ಏಷ್ಯನ್​ ಗೇಮ್ಸ್​ ಬೆಳ್ಳಿ ಪದಕ ವಿಜೇತ, ಅರ್ಜುನ ಪ್ರಶಸ್ತಿ ಪುರಸ್ಕೃತನ ಕಣ್ಣೀರ ಕತೆ

ನವದೆಹಲಿ: ಮೂವತ್ತರ ಹರೆಯದ ಹರಿಯಾಣ ಬಾಕ್ಸರ್​ ಹಾಗೂ 2010ರ ಏಷ್ಯನ್​ ಗೇಮ್ಸ್​ನ ಬೆಳ್ಳಿ ಪದಕ ವಿಜೇತ, ಅರ್ಜುನ ಪ್ರಶಸ್ತಿ ಪುರಸ್ಕೃತ ದಿನೇಶ್​ ಕುಮಾರ್​ ತಮ್ಮ ಜೀವನಾಂಶಕ್ಕಾಗಿ ಹರಿಯಾಣದ ಬೀದಿ ಬೀದಿಯಲ್ಲಿ ಕುಲ್ಫಿ ಮಾರಾಟ ಮಾಡುತ್ತಿರುವುದು ನಮ್ಮ ರಾಷ್ಟ್ರದ ದುರಾಡಳಿತಕ್ಕೆ ಹಿಡಿದ ಕನ್ನಡಿಯಾಗಿದೆ.

‘ದಿನೇಶ್​ ಕುಲ್ಫಿ’ ಎಂದು ದಪ್ಪ ಅಕ್ಷರಗಳಲ್ಲಿ ಬರೆದಿರುವ ಗಾಡಿಯನ್ನು ನೂಕುತ್ತಾ ಕುಲ್ಫಿ ಐಸ್​ ಕ್ರೀಮ್​ ಮಾರುತ್ತಿರುವ ಮಾಜಿ ಆಟಗಾರನ ಸ್ಥಿತಿ ಕಂಡು ಮರುಗುವವರ ಸಂಖ್ಯೆ ಕಡಿಮೆಯಿಲ್ಲ. ಭವಿಷ್ಯದ ಅಂತಾರಾಷ್ಟ್ರೀಯ ಬಾಕ್ಸಿಂಗ್​ ಸ್ಟಾರ್ ಆಗುತ್ತಾನೆಂದು ಜನರಿಂದ ಗುರುತಿಸಲ್ಪಟ್ಟಿದ್ದ ದಿನೇಶ್ ಅವರ​ ಕನಸು 2014ರಲ್ಲಿ ನಡೆದ ರಸ್ತೆ ಅಪಘಾದಲ್ಲಿ ಛಿದ್ರವಾಯಿತು.

ಇತ್ತ ಮಗನನ್ನು ಅಂತಾರಾಷ್ಟ್ರೀಯ ಮಟ್ಟದ ಸ್ಫರ್ಧೆಗೆ ಕಳುಹಿಸಲು ಸಾಕಷ್ಟು ಸಾಲ ಮಾಡಿದ್ದ ತಂದೆ, ಮಗನಿಗೆ ಅಪಘಾತವಾಗಿದ್ದ ಸಂದರ್ಭದಲ್ಲೂ ಕೂಡ ಮತ್ತೆ ಸಾಲಮಾಡುವಂತಾಯಿತು. ವಿಧಿಯಾಟ ಹೀಗಿರುವಾಗ ಬ್ಯಾಗ್​ ತುಂಬ ಪದಕಗಳನ್ನೇ ತುಂಬಿಕೊಂಡಿದ್ದ ದಿನೇಶ್ ಸಾಲ ತೀರಿಸಲು ಇಷ್ಟವಿಲ್ಲದಿದ್ದರೂ​ ಬಲವಂತವಾಗಿ ಕುಲ್ಫಿ ಮಾರಾಟಕ್ಕೆ ಇಳಿಯಬೇಕಾಯಿತು.

ನನಗೊಂದು ಸರ್ಕಾರಿ ಕೆಲಸ ನೀಡಿ
ನಾನು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯಾ ಮಟ್ಟದಲ್ಲಿ ಸ್ಪರ್ಧಿಸಿದ್ದೇನೆ. 7 ಚಿನ್ನದ ಪದಕ, ಒಂದು ಬೆಳ್ಳಿ ಹಾಗೂ ಐದು ಕಂಚಿನ ಪದಕವನ್ನು ಗೆದಿದ್ದೇನೆ. ನನ್ನನ್ನು ಸ್ಪರ್ಧೆಗೆ ಕಳುಹಿಸಲು ನನ್ನ ತಂದೆ ಸಾಲ ಮಾಡಿದ್ದಾರೆ. ಸದ್ಯ ನಾನು ಸಾಲವನ್ನು ತೀರಿಸಬೇಕಾಗಿದೆ. ಹೀಗಾಗಿ ನಾನು ನನ್ನ ತಂದೆ ಜತೆ ಸೇರಿ ಐಸ್​ ಕ್ರೀಮ್​ ಮಾರುತ್ತಿದ್ದೇನೆ. ಈ ಹಿಂದಿನ ಸರ್ಕಾರ ಹಾಗೂ ಈಗಿನ ಸರ್ಕಾರವಾಗಲಿ ನನಗೆ ಯಾವುದೇ ನೆರವು ನೀಡಲಿಲ್ಲ. ನನಗೆ ಸಾಲ ತೀರಿಸಲು ಸಹಾಯ ಮಾಡಿ, ನಾನೊಬ್ಬ ಒಳ್ಳೆಯ ಆಟಗಾರ. ನನಗೊಂದು ಸರ್ಕಾರಿ ಕೆಲಸ ನೀಡಿ, ಸರ್ಕಾರದ ಸಹಾಯದಿಂದ ಒಳ್ಳೆಯ ಯುವ ಆಟಗಾರರನ್ನು ಅಂತಾರಾಷ್ಟ್ರೀಯ ಸ್ಪರ್ಧೆಗಳಿಗೆ ನಾನು ತಯಾರು ಮಾಡುತ್ತೇನೆ ಎಂದು ದಿನೇಶ್​ ತಮ್ಮ ನೋವನ್ನು ತೋಡಿಕೊಂಡಿದ್ದಾರೆ. (ಏಜೆನ್ಸೀಸ್​)

https://twitter.com/ANI/status/1056582298257317888