More

    ಸಮಾಜದಲ್ಲಿನ ಅಸಮಾನತೆ ತೊಡೆದು ಹಾಕಲು ಪ್ರಯತ್ನ

    ಮೈಸೂರು: ಸಮಾಜದಲ್ಲಿನ ಅಸಮಾನತೆಯನ್ನು ವಚನಗಳ ಮೂಲಕ ತೊಡೆದು ಹಾಕಲು ಅಂಬಿಗರ ಚೌಡಯ್ಯ ಪ್ರಯತ್ನ ನಡೆಸಿದ್ದರು ಎಂದು ಚಿಂತಕ ಕುಮಾರಸ್ವಾಮಿ ಅಭಿಪ್ರಾಯಪಟ್ಟರು.

    ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಿಜಶರಣ ಶ್ರೀ ಅಂಬಿಗರ ಚೌಡಯ್ಯ ಜಯಂತ್ಯುತ್ಸವ ಸಮಿತಿ ವತಿಯಿಂದ ನಗರದ ಕಲಾಮಂದಿರದಲ್ಲಿ ಮಂಗಳವಾರ ಹಮ್ಮಿಕೊಂಡ ‘ನಿಜ ಶರಣ ಶ್ರೀಅಂಬಿಗರ ಚೌಡಯ್ಯ ಜಯಂತಿ’ ಕಾರ್ಯಕ್ರಮದಲ್ಲಿ ಮಾತನಾಡಿ ದರು.
    ಜಾತಿ, ವರ್ಣಾಶ್ರಮ ವ್ಯವಸ್ಥೆಯನ್ನು ಅವರು ಕಟುವಾಗಿ ಟೀಕಿಸಿದರು. ಮೇಲು, ಕೀಳು ಎಂಬ ಭಾವನೆಯನ್ನು ಸರಿಪಡಿಸಲು ಸಾಕಷ್ಟು ಶ್ರಮಿಸಿದರು. ಇದರೊಂದಿಗೆ ಮೂಢನಂಬಿಕೆ ವಿರುದ್ಧ ಕೂಡ ಅವರು ಜಾಗೃತಿ ಮೂಡಿಸಿದ್ದರು ಎಂದರು.

    ಕಂಡದ್ದನ್ನು ಕಂಡ ಹಾಗೆ ಹೇಳುವುದು ಅಂಬಿಗರ ಚೌಡಯ್ಯ ಅವರ ವಿಶೇಷವಾಗಿದೆ. ಸಮಾಜದಲ್ಲಿ ಆಗುತ್ತಿದ್ದ ಅನ್ಯಾಯವನ್ನು ತೆರೆದಿಡುವಲ್ಲಿ ಅವರು ಹಿಂದೆ ಮುಂದೆ ನೋಡುತ್ತಿರಲಿಲ್ಲ. ಈ ಕಾರಣಕ್ಕೆ ಅವರನ್ನು ಒರಟು ವಚನಕಾರ ಎಂದು ಸಹ ಕರೆಯಲಾಗುತ್ತದೆ. ಅವರ ವಚನಗಳಲ್ಲಿ ಸಮಾಜದ ಕಟುವಿಮರ್ಶೆಯನ್ನು ಕಾಣಬಹುದು ಎಂದರು.

    ಪ್ರತಿಯೊಬ್ಬರು ಶಿಕ್ಷಣ ಪಡೆದು ಜ್ಞಾನಸಂಪಾದಿಸಿ ಸಮಾಜದಲ್ಲಿ ಮುಂದೆ ಬರಬೇಕೆಂಬುದು ಅಂಬಿಗರ ಚೌಡಯ್ಯ ಅವರ ಆಶಯವಾಗಿತ್ತು. ಹೀಗಾಗಿ ಪ್ರತಿಯೊಂದು ಸಮುದಾಯದ ಪಾಲಕರು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಶಿಕ್ಷಣವನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬಾರದು ಎಂದು ಹೇಳಿದರು.

    12ನೇ ಶತಮಾನದಲ್ಲಿ ಸಮಾಜ ಪರಿವರ್ತನೆಗೆ ಬಸವಣ್ಣ ಮುನ್ನುಡಿ ಬರೆದರು. ಅವರೊಂದಿಗೆ ಅಂಬಿಗರ ಚೌಡಯ್ಯ ಸೇರಿದಂತೆ 350ಕ್ಕೂ ಹೆಚ್ಚು ವಚನಕಾರರು ಸೇರಿಕೊಂಡರು. ಅನುಭವ ಮಂಟಪದಲ್ಲಿ ತಮ್ಮ ಅನುಭವಗಳನ್ನು ತೆರೆದಿಡುತ್ತಿದ್ದರು. ಒಂದು ವಿಶ್ವ ವಿದ್ಯಾಲಯ ಮಾಡಬೇಕಾಗಿದ್ದ ಕೆಲಸವನ್ನು ಅನುಭವ ಮಂಟಪ ಮಾಡುತ್ತಿತ್ತು. ಅನುಭವ ಮಂಟಪ ಅಂಬಿಗರ ಚೌಡಯ್ಯ ಅವರಿಗೆ ಅತ್ಯಂತ ಪ್ರಿಯವಾದ ಸ್ಥಳವಾಗಿತ್ತು ಎಂದರು.

    ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚನ್ನಪ್ಪ ಮಾತನಾಡಿ, ವಚನಗಳ ಮೂಲಕ ಸಮಾಜ ಪರಿವರ್ತನೆಗೆ ಶ್ರಮಿಸಿದ ಅಂಬಿಗರ ಚೌಡಯ್ಯ ಅವರ ವಚನಗಳು ಇಂದಿಗೂ ಪ್ರಸ್ತುತವಾಗಿವೆ. ಅವರ ವಚನಗಳು ಜಡ್ಡುಗಟ್ಟಿದ ಸಮಾಜಕ್ಕೆ ಚಿಕಿತ್ಸೆ ರೂಪದಲ್ಲಿ ಇದೆ ಎಂದರು.

    ಉಪವಿಭಾಗಾಧಿಕಾರಿ ವೆಂಕಟರಾಜು ಕಾರ್ಯಕ್ರಮ ಉದ್ಘಾಟಿಸಿದರು. ನಗರ ಪಾಲಿಕೆ ಸದಸ್ಯರಾದ ಸತೀಶ್, ರಂಗಸ್ವಾಮಿ, ಮುಜರಾಯಿ ಇಲಾಖೆ ತಹಸೀಲ್ದಾರ್ ಯತಿರಾಜ್, ಸಮಾಜದ ಮುಖಂಡರಾದ ಶ್ರೀನಿವಾಸ್ ಇತರರಿದ್ದರು.

    ಬಹುತೇಕ ಅತಿಥಿಗಳು ಗೈರು: ಶಾಸಕ ಎಲ್. ನಾಗೇಂದ್ರ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಉದ್ಘಾಟಿಸಬೇಕಾಗಿತ್ತು. ಆದರೆ, ವಿ.ಸೋಮಣ್ಣ, ಎಲ್. ನಾಗೇಂದ್ರ ಇಬ್ಬರೂ ಗೈರುಹಾಜರಾಗಿದ್ದರು. ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು ಸಾಮೂಹಿಕವಾಗಿ ಗೈರು ಹಾಜರಾದರು. ಪಾಲಿಕೆ ಸದಸ್ಯರು ಹಾಗೂ ಅಧಿಕಾರಿಗಳು ಮಾತ್ರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts