More

    ಕನ್ನಡ ಚಿತ್ರರಂಗದಲ್ಲಿ ತೆರೆದುಕೊಂಡಿದೆ ಮುಕ್ತ ಅವಕಾಶ: ನಟ ಲವ್ಲೀ ಸ್ಟಾರ್ ಪ್ರೇಮ್ ಅಭಿಮತ

    ಮೈಸೂರು: ಪ್ರತಿಭಾವಂತ ಕಲಾವಿದರನ್ನು ನಿರ್ದೇಶಕರೇ ಇಂದು ಹುಡುಕಿಕೊಂಡು ಬರುವಂತಹ ಕಾಲ ಇದಾಗಿದೆ ಎಂದು ನಟ ಲವ್ಲೀ ಸ್ಟಾರ್ ಪ್ರೇಮ್ ಅಭಿಪ್ರಾಯಪಟ್ಟರು.
    ನಗರದ ಬೋಗಾದಿ ಬಡಾವಣೆಯಲ್ಲಿರುವ ಅಮೃತ ವಿಶ್ವವಿದ್ಯಾಪೀಠಂನ ದೃಶ್ಯ ಸಂವಹನ ವಿಭಾಗದಿಂದ ಎರಡು ದಿನಗಳ ಕಾಲ ಆಯೋಜಿಸಿದ್ದ ‘ಸಿನಿರಮಾ-2024’ 6ನೇ ರಾಷ್ಟ್ರೀಯ ಕಿರುಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ಶನಿವಾರ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.
    ಕನ್ನಡ ಸಿನಿಮಾ ರಂಗ ಉತ್ತಮ ಕಲಾವಿದರು ಹಾಗೂ ತಂತ್ರಜ್ಞರಿಗೆ ಮುಕ್ತ ಅವಕಾಶಗಳನ್ನು ಕಲ್ಪಿಸುತ್ತಿದೆ. ಇಂತಹ ಅವಕಾಶಗಳ ಸದುಪಯೋಗವನ್ನು ಆಸಕ್ತರು ಪಡೆದುಕೊಳ್ಳಬೇಕು ಎಂದರು.
    ಈ ಹಿಂದೆ ನಾವು ಅವಕಾಶಕ್ಕಾಗಿ ನಿರ್ದೇಶಕರ ಹಿಂದೆ ಅಲೆಯುತ್ತಿದ್ದೆವು. ಆದರೆ ಇಂದು ಉತ್ತಮ ಪ್ರತಿಭಾವಂತ ಕಲಾವಿದರನ್ನು ನಿರ್ದೇಶಕರುಗಳೇ ಹುಡುಕಿಕೊಂಡು ಬರುತ್ತಿದ್ದಾರೆ. ಪ್ರತಿಭೆಯನ್ನು ಪ್ರದರ್ಶಿಸಲು ಹಲವಾರು ವೇದಿಕೆಗಳು ಇದ್ದು, ಅವುಗಳನ್ನು ಬಳಸಿಕೊಳ್ಳಬೇಕು ಎಂದು ಹೇಳಿದರು.
    ಮೊಬೈಲ್ ಫೋನ್‌ನ ಹಾವಳಿ ಎಷ್ಟೇ ಇದ್ದರೂ ಕಲಾವಿದರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಿನಿಮಾ ಮಂದಿರಗಳಿಗೇ ತೆರಳಿ ಸಿನಿಮಾ ನೋಡುವಂತೆ ಕೋರಿದರು.
    ಸಂಗೀತ ನಿರ್ದೇಶಕ ಗುರುಕಿರಣ್ ಮಾತನಾಡಿ, ಸಿನಿಮಾ ಕ್ಷೇತ್ರ ದಿನದಿಂದ ದಿನಕ್ಕೆ ಅನೇಕ ಅವಕಾಶಗಳನ್ನು ತೆರೆದುಕೊಳ್ಳುತ್ತಿರುವ ಕ್ಷೇತ್ರವಾಗಿದ್ದು, ಇದಕ್ಕೆ ಎಂದಿಗೂ ಸಾವಿಲ್ಲ ಎಂದು ಅಭಿಪ್ರಾಯಪಟ್ಟರು.
    ಸಿನಿಮಾ ನಿರ್ಮಾಣದಲ್ಲಿ ಆಸಕ್ತಿ ಇರುವವರು ವಿವಿಧ ತಂಡಗಳ ಜತೆ ಕೆಲಸ ನಿರ್ವಹಿಸಿ ಅನುಭವ ಪಡೆದುಕೊಳ್ಳಬೇಕು. ಇಂತಹ ಅನುಭವಗಳು ಸಿನಿಮಾ ವೃತ್ತಿ ಜೀವನಕ್ಕೆ ಭದ್ರ ಬುನಾದಿ ಹಾಕುತ್ತವೆ ಎಂದರು.
    ಅಮೃತ ಮೈಸೂರು ಕ್ಯಾಂಪಸ್‌ನ ಅಸೋಸಿಯೇಟ್ ಡೀನ್ ಪ್ರೊ. ಶೇಖರ್ ಬಾಬು, ಪ್ರಾಂಶುಪಾಲ ಡಾ.ಜಿ. ರವೀಂದ್ರನಾಥ್, ಮೈಸೂರು ಕ್ಯಾಂಪಸ್‌ನ ನಿರ್ದೇಶಕರಾದ ಬ್ರಹ್ಮಚಾರಿ ಅನಂತಾನಂದ ಚೈತನ್ಯ, ಸಂಚಾಲಕರಾದ ಬ್ರಹ್ಮಚಾರಿ ಮುಕ್ತಿದಾಮೃತ ಚೈತನ್ಯ, ದೃಶ್ಯ ಸಂವಹನ ವಿಭಾಗದ ಮುಖ್ಯಸ್ಥೆ ಡಾ. ಮೌಲ್ಯ ಬಾಲಾಡಿ ಇತರರು ಇದ್ದರು.
    ಪ್ರಶಸ್ತಿ ವಿಜೇತರು: ಪ್ರಥಮ ಅತ್ಯುತ್ತಮ ಕಿರುಚಿತ್ರ – ಪರಾಗ್ ಸಾವಂತ್ – ಪಂಖೋಲ್ (ಮರಾಠಿ), ದ್ವಿತೀಯ ಅತ್ಯುತ್ತಮ ಕಿರುಚಿತ್ರ – ಪ್ರೇಮ್ ಕುಮಾರ್ ಆರ್ – ಕರ್ಪಿ (ತಮಿಳು), ತೃತೀಯ ಕಿರುಚಿತ್ರ – ಅನಂತು ರಮೇಶ್ – ದ್ವಯಂ (ಮಲಯಾಳಂ) ಪಡೆದುಕೊಂಡಿತು.
    ವಿಶೇಷ ವಿಭಾಗ ಪ್ರಶಸ್ತಿಗಳು ; ಅತ್ಯುತ್ತಮ ಸಂಕಲನಕಾರ – ಪ್ರದೀಪ್ ಪಾಟಿಲ್ – ಪಂಖೋಲ್ (ಮರಾಠಿ), ಅತ್ಯುತ್ತಮ ನಿರ್ದೇಶಕ – ಅನಂತು ರಮೇಶ್ – ದ್ವಯಂ (ಮಲಯಾಳಂ), ಅತ್ಯುತ್ತಮ ಛಾಯಾಗ್ರಾಹಕ – ಪರಾಗ್ ಸಾವಂತ್ – ಪಂಖೋಲ್ (ಮರಾಠಿ), ಅತ್ಯುತ್ತಮ ನಟನೆ – ಭಾನುಪ್ರಿಯ – ಕರ್ಪಿ (ತಮಿಳು), ಉತ್ತಮ ಕಥೆ – ವಿಘ್ನೇಶ್ ಪರಮಶಿವಂ – ತುಣೈ (ತಮಿಳು) ತಮ್ಮದಾಗಿಸಿಕೊಂಡರು.

    ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಲು ಹಾಗೂ ಅವರಲ್ಲಿರುವ ಸಿನಿಮಾ ಆಸಕ್ತಿಯನ್ನು ಪ್ರೋತ್ಸಾಹಿಸಲು ಅಮೃತ ವಿಶ್ವವಿದ್ಯಾಪೀಠಂನ ವಿದ್ಯಾರ್ಥಿಗಳಿಗಾಗಿ ಅಮೃತ ವಿಶೇಷ ಪ್ರಶಸ್ತಿಗಳನ್ನು ನೀಡಲಾಯಿತು. ಕಿರುಚಿತ್ರ ಸ್ಪರ್ಧೆಯ ವಿಜೇತರಿಗೆ ಸುಮಾರು ಒಂದು ಲಕ್ಷ ರೂ. ಮೌಲ್ಯದ ನಗದು ಬಹುಮಾನ ನೀಡಲಾಯಿತು.

    ನರ್ತಿಸಿ ರಂಜಿಸಿದ ಅತಿಥಿಗಳು:

    ವಿದ್ಯಾರ್ಥಿಗಳು ತಮ್ಮ ನೃತ್ಯದ ಮೂಲಕ ನೆರೆದವರನ್ನು ರಂಜಿಸಿದರು. ಜತೆಗೆ ಸೆಲೆಬ್ರಿಟಿ ಸ್ಟಾರ್‌ಗಳೂ ಕೂಡ ವಿದ್ಯಾರ್ಥಿಗಳೊಂದಿಗೆ ಹೆಜ್ಜೆ ಹಾಕಿದರು. ಅಲ್ಲದೇ ಗಾಯಕ ಗುರುಕಿರಣ್ ಅವರು ಹಾಡಿದ ಅಮ್ಮಾ ನಿನ್ನೀ ಜನುಮ.. ಹಾಡು ಸಭಿಕರನ್ನು ಭಾವುಕರನ್ನಾಗಿಸಿತು.
    ದೇಶಾದ್ಯಂತ ವಿವಿಧ ವಿಶ್ವವಿದ್ಯಾಲಯಗಳು, ಕಾಲೇಜುಗಳು ಹಾಗೂ ಫಿಲ್ಮ್ ಮೇಕಿಂಗ್ ಸ್ಕೂಲ್‌ಗಳು ಭಾಗವಹಿಸಿದ್ದವು. 100ಕ್ಕೂ ಹೆಚ್ಚು ಸಿನಿಮಾಗಳು ಈ ಕಿರುಚಿತ್ರೋತ್ಸವದಲ್ಲಿ ನೋಂದಣಿಗೊಂಡಿದ್ದು, ಟಾಪ್ ಕಿರುಚಿತ್ರಗಳನ್ನು ಪ್ರದರ್ಶನ ಮಾಡಲಾಯಿತು. ಕಿರುಚಿತ್ರೋತ್ಸವದಲ್ಲಿ ಸಿನಿಮಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕಾರ್ಯಾಗಾರಗಳು ಹಾಗೂ ಸಂವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
    ನಿರ್ದೇಶಕ ಹಾಗೂ ಎಡಿಟರ್ ಅಪ್ಪು ಭಟ್ಟಾತಿರಿ ಚಲನಚಿತ್ರ ಸಂಕಲನದ ಕುರಿತು ಸೆಲೆಕ್ಟೆಡ್ ಟೇಕ್ಸ್’ ಕುರಿತು ಗೋಷ್ಠಿ ಹಾಗೂ ನೆಟ್‌ಫ್ಲಿಕ್ಸ್ ಇಂಡಿಯಾದ ಒರಿಜಿನಲ್ ನಾನ್ ಫಿಕ್ಷನ್ ಮ್ಯಾನೇಜರ್ ಸ್ವಾತಿ ಸ್ವಪ್ನ ಅವರು ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಯಾವ ಬಗೆಯ ಕಂಟೆಂಟ್‌ಗಳನ್ನು ಸೃಷ್ಟಿಸಬಹುದು ಹಾಗೂ ನಾನ್‌ಫಿಕ್ಷನ್ ಕ್ಷೇತ್ರದಲ್ಲಿ ಇರುವ ಉದ್ಯೋಗಾವಕಾಶಗಳ ಕುರಿತು ಟೇಲ್ಸ್ ಓವರ್ ದಿ ಟಾಪ್’ ಎನ್ನುವ ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts