More

  ಕೆನರಾ ಕ್ಷೇತ್ರದ ಜನರಿಗೆ ಅನಂತ ದಿಗಂತ

  ಸುಭಾಸ ಧೂಪದಹೊಂಡ ಕಾರವಾರ
  ಪಕ್ಕಾ ಬಿಜೆಪಿ ಕ್ಷೇತ್ರ ಎಂದೇ ಹೆಸರಾಗಿರುವ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಕಮಲ ಟಿಕೆಟ್​ಗಾಗಿಯೇ ಫೈಟ್ ನಡೆದಿರುವುದು ವಿಶೇಷ. ಕಾಂಗ್ರೆಸ್ ಇನ್ನೂ ಸಮರ್ಥ ಅಭ್ಯರ್ಥಿಯ ಹುಡುಕಾಟದಲ್ಲಿದೆ. ಹಾಲಿ ಸಂಸದ ಅನಂತಕುಮಾರ ಹೆಗಡೆ ನಿಷ್ಕಿ್ರುತೆ ಬಿಜೆಪಿ ಹೈಕಮಾಂಡ್ ಹೊಸ ಅಭ್ಯರ್ಥಿಯ ಸಾಮರ್ಥ್ಯ ಅವಲೋಕಿಸುವಂತೆ ಮಾಡಿದೆ.

  ಕ್ಷೇತ್ರ ಬಿಜೆಪಿಮಯವಾಗಿ 2 ದಶಕ ಉರುಳಿವೆ. 1996 ಹಾಗೂ 1998ರಲ್ಲಿ ಅನಂತಕುಮಾರ ಹೆಗಡೆ ಬಿಜೆಪಿ ಬಾವುಟ ಹಾರಿಸಿದ್ದರು. ಈ ನಡುವೆ 1999ರಲ್ಲಿ ಕಾಂಗ್ರೆಸ್​ನ ಮಾರ್ಗರೇಟ್ ಆಳ್ವಾ ಸಂಸದರಾಗಿದ್ದರು. ಮತ್ತೆ 2004ರಿಂದ ನಿರಂತರ 20 ವರ್ಷ ಬಿಜೆಪಿಯದ್ದೇ ಪಾರುಪತ್ಯ.

  ವಿವಾದವೇ ಬಂಡವಾಳ: ವಿವಾದಾತ್ಮಕ ಹೇಳಿಕೆಗಳು, ಸುಳ್ಳು ಭರವಸೆಗಳೇ ಅನಂತಕುಮಾರ ಹೆಗಡೆ ಸಾಧನೆ. 6 ಬಾರಿ ಗೆದ್ದು, ಒಮ್ಮೆ ಕೇಂದ್ರ ಸಚಿವರಾಗಿದ್ದರೂ ಅಭಿವೃದ್ಧಿಗೆ ಕೊಡುಗೆ ಇಲ್ಲ ಎನ್ನುವ ಅಸಮಾಧಾನ ಕ್ಷೇತ್ರದ ಭಾಜಪ ಹಾಗೂ ಆರೆಸ್ಸೆಸ್ ಪ್ರಮುಖರಲ್ಲೇ ಇದೆ. ಇತ್ತೀಚಿನ ವರ್ಷಗಳಲ್ಲಿ ಪಕ್ಷದ ಸಂಘಟನೆಯಿಂದಲೂ ದೂರ ಉಳಿದು, ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮ, ವಿಧಾನಸಭೆ ಚುನಾವಣೆಯಲ್ಲೂ ಗೈರಾಗಿ ಅತಿರೇಕತನ ಪ್ರದರ್ಶಿಸಿದ್ದರು. ಹಾಗಾಗಿ, ಬಿಜೆಪಿ ಹೈಕಮಾಂಡ್ ಪರ್ಯಾಯ ಅಭ್ಯರ್ಥಿ ಕಣಕ್ಕಿಳಿಸುವ ಚಿಂತನೆ ಮಾಡಿ ಸಮೀಕ್ಷೆ ಕೈಗೊಂಡಿದೆ. ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ರಾಜ್ಯ ಹಿರಿಯ ವಕ್ತಾರ ಹರಿಪ್ರಕಾಶ ಕೋಣೆಮನೆ, ವೈದ್ಯ ಡಾ.ಜಿ.ಜಿ. ಹೆಗಡೆ ಹೀಗೆ… ಹಲವರು ರೇಸ್​ನಲ್ಲಿದ್ದರೂ ರಾಜ್ಯದಲ್ಲಿ ಒಂದಷ್ಟು ಹೊಸಮುಖಗಳಿಗೆ ಅವಕಾಶ ನೀಡುವ ಚಿಂತನೆಯಲ್ಲಿ ಈ ಕ್ಷೇತ್ರವೂ ಮುಂಚೂಣಿಯಲ್ಲಿದೆ. ಇನ್ನು ಸಂಘ ಪರಿವಾರದ ಜತೆ ಸಖ್ಯ ಇರುವವರಿಗೇ ಇಲ್ಲಿನ ಜನ ಮಣೆಹಾಕುವುದು ಗಮನಾರ್ಹ. ಈ ನಡುವೆ 4 ವರ್ಷಗಳಿಂದ ನಾಪತ್ತೆಯಾಗಿದ್ದ ಹೆಗಡೆ ಇದ್ದಕ್ಕಿದ್ದಂತೆ ಚುರುಕಾಗಿ ಹಿಂದು ಪರ ತೀಕ್ಷ ್ಣ ಹೇಳಿಕೆ ನೀಡುತ್ತ ಟಿಕೆಟ್​ಗಾಗಿ ಪ್ರಯತ್ನ ನಡೆಸಿದ್ದಾರೆ.

  See also  ಸುಳ್ಳು ಸುದ್ದಿ ನಂಬಿ ಶೇರ್ ಮಾಡುವ ಮುನ್ನ ಎಚ್ಚರ ವಹಿಸಿ; ಸಿಎಂ ಸ್ಪಷ್ಟನೆ

  ಕಾಂಗ್ರೆಸ್​ನಲ್ಲಿ ಅಂಜಲಿ ಹೆಸರು: ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ 5ರಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಬಿಜೆಪಿ ಸಂಸದರ ಸಾಕಷ್ಟು ವೈಫಲ್ಯಗಳ ನಡುವೆಯೂ ಸಮರ್ಥ ಅಭ್ಯರ್ಥಿಯನ್ನು ಸಿದ್ಧ ಮಾಡಲು ಇದುವರೆಗೂ ಕಾಂಗ್ರೆಸ್ ಹೆಣಗಾಡುತ್ತಿದೆ. ಅರಣ್ಯ ಹಕ್ಕು ಹೋರಾಟಗಾರ ಎ.ರವೀಂದ್ರನಾಥ ನಾಯ್ಕ ಪ್ರಬಲ ಆಕಾಂಕ್ಷಿ. ಆದರೆ, ಹೈಕಮಾಂಡ್ ಸಚಿವರನ್ನು ಕಣಕ್ಕಿಳಿಸಲು ಒತ್ತಾಯಿಸುತ್ತಿದೆ. ಸದ್ಯ ಮಾಜಿ ಶಾಸಕಿ ಬೆಳಗಾವಿಯ ಅಂಜಲಿ ನಿಂಬಾಳ್ಕರ್ ಹೆಸರು ಕೇಳಿ ಬರುತ್ತಿದೆ.

  ಕಾಂಗ್ರೆಸ್ ಗ್ಯಾರಂಟಿ- ಬಿಜೆಪಿ ಹಿಂದುತ್ವ: ಜಿಲ್ಲೆಗೊಂದು ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್ ಬೇಕು ಎಂಬ ಹಕ್ಕೊತ್ತಾಯ ಸದ್ಯ ಕ್ಷೇತ್ರದಲ್ಲಿ ಪ್ರತಿಧ್ವನಿಸುತ್ತಿರುವ ಪ್ರಮುಖ ವಿಚಾರ. ಅರಣ್ಯ ಅತಿಕ್ರಮಣ, ಹೆದ್ದಾರಿ ವಿಸ್ತರಣೆ, ಉದ್ಯೋಗ ಕಲ್ಪಿಸುವುದು, ಕೈಗಾರಿಕೆ ತರುವುದು ಮುಂತಾದ ಹಲವು ಅಭಿವೃದ್ಧಿಪರ ವಿಚಾರಗಳಿವೆ. ಜಾತಿ ಸಮೀಕರಣವೂ ಕೆನರಾ ಕ್ಷೇತ್ರದಲ್ಲಿ ದೊಡ್ಡ ಮಟ್ಟದಲ್ಲಿ ಕೆಲಸ ಮಾಡಿದ್ದಿಲ್ಲ. ಹಿಂದುತ್ವದ ನೆಲೆ, ಮೋದಿ ಅಲೆಯೇ ಚುನಾವಣೆಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಿವೆ. ಕಾಂಗ್ರೆಸ್ ಗ್ಯಾರಂಟಿಬಿಜೆಪಿಯ ಹಿಂದುತ್ವದ ಅಜೆಂಡಾಗಳೇ ಮುಖಾಮುಖಿಯಾಗುವ ಮುನ್ಸೂಚನೆ ಕಂಡುಬರುತ್ತಿದೆ.

  ಶಿವರಾಮ ಹೆಬ್ಬಾರರ ನಡೆ ಎತ್ತ ಕಡೆ?: ಬಿಜೆಪಿಯಿಂದ ಆಯ್ಕೆಯಾಗಿರುವ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ ಬಿಜೆಪಿ ಸಂಘಟನೆಯಿಂದ ಅಂತರ ಕಾಯ್ದುಕೊಂಡು ಕಾಂಗ್ರೆಸ್ ಸಾಂಗತ್ಯ ಬೆಳೆಸಿಕೊಂಡಿದ್ದಾರೆ. ಕಾಂಗ್ರೆಸ್ ಸೇರಿ ಲೋಕಸಭಾ ಚುನಾವಣೆಗೆ ಅಭ್ಯರ್ಥಿಯಾಗುತ್ತಾರೆ ಎಂಬ ವದಂತಿಯಿದ್ದರೂ ಹೆಬ್ಬಾರ ಇದುವರೆಗೂ ಸ್ಪಷ್ಟಪಡಿಸಿಲ್ಲ. ಈ ನಡುವೆ ಜೆಡಿಎಸ್​ನಲ್ಲಿರುವ ಅನಂತಕುಮಾರ ಹೆಗಡೆ ಮಾಜಿ ಶಿಷ್ಯ ಸೂರಜ್ ನಾಯ್ಕ ಸೋನಿ ಕಾಂಗ್ರೆಸ್ ಸೇರಿ ಅಭ್ಯರ್ಥಿಯಾಗುವ ಪ್ರಯತ್ನ ನಡೆಸಿದ್ದಾರೆ ಎಂಬ ಸುದ್ದಿ ಇದೆ.

  Uk

  ನಟ, ಸಾಹಿತಿಗಳಿಗೂ ಕ್ಷೇತ್ರದಲ್ಲಿ ಸೋಲು: ಖ್ಯಾತ ಚುಟುಕು ಸಾಹಿತಿ ದಿನಕರ ದೇಸಾಯಿ 1967ರಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿ ಸಂಸದರಾಗಿದ್ದ ಕ್ಷೇತ್ರವಿದು. 1989ರಲ್ಲಿ ಕೈಗಾ ಅಣು ಶಕ್ತಿ ಸ್ಥಾವರ ವಿರೋಧಿಸಿ ಸಾಹಿತಿ ಶಿವರಾಮ ಕಾರಂತ, ನಟರಾದ ಅನಂತನಾಗ್ ಸ್ಪರ್ಧಿಸಿ ಸೋಲು ಕಂಡಿದ್ದರು. 2004ರಲ್ಲಿ ನಟ ನೀರ್ನಳ್ಳಿ ರಾಮಕೃಷ್ಣ ಜನತಾ ದಳದಿಂದ ಸ್ಪರ್ಧಿಸಿ ಸೋತಿದ್ದಾರೆ. ಜೋಕಿಂ ಆಳ್ವಾ, ಬಿ.ವಿ.ನಾಯಕ, ಬಿ.ಪಿ.ಕದಂ, ದೇವರಾಯ ನಾಯ್ಕ ಮುಂತಾದವರ ಕಾಲಘಟ್ಟದಲ್ಲಿ ಆಗಿನ ಕೆನರಾ ಹೆಸರಿನ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಭದ್ರ ಕೋಟೆಯಾಗಿತ್ತು.

  See also  ಚೇತರಿಸಿಕೊಂಡ ಕುಮಾರಸ್ವಾಮಿ ಆಸ್ಪತ್ರೆಯಲ್ಲೇ ಸುದ್ದಿಗೋಷ್ಠಿ

  ಕಳೆದ ಚುನಾವಣೆ ಮತ ಲೆಕ್ಕಾಚಾರ: 2019ರ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಆನಂದ ಅಸ್ನೋಟಿಕರ್ ಬಿಜೆಪಿಯ ಅನಂತಕುಮಾರ ಹೆಗಡೆ ವಿರುದ್ಧ ಸ್ಪರ್ಧೆ ಮಾಡಿ 3.06 ಲಕ್ಷ ಮತ ಪಡೆಯುವಲ್ಲಿ ಶಕ್ತರಾದರು. ಹೆಗಡೆ 4.79 ಲಕ್ಷ ಮತಗಳ ಅಂತರದಿಂದ ಜಯಗಳಿಸಿದರು. ಬಿಜೆಪಿ ಮತ ಗಳಿಕೆ ಹಿಂದಿನ ಚುನಾವಣೆಗಿಂತ ಶೇ.13.51 ಹೆಚ್ಚಿತ್ತು. ಈ ಬಾರಿ ಪರಿಸ್ಥಿತಿ ಉಲ್ಟಾ ಆಗಿದೆ. ಬಿಜೆಪಿ-ಜೆಡಿಎಸ್ ಮೈತ್ರಿ ಇದೆ. ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ ಜೆಡಿಎಸ್ ಬೆಂಬಲ ನೀಡಬೇಕಿದೆ.

  ಜನರಿಗೆ ಸ್ಪಂದಿಸದ ಮಹಾಶಯ: ಸಂಸದ ಅನಂತಕುಮಾರ ಹೆಗಡೆ ಕ್ಷೇತ್ರದಲ್ಲಿ ಒಂದಷ್ಟು ಬಿಎಸ್​ಎನ್​ಎಲ್ ಟವರ್​ಗಳನ್ನು ಹಾಕಿಸಿದ್ದು ಬಿಟ್ಟರೆ, ಅವರೇ ಮಾಡಿದ್ದು ಎಂಬ ಒಂದೇ ಒಂದು ಕಾರ್ಯವೂ ಮತದಾರರಿಗೆ ನೆನಪಾಗುತ್ತಿಲ್ಲ. ಕಳೆದ ನಾಲ್ಕೂವರೆ ವರ್ಷಗಳಿಂದ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದೇ ಅಪರೂಪ. ಸೀಬರ್ಡ್ ನೌಕಾ ಯೋಜನೆ, ಕೈಗಾ ಅಣು ವಿದ್ಯುತ್ ಸ್ಥಾವರಗಳಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡುತ್ತಿಲ್ಲ ಎಂಬ ಕೂಗಿದೆ. ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ವಿಸ್ತರಣೆ ಅಸಮರ್ಪಕವಾಗಿದೆ ಎಂಬ ಆಕ್ಷೇಪವಿದೆ. ಉತ್ತರ ಕನ್ನಡಕ್ಕೆ ರೈಲ್ವೆ ಸೇವೆಯಲ್ಲಿ ಅನ್ಯಾಯವಾಗುತ್ತಿದೆ ಎಂಬ ಆರೋಪವಿದೆ. ಆದರೆ, ಅದ್ಯಾವುದರ ಬಗ್ಗೆಯೂ ಸಂಸದರು ಸ್ಪಂದಿಸಿದ್ದಿಲ್ಲ ಎಂಬುದು ಮತದಾರರ ಅಳಲು. ಕಳೆದ 4 ವರ್ಷಗಳಲ್ಲಿ 16.66 ಕೋಟಿ ರೂ. ಸಂಸದರ ಪ್ರದೇಶಾಭಿವೃದ್ಧಿ ನಿಧಿ ಸರ್ಕಾರದಿಂದ ಬಂದಿದ್ದು, 14.40 ಕೋಟಿ ರೂ.ಗಳನ್ನು ಖರ್ಚು ಮಾಡಿದ್ದಾರೆ. ಹೆಚ್ಚಿನ ಅನುದಾನ ರಸ್ತೆಗೇ ಬಳಸಿದ್ದಾರೆ.

  ಸದನದಲ್ಲಿ ಹಾಜರಾತಿ: ಸದನದಲ್ಲಿ ಅನಂತಕುಮಾರ ಹೆಗಡೆ ಹಾಜರಾತಿ ಶೇ.67 ಇದ್ದು, ನಾಲ್ಕೂವರೆ ವರ್ಷದಲ್ಲಿ ಯಾವುದೇ ಚರ್ಚೆಯಲ್ಲಿ ಪಾಲ್ಗೊಂಡಿಲ್ಲ. ಅರಣ್ಯ, ಪರಿಸರ ಬದಲಾವಣೆ, ಕ್ಯಾನ್ಸರ್ ಮುಂತಾದ ವಿಷಯಗಳಿಗೆ ಸಂಬಂಧಿಸಿದ 18 ಪ್ರಶ್ನೆಗಳನ್ನು ಕೇಳಿದ್ದಾರೆ. ವೈಯಕ್ತಿಕ ಬಿಲ್ ಮಂಡಿಸಿಲ್ಲ.

  See also  ಮೊದಲು ಕರೊನಾ ವೈರಸ್​ ಪತ್ತೆಯಾದ ಹುಬೈ ಪ್ರಾಂತ್ಯ ಬಿಟ್ಟು ಗುಳೆ ಹೋಗುತ್ತಿರುವ ನಾಗರಿಕರು: ತಡೆದ ಪೊಲೀಸರ ಮೇಲೆ ಹಲ್ಲೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts