷಣೆ ಕೂಗುತ್ತಿದ್ದಾರೆ.

ಬೆಂಗಳೂರು: ಸ್ನೇಹಜೀವಿ, ಸದಾ ಕ್ರಿಯಾಶೀಲ ವ್ಯಕ್ತಿಯಾಗಿದ್ದ ಕೇಂದ್ರ ಸಚಿವ ಅನಂತಕುಮಾರ್​ ಅವರು ನ.12ರಂದು ಇಹಲೋಕ ತ್ಯಜಿಸಿದ್ದಾರೆ. ಇಂದು ಮಧ್ಯಾಹ್ನದ ಬಳಿಕ ಅವರ ಅಂತ್ಯಕ್ರಿಯೆ ನಡೆಯಲಿದೆ.

ಬೆಳಗ್ಗೆ 8ಗಂಟೆಯಿಂದ 9-30ರವರೆಗೆ ಮಲ್ಲೇಶ್ವರಂನ ಬಿಜೆಪಿ ಕಚೇರಿಯ ನೆಲಮಹಡಿಯಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಮಾಡಲಾಗಿದೆ. ಬಿಜೆಪಿ ಕಚೇರಿ ಬಳಿ ಪೊಲೀಸ್​ ಬಿಗಿ ಬಂದೋಬಸ್ತ್​ ಕಲ್ಪಿಸಲಾಗಿದೆ. ಡಿವೈಎಸ್​ಪಿ, ಐವರು ಇನ್​ಸ್ಪೆಕ್ಟರ್​, 6 ಪಿಎಸ್​ಐಗಳು, 220 ಪೊಲೀಸ್​ ಪೇದೆಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ.

ಎರಡು ಪ್ರತ್ಯೇಕ ಮಾರ್ಗ

ಬಿಜೆಪಿ ಕಚೇರಿಗೆ ತೆರಳಲು ಗಣ್ಯರು, ಕಾರ್ಯಕರ್ತರಿಗಾಗಿ ಎರಡು ಪ್ರತ್ಯೇಕ ಮಾರ್ಗ ಕಲ್ಪಿಸಲಾಗಿದೆ. ಬ್ಯಾರಿಕೇಡ್​ಗಳನ್ನು ಹಾಕಿ ಭದ್ರತೆ ಕಲ್ಪಿಸಲಾಗಿದೆ. ಮೆರವಣಿಗೆ ದಾರಿಯಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.

ಬೃಹತ್​ ಭಾವಚಿತ್ರ

ಬಿಜೆಪಿ ಕಚೇರಿಯಲ್ಲಿ ಅನಂತಕುಮಾರ್ ಅವರ ಬೃಹತ್​ ಭಾವಚಿತ್ರವನ್ನು ಇರಿಸಲಾಗಿದ್ದು, ಅದರ ಎರಡೂ ಬದಿಯಲ್ಲಿ ಪಕ್ಷದ ಬಾವುಟ ಇಡಲಾಗಿದೆ. ಪಾರ್ಥಿವ ಶರೀರ ಇಡಲು ಸಕಲ ಸಿದ್ಧತೆ ಮಾಡಲಾಗಿದೆ. ರಕ್ಷಣಾ ಇಲಾಖೆ ವಾಹನದಲ್ಲಿ ಪಾರ್ಥಿವ ಶರೀರ ಮೆರವಣಿಗೆ ಮಾಡಲಾಗುವುದು. ಈಗಾಗಲೇ ಅನಂತಕುಮಾರ್​ ನಿವಾಸಕ್ಕೆ ಸೇನಾ ಕ್ಯಾಂಟರ್​ ಆಗಮಿಸಿದೆ.

10 ಗಂಟೆ ಬಳಿಕ ನ್ಯಾಷನಲ್​ ಕಾಲೇಜು ಮೈದಾನಕ್ಕೆ ಪಾರ್ಥಿವ ಶರೀರವನ್ನು ರವಾನಿಸಲಾಗುವುದು. ಅಲ್ಲಿ 1 ಗಂಟೆವರೆಗೂ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ನಂತರ ಚಾಮರಾಜಪೇಟೆ ಚಿತಾಗಾರಕ್ಕೆ ಮೆರವಣಿಗೆ ತಂದು, ಅಂತಿಮ ವಿಧಿ ವಿಧಾನ ನೆರವೇರಿಸಲಾಗುವುದು.