ಅನಂತ್ ನನ್ನ ಗುರು

ಬೆಂಗಳೂರು: ಪ್ರೇಕ್ಷಕರಿಗೆ ‘ಕೆಜಿಎಫ್’ ಚಿತ್ರ ಇಷ್ಟವಾಗಿದೆ. ವಿಶ್ವಾದ್ಯಂತ ಕೋಟಿ ಕೋಟಿ ಹಣ ಬಾಚಿಕೊಂಡಿದೆ. ಈ ಸಂಭ್ರಮವನ್ನು ಹಂಚಿಕೊಳ್ಳಲೆಂದೇ ಇತ್ತೀಚೆಗೆ ಮಾಧ್ಯಮಗಳ ಮುಂದೆ ‘ಕೆಜಿಎಫ್’ ಬಳಗ ಹಾಜರಾಗಿತ್ತು. ಅದರಲ್ಲೂ ಅಂದಿನ ಆಕರ್ಷಣೆ ಅನಂತ್ ನಾಗ್. ಚಿತ್ರದಲ್ಲಿ ಆನಂದ್ ಇಂಗಳಗಿ ಎಂಬ ಹಿರಿಯ ಪತ್ರಕರ್ತನ ಪಾತ್ರದಲ್ಲಿ ಅವರು ನಟಿಸಿದ್ದಾರೆ. ಯಶ್-ಅನಂತ್ ಒಟ್ಟಿಗೆ ನಟಿಸಿರುವ ನಾಲ್ಕನೇ ಸಿನಿಮಾ ಇದು. ಇದೇ ವೇಳೆ ತಮ್ಮ ಧಾರಾವಾಹಿ ದಿನಗಳನ್ನು ಮತ್ತು ಅನಂತ್ ನಾಗ್ ಜತೆಗಿನ ಒಡನಾಟವನ್ನು ಯಶ್ ನೆನಪಿಸಿಕೊಂಡರು. ‘ನಾನು ಗಾಂಧಿನಗರಕ್ಕೆ ಹೀರೋ ಆಗಬೇಕು ಎಂದುಕೊಂಡು ಬಂದವನು. ಯಾವುದಾದರೂ ನಟನಾ ಶಾಲೆಗೆ ಸೇರಿಕೊಂಡರೆ ಏನಾದರೂ ಕಲಿಯಬಹುದು, ಕರಿಯರ್​ಗೆ ಅದು ಉಪಯುಕ್ತವಾಗಲಿದೆ ಎಂದುಕೊಂಡಿದ್ದೆ. ಆದರೆ, ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ. ಆನಂತರ ನನಗೆ ‘ಪ್ರೀತಿ ಇಲ್ಲದ ಮೇಲೆ’ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಅದರಲ್ಲಿ ಅನಂತ್ ನಾಗ್ ಪುತ್ರನ ಪಾತ್ರ ನನ್ನದು. ಅದೇ ನನ್ನ ನಟನಾ ಶಾಲೆ. ಅಲ್ಲಿ ಅನಂತ್ ಅವರನ್ನು ನೋಡುತ್ತ ನಟನೆ ಕಲಿತೆ. ಸೆಟ್​ನಲ್ಲಿ ಅವರನ್ನು ನೋಡುತ್ತಿದ್ದರೆ, ‘ಏನಪ್ಪ ಇವರು ಆಕ್ಟಿಂಗ್ ಮಾಡ್ತಾನೇ ಇಲ್ವಲ್ಲ’ ಅಂತ ಅನ್ನಿಸೋದು. ಆದರೆ, ಮಾನಿಟರ್​ನಲ್ಲಿ ನೋಡಿದಾಗ ತಿಳಿಯೋದು ಅವರ ನಟನಾ ಶಕ್ತಿ ಏನು ಅಂತ. ಹೇಳಿಕೊಟ್ಟವರು ಮಾತ್ರ ಗುರುವಲ್ಲ. ಒಬ್ಬರಿಂದ ನಾವೇನಾದರೂ ತಿಳಿದುಕೊಂಡರೆ, ಅವರು ನಮ್ಮ ಗುರುಗಳೇ. ‘ಪ್ರೀತಿ ಇಲ್ಲದ ಮೇಲೆ’ ಸೆಟ್​ನಲ್ಲಿ ಅನಂತ್ ಅವರಿಗೆ ನಾನು ತುಂಬ ಪ್ರಶ್ನೆಗಳನ್ನು ಕೇಳುತ್ತಿದ್ದೆ. ಅಂದು ಅವರು ಹೇಳಿದ ಎಷ್ಟೋ ಮಾತುಗಳು ಇವತ್ತಿಗೂ ಅನ್ವಯವಾಗುತ್ತದೆ’ ಎಂದು ನೆನಪಿನ ಬುತ್ತಿಯನ್ನು ತೆರೆದಿಟ್ಟರು ಯಶ್.

ಡಬ್ ಮಾಡೋಕೆ ಅನಂತ್​ಗೆ ಪತ್ನಿ ಗಾಯತ್ರಿ ಸಹಾಯ

‘ಕೆಜಿಎಫ್’ ಚಿತ್ರದಲ್ಲಿ ಅನಂತ್ ನಾಗ್ ಅವರದ್ದು ನಿರೂಪಕನ ಪಾತ್ರ. ಅರ್ಥಾತ್, ಪತ್ರಕರ್ತನಾಗಿ ಇಡೀ ಸಿನಿಮಾದ ನಿರೂಪಣೆಯನ್ನು ಮಾಡುತ್ತಾರೆ. ಈ ಸಿನಿಮಾ ಕನ್ನಡ ಮಾತ್ರವಲ್ಲದೆ, ಹಿಂದಿ ಸೇರಿ ಐದು ಭಾಷೆಗಳಲ್ಲಿ ತೆರೆಕಂಡಿತ್ತು. ಹಿಂದಿ ವರ್ಷನ್​ನಲ್ಲಿ ಅನಂತ್ ಪಾತ್ರಕ್ಕೆ ಬೇರೆಯವರಿಂದ ಡಬ್ ಮಾಡಿಸಲಾಗಿತ್ತು. ಆದರೆ, ಅದು ಚಿತ್ರತಂಡಕ್ಕೆ ಸಮಾಧಾನ ತಂದಿರಲಿಲ್ಲ. ಈ ಹಿಂದೆಯೇ ಹಿಂದಿ ಸಿನಿಮಾಗಳಲ್ಲಿ ಅನಂತ್ ನಟಿಸಿರುವುದರಿಂದ, ಅವರಿಂದಲೇ ಹಿಂದಿಯಲ್ಲೂ ಡಬ್ಬಿಂಗ್ ಮಾಡಿಸಲು ತಂಡ ಮುಂದಾಯಿತು. ಅದಕ್ಕೆ ಅನಂತ್ ಅವರನ್ನು ಒಪ್ಪಿಸುವ ಹೊಣೆಯನ್ನು ಪತ್ನಿ ಗಾಯತ್ರಿ ಅವರಿಗೆ ನೀಡಲಾಯಿತು. ಆ ಸಂದರ್ಭವನ್ನು ವಿವರಿಸುವ ಯಶ್, ‘ನಾವು ಗಾಯತ್ರಿ ಬಳಿ ಈ ಬಗ್ಗೆ ಕೇಳಿದಾಗ, ‘ಅವರು ಹಿಂದಿ ಮಾತನಾಡಿ ತುಂಬ ದಿನವಾಯ್ತು. ಮಾಡ್ತಾರೋ ಇಲ್ವೋ’ ಎಂದು ಹೇಳಿದರು. ಆನಂತರ ಅವರೇ ಒಪ್ಪಿಸಿದರು ಕೂಡ. ಅವರು ಡಬ್ಬಿಂಗ್ ಮಾಡೋಕೆ ಬಂದ ದಿನ ಕೆಲಸದ ಒತ್ತಡದಿಂದ ನಾನಾಗಲಿ, ನಮ್ಮ ನಿರ್ದೇಶಕರಾಗಲಿ ಸ್ಟುಡಿಯೋದಲ್ಲಿ ಇರಲಿಲ್ಲ. ಕೊನೆಗೆ ಗಾಯತ್ರಿ ಅವರೇ ಮುಂದೆ ನಿಂತು ಡಬ್ ಮಾಡಿಸಿದರು’ ಎಂದು ಹೇಳುತ್ತಾರೆ.