ಅನಂತಕುಮಾರ್ ಅಮರ್ ರಹೇ

ಬೆಂಗಳೂರು: ರಾಜಕೀಯ ಕ್ಷೇತ್ರಕ್ಕೆ ಹೋಲಿಸಿದರೆ ಚಿಕ್ಕ ವಯಸ್ಸಿನಲ್ಲಿ ಅನಿರೀಕ್ಷಿತ ನಿಧನ ಹೊಂದಿದ ಅನಂತಕುಮಾರ್ ಅವರ ಅಂತಿಮ ದರ್ಶನವನ್ನು ಸಾವಿರಾರು ಸಾರ್ವಜನಿಕರು ಹಾಗೂ ದೇಶದ ಗಣ್ಯವ್ಯಕ್ತಿಗಳು ಪಡೆದ ನಂತರ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.

ಸೋಮವಾರ ಅವರ ಮನೆಯಲ್ಲಿ ಸಾರ್ವಜನಿಕ ದರ್ಶನದ ನಂತರ ಮಂಗಳವಾರ ಬೆಳಗ್ಗೆ ಮೊದಲಿಗೆ ರಾಜ್ಯ ಬಿಜೆಪಿ ಕಚೇರಿಯಲ್ಲಿ, ಬಳಿಕ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಾರ್ವಜನಿಕ ದರ್ಶನದ ನಂತರ ಚಾಮರಾಜಪೇಟೆಯ ಟಿ.ಆರ್. ಮಿಲ್ ಬಳಿಯ ಹಿಂದು ರುದ್ರಭೂಮಿಯಲ್ಲಿ ಕಿರಿಯ ಸಹೋದರ ನಂದಕುಮಾರ್ ಅವರು ಚಿತೆಗೆ ಅಗ್ನಿಸ್ಪರ್ಶ ನೆರವೇರಿಸಿದರು.

ಬೆಳಗ್ಗೆ 9ಕ್ಕೆ ಸೇನಾ ವಾಹನದಲ್ಲಿ ರಾಜ್ಯ ಬಿಜೆಪಿ ಕಚೇರಿಗೆ ತರಲಾದ ಪಾರ್ಥಿವ ಶರೀರದ ದರ್ಶನವನ್ನು ಅನೇಕ ಹಿರಿಯ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಪಡೆದರು. ನಂತರ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಾರ್ವಜನಿಕರು, ಹೆಚ್ಚಾಗಿ ಸಾವಿರಾರು ಸಂಖ್ಯೆಯ ಶಾಲಾ ಮಕ್ಕಳು ಅಂತಿಮ ದರ್ಶನ ಪಡೆದರು. ಕೇಂದ್ರ ಸಚಿವರಾದ ಡಿ.ವಿ. ಸದಾನಂದಗೌಡ, ಪ್ರಕಾಶ್ ಜಾವಡೇಕರ್, ರಮೇಶ್ ಜಿಗಜಿಣಗಿ ಜತೆಗೆ ಸಾರ್ವಜನಿಕರು ಒಕ್ಕೊರಲಿನಿಂದ ಪೂರ್ಣ ವಂದೇಮಾತರಂ ಗಾಯನದ ಮೂಲಕ ಅಗಲಿದ ಸಂಘಟನಾ ಚತುರನಿಗೆ ರಾಷ್ಟ್ರೀಯತೆಯ ಗೌರವ ನೀಡಿದರು.

12.10ಕ್ಕೆ ಮೈದಾನದಿಂದ ಹೊರಟ ಮೆರವಣಿಗೆ ಸುಮಾರು 50 ನಿಮಿಷ ಪಯಣಿಸಿ ಚಾಮರಾಜಪೇಟೆಯ ರುದ್ರಭೂಮಿ ತಲುಪುವ ದಾರಿಯುದ್ದಕ್ಕೂ ಸಾರ್ವಜನಿಕರು ದರ್ಶನ ಪಡೆದು ಮೃತರ ಆತ್ಮಕ್ಕೆ ಸದ್ಗತಿ ಕೋರಿದರು. ರುದ್ರಭೂಮಿ ಬಳಿ ಅದಾಗಲೆ ಸಾವಿರ ಸಂಖ್ಯೆಯಲ್ಲಿ ನೆರೆದಿದ್ದ ಸಾರ್ವಜನಿಕರ ‘ಅನಂತಕುಮಾರ್ ಅಮರ್ ರಹೇ’, ‘ವಂದೇ ಮಾತರಂ’, ‘ಭಾರತ್ ಮಾತಾ ಕೀ ಜೈ’ ಘೋಷಣೆ ಮುಗಿಲುಮುಟ್ಟಿತ್ತು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಅನಂತಕುಮಾರ್ ಗುರು ಎಂದೇ ಪರಿಗಣಿಸಲ್ಪಡುವ ಎಲ್.ಕೆ. ಆಡ್ವಾಣಿ, ಆರೆಸ್ಸೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಭಯ್ಯಾಜಿ ಜೋಷಿ ಸೇರಿ ಅನೇಕರ ಉಪಸ್ಥಿತಿಯಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸಕಲ ಗೌರವ ನೀಡಿದವು. ಬೆಂಗಳೂರು ಎಎಸ್​ಸಿ ಸೆಂಟರ್ ಸೈನಿಕರು ಮೂರು ಸುತ್ತು ಗುಂಡು ಹಾರಿಸಿ ಗೌರವ ಅರ್ಪಿಸಿದರು. ಸೇನೆ ಕಮಾಂಡರ್ ಎಸ್.ಪಿ. ಯಾದವ್, ವಾಯುಸೇನೆ ಏರ್ ಮಾರ್ಷಲ್ ಎ.ಕೆ.ಎಸ್. ಬದೂರಿಯಾ ಉಪಸ್ಥಿತರಿದ್ದರು. ಸರ್ಕಾರಿ ಗೌರವದ ಬಳಿಕ ಕುಟುಂಬಕ್ಕೆ ಹಸ್ತಾಂತರಿಸಲಾದ ಪಾರ್ಥಿವ ಶರೀರಕ್ಕೆ ವೈದಿಕ ಧರ್ಮಕ್ಕೆ ಅನುಗುಣವಾಗಿ ಅಂತಿಮ ಕ್ರಿಯಾಕರ್ಮ ನೆರವೇರಿಸಲಾಯಿತು.

ಧ್ವಜ ಹಿಡಿದೇ ಇದ್ದ ತೇಜಸ್ವಿನಿ

ಅನಂತಕುಮಾರ್ ಅವರ ಶರೀರದ ಮೇಲೆ ಸೋಮವಾರ ಹೊದಿಸಿದ್ದ ರಾಷ್ಟ್ರಧ್ವಜವನ್ನು ಪತ್ನಿ ತೇಜಸ್ವಿನಿ ಅನಂತಕುಮಾರ್ ಅವರಿಗೆ ಸೈನಿಕರು ಸಕಲ ಗೌರವದೊಂದಿಗೆ ನೀಡಿದರು. ಅವರು ಅದನ್ನು ತುಂಬಾ ಸಮಯ ಕೈಯಲ್ಲೇ ಇಟ್ಟುಕೊಂಡಿದ್ದರು. ಐಹಿಕ ಋಣಾನುಬಂಧ ವಿಮೋಚನೆ ವೇಳೆ ಎಲ್.ಕೆ. ಆಡ್ವಾಣಿ ಪುತ್ರಿ ಪ್ರತಿಭಾ ಆಡ್ವಾಣಿ ಅವರು ಆ ಧ್ವಜ ಇರಿಸಿಕೊಂಡಿದ್ದರು.

ನಾಳೆ ಶ್ರದ್ಧಾಂಜಲಿ ಸಭೆ

ಅನಂತಕುಮಾರ್​ಗೆ ಶ್ರದ್ಧಾಂಜಲಿ ಸಲ್ಲಿಸಲು ನ್ಯಾಷನಲ್ ಕಾಲೇಜು ಮೈದಾನದಲ್ಲಿ ಗುರುವಾರ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಮಾಜಿ ಡಿಸಿಎಂ ಆರ್. ಅಶೋಕ್ ಮಾಹಿತಿ ನೀಡಿದರು. ಆದಿಚುಂಚನಗಿರಿ ಮಠದ ಡಾ. ನಿರ್ಮಲಾನಂದನಾಥ ಸ್ವಾಮೀಜಿ, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸೇರಿ ಅನೇಕ ಗಣ್ಯರು ಉಪಸ್ಥಿತರಿದ್ದು ಶ್ರದ್ಧಾಂಜಲಿ ಅರ್ಪಿಸಲಿದ್ದಾರೆ ಎಂದರು.

ಸ್ಮರಿಸಿದ ಜನತೆ

ನ್ಯಾಷನಲ್ ಕಾಲೇಜು ಮೈದಾನದಲ್ಲಿ ಬಿಜೆಪಿಗೆ ಸಂಬಂಧಿಸಿದ ಸಾವಿರಾರು ಕಾರ್ಯಕ್ರಮಗಳು ನಡೆದಿದ್ದು, ಅವೆಲ್ಲದರಲ್ಲೂ ಅನಂತಕುಮಾರ್ ಒಂದಿಲ್ಲೊಂದು ಪ್ರಮುಖ ಪಾತ್ರ ವಹಿಸಿದ್ದರು. ಅದನ್ನು ಮಂಗಳವಾರ ಹಲವರು ಸ್ಮರಿಸಿಕೊಂಡರು.

ಗಣ್ಯರ ಸಮೂಹ

ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಕುಟುಂಬ ಸಮೇತ ಆಗಮಿಸಿ ಮೃತರ ಅಂತಿಮ ದರ್ಶನ ಪಡೆದರು. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ರಾಮ್ಾಲ್, ಸಂತೋಷ್, ಬಿಜೆಪಿ ಮುಖಂಡರಾದ ಕೆ.ಎಸ್. ಈಶ್ವರಪ್ಪ, ಆರ್. ಅಶೋಕ್, ಬಸವರಾಜ ಬೊಮ್ಮಾಯಿ, ಕೋಟ ಶ್ರೀನಿವಾಸ ಪೂಜಾರಿ, ಸಿ.ಟಿ. ರವಿ, ಶಾಸಕ ಸುನಿಲ್​ಕುಮಾರ್, ಮಾಜಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕ ಎಸ್.ಎ. ರಾಮದಾಸ್, ಸಂಸದ ವಿಜಯೇಂದ್ರ, ನಟಿ ಶ್ರುತಿ, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಭಾರತಿ ಶೆಟ್ಟಿ, ಎಂಎಲ್​ಸಿ ತೇಜಸ್ವಿನಿ, ಅರಗ ಜ್ಞಾನೇಂದ್ರ ಮತ್ತಿತರ ಗಣ್ಯರು ಅಂತಿಮ ದರ್ಶನ ಪಡೆದರು.

 

 

ಪಕ್ಷದಲ್ಲಿ ಹೆಪ್ಪುಗಟ್ಟಿದ ವೇದನೆ

ಅನಂತಕುಮಾರ್ ಎಂದರೆ ಬಿಜೆಪಿ ಸಂಘಟನೆ ಪಾಲಿಗೆ ದೊಡ್ಡ ಶಕ್ತಿ. ಅವರಿಲ್ಲದ್ದನ್ನು ಊಹಿಸಿಕೊಳ್ಳಲೂ ಸಾಧ್ಯವಾಗದೆ ಇಡೀ ಬಳಗ ಮುಗುಮ್ಮಾಗಿದೆ. ಇನ್ನು ಹತ್ತು ವರ್ಷ ಅನಂತಕುಮಾರರು ಇರಬೇಕಿತ್ತು, ಕೇಂದ್ರದಲ್ಲಿ ಇನ್ನೂ ಎತ್ತರದ ಸ್ಥಾನಕ್ಕೇರುವುದನ್ನು ನಾವು ಕಾಣಬೇಕಿತ್ತು ಎನ್ನುವವರ ಸಂಖ್ಯೆಗೇನೂ ಕೊರತೆ ಇರಲಿಲ್ಲ. ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡಿದ್ದವರು ಅಂತಿಮ ಪ್ರಕ್ರಿಯೆಯ ಪ್ರತಿ ಹಂತ ಮುಗಿಯುತ್ತಿದ್ದಂತೆ ಬೇಸರ ಹೊರಹಾಕಿ, ಏನೋ ಕಳಕೊಂಡ ಭಾವ ವ್ಯಕ್ತಪಡಿಸುತ್ತಿದ್ದರು.

ಸಾರ್ವಜನಿಕರಿಂದ ನಮನ

ಬಸವನಗುಡಿ ಸುಮೇರು ನಿವಾಸದಿಂದ ಪುಷ್ಪಾಲಂಕೃತ ಸೇನಾ ವಾಹನದಲ್ಲಿ ಬಿಜೆಪಿ ಕಚೇರಿಗೆ ಹೊರಟ ಮಾರ್ಗ ಮಧ್ಯೆ ಜನರು ಅನಂತಕುಮಾರ್ ಅವರ ಪಾರ್ಥಿವ ಶರೀರ ದರ್ಶನ ಮಾಡಿ ನಮಸ್ಕರಿಸುತ್ತಿದ್ದುದು ಕಂಡು ಬಂತು.

ಬಿಕ್ಕಿ ಬಿಕ್ಕಿ ಅತ್ತ ಬೆಳಮಗಿ

ಮಾಜಿ ಸಚಿವ ರೇವೂ ನಾಯಕ್ ಬೆಳಮಗಿ ಸೇರಿ ಅನೇಕ ಹಿರಿಯ ಕಾರ್ಯಕರ್ತರು ಬಿಕ್ಕಿ ಬಿಕ್ಕಿ ಅಳುತ್ತಿದ್ದ ದೃಶ್ಯ ಕಂಡು ಬಂತು. ಬಿಜೆಪಿ ಕಚೇರಿಗೆ ಪಾರ್ಥಿವ ಶರೀರ ಬರುತ್ತಿದ್ದಂತೆ ಅನಂತಕುಮಾರ್ ಅಮರ್ ರಹೇ ಎಂಬ ಘೋಷವಾಕ್ಯ ಮುಗಿಲುಮುಟ್ಟಿತು. ಕಾರ್ಯಕರ್ತರು ಜೈಕಾರ ಕೂಗಿ ಗೌರವ ಸಮರ್ಪಿಸಿದರು.

ಬಿಎಸ್​ವೈ ಮತ್ತಷ್ಟು ಭಾವುಕ

ಅನಂತಕುಮಾರ್ ನಿಧನದಿಂದ ಜಝುರಿತರಾದಂತೆ ಕಂಡುಬಂದಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮಂಗಳವಾರ ಕೂಡ ಭಾವುಕರಾಗಿ ಕಂಡುಬಂದರು. ಪೂರ್ಣ ಮೌನವಾಗೇ ಕಂಡುಬಂದಿದ್ದಲ್ಲದೆ ಹಳೇ ನೆನಪುಗಳನ್ನು ಮೆಲುಕು ಹಾಕುವಂತೆ ತೋರುತ್ತಿತ್ತು. ಸರ್ಕಾರಿ ಗೌರವ ಸಲ್ಲಿಕೆ ವೇಳೆ ಯಡಿಯೂರಪ್ಪ ಕೂಡ ಪುಷ್ಪ ನಮನ (ರೀತ್) ಸಲ್ಲಿಸಿದರು. ವಾಪಸ್ ಹೊರಡುವಾಗ ಪಾರ್ಥಿವ ಶರೀರವನ್ನು ಪದೇಪದೆ ದಿಟ್ಟಿಸಿ ಭಾರವಾದ ಹೆಜ್ಜೆ ಹಾಕಿದ್ದು ಕಾಣಿಸಿತು.

ಅಭಿಮಾನಿಗಳ ಅಂತಿಮ ನಮನ

ಹುಬ್ಬಳ್ಳಿ ಸೇರಿ ರಾಜ್ಯದ ನಾನಾ ಕಡೆಗಳಿಂದ ಬಂದ ಅನಂತಕುಮಾರ್ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು ಅಗಲಿದ ನಾಯಕನಿಗೆ ಅಂತಿಮ ನಮನ ಸಲ್ಲಿಸಿದರು. ಬಿಜೆಪಿ ಕಚೇರಿ ಸುತ್ತಮುತ್ತ ಅನಂತಕುಮಾರ್ ಅವರ ಶ್ರದ್ಧಾಂಜಲಿಯ ಭಾವಚಿತ್ರಗಳು ರಾರಾಜಿಸುತ್ತಿದ್ದವು. ಕಾರ್ಯಕರ್ತರು ಸರತಿ ಸಾಲಿನಲ್ಲಿ ಶಿಸ್ತಿನ ಸಿಪಾಯಿಗಳಂತೆ ನಿಂತು ಅಂತಿಮ ದರ್ಶನ ಪಡೆದರು.

ಬಿಜೆಪಿ ಕಚೇರಿಯಲ್ಲಿ ಭಾವಪೂರ್ಣ ಶ್ರದ್ಧಾಂಜಲಿ

ಬಿಜೆಪಿ ಕಚೇರಿಯಲ್ಲಿ ಗಣ್ಯರು, ಪಕ್ಷದ ಮುಖಂಡರು, ಸಹಸ್ರಾರು ಕಾರ್ಯಕರ್ತರು, ಅನಂತಕುಮಾರ್ ಅಭಿಮಾನಿಗಳು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು. ಪುಷ್ಪಾಲಂಕೃತ ಸೇನಾ ವಾಹನದಲ್ಲಿ ಪಾರ್ಥಿವ ಶರೀರ ಬರುವುದಕ್ಕೆ ಮುಂಚೆಯೇ ನೂರಾರು ಅಭಿಮಾನಿಗಳು ಬಿಜೆಪಿ ಕಚೇರಿ ತುಂಬಿಕೊಂಡಿದ್ದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪಾರ್ಥಿವ ಶರೀರ ಬರುವ ಒಂದು ಗಂಟೆ ಮುನ್ನವೇ ಬಿಜೆಪಿ ಕಚೇರಿಗೆ ಬಂದು ಕಾದು ಕುಳಿತಿದ್ದರು.

ಕಿಕ್ಕಿರಿದ ಜನ, ಸ್ಮಶಾನ ಮೌನ

ಸಹಸ್ರಾರು ಜನ ಜಮಾಯಿಸಿದ್ದರೂ ಬಿಜೆಪಿ ಕಚೇರಿ ತುಂಬ ಸ್ಮಶಾನ ಮೌನ ಆವರಿಸಿತ್ತು. ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಗಣ್ಯರಿಗೆ ಹಾಗೂ ಸಾರ್ವಜನಿಕರಿಗೆ ದರ್ಶನಕ್ಕೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿತ್ತು.

ರಾಜಕೀಯ ಭೀಷ್ಮ ಆಡ್ವಾಣಿಯ ಸಾಂತ್ವನ

ಅನಂತಕುಮಾರ್ ಅವರನ್ನು ಆಡ್ವಾಣಿಯವರ ನೀಲಿಗಣ್ಣಿನ ಹುಡುಗ ಎಂದು ಕರೆಯುವುದೂ ಉಂಟು. ಮಂಗಳವಾರ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಆಡ್ವಾಣಿ ಅಂತಿಮ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ತೇಜಸ್ವಿನಿ ಅನಂತಕುಮಾರ್ ಭಾವುಕರಾದರು. ಅವರ ತಲೆ ನೇವರಿಸಿದ ಆಡ್ವಾಣಿ ಸುಧಾರಿಸಿಕೊಳ್ಳುವಂತೆ ಹೇಳಿ ಸಮಾಧಾನಪಡಿಸಿದರು. ಆಡ್ವಾಣಿ ಆಗಮಿಸಿದಾಗ ಮತ್ತು ವಾಪಸ್ ಹೊರಟಾಗ ತೇಜಸ್ವಿನಿ ಹಾಗೂ ಅವರ ಪುತ್ರಿ ಕಾಲಿಗೆರಗಿದರು. ಅಂತಿಮ ವಿಧಿವಿಧಾನ ನಡೆಯುವ ಅಷ್ಟೂ ವೇಳೆ ಆಡ್ವಾಣಿ ಪುತ್ರಿ ತೇಜಸ್ವಿನಿ ಅವರೊಂದಿಗಿದ್ದರು.

ವಿದಾಯದ ಕ್ಷಣಕ್ಷಣ…

9.00: ರಾಜ್ಯ ಬಿಜೆಪಿ ಕಚೇರಿಗೆ ಪಾರ್ಥಿವ ಶರೀರ. ಗಣ್ಯರು ಸಾರ್ವಜನಿಕರಿಂದ ದರ್ಶನ

10.15: ನ್ಯಾಷನಲ್ ಕಾಲೇಜು ಮೈದಾನದತ್ತ ಪಯಣ

10.47: ನ್ಯಾಷನಲ್ ಕಾಲೇಜು ಮೈದಾನಕ್ಕೆ ಆಗಮನ. ವಿದ್ಯಾರ್ಥಿಗಳು-ಸಾರ್ವಜನಿಕರಿಂದ ದರ್ಶನ

12.05: ವಂದೇಮಾತರಂ ಗಾಯನದೊಂದಿಗೆ ಗೌರವ

12.10: ರಾಮಕೃಷ್ಣ ವೃತ್ತ, ಉಮಾ ಟಾಕೀಸ್, 5ನೇ ಮುಖ್ಯರಸ್ತೆ ಮಾರ್ಗವಾಗಿ ರುದ್ರಭೂಮಿಯತ್ತ ಮೆರವಣಿಗೆ.

1.25: ಚಾಮರಾಜಪೇಟೆ ರುದ್ರಭೂಮಿಗೆ ಆಗಮನ

1.35: ಅಮಿತ್ ಷಾ, ರಾಜನಾಥ್ ಸಿಂಗ್ ಆಗಮನ

1.45: ಸೇನಾ ಬ್ಯಾಂಡ್​ನಿಂದ ಶೋಕ ಶಾಸ್ತ್ರ, ಸಲಾಮಿ ಶಾಸ್ತ್ರ ವಾದನ

1.51: ಅಮಿತ್ ಷಾ, ಆಡ್ವಾಣಿ, ಭಯ್ಯಾಜಿ ಜೋಷಿ, ನಿರ್ಮಲಾ ಸೀತಾರಾಮನ್, ಬಿಎಸ್​ವೈ, ಡಿಕೆಶಿ ಮುಂತಾದ ಗಣ್ಯರಿಂದ ಗೌರವ

2.05: ಧಾರ್ವಿುಕ ಕಾರ್ಯ ನಡೆಸಲು ಕುಟುಂಬಕ್ಕೆ ದೇಹ ಹಸ್ತಾಂತರ

2.06: ಶ್ರೀನಾಥ ಶರ್ಮ, ಭಾನುಪ್ರಕಾಶ್ ಶರ್ಮ ನೇತೃತ್ವದಲ್ಲಿ ಅಂತಿಮ ವಿಧಿವಿಧಾನಕ್ಕೆ ಚಾಲನೆ. ಸಹೋದರ ನಂದಕುಮಾರ್ ಅವರಿಂದ ಕ್ರಿಯಾಕರ್ಮ.

2.38: ಐಹಿಕ ಋಣಾನುಬಂಧ ವಿಮೋಚನೆ ಪ್ರಕ್ರಿಯೆ

2.43: ಪಾರ್ಥಿವ ಶರೀರ ಚಿತೆಗೆ

2.50: ಪಾರ್ಥಿವ ಶರೀರಕ್ಕೆ ಅಗ್ನಿಸ್ಪರ್ಶ