ದೆಹಲಿಯಲ್ಲಿ ಕರ್ನಾಟಕದ ದನಿ

ಅನಂತಕುಮಾರ್ ಅವರು ರಾಜ್ಯ ಮಾತ್ರವಲ್ಲ, ರಾಷ್ಟ್ರಮಟ್ಟದಲ್ಲೂ ನಾಯಕತ್ವ ತೋರಿ ಮಿಂಚಿದವರು. ವಾಕ್ಪಟುತ್ವ, ಹಿಂದಿ ಭಾಷೆಯ ಮೇಲಿನ ಪ್ರಭುತ್ವ, ಸಂವಹನ ಸಾಮರ್ಥ್ಯದಿಂದ ಕೇಂದ್ರಮಟ್ಟದಲ್ಲಿ ಗಮನಸೆಳೆದಿದ್ದಲ್ಲದೆ ಸಂಸದರಾಗಿ, ಕೇಂದ್ರ ಸಚಿವರಾಗಿ ಹಲವಾರು ಜನೋಪಯೋಗಿ ಯೋಜನೆಗಳನ್ನು ಜಾರಿಗೆ ತಂದಿದ್ದರು. ಒಟ್ಟಿನಲ್ಲಿ ದಕ್ಷಿಣಧ್ರುವದಿಂ ಉತ್ತರ ಧ್ರುವಕೂ ಎಂಬಂತೆ ದೇಶಾದ್ಯಂತದ ರಾಜಕೀಯ ಜ್ಞಾನ ಹೊಂದಿದ್ದ ಅವರು ರಾಷ್ಟ್ರರಾಜಕಾರಣದಲ್ಲೂ ಕೇಂದ್ರಬಿಂದುವಾಗಿದ್ದರು.

2014ರಲ್ಲಿ ಲೋಕಸಭೆ ಚುನಾವಣೆ ಗೆದ್ದ ಬಳಿಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟದಲ್ಲಿ ಅನಂತಕುಮಾರ್ ಅವರಿಗೆ ಯಾವ ಸ್ಥಾನ ಲಭಿಸೀತು ಎಂಬ ಚರ್ಚೆ ಜೋರಾಗಿತ್ತು. ದೆಹಲಿ ರಾಜಕಾರಣದ ಆರಂಭದಿಂದಲೂ ಲಾಲಕೃಷ್ಣ ಆಡ್ವಾಣಿ, ಸುಷ್ಮಾ ಸ್ವರಾಜ್ ಗುಂಪಿನಲ್ಲಿ ಕಾಣಿಸಿಕೊಳ್ಳುತ್ತಿದ್ದ ಅನಂತಕುಮಾರ್ ಅವರನ್ನು ಆಗಷ್ಟೇ ಗುಜರಾತ್​ನಿಂದ ಬಂದಿದ್ದ ನರೇಂದ್ರ ಮೋದಿ ಪರಿಗಣಿಸುತ್ತಾರಾ? ಎಂಬ ಗುಸುಗುಸು ರಾಜ್ಯ ಬಿಜೆಪಿ ವಲಯದಲ್ಲೂ ಕೇಳಿತ್ತು. ಅಂತಿಮವಾಗಿ ಡಿ.ವಿ. ಸದಾನಂದ ಗೌಡರಿಗೆ ರೈಲ್ವೆ ಖಾತೆ ನೀಡಿ, ಅನಂತಕುಮಾರ್​ಗೆ ಅಷ್ಟೇನೂ ಪ್ರಭಾವಿ ಅಲ್ಲದ ರಾಸಾಯನಿಕ ರಸಗೊಬ್ಬರ ಖಾತೆಯ ಹೊಣೆಗಾರಿಕೆ ವಹಿಸಲಾಯಿತು. ಆದರೆ ದೆಹಲಿ ರಾಜಕೀಯದ ಆಳ-ಅಗಲ ಅರಿತಿದ್ದ ಅನಂತಕುಮಾರ್ ಈ ಖಾತೆಯಲ್ಲಿ ಜಾರಿಗೆ ತಂದ ಜನಸ್ನೇಹಿ ಯೋಜನೆಗಳ ಮೂಲಕ ದೇಶದ ಗಮನಸೆಳೆಯುವಲ್ಲಿ ಯಶಸ್ವಿಯಾದರು. ಉಳಿದ ಸಚಿವರೆಲ್ಲರನ್ನೂ ಮೀರಿ, ಪ್ರಧಾನಿಯ ಮನ ಗೆದ್ದಿದ್ದರು. ರಾಸಾಯನಿಕ ರಸಗೊಬ್ಬರ ಸಚಿವಾಲಯದ ಮೂಲಕ ಬೇವುಲೇಪಿತ ಯೂರಿಯಾ ಉತ್ಪಾದನೆಗೆ ಮುಂದಾಗಿದ್ದು ರೈತರ ಪಾಲಿನ ಸಿಹಿ ಸುದ್ದಿ. ಹಾಲು, ಹೆಂಡ, ಫ್ಲೈವುಡ್​ಗಳಲ್ಲಿ ಕಲಬೆರಕೆಯಾಗುತ್ತಿದ್ದ ಯೂರಿಯಾ ರಸಗೊಬ್ಬರ, ಬೇವುಲೇಪನದಿಂದಾಗಿ ಕೃಷಿಗೆ ಮಾತ್ರ ಮೀಸಲಾಯಿತು. ಇದರಿಂದಾಗಿ ರೈತ ಸಮುದಾಯಕ್ಕೆ ಸಕಾಲದಲ್ಲಿ ಯೂರಿಯಾ ಸಿಗುವಂತಾಗಿದ್ದು, ರೈತರ ಸಬ್ಸಿಡಿ ಪೋಲಾಗುವುದನ್ನು ತಪ್ಪಿಸಿದಂತಾಗಿದೆ. ಅಲ್ಲದೆ, ಬೇವುಲೇಪಿತ ಯೂರಿಯಾ ಭೂಮಿಯ ಫಲವತ್ತತೆಗೂ ಪೂರಕವಾದದ್ದು.

ಸಚಿವರಾಗಿ ಗಮನಾರ್ಹ ಸಾಧನೆ

# ಶೇ. 100ರಷ್ಟು ಬೇವುಮಿಶ್ರಿತ ಯೂರಿಯಾ ಬಳಕೆ ಮಾಡಲು ಪ್ರಯತ್ನ, ಇದರಿಂದ 10,000 ಕೋಟಿ ರೂ. ಉಳಿತಾಯ.

# ಸ್ಟೆಂಟ್​ಗಳ ಬೆಲೆ ಶೇಕಡ 85 ಇಳಿಸಿದ್ದರಿಂದ 4,500 ಕೋಟಿ ರೂಪಾಯಿ ಉಳಿತಾಯ.

# ಮಂಡಿಚಿಪ್ಪು ಬದಲಾವಣೆಗೆ ಬೇಕಾದ ಉಪಕರಣಗಳ ಬೆಲೆ ಶೇ. 65 ಇಳಿಕೆ.

# ಕಡಿಮೆ ಬೆಲೆಗೆ ಔಷಧ ನೀಡುವ ಜನೌಷಧ ಮಳಿಗೆಗಳ ಆರಂಭ.

# ರಸಗೊಬ್ಬರ ರಫ್ತಿಗೆ ಉತ್ತೇಜನ.

# ಜಿಎಸ್​ಟಿ ವಿಧೇಯಕದ ಅಂಗೀಕಾರದಲ್ಲಿ ಪ್ರಮುಖ ಪಾತ್ರ.

ಕಿರಿಯ ವಯಸ್ಸಿನ ಸಚಿವ

# 1998ರಲ್ಲಿ ಮೊದಲ ಬಾರಿಗೆ ಸಚಿವರಾಗಿ ಆಯ್ಕೆ

# ಅತಿ ಚಿಕ್ಕ ವಯಸ್ಸಿನಲ್ಲೇ ಅಂದರೆ 39ನೇ ವಯಸ್ಸಿನಲ್ಲಿ ಮಂತ್ರಿಯಾಗಿದ್ದ ಹೆಗ್ಗಳಿಕೆ

# 1998ರಲ್ಲಿ ಮೊದಲ ಬಾರಿಗೆ ವಾಜಪೇಯಿ ಸಂಪುಟದಲ್ಲಿ ವಿಮಾನಯಾನ ಸಚಿವ

ಜೀವನ ಬದಲಿಸಿದ ಆ ಮೂರು ವರ್ಷ!

ಅಂದಿನ ಪ್ರಧಾನಿ ಇಂದಿರಾ ಗಾಂಧಿ ದೇಶಾದ್ಯಂತ ಹೇರಿದ್ದ ತುರ್ತಪರಿಸ್ಥಿತಿಯ ವಿರುದ್ಧ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಿ ಎಂದು ಲೋಕ ಸಂಘರ್ಷ ಸಮಿತಿಯಿಂದ ರಾಷ್ಟ್ರೀಯ ಕರೆ ಬಂದಿತ್ತು. ಆಗಿನ್ನೂ ಪಿಯುಸಿ ಓದುತ್ತಿದ್ದ ನಾವು (11 ವಿದ್ಯಾರ್ಥಿಗಳ ತಂಡ) 1975ರ ಡಿಸೆಂಬರ್ 8ರಂದು ಪ್ರತಿಭಟನೆ ನಡೆಸುತ್ತಿದ್ದಾಗ ಪೊಲೀಸರು ಬಂಧಿಸಿ, ಎಲ್ಲರನ್ನೂ ಹುಬ್ಬಳ್ಳಿ ಉಪಕಾರಾಗೃಹದಲ್ಲಿರಿಸಿದರು. ‘‘ಭಾರತ್ ಮಾತಾ ಕಿ ಜೈ, ತುರ್ತು ಪರಿಸ್ಥಿತಿ ತೊಲಗಲಿ, ಇಂದಿರಾ ಗಾಂಧಿಗೆ ಧಿಕ್ಕಾರ ಘೊಷಣೆ ಕೂಗಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿದ್ದರಿಂದ ಬಂಧಿಸಲಾಗಿದೆ’ ಎಂದು ಪೊಲೀಸರು ನಮ್ಮ ವಿರುದ್ಧದ ಆರೋಪಪಟ್ಟಿಯಲ್ಲಿ ತಿಳಿಸಿದ್ದರು. ಪೊಲೀಸರ ವಾದ ಆಲಿಸಿದ ನ್ಯಾಯಾಧೀಶರು ಕೆಂಡಾಮಂಡಲವಾದರು. ‘ಭಾರತ್ ಮಾತಾ ಕಿ ಜೈ’ ಘೊಷಣೆ ಹೇಗೆ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂದು ಪೊಲೀಸರಿಗೆ ದಬಾಯಿಸಿದ ನ್ಯಾಯಾಧೀಶರು 48 ದಿನಗಳ ಜೈಲುವಾಸಕ್ಕೆ 1976ರ ಜ.14ರ ಸಂಕ್ರಾಂತಿ ದಿನ ಮುಕ್ತಿ ದೊರಕಿಸಿಕೊಟ್ಟರು. ಚಿಕ್ಕ ಚಿಕ್ಕ ಸೆಲ್​ಗಳಲ್ಲಿ ಸರಾಸರಿ 20 ಜನರನ್ನು ಪೊಲೀಸರು ಬಂಧಿಸಿಟ್ಟಿದ್ದರು. ಪ್ರತಿದಿನ ಬೆಳಗ್ಗೆ 6-10ರವರೆಗೆ ಹಾಗೂ ಸಂಜೆ 3-6ರವರೆಗೆ ಮಾತ್ರ ಹೊರಕ್ಕೆ ಬಿಡಲಾಗುತ್ತಿತ್ತು. 17 ಗಂಟೆ ಒಳಗಿದ್ದರೆ, 7 ಗಂಟೆ ಮಾತ್ರ ಜೈಲಿನ ಕಾರಿಡಾರ್​ನಲ್ಲಿ ಓಡಾಡುವ ಅವಕಾಶವಿತ್ತು. ಬಂಧಿತರಲ್ಲಿ ಬಹಳಷ್ಟು ಜನರು ಆರೆಸ್ಸೆಸ್, ಎಬಿವಿಪಿ ಹಿನ್ನೆಲೆಯವರಾದ್ದರಿಂದ ಅಲ್ಲಿಯೇ 100 ಜನರ ಆರೆಸ್ಸೆಸ್ ಶಿಬಿರವೊಂದು 40 ದಿನಗಳ ಕಾಲ ನಡೆದಂತಾಯಿತು. ಪ್ರತಿ ದಿನ ಬೆಳಗ್ಗೆ 5ಕ್ಕೆ ಎದ್ದು ಪ್ರಾತಃಸ್ಮರಣೆ, ಆನಂತರ ಚರ್ಚೆ, ಗೋಷ್ಠಿ ಮುಂತಾದ ಅವಧಿಗಳು ಇರುತ್ತಿದ್ದವು. ಸಂಜೆಯ ವೇಳೆಯಲ್ಲಿ ಪ್ರತಿ ದಿನವೂ ಅಲ್ಲೊಂದು ಗೋಡೆಯ ಮೇಲೆ ಭಾರತದ ಭೂಪಟ ಹಾಗೂ ಭಗವಾಧ್ವಜದ ಚಿತ್ರವನ್ನು ಇಟ್ಟಿಗೆಯಿಂದ ಬರೆದು ಶಾಖೆ ಮಾಡುತ್ತಿದ್ದೆವು. ಇನಾಂದಾರ್, ಡಾ. ವಾಮನ ಆಚಾರ್ಯ, ನರಹರಿ ಫಡ್ಕೆ, ವಿಷ್ಣುಕಾಂತ ಚಟಪಲ್ಲಿ, ಶ್ರೀಕಾಂತ್ ದೇಸಾಯಿ, ಪಾಂಡುರಂಗ ಕಾಮತ್ ಮುಂತಾದವರ ಜತೆಗಿದ್ದೆವು. ಇಷ್ಟರ ಮಧ್ಯೆ 48 ದಿನವೂ ನಡೆದ ವಿಶೇಷವೆಂದರೆ, ನಾವು ಗೋಡೆಯ ಮೇಲೆ ಪ್ರತಿನಿತ್ಯ ಬರೆಯುತ್ತಿದ್ದ ಭೂಪಟ ಮತ್ತು ಭಗವಾಧ್ವಜವನ್ನು ಅಲ್ಲಿನ ಸಿಬ್ಬಂದಿಯೊಬ್ಬ ನೀರಿನಿಂದ ತೊಳೆದು ಅಳಿಸಿಹಾಕುತ್ತಿದ್ದ. ಅವನಷ್ಟೇ ನಿಷ್ಠೆಯಿಂದ ನಾವೂ ಎಡೆಬಿಡದೆ ಪ್ರತಿದಿನವೂ ಬರೆಯುತ್ತಿದ್ದೆವು, ಶಾಖೆ ಮಾಡುತ್ತಿದ್ದೆವು..!

ಮೆಟ್ರೋ ಕೊಡುಗೆ

ಬೆಂಗಳೂರಿನಲ್ಲಿ ಸಮೂಹ ಸಾರಿಗೆ ವ್ಯವಸ್ಥೆ ಸುಧಾರಣೆಯಲ್ಲಿ ಮೆಟ್ರೋ ಪಾತ್ರ ದೊಡ್ಡದು. ಮೆಟ್ರೋ ಬೆಂಗಳೂರಿಗೆ ಬರಲು ಅನಂತಕುಮಾರರ ಶ್ರಮ ಕಾರಣವಾಗಿದೆ. ವಾಜಪೇಯಿ ಸರ್ಕಾರದ ಅವಧಿಯಲ್ಲಿ ಬೇರೆ ಬೇರೆ ನಗರಗಳಿಗೆ ಮೆಟ್ರೋ ಯೋಜನೆ ಬಗ್ಗೆ ಕ್ರಮ ಕೈಗೊಂಡಾಗ ಅದರಲ್ಲಿ ಬೆಂಗಳೂರನ್ನು ಸೇರಿಸಿದ್ದು ಅನಂತಕುಮಾರ್.

ಶ್ರೇಷ್ಠ ವಾಕ್ಪಟು

ಅನಂತಕುಮಾರ್ ಒಬ್ಬ ಉತ್ತಮ ವಾಕ್ಪಟು ಎಂಬುದನ್ನು ಅನೇಕ ಬಾರಿ ಸಾಬೀತು ಮಾಡಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ, ಲಾಲಕೃಷ್ಣ ಆಡ್ವಾಣಿ ಸೇರಿ ಅನೇಕ ಹಿರಿಯರ ಭಾಷಣಗಳನ್ನು ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಹಿಂದಿ ಹಾಗೂ ಕನ್ನಡದಲ್ಲಿ ಅನಂತಕುಮಾರರಿಗೆ ಸಾಕಷ್ಟು ಹಿಡಿತ ಇದ್ದುದರಿಂದಲೇ ಅವರು ಮುಖಂಡರ ಭಾಷಣದ ಮೂಲಕ್ಕೆ ಎಲ್ಲಿಯೂ ತೊಡಕಾಗದಂತೆ ಅನುವಾದಿಸುತ್ತಿದ್ದರು. 2018ರ ಕರ್ನಾಟಕ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ನರೇಂದ್ರ ಮೋದಿಯವರ ಹಿಂದಿ ಭಾಷಣಗಳನ್ನು ಅವರು ಕನ್ನಡಕ್ಕೆ ತರ್ಜುಮೆ ಮಾಡಿದ್ದರು. ತಮ್ಮ ಭಾಷಣಗಳಲ್ಲಿ ಪ್ರಾಸಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದ ಅನಂತಕುಮಾರ್ ಸದಾ ಅಧ್ಯಯನಶೀಲರಾಗಿರುತ್ತಿದ್ದರು. ಸಂಗೀತದ ಬಗ್ಗೆಯೂ ಉತ್ತಮ ತಿಳಿವಳಿಕೆ ಹೊಂದಿದ್ದರು.

ಕೆಂಪೇಗೌಡ ವಿಮಾನ ನಿಲ್ದಾಣ

ಅನಂತಕುಮಾರ್ ಆಸಕ್ತಿವಹಿಸುವ ತನಕ ಬೆಂಗಳೂರಿಗೆ ಎಚ್​ಎಎಲ್ ವಿಮಾನ ನಿಲ್ದಾಣವೇ ಗತಿಯಾಗಿತ್ತು. ಈಗಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರಾಜ್ಯ ಸರ್ಕಾರ ಒಡಂಬಡಿಕೆ ಮಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಮುಂದೆ ಆ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರಿಡುವಲ್ಲಿಯೂ ಅವರ ಪಾತ್ರ ದೊಡ್ಡದು.

ಇಬ್ಬರಿಗೇ ಪಿಯುಸಿ ಪರೀಕ್ಷೆ!!

ತುರ್ತು ಪರಿಸ್ಥಿತಿಯಲ್ಲಿ ಜೈಲಿಗೆ ಹೋಗಿ ಬಿಡುಗಡೆಯಾದ ನಂತರ 15ನೇ ತಾರೀಖು ನಾನು ಪಿಯುಸಿ ಓದುತ್ತಿದ್ದ ಪಿಸಿ ಜಾಬಿನ್ ಕಾಲೇಜಿಗೆ ಹೋದೆ. ಇಡೀ ಕಾಲೇಜಿನ 2,000 ವಿದ್ಯಾರ್ಥಿಗಳು ಒಟ್ಟಾಗಿ ನಿಂತು ಚಪ್ಪಾಳೆ ತಟ್ಟುವುದರ ಮೂಲಕ ಹೀರೋ ರೀತಿ ನನ್ನನ್ನು ಸ್ವಾಗತಿಸಿದ್ದು ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ಜೈಲಿಗೆ ಹೋಗಿದ್ದ ಕಾರಣ ನೀಡಿ ನಾನು ಹಾಗೂ ವಾಗೀಂದ್ರ ಆಚಾರ್ಯ ಇಬ್ಬರನ್ನು ಕಾಲೇಜಿನಿಂದ ಹೊರಹಾಕಲಾಯಿತು. ಈ ಆದೇಶದ ವಿರುದ್ಧ ಇಬ್ಬರೂ ಹೈಕೋರ್ಟ್​ಗೆ ರಿಟ್ ಅರ್ಜಿ ಸಲ್ಲಿಸಿದಾಗ, ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ಮಳೀಮಠ್, ತೆರೆದ ನ್ಯಾಯಾಲಯದಲ್ಲಿ ಕಾಲೇಜು ಆದೇಶದ ವಿರುದ್ಧ ಛೀಮಾರಿ ಹಾಕಿದರು. ಅದಾಗಲೇ ಪಿಯುಸಿ ಪರೀಕ್ಷೆ ಮುಗಿದು ಹೋಗಿದ್ದರಿಂದ ಇಬ್ಬರಿಗೇ ಪ್ರತ್ಯೇಕ ಪರೀಕ್ಷೆ ನಡೆಸಲಾಯಿತು. 1977ರಲ್ಲಿ ಷಾ ಕಮಿಷನ್ ಎದುರು ವಿಚಾರಣೆಗೆ ಕರ್ನಾಟಕದಿಂದ ರೆಫರ್ ಆಗಿದ್ದು ಎರಡೇ ಪ್ರಕರಣ. ಮೊದಲನೆಯದು ವಾಗೀಂದ್ರ ಆಚಾರ್ಯ ಹಾಗೂ ಎರಡನೆಯದು ನನ್ನದು.

ಸ್ಟೆಂಟ್ ದರ ಇಳಿಕೆ

ಹೃದಯ ಸಂಬಂಧಿ ರೋಗದಿಂದ ಬಳಲುತ್ತಿದ್ದವರು ಸ್ಟೆಂಟ್ ಅಳವಡಿಸಿಕೊಳ್ಳಲು ಲಕ್ಷಗಟ್ಟಲೆ ಹಣ ಸುರಿಯಬೇಕಾಗುತ್ತಿತ್ತು. ಮೂರ್ನಾಲ್ಕು ಲಕ್ಷ ರೂ. ನೀಡಿದರಷ್ಟೇ ಸಿಗುತ್ತಿದ್ದ ಸ್ಟೆಂಟ್​ಅನ್ನು ಶೇ.60ರಷ್ಟು ಕಡಿಮೆ ದರದಲ್ಲಿ ಲಭಿಸುವಂತೆ ಮಾಡಿದ್ದು ಅವರ ಸಚಿವಾಲಯದ ಪ್ರಮುಖ ಸಾಧನೆಗಳಲ್ಲೊಂದು. ಆಸ್ಪತ್ರೆ ಹಾಗೂ ಔಷಧಾಲಯಗಳ ಅಪವಿತ್ರ ಮೈತ್ರಿಯ ಈ ಕಾಲಘಟ್ಟದಲ್ಲಿ ಕಡಿಮೆ ಬೆಲೆಗೆ ಔಷಧಗಳನ್ನು ಜನರಿಗೆ ಕೊಡಿಸುವ ಜನೌಷಧ ಕೇಂದ್ರಗಳನ್ನು ಸ್ಥಾಪಿಸಿದ್ದು ಕೂಡ ಸಾಧನೆಯ ಗರಿಮೆಗಳಲ್ಲೊಂದು.

ಸಂಸದೀಯ ವ್ಯವಹಾರ ಸಚಿವರಾಗಿ ಬಡ್ತಿ

ರಾಸಾಯನಿಕ ರಸಗೊಬ್ಬರ ಸಚಿವರಾಗಿ ಅನಂತಕುಮಾರ್ ಕಾರ್ಯಗಳನ್ನು ಹತ್ತಿರದಿಂದ ನೋಡುತ್ತಿದ್ದ ಪ್ರಧಾನಿ ಮೋದಿ, ಮೂರು ವರ್ಷಗಳ ಬಳಿಕ ಸಂಸದೀಯ ವ್ಯವಹಾರಗಳ ಸಚಿವರಾಗಿ ಬಡ್ತಿ ನೀಡಿದರು. ಇದರಿಂದಾಗಿ ಸಂಸತ್ ಕಲಾಪಗಳ ವೇಳೆ ಪ್ರಧಾನಿ ಜತೆಗೆ ಕಾರ್ಯನಿರ್ವಹಿಸುವ ಅವಕಾಶವೂ ಅನಂತಕುಮಾರ್ ಪಾಲಾಯಿತು. ಸಹಜವಾಗಿಯೇ ಅವರು ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಆಪ್ತಬಳಗದಲ್ಲಿ ಗುರುತಿಸಿಕೊಂಡಿದ್ದರು.

ಕರ್ನಾಟಕ -ದೆಹಲಿ ನಡುವಿನ ಸೇತುವೆ

ರಾಜ್ಯದ ಯಾವುದೇ ಯೋಜನೆಗೆ ಕೇಂದ್ರದಿಂದ ಅನುದಾನ ಬರಬೇಕಿದ್ದರೆ, ಸಿದ್ದರಾಮಯ್ಯ ಕೂಡ ಮೊದಲು ಅನಂತಕುಮಾರ್ ಅವರನ್ನೇ ಸಂರ್ಪಸುತ್ತಿದ್ದರಂತೆ. ರಾಜಕೀಯ ವಿರೋಧಿಗಳಾಗಿದ್ದರೂ ಇಬ್ಬರ ಮಧ್ಯೆ ಆಪ್ತತೆ ಇತ್ತು ಎಂಬುದು ಗುಟ್ಟಿನ ವಿಷಯವೇನಲ್ಲ. ರಾಜ್ಯಕ್ಕೆ ಅರ್ಹವಾಗಿ ಲಭಿಸಬೇಕಿದ್ದ ಯೋಜನೆಗಳಿಗೆ ದೆಹಲಿಯಲ್ಲಿ ಪ್ರಬಲ ಲಾಬಿ ಮಾಡುತ್ತಿದ್ದ ಅನಂತ ಕುಮಾರ್, ದೆಹಲಿ ಕರ್ನಾಟಕ ಸಂಘದ ಬಳಿ ಇರುವ ಮೆಟ್ರೋ ಸ್ಟೇಷನ್​ಗೆ ವಿಶ್ವೇಶ್ವರಯ್ಯನವರ ಹೆಸರು ಅಂತಿಮಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಸಂಸತ್ತಿನಲ್ಲಿ ಮನೆಯೂಟ

ಸಂಸತ್, ಇಲಾಖೆ ಕಚೇರಿ ಅಥವಾ ಎಲ್ಲೇ ಇದ್ದರೂ, ಅನಂತಕುಮಾರ್ ಮನೆ ಊಟವನ್ನೇ ನೆಚ್ಚಿಕೊಂಡಿದ್ದರು. ತಮ್ಮೊಂದಿಗೆ ಕಚೇರಿ ಸಿಬ್ಬಂದಿಗೂ ಅವರ ಮನೆ ಊಟವನ್ನೇ ಹಂಚಿಕೊಳ್ಳುತ್ತಿದ್ದರಿಂದ ಸುಮಾರು 10-15 ಮಂದಿಗಾಗುವಷ್ಟು ಊಟವನ್ನು ಪ್ರತಿ ದಿನ ಪ್ಯಾಕ್ ಮಾಡಿ ತರಲಾಗುತ್ತಿತ್ತು, ಸಂಸತ್ ಕಲಾಪಗಳ ವೇಳೆ ಸಂಸತ್ ಕಚೇರಿಗೆ ಬರುತ್ತಿದ್ದವರಿಗೂ ‘ಮನೆ ಊಟದ ಭಾಗ್ಯ’ ಸಿಗುತ್ತಿತ್ತು!

ಬಿಗಿ ಹಿಡಿತ

ಅನೇಕ ಸಚಿವರಿಗೆ ಸಚಿವಾಲಯದಲ್ಲಿ ಏನಾಗುತ್ತಿದೆ, ಅಧಿಕಾರಿಗಳೇನು ಮಾಡುತ್ತಿದ್ದಾರೆ ಎಂಬ ಕಲ್ಪನೆಯೇ ಇರುವುದಿಲ್ಲ. ಆದರೆ, ಅನಂತಕುಮಾರ್ ಇದಕ್ಕೆ ತದ್ವಿರುದ್ಧ. ಅವರ ಚಿಂತನೆಗಳು ಐಎಎಸ್ ಅಧಿಕಾರಿಗಳ ವೇಗವನ್ನೂ ಮೀರಿಸಿರುತ್ತಿತ್ತು. ಅಧಿಕಾರಿಗಳು, ಸಿಬ್ಬಂದಿಯನ್ನು ಹದ್ದುಬಸ್ತಿನಲ್ಲಿ ಇಟ್ಟಿದ್ದರಿಂದ ಸಚಿವಾಲಯದ ಕಾರ್ಯಗಳು ವೇಗವಾಗಿ ಮತ್ತು ಪಾರದರ್ಶಕವಾಗಿ ನಡೆಯುತ್ತಿದ್ದವು.

ರಾಜಿಯಾಗದ ವ್ಯಕ್ತಿತ್ವ

ರಾಷ್ಟ್ರೀಯತೆ, ಹಿಂದುತ್ವದ ವಿಚಾರದಲ್ಲಿ ಅನಂತಕುಮಾರ್ ಅವರದ್ದು ರಾಜಿಯಾಗದ ವ್ಯಕ್ತಿತ್ವ. ಆದ್ದರಿಂದಲೇ ಅವರು ಅಟಲ್ ಮತ್ತು ಆಡ್ವಾಣಿ ಸಂಪರ್ಕಕ್ಕೆ ಹೆಚ್ಚು ಬಂದಿದ್ದು ಎನ್ನುತ್ತಾರೆ ಬಿಜೆಪಿ ಹಿರಿಯ ನಾಯಕರು. ಸಂಘದ ಗಣವೇಷಧಾರಿಯಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಟೀಕೆಗೂ ಜಗ್ಗದೆ ನಂಬಿದ್ದ ತತ್ವ-ಸಿದ್ಧಾಂತಕ್ಕೆ ಬದ್ಧರಾಗಿದ್ದರು.

ಭಾಷಾ ಪ್ರೌಢಿಮೆ

ದೆಹಲಿಯಲ್ಲಿ ರಾಜಕಾರಣ ಮಾಡಬೇಕೆಂದರೆ ಹಿಂದಿ, ಇಂಗ್ಲಿಷ್ ಭಾಷೆ ಅನಿವಾರ್ಯ. ಈ ಭಾಷಾ ಜ್ಞಾನದ ಕೊರತೆಯಿಂದಲೇ ರಾಜ್ಯದ ಬಹುತೇಕ ಸಂಸದರು ದೆಹಲಿಯಲ್ಲಿ ಮೌನಿಗಳಾಗಿ ಬಿಡುತ್ತಾರೆ. ಆದರೆ, ಅನಂತಕುಮಾರ್ ಇದಕ್ಕೆ ವ್ಯತಿರಿಕ್ತರಾಗಿದ್ದರು. ಇಂಗ್ಲಿಷ್, ಹಿಂದಿ ಮೇಲಿನ ಪ್ರೌಢಿಮೆಯಿಂದಲೇ ಪಕ್ಷ ಹಾಗೂ ಸರ್ಕಾರದಲ್ಲಿ ತಮ್ಮ ಪ್ರಭಾವಲಯ ಸೃಷ್ಟಿಸಿಕೊಂಡರು. ಭೋಜ್​ಪುರಿ ಮಿಶ್ರಿತ ಹಿಂದಿ ಮಾತನಾಡುವ ಬಿಹಾರದಲ್ಲೂ ಚುನಾವಣಾ ಉಸ್ತುವಾರಿ ಹೊಣೆಗಾರಿಕೆ ನಿಭಾಯಿಸುವುದು ಸುಲಭ ಸಾಧ್ಯವಾಯಿತು. ಚಾಣಾಕ್ಷತನ, ವಿಚಾರ ಜ್ಞಾನ ಹಾಗೂ ರಾಜಕೀಯ ತಂತ್ರಗಾರಿಕೆಗಳೇ ಅವರನ್ನು ರಾಷ್ಟ್ರ ರಾಜಕಾರಣಿಗಳ ಪ್ರಮುಖ ಸಾಲಿನಲ್ಲಿ ನಿಲ್ಲಿಸಿತು.

ಅನಂತಕುಮಾರ್ ಅಕಾಲಿಕ ನಿಧನದ ಸುದ್ದಿ ಕೇಳಿ ಬೇಸರದ ಜತೆ ಆಘಾತವಾಗಿದೆ. ಜನಪ್ರಿಯ, ದಿಟ್ಟ ನಾಯಕತ್ವದ ಅನಂತಕುಮಾರ್ ಬಡ-ಕೆಳ ವರ್ಗದ ಜನರ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದರು. ಸಣ್ಣ ವಯಸ್ಸಿನಲ್ಲೇ ರಾಜಕಾರಣಕ್ಕೆ ಬಂದಿದ್ದ ಅವರು ಆಗಲೇ ನಾಯಕತ್ವದ ಗುಣಲಕ್ಷಣ ಹೊಂದಿದ್ದರು. ಅದ್ಭುತವಾದ ಇಚ್ಛಾಶಕ್ತಿ ಹಾಗೂ ಜನಾನುರಾಗಿ ಗುಣದಿಂದ ರಾಜಕಾರಣದಲ್ಲಿ ವಿಶಿಷ್ಟ ಛಾಪು ಮೂಡಿಸಿದ್ದರು. ನಾನು ಕಂಡ ವಿಭಿನ್ನ ಹಾಗೂ ಅತ್ಯುತ್ತಮ ಸಂಸದೀಯ ಪಟುಗಳಲ್ಲಿ ಒಬ್ಬರಾಗಿದ್ದ ಅನಂತ್, ಸಕ್ರಿಯ ಪಾಲ್ಗೊಳ್ಳುವಿಕೆಯಿಂದಲೇ ಸಂಸತ್ತಿನಲ್ಲಿ ಗುರುತಿಸಿಕೊಂಡಿದ್ದರು. ದೇಶಾದ್ಯಂತ ಸಂಚರಿಸಿ ಪಕ್ಷ ಸಂಘಟಿಸಿದ್ದಲ್ಲದೆ, ಪಕ್ಷದ ಒಳಗೂ ಪ್ರಮುಖ ಪಾತ್ರವಹಿಸಿದ್ದರು. 59 ಸಾವಿನ ವಯಸ್ಸೇನಲ್ಲ. ಇಷ್ಟು ಸಣ್ಣ ವಯಸ್ಸಿನಲ್ಲೇ ಅವರನ್ನು ಕಳೆದುಕೊಳ್ಳಬೇಕಾಗಿ ಬಂದಿರುವ ಸುದ್ದಿಯನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಈ ನಿಧನ ದೇಶಕ್ಕಾದ ದೊಡ್ಡ ನಷ್ಟ.

| ಎಲ್.ಕೆ. ಆಡ್ವಾಣಿ ಬಿಜೆಪಿ ಹಿರಿಯ ನಾಯಕ


ಅನಂತ ಕುಮಾರ್ ಅವರ ಅಗಲಿಕೆ ಕನ್ನಡ ನಾಡಿಗಷ್ಟೇ ಅಲ್ಲ, ದೇಶಕ್ಕೇ ತುಂಬಲಾರದ ನಷ್ಟ. ಕೇಂದ್ರ ನಗರಾಭಿವೃದ್ಧಿ ಸಚಿವರಾಗಿದ್ದಾಗ ರಾಜ್ಯಕ್ಕೆ ಅವರು ನೀಡಿದ ಕೊಡá-ಗೆ ಅಪಾರ. ದೇಶದಲ್ಲಿ ಮೊದಲ ಬಾರಿಗೆ ರೈತರಿಗೆ ಕೈಗೆಟá-ಕá-ವ ಬೆಲೆಯಲ್ಲಿ ರಸಗೊಬ್ಬರ ದೊರಕá-ವಂತೆ ಮಾಡಿದ ಕೀತಿರ್ ಅವರದ್ದು. ಅಧ್ಯಾತ್ಮದ ಬಗ್ಗೆ ಅಪಾರ ಆಸ್ತ ಹೊಂದಿದ್ದ ಅವರು ಧಾರ್ವಿುಕ-ಸಾಮಾಜಿಕ ಕಾರ್ಯಗಳನ್ನು ಹತ್ತಿರದಿಂದ ಕಂಡು ಸಂತೋಷ ವ್ಯಕ್ತಪಡಿಸá-ತ್ತಿದ್ದರು.

| ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸುತ್ತೂರು ಮಠ


ಅನಂತಕುಮಾರ್ ಕೇಂದ್ರ ಸಚಿವರಾಗಿ ಹುಬ್ಬಳ್ಳಿಗೆ ಆಗಮಿಸಿದಾಗಲೆಲ್ಲ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನೂ ಮಾತನಾಡಿಸುತ್ತಿದ್ದರು. ಹುಬ್ಬಳ್ಳಿಯ ಕಮರಿಪೇಟೆ ಪೋಲಿಸ್ ಠಾಣೆಯ ಎದುರಿಗೆ ಮಾರುತಿ ಎಂಬ ಒಬ್ಬ ಪಾದರಕ್ಷೆ ರಿಪೇರಿ ಮಾಡುತ್ತಿರುತ್ತಿದ್ದ. ಅನಂತಕುಮಾರ್ ಹಾಗೂ ಅವರ ತಂದೆಯವರು ಅವನಿಂದ ಪಾದರಕ್ಷೆ ರಿಪೇರಿ ಮಾಡಿಸಿಕೊಳ್ಳುತ್ತಿದ್ದರು. ಒಮ್ಮೆ ಹುಬ್ಬಳ್ಳಿಗೆ ಬಂದಾಗ ಅವನನ್ನು ನೋಡಿ ಕಾರಿನಿಂದ ಇಳಿದು ಬಂದು ‘ಹ್ಯಾಂಗ ಇದ್ದೀಯಪ್ಪಾ ಮಾರುತಿ’ ಎಂದು ಅವನನ್ನು ಮಾತನಾಡಿಸಿ, ‘ಪ್ರಲ್ಹಾದ ನೂರು ರೂಪಾಯಿ ಕೊಡು’ ಅಂತಾ ಹೇಳಿ ಅವನಿಗೆ ಕೊಡಿಸಿದ್ದು, ಅವರ ನಿರಹಂಕಾರಿ ಹಾಗೂ ಬಡವರ ಬಗೆಗಿನ ಕಳಕಳಿಗೆ ಸಾಕ್ಷಿ. ಈ ಭಾಗದಲ್ಲೊಂದು ಸೂಪರ್ ಸ್ಪೆಶಾಲಿಟಿ ಕ್ಯಾನ್ಸರ್ ಆಸ್ಪತ್ರೆ ನಿರ್ವಿುಸುವ ಅವರ ಸಂಕಲ್ಪ ಈಡೇರದೆ ಹೋದದ್ದು ದುಃಖದಾಯಕ.

| ಪ್ರಲ್ಹಾದ ಜೋಶಿ ಧಾರವಾಡ ಸಂಸದ


ಕ್ರಮೇಣ ಬದಲಾಗಿದ್ದರು

ಮೊದಮೊದಲು ಮಾಧ್ಯಮಗಳಿಂದ ದೂರವಿರುತ್ತಿದ್ದ ಅನಂತಕುಮಾರ್, ಕಳೆದ ಐದಾರು ವರ್ಷಗಳಿಂದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮುಕ್ತವಾಗಿ ಮಾತನಾಡಲಾರಂಭಿಸಿದ್ದರು. ಕೇಂದ್ರದ ಯೋಜನೆಗಳು, ರಾಷ್ಟ್ರ ರಾಜಕಾರಣ ಸೇರಿ ಅನೇಕ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದರು. ಕಿಕ್ಕಿರಿದು ತುಂಬಿದ ಇಂಗ್ಲಿಷ್-ಹಿಂದಿ ಟಿವಿ ವರದಿಗಾರರ ಮಧ್ಯೆಯೂ, ಮೊದಲಿಗೆ ಕನ್ನಡ ಎನ್ನುತ್ತ, ಕನ್ನಡಿಗ ಪತ್ರಕರ್ತರೊಂದಿಗೆ ಮಾತನಾಡಿ ನಂತರ ಉಳಿದ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು. ‘ಅನಂತಕುಮಾರ್ ಮೊದಲಿನಷ್ಟು ಕಟುವಾಗಿಲ್ಲ, ಬಹಳಷ್ಟು ಬದಲಾಗಿದ್ದಾರೆ’ ಎಂದು ದೆಹಲಿ ಮಾಧ್ಯಮದವರೇ ಅನೇಕ ಬಾರಿ ಮಾತನಾಡಿದ್ದುಂಟು.


ಅನಂತ್​ಗಾಗಿ ವಕೀಲನಾದೆ

ಇಂದಿರಾ ಗಾಂಧಿ ಸರ್ಕಾರ ತುರ್ತು ಪರಿಸ್ಥಿತಿ ಘೋಷಿಸಿದ್ದಾಗ ಅನಂತಕುಮಾರ್ ಪರಿಚಯವಾಯಿತು. ಆಗ ನಾನು ಹುಬ್ಬಳ್ಳಿಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದೆ. ಆರೆಸ್ಸೆಸ್ ಕಾರ್ಯಕರ್ತನೂ ಆಗಿದ್ದ ನಾನು ಸರ್ಕಾರದ ಕ್ರಮ ವಿರೋಧಿಸಿ ಹೋರಾಡಿದ್ದೆ. ಆಗ ದ್ವಿತೀಯ ಪಿಯುಸಿ ಓದುತ್ತಿದ್ದ ಅನಂತಕುಮಾರ್ ಮತ್ತವರ ಸ್ನೇಹಿತರು ನನ್ನ ಜತೆಯಾದರು. ಜುಲೈನಿಂದ ಡಿಸೆಂಬರ್ 8ವರೆಗೂ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದ ಅವರು ನನ್ನೊಂದಿಗೆ ಜ.14ರ ವರೆಗೆ ಜೈಲುವಾಸ ಅನುಭವಿಸಿದ್ದರು. ದೇಶಕ್ಕಾಗಿ ಜೈಲು ಸೇರಿದೆವು ಎಂದು ಭಾವಿಸಿದ್ದ ಅನಂತಕುಮಾರ್ ಮತ್ತವರ ಸಹಪಾಠಿಗಳು ಒಮ್ಮೆಯೂ ಬೇಸರಪಟ್ಟುಕೊಳ್ಳಲಿಲ್ಲ. ಅವರೆಲ್ಲರೂ ಜೈಲಿನಲ್ಲೇ ಓದು ಮುಂದುವರಿಸಿದ್ದರು. ಆದರೆ ಹೊರ ಬಂದ ನಂತರ ಪರೀಕ್ಷೆಗೆ ಕೂರಲು ಅವಕಾಶ ನಿರಾಕರಿಸಲಾಗಿತ್ತು. ಕಾನೂನು ಪದವಿ ಹೊಂದಿದ್ದ ನಾನು ಆ ಹುಡುಗರಿಗಾಗಿ ಹೈಕೋರ್ಟ್​ನಲ್ಲಿ ವಾದ ಮಂಡಿಸಿದೆ. ಪರೀಕ್ಷೆ ಬರೆಯಲು ಹೈಕೋರ್ಟ್ ಅನುಮತಿ ನೀಡಿತು. ಬಳಿಕ ನಾನು ಪೂರ್ಣಾವಧಿ ವಕೀಲನಾಗಿ ಬೆಂಗಳೂರಿಗೆ ಬಂದು ಹೈಕೋರ್ಟ್​ನಲ್ಲಿ ವಕೀಲಿಕೆ ಆರಂಭಿಸಿದೆ. ನನಗಿಂತ 9 ವರ್ಷ ಚಿಕ್ಕವರಾದ ಅನಂತಕುಮಾರ್ ಕಾನೂನು ಪದವಿ ಮುಗಿಸಿ ಬೆಂಗಳೂರಿಗೆ ಬಂದು ನನ್ನ ಕಚೇರಿಗೇ ಸೇರಿದರು. ಉತ್ತಮ ನಾಯಕತ್ವ ಗುಣ ಇರುವ ನೀನೇಕೆ ರಾಜಕೀಯ ಪ್ರವೇಶಿಸಬಾರದೆಂದು ಕೇಳಿದ್ದೆ. 1996ರಲ್ಲಿ ನಾನು ಬೆಂಗಳೂರು ಬಿಜೆಪಿ ಘಟಕದ ಅಧ್ಯಕ್ಷನಾಗಿದ್ದಾಗ ಅನಂತಕುಮಾರ್ ಲೋಕಸಭೆಗೆ ಸ್ಪರ್ಧಿಸಿ ಗೆದ್ದರು. ಆ ಚುನಾವಣೆಯಿಂದ ಹಿಡಿದು, ಆರೂ ಚುನಾವಣೆಗಳಲ್ಲಿ ನಾನು ಅವರ ಏಜೆಂಟ್ ಆಗಿ ಕಾರ್ಯ ನಿರ್ವಹಿಸಿದ್ದೆ. ರಾಜಕಾರಣದಲ್ಲಿ ಅವರಿಗೆ ಇನ್ನಷ್ಟು ಭವಿಷ್ಯವಿತ್ತು.

| ನರಹರಿ ಜಿ. ಫಡ್ಕೆ ಹಿರಿಯ ವಕೀಲರು

ಕನ್ನೂರ ಆಶ್ರಮದ ಜತೆ ಅವಿನಾಭಾವ ಸಂಬಂಧ

ಸ್ವಾತಂತ್ರ್ಯ ಚಳವಳಿ, ಸ್ವದೇಶಿ ಆಂದೋಲನದಲ್ಲಿ ಪ್ರಮುಖ ಪಾತ್ರ ವಹಿಸಿರುವ ವಿಜಯಪುರ ಜಿಲ್ಲೆ ಕನ್ನೂರಿನ ಗಣಪತರಾವ ಮಹಾರಾಜರ ಶಾಂತಿ ಕುಟೀರಕ್ಕೂ ಕೇಂದ್ರ ಸಚಿವ ಅನಂತಕುಮಾರ್​ಗೂ ಅವಿನಾಭಾವ ಸಂಬಂಧ. ಪ್ರತಿ ಚುನಾವಣೆ ಫಲಿತಾಂಶಕ್ಕೂ ಮುನ್ನ ಸಚಿವ ಅನಂತಕುಮಾರ್ ದಂಪತಿ ಸಮೇತ ಶಾಂತಿ ಕುಟೀರಕ್ಕೆ ಭೇಟಿ ನೀಡುತ್ತಿದ್ದರು. ಕೆಲ ಕಾಲ ಉಳಿದು ಪ್ರಾರ್ಥನೆ, ಜಪ-ತಪ ಹಾಗೂ ಭಜನಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಸುಮಾರು 30 ವರ್ಷಗಳಿಂದ ಶಾಂತಿ ಕುಟೀರದೊಂದಿಗೆ ಉತ್ತಮ ಒಡನಾಟ ಹೊಂದಿದ್ದರು.

ವಿದೇಶಗಳ ಪ್ರವಾಸ

ಅನಂತಕುಮಾರ್ ಅವರಿಗೆ ವಿದೇಶ ಪ್ರವಾಸ ಹಾಗೂ ಅಧ್ಯಯನ ವಿಶಿಷ್ಟ ಹವ್ಯಾಸಗಳು. ಜರ್ಮನಿ, ಸ್ಪೇನ್, ಪೋರ್ಚಗಲ್, ಬ್ರೆಜಿಲ್, ಚೀನಾ, ಫ್ರಾನ್ಸ್, ಇಟಲಿ, ಇರಾನ್, ಜಪಾನ್, ಮಲೇಷ್ಯಾ, ಸಿಂಗಾಪುರ, ಸ್ವಿಜರ್ಲೆಂಡ್, ಯುಕೆ, ಯುಎಇ, ಯುಎಸ್​ಎ ಸೇರಿ ಅನೇಕ ರಾಷ್ಟ್ರಗಳ ಪ್ರವಾಸ ಮಾಡಿದ್ದಾರೆ.

ಕೆಎಲ್​ಇ ಸಂಸ್ಥೆಯ ಕೊತ್ತಂಬರಿ ಕಾಲೇಜಿನ ವಿದ್ಯಾರ್ಥಿ ಆಗಿದ್ದಾಗಿನಿಂದಲೂ ಅವರ ಸಂಘಟನಾ ಶಕ್ತಿ ಪರಿಚಿತವಾಗಿವೆ. ಸಬ್ಸಿಡಿ ದರದ ರಸಗೊಬ್ಬರಕ್ಕೆ ಬೇವಿನ ಬೀಜದ ಪೌಡರ್ ಲೇಪಿಸಿ ಅವರು ರಸಗೊಬ್ಬರದ ಕಾಳಸಂತೆ ತಡೆದಿದ್ದರು. ಅವರ ಜನಪರ, ರೈತಪರ ಕಾಳಜಿ ಮೆಚ್ಚುವಂಥದ್ದು. ಅವರ ಅಗಲಿಕೆ ದೇಶ-ರಾಜ್ಯಕ್ಕೆ ತುಂಬಲಾರದ ನಷ್ಟ.

| ಡಾ.ಪ್ರಭಾಕರ ಕೋರೆ ರಾಜ್ಯಸಭೆ ಸದಸ್ಯ, ಕೆಎಲ್​ಇ ಸಂಸ್ಥೆ ಕಾರ್ಯಾಧ್ಯಕ್ಷ


ಶ್ರೀಮಠದ ಮುಖ್ಯಾಭಿಮಾನಿಯಾಗಿದ್ದ ಅವರು ಶ್ರೀಮಠದ ಅನೇಕ ಅಭಿವೃದ್ಧಿ ಕಾರ್ಯಗಳಿಗೆ ಸಹಕಾರ ನೀಡಿದ್ದರು. ಅವರ ಆತ್ಮಕ್ಕೆ ಸದ್ಗತಿ ಹಾಗೂ ಶಾಂತಿ ದೊರೆಯುವಂತೆ ರಾಯರಲ್ಲಿ ಪ್ರಾರ್ಥಿಸುತ್ತೇವೆ.

| ಶ್ರೀ ಸುಬುಧೇಂದ್ರ ತೀರ್ಥರು ಪೀಠಾಧಿಪತಿ ಶ್ರೀ ರಾಘವೇಂದ್ರಸ್ವಾಮಿ ಮಠ, ಮಂತ್ರಾಲಯ


ವಾಜಪೇಯಿ ಸರ್ಕಾರದಲ್ಲೇ ಅವರು ಸಚಿವರಾಗಿದ್ದು, ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದ್ದರು. ಪ್ರಧಾನಿ ಮೋದಿ ಆಡಳಿತ ದಲ್ಲೂ ಸಚಿವರಾಗಿ ಎಲ್ಲರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದರು. ಹಲವಾರು ಸಾರ್ವಜನಿಕ ಹೋರಾಟಗಳಲ್ಲಿ ಭಾಗವಹಿಸುವ ಮೂಲಕ ಜನರ ಮನ್ನಣೆ ಪಡೆದಿದ್ದರು.

| ಶ್ರೀ ವಿದ್ಯಾರಣ್ಯ ಭಾರತಿ ಸ್ವಾಮೀಜಿ ಶ್ರೀ ವಿದ್ಯಾರಣ್ಯ ಪೀಠಾಧಿಪತಿ, ಹಂಪಿ


ಪಕ್ಷ ಭೇದವಿದ್ದರೂ ರಾಜ್ಯ ಹಾಗೂ ಕೇಂದ್ರದ ನಡುವೆ ಸಮನ್ವಯ ಕಾಯ್ದುಕೊಂಡಿದ್ದರು. ನಂಬಿದ ಆದರ್ಶಗಳಿಗೆ ಚ್ಯುತಿ ಬಾರದಂತೆ ಕೆಲಸ ಮಾಡುತ್ತಿದ್ದರು. ಶ್ರೀಮಠ ಕೈಗೊಳ್ಳುವ ಲೋಕಸೇವಾ ಕೈಂಕರ್ಯಗಳಿಗೆ ಸಲಹೆ ನೀಡುವುದರ ಜತೆಗೆ ಮಠದ ಅಭಿವೃದ್ಧಿಗೆ ಸಹಕರಿಸಿದ್ದರು.

| ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಆದಿಚುಂಚನಗಿರಿ ಮಠ