ಸಿನಿಮಾ

ಬಿ.ಎಸ್. ಅನಂತಕುಮಾರ್ ಕಾಂಗ್ರೆಸ್‌ಗೆ ಗುಡ್‌ಬೈ

ಮಡಿಕೇರಿ:

ತಾವು ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಸ್ಥಾನ ಮತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದು ಶನಿವಾರ (ಮೇ೬) ಶನಿವಾರಸಂತೆಯಲ್ಲಿ ಶಕ್ತಿ ಪ್ರದರ್ಶನ ನಂತರ ಮುಂದಿನ ನಿರ್ಧಾರ ಪ್ರಕಟಿಸುವುದಾಗಿ ಡಿಸಿಸಿ ಉಪಾಧ್ಯಕ್ಷ ಬಿ.ಎಸ್. ಅನಂತ ಕುಮಾರ್ ತಿಳಿಸಿದ್ದಾರೆ. ಪಕ್ಷ ತನಗೆ ದ್ರೋಹ ಮಾಡಿಲ್ಲ. ಆದರೆ ನಾಯಕರು ಕಿರುಕುಳ ಕೊಟ್ಟರು. ಕಾಂಗ್ರೆಸ್‌ನಲ್ಲಿ ಇದ್ದುಕೊಂಡು ಗ್ರಾ.ಪಂ. ಸದಸ್ಯ, ತಾ.ಪಂ. ಸದಸ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದೇನೆ. ಆದರೆ ಏಕಾಏಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಕಿತ್ತುಕೊಳ್ಳಲಾಯಿತು. ಹೊಸದಾಗಿ ಬಂದವರು ತನ್ನಿಂದ ಅಧಿಕಾರ ಕೂಡ ಸ್ವೀಕರಿಸದೇ ಕೆಲಸ ಶುರು ಮಾಡಿದ್ದಾರೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಕಳೆದ ೬ ತಿಂಗಳಿಂನಿಂದ ಒಂದು ಕರೆಯನ್ನೂ ಮಾಡಿಲ್ಲ. ಹೀಗಾದರೆ ಪಕ್ಷ ಸಂಘಟಿಸುವುದು ಹೇಗೆ ಎಂದು ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

ಕಳೆದ ೭ ವರ್ಷಗಳಿಂದ ಕಾಂಗ್ರೆಸ್ ನಿಷ್ಟಾವಂತ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ. ಸ್ವಂತ ಹಣ ಹಾಕಿ ಪಕ್ಷ ಸಂಘಟನೆ ಮಾಡಿದ್ದೇನೆ. ಆದರೆ ಈಗ ಕಣ್ಣೀರು ಹಾಕಿಸಿ ಪಕ್ಷದ ಕಚೇರಿಯಿಂದ ಕಳಿಸಿದ್ದಾರೆ. ನನ್ನದೇ ವ್ಯಾಪ್ತಿಯ ಬೂತ್‌ನಲ್ಲಿ ನನಗೆ ಗೊತ್ತಿಲ್ಲದೆ ವ್ಯಕ್ತಿಯೊಬ್ಬರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ ಅವಮಾನ ಮಾಡಲಾಗಿದೆ. ಈ ರೀತಿಯಲ್ಲಿ ನನ್ನ ಸ್ವಾಭಿಮಾನಕ್ಕೆ ಧಕ್ಕೆ ತರುವ ಕೆಲಸ ಪಕ್ಷದೊಳಗೆ ನಿರಂತರವಾಗಿ ನಡೆಯುತ್ತಿದೆ. ಆಂತರಿಕ ಬಿಕ್ಕಟ್ಟು ಶಮನಗೊಳಿಸುವ ನಾಯಕರೇ ಕೊಡಗು ಕಾಂಗ್ರೆಸ್‌ನಲ್ಲಿ ಇಲ್ಲ.

ಕಾಂಗ್ರೆಸ್‌ನವರೇ ಕಾಂಗ್ರೆಸ್ ಸೋಲಿಸುತ್ತಾರೆ ಎನ್ನುವ ಮಾತು ಮೊದಲಿನಿಂದಲೂ ಸಾರ್ವಜನಿಕ ವಲಯದಲ್ಲಿ ಇದೆ. ಆದರೆ ತಾನು ಪಕ್ಷದಿಂದ ಹೊರಹೋಗಿ ಕಾಂಗ್ರೆಸ್ ಸೋಲಿಸುತ್ತೇನೆ. ಬಿಜೆಪಿಯವರು ಸತತ ಸಂಪರ್ಕದಲ್ಲಿ ಇದ್ದಾರೆ. ಶನಿವಾರ ನಿರ್ಧಾರ ಪ್ರಕಟಿಸುತ್ತೇನೆ ಎಂದರು.

ಡಿಸಿಸಿ ಸದಸ್ಯ ಮೊಹಮ್ಮದ್ ರಫೀಕ್ ಮಾತನಾಡಿ ವಿರಾಜಪೇಟೆ ಮತ್ತು ಮಡಿಕೇರಿಯಲ್ಲಿ ಪಕ್ಷದ ನಡವಳಿಕೆ ಬೇರೆ ಬೇರೆ ರೀತಿ ಇದೆ. ಇಲ್ಲಿ ಪಕ್ಷದಲ್ಲಿ ನಮ್ಮನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ. ೨ ದಿವಸಲ್ಲಿ ನಿಲುವು ಪ್ರಕಟ ಮಾಡಲಾಗುವುದು ಎಂದರು.
ಡಿ.ಎಸ್.ಎಸ್.ನ ಡಿ.ಜೆ. ದೇವಪ್ಪ ಕುಶಾಲನಗರ ನಗರ ಕಾಂಗ್ರೆಸ್ ಮಾಜಿ ಅಧ್ಯಕ್ಷ ಷರೀಫ್ ಇಬ್ರಾಹಿಂ ಅನಂತಕುಮಾರ್ ಬೆಂಬಲಿಸಿ ಮಾತನಾಡಿದರು.

ಡಿಸಿಸಿ ಸದಸ್ಯ ಕೆ.ಎಂ. ಪೂವಯ್ಯ, ಅನಂತ್‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಕಿರಣ್ ಸುದ್ದಿಗೋಷ್ಠಿಯಲ್ಲಿ ಇದ್ದರು.

Latest Posts

ಲೈಫ್‌ಸ್ಟೈಲ್