ಆನಂದ ಸಂಕೇಶ್ವರಗೆ ಗೇಮ್ ಚೇಂಜರ್ ಪ್ರಶಸ್ತಿ

ಬೆಂಗಳೂರು: ಕನ್ನಡ ಮಾಧ್ಯಮ ಕ್ಷೇತ್ರದಲ್ಲಿ ಎರಡೆರಡು ಬಾರಿ ದಿಗ್ವಿಜಯ, ಎಲೆಕ್ಟ್ರಾನಿಕ್ ಮಾಧ್ಯಮ ಕ್ಷೇತ್ರದಲ್ಲಿ ಛಾಪು ಹಾಗೂ ನಾಗರಿಕ ಪತ್ರಿಕೋದ್ಯಮದಲ್ಲೂ ಗಣನೀಯ ಸಾಧನೆ ಮಾಡುತ್ತಿರುವ ಯುವ ಉದ್ಯಮಿ ಹಾಗೂ ವಿಆರ್​ಎಲ್ ಸಮೂಹ ಸಂಸ್ಥೆಗಳ ಎಂಡಿ ಆನಂದ ಸಂಕೇಶ್ವರ ಅವರಿಗೆ 2018ನೇ ಸಾಲಿನ ಗೇಮ್ ಚೇಂಜರ್ ಪ್ರಶಸ್ತಿ ಗೌರವ ಲಭಿಸಿದೆ.

ದಕ್ಷಿಣ ಭಾರತದಲ್ಲಿ ಮಾಧ್ಯಮ, ಜಾಹೀರಾತು ಹಾಗೂ ಮಾರುಕಟ್ಟೆ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಗಣ್ಯರನ್ನು ಪ್ರಸಿದ್ಧ ಸುದ್ದಿ ಸಂಸ್ಥೆ ಮೀಡಿಯಾ ನ್ಯೂಸ್ ಫಾರ್ ಯು ಡಾಟ್ ಕಾಂ ವತಿಯಿಂದ ಚೆನ್ನೈನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗೌರವಿಸಲಾಯಿತು. ಮೀಡಿಯಾ ನ್ಯೂಸ್ ಫಾರ್ ಯು ಡಾಟ್ ಕಾಂ ಮುಖ್ಯ ಸಂಪಾದಕ ವಿ.ಉಮಾನಾಥ್ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಗಣ್ಯರ ಸಮಿತಿ ಪ್ರಶಸ್ತಿಗೆ ಸಾಧಕರನ್ನು ಆಯ್ಕೆ ಮಾಡಿದೆ.

ತೀರ್ಪಗಾರರ ತಂಡ

ಪ್ರಶಸ್ತಿ ಆಯ್ಕೆ ಸಮಿತಿಗೆ ಮೀಡಿಯಾ ನ್ಯೂಸ್ ಫಾರ್ ಯು ಡಾಟ್ ಕಾಂ ಮುಖ್ಯ ಸಂಪಾದಕ ವಿ.ಉಮಾನಾಥ್ ನೇತೃತ್ವ ವಹಿಸಿದ್ದರು. ಪ್ರತಿ ಕ್ಷೇತ್ರದಲ್ಲೂ ಮುಂಚೂಣಿ ನಾಯಕರ ಜತೆಗೆ ಗೇಮ್ ಚೇಂಜರ್ 2018ರ ಪ್ರಶಸ್ತಿಗಾಗಿ, ಆಯ್ಕೆ ಸಮಿತಿಯಲ್ಲಿದ್ದ ಎಲ್ಲ ಗಣ್ಯರೂ ನೀಡಿದ್ದ ಅಂಕಗಳ ಆಧಾರದಲ್ಲಿ ಆಯ್ಕೆ ನಡೆದಿದೆ. ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಾಗಿ ಉದ್ಯಮಿ ಹಾಗೂ ಸೀಡ್ ಇನ್ವೆಸ್ಟರ್ ರಂಜು ಮೋಹನ್, ಏಂಜೆಲ್ ಇನ್ವೆಸ್ಟರ್ ಮತ್ತು ಹಿಮಾಚಲ ಪ್ರದೇಶದ ಎಪಿಎಂಸಿ ಮಾಜಿ ಮಾರುಕಟ್ಟೆ ಮುಖ್ಯಸ್ಥ ಲಾಯ್್ಡ ಮಥಿಯಾಸ್, ಸೋಚಿಯಲ್ ಸ್ಟ್ರೀಟ್ ಸಂಸ್ಥಾಪಕ ಅಧ್ಯಕ್ಷ ಪ್ರತಾಪ್ ಬೋಸ್, ಜಾಹೀರಾತು ದಿಗ್ಗಜ ರಮೇಶ್ ನಾರಾಯಣ್, ಪ್ರೊವೊಕೇಟರ್ ಅಡ್ವೈಸರಿ ಪ್ರಾಂಶುಪಾಲ ಪಾರಿತೋಷ್ ಜೋಷಿ, ಪತ್ರಕರ್ತ ಗೋಕುಲ್ ಕೃಷ್ಣಮೂರ್ತಿ ಕಾರ್ಯನಿರ್ವಹಿಸಿದರು.

ಆನಂದ ಸಂಕೇಶ್ವರಗೆ ಶ್ಲಾಘನೆ

ಕನ್ನಡ ಸುದ್ದಿ ಮಾಧ್ಯಮ ಕ್ಷೇತ್ರದಲ್ಲಿ ಹೊಸ ಎತ್ತರಗಳನ್ನು ಏರುತ್ತಿರುವುದಕ್ಕೆ ಆನಂದ ಸಂಕೇಶ್ವರರನ್ನು ಪ್ರಶಸ್ತಿ ಸಮಿತಿ ಶ್ಲಾಘಿಸಿದೆ. ಶೂನ್ಯದಿಂದ ಆರಂಭಿಸಿ ಉತ್ತುಂಗಕ್ಕೇರಿದ ಕನ್ನಡ ದಿನಪತ್ರಿಕೆಯನ್ನು ಮಾರಾಟ ಮಾಡಿದ ಆರು ವರ್ಷಗಳ ನಂತರ ಸಂಕೇಶ್ವರ ಅವರು ಮತ್ತೆ ಮಾಧ್ಯಮ ಜಗತ್ತಿಗೆ ಪ್ರವೇಶಿಸಿದರು. 2012ರ ಏಪ್ರಿಲ್​ನಲ್ಲಿ ವಿಜಯವಾಣಿಯನ್ನು ಆರಂಭಿಸಿದರು. ಪ್ರಾರಂಭವಾದ ಕೇವಲ 24 ತಿಂಗಳಲ್ಲೇ ಪ್ರಸರಣ ಸಂಖ್ಯೆಯಲ್ಲಿ ಕರ್ನಾಟಕದ ನಂ.1 ಪತ್ರಿಕೆಯಾಗಿ ಹೊರಹೊಮ್ಮಿದ ವಿಜಯವಾಣಿ, ಕನ್ನಡ ಮಾಧ್ಯಮ ಲೋಕದಲ್ಲೇ ಅತಿ ಹೆಚ್ಚು ಪ್ರಸರಣವಾದ ಪತ್ರಿಕೆ ಎಂಬ ಸ್ಥಾನದಲ್ಲೇ ಮುಂದುವರಿಯುತ್ತಿದೆ. 2017ರಲ್ಲಿ ಆನಂದ ಸಂಕೇಶ್ವರ ಅವರು ದಿಗ್ವಿಜಯ 24ಗಿ7 ನ್ಯೂಸ್ ಚಾನಲ್ ಆರಂಭಿಸುವ ಮೂಲಕ ವಿದ್ಯುನ್ಮಾನ ಮಾಧ್ಯಮ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದರು. ಕನ್ನಡ ಸುದ್ದಿವಾಹಿನಿಗಳ ಪೈಕಿ ದಿಗ್ವಿಜಯ ಸುದ್ದಿವಾಹಿನಿ ಮೊದಲ ಐದು ಸ್ಥಾನದಲ್ಲಿ ಪರಿಗಣಿಸಲ್ಪಡುತ್ತಿದೆ. ಚುನಾವಣೆ ಫಲಿತಾಂಶಗಳನ್ನು ನಿಖರವಾಗಿ ಊಹಿಸಲು ಸಾಧ್ಯವಿಲ್ಲ ಎಂಬ ಮಾತುಗಳ ನಡುವೆಯೇ 2018ರ ವಿಧಾನಸಭಾ ಚುನಾವಣೆ ಫಲಿತಾಂಶದ ಕುರಿತು ನಿಖರ ಭವಿಷ್ಯ ನುಡಿದಿದ್ದ ಹೆಗ್ಗಳಿಕೆ ದಿಗ್ವಿಜಯ 24ಗಿ7 ನ್ಯೂಸ್​ಗೆ ಸಲ್ಲುತ್ತದೆ. ಮತ್ತೊಮ್ಮೆ ನಂ.1 ಕನ್ನಡ ದಿನಪತ್ರಿಕೆ ಕಟ್ಟಿ ಬೆಳೆಸುವ ಹಾಗೂ ಮುಂದಾಳತ್ವದ ಜತೆಗೆ ಮುದ್ರಣ ಮಾಧ್ಯಮವನ್ನೂ ಮೀರಿ ವಿಸ್ತರಣೆಯಲ್ಲಿ ಆನಂದ ಸಂಕೇಶ್ವರ ಅವರ ಸದೃಢ ವ್ಯಕ್ತಿತ್ವಕ್ಕೆ ನಮ್ಮ ನಮನ ಎಂದು ಆಯ್ಕೆ ಸಮಿತಿ ಮೆಚ್ಚುಗೆ ಸೂಚಿಸಿದೆ.

ಆಯ್ಕೆ ಮಾನದಂಡ

  1. ಕೈಗೊಂಡ ಯೋಜನೆಗಳಲ್ಲಿನ ಪ್ರವರ್ತಕತೆ
  2. ಅಗಾಧತೆ ಹಾಗೂ ಮನ್ನಣೆ
  3. ಉದ್ಯಮ ವಾತಾವರಣ, ಕೈಗಾರಿಕೆ ಹಾಗೂ ಸಮಾಜದಲ್ಲಿ ಪ್ರಭಾವ
  4. ಸಾಧನೆ ವೇಳೆ ಎದುರಾಗುವ ಅಡೆತಡೆಗಳು

ಇನ್ನಿತರ ಸಾಧಕರು

  1. ಸಂಜಯ್ ರೆಡ್ಡಿ ಹಾಗೂ ಅನಿಲ್ ಪಲ್ಲಾಳ- ಸಿಲ್ಲಿಮಾಂಕ್ಸ್ ಎಂಟರ್​ಟೈನ್​ವೆುಂಟ್ ಸಂಸ್ಥಾಪಕ ಹಾಗೂ ಸಹ ಸಂಸ್ಥಾಪಕರು
  2. ಡಾ.ಆರ್.ಶಕ್ತಿವೇಲ್- ಚಾಲೆಂಜ್ ಅಡ್ವರ್ಟೆಸಿಂಗ್ ಸಂಸ್ಥಾಪಕ ಸಿಇಒ
  3. ಕೆ.ಮಾಧವನ್- ಸ್ಟಾರ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ (ದಕ್ಷಿಣ)
  4. ಪಾರ್ಥೊ ದಾಸ್ ಗುಪ್ತ- ಬಾರ್ಕ್ ಇಂಡಿಯಾ ಸಿಇಒ

ಶ್ರೀನಿವಾಸನ್ ಕೆ. ಸ್ವಾಮಿಗೆ ಗೌರವ

ಸ್ವಾಮಿ ಹಂಸಾ ಸಮೂಹ ಸಂಸ್ಥೆಗಳು ಹಾಗೂ ಐಎಎ ಜಾಗತಿಕ ಅಧ್ಯಕ್ಷ ಶ್ರೀನಿವಾಸನ್ ಕೆ. ಸ್ವಾಮಿ ಅವರನ್ನು ಗೇಮ್ ಚೇಂಜರ್ 2018ರ ಸಂಪಾದಕೀಯ ವಿಶೇಷ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ಲೋಡ್​ಸ್ಟರ್ ಯುಎಂ ಸಿಇಒ ನಂದಿನಿ ದಿಯಾಸ್ ಅವರಿಗೆ ಗೇಮ್ ಚೇಂಜರ್ 2018 ಪ್ರಶಸ್ತಿ ನೀಡಿ ಗೌರವಿಸಲಾಯಿತು.