More

    ಅಸ್ನೋಟಿಕರ್‌ರನ್ನು ಬಿಜೆಪಿ ಗೆ ಪಡೆಯದಂತೆ ಮುಖಂಡರ ಒತ್ತಾಯ

    ಕಾರವಾರ: ಮಾಜಿ ಸಚಿವ ಆನಂದ ಅಸ್ನೋಟಿಕರ್ ಅವರನ್ನು ಯಾವುದೇ ಕಾರಣಕ್ಕೂ ಮತ್ತೆ ಬಿಜೆಪಿ ಗೆ ಪಡೆಯಬಾರದು ಎಂಬ ಕೂಗು ಬಿಜೆಪಿ ಜಿಲ್ಲಾ ಕಾರ್ಯಕಾರಣಿ ಸಭೆಯಲ್ಲಿ ಕೇಳಿ ಬಂದಿದೆ.
    ಗುರುವಾರ ಶಿರಸಿಯ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಜಿಲ್ಲಾ ಕಾರ್ಯಕಾರಣಿ ಪ್ರಮುಖರ ಸಭೆ ನಡೆಯಿತು. ವಿಧಾನಸಭಾ ಚುನಾವಣೆಯ ಸೋಲು, ಗೆಲುವುಗಳ ಬಗ್ಗೆ ಅವಲೋಕನ ಮಾಡಲಾಯಿತು.
    ಸಭೆಯಲ್ಲಿ ಮಾತನಾಡಿದ ಹಳಿಯಾಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದ ಸುನೀಲ ಹೆಗಡೆ, ಆನಂದ ಅಸ್ನೋಟಿಕರ್ ಈ ಹಿಂದೆ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪಂದಿಸಿ, ನಮ್ಮ ಪ್ರಧಾನಿ ನರೇಂದ್ರ ಮೋದಿ ಹಾಗೂ ಎಂಪಿ ಅವರ ಬಗ್ಗೆಯೂ ಅವಾಚ್ಯವಾಗಿ ಮಾತನಾಡಿದ್ದರು.

    ಇದನ್ನೂ ಓದಿ:ಸಚಿವಗಿರಿಗಾಗಿ ಭುಗಿಲೆದ್ದ ಅಸಮಾಧಾನ; ಶಾಸಕರಿಬ್ಬರಿಂದ ಎಐಸಿಸಿ ಅಧ್ಯಕ್ಷರಿಗೆ ಪತ್ರ

    ಈ ವಿಧಾನಸಭಾ ಚುನಾವಣೆಯಲ್ಲಿ ಕಾರವಾರ ಕ್ಷೇತ್ರದಲ್ಲಿ ಹಾಗೂ ಹಳಿಯಾಳ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧ ಕೆಲಸ ಮಾಡಿದರು. ಈಗ ಮತ್ತೆ ತಾನು `ರಾಷ್ಟ್ರೀಯ ಪಕ್ಷವೊಂದರ ಎಂಪಿ ಟಿಕೆಟ್ ಆಕಾಂಕ್ಷಿ’ ಎಂದು ಹೇಳಿಕೆ ನೀಡುತ್ತಿದ್ದಾರೆ.

    ಬಿಜೆಪಿಯಲ್ಲಿ ಸದ್ಯ ಎಂಪಿ ಇದ್ದಾರೆ. ಪಕ್ಷ ಮುಂದೆ ಚುನಾವಣೆಯಲ್ಲಿ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದೆ. ಆದರೆ, ಅಸ್ನೋಟಿಕರ್ ಅವರಿಗೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು ಎನ್ನಲಾಗಿದೆ.

    ಅದಕ್ಕೆ ಇತರ ಕೆಲವು ಕಾರ್ಯಕರ್ತರೂ ಸಹಮತ ವ್ಯಕ್ತಪಡಿಸಿ ನಿರ್ಣಯ ಕೈಗೊಂಡಿದ್ದಾಗಿ ತಿಳಿದುಬಂದಿದೆ.


    6 ಕ್ಷೇತ್ರಗಳ ಅವಲೋಕನ


    ವಿಧಾನಸಭಾ ಚುನಾವಣೆಯಲ್ಲಿ 6 ಕ್ಷೇತ್ರಗಳ ಸೋಲು, ಗೆಲುವಿನ ಬಗ್ಗೆ ಸಭೆಯಲ್ಲಿ ಪದಾಧಿಕಾರಿಗಳು ತಮ್ಮ ಅಭಿಪ್ರಾಯ ಹಂಚಿಕೊಂಡರು.

    ಜೆಡಿಎಸ್ ಮತ ಗಳಿಕೆ ಕಡಿಮೆಯಾಗಿ ಕಾಂಗ್ರೆಸ್ ಮತ ಕ್ರೋಢೀಕರಣವಾಗಿದ್ದರಿಂದ ಬಿಜೆಪಿಗೆ ಸೋಲಾಗಿದೆ. ಬಿಜೆಪಿಯ ಮತ ಗಳಿಕೆ ಜಾಸ್ತಿಯಾಗಿದೆ ಎಂಬ ಅಭಿಪ್ರಾಯ ಹೆಚ್ಚಿನ ಸದಸ್ಯರಿಂದ ಕೇಳಿ ಬಂತು.

    ಮುಂದೆ ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆ ಹಾಗೂ ಲೋಕಸಭಾ ಚುನಾವಣೆಗೆ ಸಜ್ಜಾಗಲು ನಿರ್ಣಯ ಕೈಗೊಳ್ಳಲಾಯಿತು ಎನ್ನಲಾಗಿದೆ.




    ಬಿಜೆಪಿ ಜಿಲ್ಲಾ ಕಾರ್ಯಕಾರಣಿ ಸಭೆಯಲ್ಲಿ ಆನಂದ ಅಸ್ನೋಟಿಕರ್ ನಡೆಯ ಬಗ್ಗೆ ಕೆಲವು ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದರು. ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳದಂತೆ ಒತ್ತಾಯಿಸಿದರು. ಈ ವಿಷಯವನ್ನು ನಾವು ಪಕ್ಷದ ರಾಜ್ಯ ಪ್ರಮುಖರಿಗೆ ತಿಳಿಸಲಾಗುವುದು.
    ವೆಂಕಟೇಶ ನಾಯಕ
    ಬಿಜೆಪಿ ಜಿಲ್ಲಾಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts