ಆನಂದ್​ ಸಿಂಗ್​ ಕಣ್ಣಿನ ಮೇಲ್ಭಾಗದ ಮೂಳೆ ಮುರಿದಿದೆ: ವೈದ್ಯ ಭುಜಂಗ ಶೆಟ್ಟಿ

ಬೆಂಗಳೂರು: ಈಗಲ್ಟನ್​ ರೆಸಾರ್ಟ್​ನಲ್ಲಿ ಶಾಸಕ ಗಣೇಶ್​ ಅವರಿಂದ ಹಲ್ಲೆಗೊಳಗಾಗಿ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದ ಶಾಸಕ ಆನಂದ್ ಸಿಂಗ್​ ಅವರನ್ನು ಇಂದು ನಾರಾಯಣ ನೇತ್ರಾಲಯಕ್ಕೆ ರವಾನಿಸಲಾಗಿತ್ತು. ಅಲ್ಲಿ ಕಣ್ಣಿನ ತಪಾಸಣೆಗೆ ಒಳಗಾದ ಅವರು ನಂತರ ಅಪೋಲೊಗೆ ಮರಳಿದ್ದಾರೆ.

ಹಲ್ಲೆ ವೇಳೆ ಕಣ್ಣಿನ ಭಾಗಕ್ಕೆ ತೀವ್ರತರದ ಪೆಟ್ಟು ತಗುಲಿದೆ. ಇದೇ ಕಾರಣಕ್ಕೆ ಅವರ ಕಣ್ಣಿನ ಮೇಲ್ಭಾಗ ಊದಿಕೊಂಡಿತ್ತು. ಹೀಗಾಗಿ ಚಿಕಿತ್ಸೆಗೆಂದು ಅವರನ್ನು ನಾರಾಯಣ ನೇತ್ರಾಲಯಕ್ಕೆ ರವಾನಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಇನ್ನು ಪರಿಶೀಲನೆ ನಂತರ ಮಾತನಾಡಿರುವ ವೈದ್ಯ ಭುಜಂಗ ಶೆಟ್ಟಿ, ” ಆನಂದ್​ ಸಿಂಗ್​ ಅವರ ಕಣ್ಣಿಗೆ ಏನೂ ಸಮಸ್ಯೆಯಾಗಿಲ್ಲ. ಕಣ್ಣಿನ ಸುತ್ತ ಆವರಿಸುವ ಮೂಳೆಯಲ್ಲಿ ಮುರಿತ ಕಂಡು ಬಂದಿದೆ. ಅದಕ್ಕೆ ಚಿಕಿತ್ಸೆ ನೀಡಲಾಗುವುದು,”ಎಂದು ತಿಳಿಸಿದರು.

ಇನ್ನೊಂದೆಡೆ ಹಲ್ಲೆ ಆರೋಪಕ್ಕೆ ಗುರಿಯಾಗಿರುವ ಗಣೇಶ್​ ಅವರು ಇನ್ನೂ ಪತ್ತೆಯಾಗಿಲ್ಲ. ಬಂಧನ ಬೀತಿಯಲ್ಲಿರುವ ಅವರು ನಿರೀಕ್ಷಣಾ ಜಾಮೀನಿಗಾಗಿ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ.

ಹೀಗಿರುವಾಗಲೇ ಮಾಧ್ಯಮಗಳೊಂದಿಗೆ ಮಾತನಾಡಿರುವ ಉಪ ಮುಖ್ಯಮಂತ್ರಿ ಪರಮೇಶ್ವರ್​, ಗಣೇಶ್​ ವಿರುದ್ಧ ಎಫ್​ಐಆರ್​ ದಾಖಲಾಗಿದೆ. ಹೀಗಾಗಿ ಅವರನ್ನು ಬಂಧನವಾಗುತ್ತದೆ ಎಂದು ತಿಳಿಸಿದ್ದಾರೆ.