ದ್ವೇಷ ಭಾಷಣ ನಿಯಂತ್ರಣಕ್ಕೆ ಪರ್ಯಾಯ ಮಾರ್ಗದ ಶೋಧ

ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಆದರೆ ಇದು ಎಲ್ಲೆ ಮೀರಿದರೆ ಅನಾಹುತ ಕಟ್ಟಿಟ್ಟ ಬುತ್ತಿ. ಒಂದೆರಡು ಉದಾಹರಣೆ ನೀಡಿದರೆ ನಿಮಗೆ ಮನದಟ್ಟಾದದೀತು. ಜಗತ್ತಿನಾದ್ಯಂತ ಪ್ರಕಟವಾದ ಅನೇಕ ವರದಿಗಳು 2018ನೇ ವರ್ಷವನ್ನು ‘ಆನ್​ಲೈನ್ ದ್ವೇಷದ ವರ್ಷ’ ಎಂಬುದಾಗಿ ಘೊಷಿಸಿವೆ. ಸಾಮಾಜಿಕ ಮಾಧ್ಯಮದ ದೈತ್ಯ ಫೇಸ್​ಬುಕ್ ತನ್ನ ‘ಪಾರದರ್ಶಕ ವರದಿ’ಯಲ್ಲಿ ಬಹಿರಂಗಪಡಿಸಿರುವ ಅಂಕಿ-ಅಂಶ ಆಘಾತಕಾರಿಯಾದುದು. ಸುಮಾರು 30 ಲಕ್ಷ ದ್ವೇಷಮಯ ಪೋಸ್ಟ್​ಗಳನ್ನು ಫೇಸ್​ಬುಕ್ ವೇದಿಕೆಯಿಂದ ತೆಗೆದುಹಾಕಲಾಗಿದೆ. ತನ್ನ ತಾಣದಲ್ಲಿ ವಿಡಿಯೋಗಳನ್ನು ಉಚಿತವಾಗಿ ಹಂಚಲು ಅವಕಾಶ ನೀಡಿರುವ ಯೂ ಟ್ಯೂಬ್, ಒಂದೇ ತಿಂಗಳಲ್ಲಿ 25,000 ವಿಡಿಯೋಗಳನ್ನು ತೆಗೆದಿದೆ.

ಈ ಅಂಕಿ-ಅಂಶಗಳು ಸಾಗರದಲ್ಲಿನ ಒಂದು ಹನಿಯಷ್ಟೇ. ಅಲ್ಲದೆ, ಪರಿಸ್ಥಿತಿ ಕೈಮೀರುತ್ತಿದೆ ಎನ್ನುವುದರ ಸೂಚನೆಯೂ ಆಗಿದೆ. ದ್ವೇಷಭಾಷಣವು ಉಗ್ರ ಸ್ವರೂಪಕ್ಕೆ ತಿರುಗುತ್ತಿದ್ದು ಅದು ಹೇಗೆ ದ್ವೇಷಾಪರಾಧಗಳಿಗೆ ಪ್ರಚೋದನೆ ನೀಡುತ್ತಿದೆ ಎನ್ನುವುದಕ್ಕೆ ಭಾರತದಲ್ಲಿನ ಇತ್ತೀಚಿನ ಕೋಮು ಗಲಭೆಗಳು, ಧಾರ್ವಿುಕ ಗುಂಪುಗಳ ನಡುವಿನ ಹಿಂಸಾತ್ಮಕ ಘರ್ಷಣೆಗಳು ಸಾಕ್ಷಿಯಾಗಿ ನಿಲ್ಲುತ್ತವೆ. ಇವೆಲ್ಲವೂ ವಿಭಜನಕಾರಿ ಗುಂಪುಗಳ ಪ್ರಚೋದನಕಾರಿ ಭಾಷಣಗಳ ಫಲಿತವಾಗಿವೆ. ಇತ್ತೀಚಿನ ದಿನಗಳಲ್ಲಿ ಅನೇಕ ಘೊರ ಕೊಲೆಗಳು ವರದಿಯಾಗಿದ್ದು, ಈ ಘಟನೆಗಳು ಇನ್ನೊಂದು ಗುಂಪು ಅಥವಾ ಸಮುದಾಯದ ವಿರುದ್ಧದ ‘ದ್ವೇಷ’ವು ಗುಂಪು ಹತ್ಯೆಯ ವಿಕೃತ ಸ್ವರೂಪವನ್ನು ಪಡೆದಿರುವಂಥದ್ದಾಗಿದೆ.

ದ್ವೇಷಭಾಷಣದ ಅರ್ಥವು ಸಮಕಾಲೀನ ಸಂದರ್ಭದಲ್ಲಿ ಕೇವಲ ಆಕ್ರಮಣಕಾರಿ ಭಾಷಣ ಎಂಬುದನ್ನು ಮೀರಿಹೋಗಿದೆ. ಅದೀಗ ಅಪಮಾನಗೊಳಿಸುವ, ಅಸಹ್ಯಕರ, ಪಕ್ಷಪಾತದ, ಪ್ರಚೋದನಕಾರಿ; ಅಷ್ಟೇ ಅಲ್ಲದೆ ಹಿಂಸೆಯನ್ನು ಪ್ರಚೋದಿಸುವ ಮತ್ತು ಉತ್ತೇಜಿಸುವ ಅಥವಾ ಹಿಂಸಾತ್ಮಕ ಘಟನೆಗಳಿಗೆ ಕಾರಣವಾಗುವ ಭಾಷಣ ಎಂಬಂಥ ಅರ್ಥಗಳನ್ನೂ ಪಡೆದುಕೊಂಡಿದೆ. ಅದು ಸಮಾಜದ ಸೌಹಾರ್ದ ಮತ್ತು ಶಾಂತಿಯನ್ನು ಕದಡಲೂ ಕಾರಣವಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ, ದ್ವೇಷಭಾಷಣವು ಹಗೆತನದ ಅಪರಾಧದ ಪೀಡಿತರಿಗೆ ನೇರವಾಗಿ ದೈಹಿಕ ಮತ್ತು ಮಾನಸಿಕ ಹಾನಿ ಮಾಡುತ್ತದೆ ಮತ್ತು ಅಂಥ ಜನರ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ತೀವ್ರತರಹದ ಪರಿಣಾಮ ಬೀರುತ್ತದೆ. ಆ ಸಂತ್ರಸ್ತರು ಪ್ರಜಾಸತ್ತಾತ್ಮಕ ಕ್ರಿಯೆ ಮತ್ತು ಸಾರ್ವಜನಿಕ ಚಟುವಟಿಕೆಗಳಿಂದ ಹೊರಗುಳಿಯುವಂತಾಗುತ್ತದೆ.

ದ್ವೇಷಭಾಷಣದ ವ್ಯಾಖ್ಯೆ: ಕುಲ, ಜನಾಂಗ, ಧರ್ಮ ಅಥವಾ ವರ್ಗ- ಇವುಗಳು ಜಗತ್ತಿನ ವಿವಿಧ ದೇಶಗಳಲ್ಲಿ ದ್ವೇಷ ಭಾಷಣಕ್ಕೆ ಕಾರಣವಾಗುವ ಸಾಮಾನ್ಯ ಅಂಶಗಳಾಗಿವೆ. ಇಂಥ ವೈವಿಧ್ಯತೆ ಹೊಂದಿರುವ ಭಾರತದಲ್ಲಿ ವಿಶೇಷವಾಗಿ ದ್ವೇಷಭಾಷಣದ ನಿಯಂತ್ರಣ ಆಗಬೇಕಾಗಿದೆ. ಮೌಖಿಕ ಅಥವಾ ಲಿಖಿತ ಪದಗಳು, ಅಥವಾ ಸನ್ನೆಗಳು ಅಥವಾ ಯಾವುದೇ ರೀತಿಯ ಚಿತ್ರ-ದೃಶ್ಯಾವಳಿಯನ್ನು ಬಳಸುವುದು ‘ಮಾತು’ ಎಂದಾಗುತ್ತದೆ. ಇಂಥ ಮಾತುಗಳು ಧಾರ್ವಿುಕ, ಕುಲ, ಸಾಂಸ್ಕೃತಿಕ, ಜನಾಂಗೀಯ ಗುಂಪುಗಳಿಗೆ ಘಾಸಿ ಉಂಟು ಮಾಡಿದರೆ ಮತ್ತು ವೈವಿಧ್ಯಮಯ ಜನರ ನಡುವೆ ‘ದ್ವೇಷ’ ಹರಡಲು ಸಮರ್ಥವಾದರೆ ನಾವು ಅದನ್ನು ‘ದ್ವೇಷಭಾಷಣ’ ಎಂದು ವರ್ಗೀಕರಿಸುತ್ತೇವೆ.

ಕುಲ, ಧರ್ಮ, ಜನಾಂಗೀಯತೆ ಅಥವಾ ಸಂಸ್ಕೃತಿಯ ಆಧಾರದಲ್ಲಿ ದ್ವೇಷಭಾಷಣ ಮಾಡುವುದನ್ನು ಭಾರತ ನಿಷೇಧಿಸಿದೆ. ‘ದ್ವೇಷಭಾಷಣ’ ಎಂಬ ಪದ ಎಲ್ಲಿಯೂ ನಮೂದಾಗದಿರಬಹುದು. ಆದರೆ, ನಾನಾ ಕಾನೂನುಗಳು ಈ ರೀತಿಯ ಭಾಷಣಗಳನ್ನು ವಿವಿಧ ಬಗೆಯಲ್ಲಿ ಗುರುತಿಸಿವೆ. ‘ಅಸೌಹಾರ್ದತೆ, ಹಗೆತನ ಅಥವಾ ಕೆಟ್ಟ ಭಾವನೆ ಹರಡಲು ಕಾರಣವಾಗುವ’ ಅಥವಾ ಧರ್ಮ, ಜನಾಂಗೀಯತೆ, ಸಂಸ್ಕೃತಿ, ಭಾಷೆ, ಧರ್ಮ, ಜಾತಿ, ಸಮುದಾಯ, ಕುಲ ಇತ್ಯಾದಿಗಳ ಭಾವನೆಗಳನ್ನು ‘ಘಾಸಿಗೊಳಿಸುವ’ ಅಥವಾ ‘ಅವಮಾನಿಸುವ’ ಯಾವುದೇ ಮೌಖಿಕ ಅಥವಾ ಲಿಖಿತ ಪದ ಅಥವಾ ಸನ್ನೆಗಳು ಅಥವಾ ಯಾವುದೇ ಬಗೆಯ ಚಿತ್ರ-ದೃಶ್ಯಾವಳಿಗಳನ್ನು ಬಳಸುವುದು ಶಿಕ್ಷಾರ್ಹ ಅಪರಾಧ ಎಂದು ಭಾರತೀಯ ದಂಡ ಸಂಹಿತೆ (ಐಪಿಸಿ) ಘೊಷಿಸಿದೆ. ಅದಲ್ಲದೆ, ಜನತಾ ಪ್ರಾತಿನಿಧ್ಯ ಕಾನೂನು 1951, ಮಾಹಿತಿ ತಂತ್ರಜ್ಞಾನ ಕಾನೂನು 2000, 1967ರ ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾನೂನು ಮತ್ತಿತರ ಕಾನೂನು ಕಟ್ಟಲೆಗಳೂ ಇವೆ.

ಹೆಚ್ಚು ಸಮಯ ಬೇಡುವ ಪ್ರಕ್ರಿಯೆ: ಭಾರತೀಯ ಕ್ರಿಮಿನಲ್ ಕಾನೂನು ಪರಿಧಿಯೊಳಗೆ ದ್ವೇಷಭಾಷಣದ ಅಪರಾಧಗಳ ವಿಚಾರಣೆ ಸಮಯ-ಬೇಡುವ ನಿಯಮಾವಳಿಗಳನ್ನು ಒಳಗೊಂಡಿರುತ್ತವೆ. ಇಂಥ ವಿಚಾರಣೆಗೆ ಸರಕಾರದ ಅನುಮತಿ ಬೇಕಾಗುತ್ತದೆ ಎಂದು ಕ್ರಿಮಿನಲ್ ಪೊ›ಸೀಜರ್ ಕೋಡ್ (ಸಿಪಿಸಿ) ಹೇಳುತ್ತದೆ. ಇಂಥ ಅನುಮತಿಯ ಅವಶ್ಯಕತೆಯೇ ಶಿಕ್ಷೆ ನೀಡುವಲ್ಲಿ ಒಂದು ಆರಂಭಿಕ ಮಿತಿಯಾಗಿ ಪರಿಣಮಿಸುತ್ತದೆ. ಒಮ್ಮೆ ಪೊಲೀಸ್ ದೂರು ದಾಖಲಾಯಿತೆಂದರೆ ಪೂರ್ಣ ಪ್ರಮಾಣದ ವಿಚಾರಣೆ ನಡೆಸಿದ ನಂತರವಷ್ಟೇ ನ್ಯಾಯಾಲಯ ತೀರ್ಪು ನೀಡಬಹುದಾಗಿದೆ. ದ್ವೇಷ, ಹಗೆತನ ಹರಡುವ ಅಥವಾ ಯಾವುದೇ ಗುಂಪು ಅಥವಾ ಜನವಿಭಾಗಗಳಿಗೆ ಹಾನಿಯುಂಟು ಮಾಡುವ ಉದ್ದೇಶದಿಂದಲೇ ಕೃತ್ಯ ಎಸಗಲಾಗಿದೆ ಎಂಬುದನ್ನು ವಿಚಾರಣೆ ವೇಳೆ ಸಾಬೀತುಪಡಿಸುವ ದೊಡ್ಡ ಹೊರೆ ದೂರುದಾರರ ಮೇಲೆ ಇರುತ್ತದೆ. ಈ ಇಡೀ ಪ್ರಕ್ರಿಯೆ ತುಂಬಾ ಸಮಯ ಬೇಡುವಂಥದ್ದಾಗಿದೆ ಹಾಗೂ ಪ್ರಕರಣ ಇತ್ಯರ್ಥವಾಗಲು ವರ್ಷಗಟ್ಟಲೆ ಕಾಲ ಬೇಕಾಗಬಹುದು. ಹೀಗಾಗಿ, ಸಂತ್ರಸ್ತರಿಗೆ ನ್ಯಾಯ ಕನಸಿನ ಮಾತೇ ಸರಿ.

ದ್ವೇಷಭಾಷಣಗಳನ್ನೇ ನಿಲ್ಲಿಸುವುದು ಸಂಬಂಧಿಸಿದ ಕಾನೂನುಗಳ ಉದ್ದೇಶವಾದರೂ ಈ ವಿಚಾರದಲ್ಲಿ ಸೀಮಿತ ಯಶಸ್ಸನ್ನು ಮಾತ್ರ ಸಾಧಿಸಲಾಗಿದೆ.

ಭಾರತದಲ್ಲಿ ದ್ವೇಷಭಾಷಣವನ್ನು ಮಟ್ಟ ಹಾಕಲು ಕಾನೂನಿನ ಚೌಕಟ್ಟು ವಿವಿಧ ಮಾರ್ಗಗಳನ್ನು ಅನುಸರಿಸುತ್ತದೆ. ಮುಖ್ಯವಾಗಿ, ನಿರ್ದಿಷ್ಟ ಬಗೆಯ ದ್ವೇಷಭಾಷಣಗಳನ್ನು ಅಪರಾಧ ಎಂದು ಕಾನೂನು ಪರಿಗಣಿಸುತ್ತದೆ. ಇಂಥ ಅಪರಾಧಕ್ಕೆ ಕಾರಾಗೃಹವಾಸ ಮತ್ತು ದಂಡ ಅಥವಾ ದಂಡರಹಿತ ಜೈಲುವಾಸದ ಶಿಕ್ಷೆಯಿದೆ. ಈ ಹಲವು ನಿಯಮಾವಳಿಗಳು ಜಾಮೀನುರಹಿತವೂ ಆಗಿವೆ. ಇದರ ಒಟ್ಟು ಪರಿಣಾಮವೇನೆಂದರೆ ಇದು ಕಾನೂನಿನ ನಿಯಮಾವಳಿಗಳನ್ನು ಗಂಭೀರ ಪರಿಣಾಮಗಳೊಂದಿಗೆ ಕಟ್ಟುನಿಟ್ಟುಗೊಳಿಸುತ್ತದೆ. ಇಷ್ಟು ಮಾತ್ರವಲ್ಲದೆ ಮುದ್ರಣ, ಟೆಲಿವಿಷನ್ ಅಥವಾ ಇಂಟರ್​ನೆಟ್​ನಂಥ ಪ್ರಚಾರ ಮಾಧ್ಯಮಗಳ ಮೂಲಕ ದ್ವೇಷಮಯ ಅಂಶಗಳನ್ನು ಹರಡುವುದನ್ನು ನಿಷೇಧಿಸಲಾಗಿದೆ. ಇದನ್ನು ಉಲ್ಲಂಘಿಸಿದರೆ ಅಂಥ ತಾಣಗಳನ್ನು ಮುಚ್ಚಬೇಕಾಗುತ್ತದೆ. ಮುದ್ರಣ ಮಾಧ್ಯಮಕ್ಕೆ ಸಂಬಂಧಿಸಿ ಹೇಳುವುದಾದರೆ, ಪ್ರಶ್ನಿತ ಆಕ್ಷೇಪಾರ್ಹ ವಸ್ತುಗಳನ್ನು ಸಿಪಿಸಿ ನಿಯಮಗಳನ್ವಯ ಮುಟ್ಟುಗೋಲು ಹಾಕಿಕೊಳ್ಳಬಹುದಾಗಿದೆ. ಈ ರೀತಿಯಾಗಿ ಕಾನೂನು ಮತ್ತು ನೀತಿಗಳ ವ್ಯಾಪಕ ಚೌಕಟ್ಟು ಇದ್ದಾಗ್ಯೂ ದ್ವೇಷಭಾಷಣ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಇದರರ್ಥ, ಕಾನೂನು ದುರ್ಬಲವಾಗಿದೆ ಎಂದಲ್ಲ; ಆದರೆ ಜಾರಿ ಸರಿಯಾಗಿ ಆಗುತ್ತಿಲ್ಲ. ಅನುಷ್ಠಾನದ ಸವಾಲು: ಕಾನೂನುಗಳ ಪರಿಣಾಮಕಾರಿ ಹಾಗೂ ನ್ಯಾಯಸಮ್ಮತ ಅನುಷ್ಠಾನ ದೊಡ್ಡ ಸವಾಲು. ಅದೇ ಹೊತ್ತಿಗೆ, ಕಾನೂನಿನ ಚೌಕಟ್ಟೊಂದೇ ಸಾಕೇ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಾಗಿದೆ.

ನಮ್ಮ ಪ್ರಸ್ತುತ ಕಾನೂನು ಚೌಕಟ್ಟು ಸೀಮಿತ ಪರಿಧಿಯಲ್ಲಿ ಕೆಲಸ ಮಾಡುತ್ತದೆ. ದ್ವೇಷಭಾಷಣವು ಸಮಾಜಕ್ಕೆ ಮಾಡುವ ಹಾನಿಯನ್ನು ಸರಿಪಡಿಸಲು ಅವಕಾಶವಿಲ್ಲ; ಪೀಡಿತರ ಪುನರ್​ವಸತಿ ಅಥವಾ ಪರಿಹಾರಕ್ಕೆ ಅವಕಾಶವಿಲ್ಲ. ಆದ್ದರಿಂದ, ದ್ವೇಷಭಾಷಣಕ್ಕೆ ಪರಿಣಾಮಕಾರಿ ಉತ್ತರ ಹುಡುಕಲು ಕ್ರಿಮಿನಲ್ ಕಾನೂನಿನ ಪರಿಧಿಯಾಚೆಗೆ ನೋಡಬೇಕಿದೆ.

ಕ್ರಿಮಿನಲ್ ವಿಚಾರಗಳಲ್ಲಿ ವಿವಾದಗಳ ಪರಿಹಾರಕ್ಕೆ ಜಗತ್ತಿನಾದ್ಯಂತ ಕೆಲವು ಆಯ್ದ ನ್ಯಾಯಕ್ಷೇತ್ರದ ವ್ಯಾಪ್ತಿಯಲ್ಲಿ ‘ಸಂತ್ರಸ್ತರು-ಅಪರಾಧಿಗಳ ಮಧ್ಯಸ್ಥಿಕೆ, ಸಂತ್ರಸ್ತರು-ಅಪರಾಧಿಗಳ ವೇದಿಕೆ, ಸಂತ್ರಸ್ತರ ಸಹಾಯ ಕಾರ್ಯಕ್ರಮ, ಸಾಮುದಾಯಿಕ ಅಪರಾಧ ತಡೆ ಕಾರ್ಯಕ್ರಮಗಳು, ಸಮುದಾಯ ಸೇವೆ, ಮನವಿ ಚೌಕಾಸಿ’ ಮೊದಲಾದ ವಿವಿಧ ಪರ್ಯಾಯ ಮಾರ್ಗಗಳನ್ನು ಅನುಸರಿಸಲಾಗುತ್ತಿದೆ. ಮೊದಲನೆಯದಾಗಿ, ಸಂತ್ರಸ್ತ-ಅಪರಾಧಿ ಸಂಧಾನಕ್ಕೆ ಮತ್ತು ಸಂತ್ರಸ್ತರಿಗೆ ನೋವು ಶಮನಗೊಳಿಸುವ ಹಾಗೂ ಅಪರಾಧ ಕೃತ್ಯ ಎಸಗಿದವರಿಗೆ ಪ್ರಾಯಶ್ಚಿತ್ತಕ್ಕೆ ಅವಕಾಶ ನೀಡುವ ನ್ಯಾಯದ ಆದರ್ಶವನ್ನು ಅದು ಪೂರ್ಣಗೊಳಿಸುತ್ತದೆ. ಎರಡನೆಯದಾಗಿ, ಗುರಿ ಸಾಧಿಸುವ ದಿಸೆಯಲ್ಲಿ ಅಗತ್ಯಕ್ಕೆ ತಕ್ಕಂತೆ ಹೊಂದಿಕೊಳ್ಳುವ ಸಾಮರ್ಥ್ಯ ಈ ಪರ್ಯಾಯ ವ್ಯವಸ್ಥೆಗಿದೆ; ಅಷ್ಟಾಗಿಯೂ ಅದು ಕಾನೂನು ನಿಯಮ ಹಾಗೂ ಸ್ವರೂಪದ ಒಳಗಡೆಯೇ ಕಾರ್ಯನಿರ್ವಹಿಸುತ್ತದೆ. ಮೂರನೆಯದಾಗಿ, ಮಾಮೂಲಿ ನ್ಯಾಯ ಪ್ರಕ್ರಿಯೆಯ ವೆಚ್ಚಕ್ಕೆ ಹೋಲಿಸಿದರೆ ವೆಚ್ಚ ಗಣನೀಯವಾಗಿ ಕಡಿಮೆಯಾಗಿರುತ್ತದೆ. ನಾಲ್ಕನೆಯದಾಗಿ, ಸಮಯವ್ಯಯಿಸದೆ ಇತ್ಯರ್ಥಕ್ಕೆ ಬರಲು ಉಭಯ ಪಕ್ಷಗಳಿಗೆ ಅನುಕೂಲಕರ ನಿಯಮಾವಳಿ ನೆರವಾಗುತ್ತದೆ.

ಆದರೂ, ಕ್ರಿಮಿನಲ್ ವಿಚಾರಗಳ ಪರಿಹಾರದಲ್ಲಿ ಪರ್ಯಾಯ ಮಾರ್ಗಗಳನ್ನು ಅನುಸರಿಸುವಲ್ಲಿ ತಡೆ ಇದ್ದೇ ಇದೆ. ಎಲ್ಲಾ ಅಪರಾಧಗಳಿಗೆ ಈ ಧೋರಣೆಯನ್ನು ಅನುಸರಿಸಲಾಗುವುದಿಲ್ಲ. ಗಂಭೀರ, ಅತಿ ಗಂಭೀರ ಅಥವಾ ಹೇಯ ಅಪರಾಧಗಳ ವಿಚಾರದಲ್ಲಿ ಇದು ಪರಿಣಾಮಕಾರಿಯೇ ಎನ್ನುವುದನ್ನು ಪರೀಕ್ಷಿಸಬೇಕಾಗಿದೆ. ಭಾರತದಲ್ಲಿ ಈ ವಿಚಾರದಲ್ಲಿ ತುಂಬಾ ಆತಂಕವಿದೆ ಹಾಗೂ ಯಶಸ್ಸಿನ ಪ್ರಮಾಣದಲ್ಲಿ ಏರುಪೇರಿದೆ. ಆದರೆ ಜಾಗತಿಕವಾಗಿ ಪರ್ಯಾಯ ಮಾರ್ಗದತ್ತ ಒಲವು ತೋರುವುದು ಹೆಚ್ಚುತ್ತಿದ್ದು ನ್ಯಾಯಾಲಯವನ್ನು ಅಂತಿಮ ಮಾರ್ಗ ಎಂದು ಭಾವಿಸಲಾಗುತ್ತಿದೆ.

ದ್ವೇಷಭಾಷಣದ ಪ್ರಕರಣದಲ್ಲಿ ಇತ್ಯರ್ಥಕ್ಕಾಗಿ ಪರ್ಯಾಯ ಮಾರ್ಗ ಅವಲಂಬಿಸಿದರೆ ಮಾಮೂಲಿ ನ್ಯಾಯ ವ್ಯವಸ್ಥೆಯ ಕಠಿಣ ನಿಯಮಗಳ ಚೌಕಟ್ಟಿನಿಂದ ಹೊರಗಡೆ ಚರ್ಚೆ ಮತ್ತು ಸಂಭವನೀಯ ಇತ್ಯರ್ಥಕ್ಕೆ ಉಭಯ ಪಕ್ಷಗಳಿಗೆ ಅವಕಾಶ ಸಿಗುತ್ತದೆ. ಅದೇ ವೇಳೆಗೆ, ಭಾರತದಲ್ಲಿ ಹಾಲಿಯಿರುವ ವ್ಯವಸ್ಥೆಯೊಳಗೆ ಕೆಲಸ ಮಾಡುವಂತಾಗಲು ಇಂಥ ಧೋರಣೆಯನ್ನು ಸೂಕ್ತವಾಗಿ ಮಾರ್ಪಾಡು ಮಾಡಬೇಕು. ಪಕ್ಷಗಳ ನಡುವೆ ಮಧ್ಯಸ್ಥಿಕೆ ಅಥವಾ ಸಂಧಾನಕ್ಕೆ ಕೋರ್ಟ್ ಆದೇಶ ನೀಡುವ ಮೂಲಕ ಇದನ್ನು ಆರಂಭಿಸಬಹುದು. ನ್ಯಾಯಾಲಯಗಳ ಮೇಲಿನ ಹೊರೆ ಕಡಿಮೆಯಾಗಲು ಮತ್ತು ತುಲನಾತ್ಮಕವಾಗಿ ಶೀಘ್ರ ನಿರ್ಧಾರಕ್ಕೆ ಬರಲೂ ಇದರಿಂದ ಸಹಾಯವಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ, ಅಪರಾಧಗಳಿಗೆ ನಿಗದಿಪಡಿಸಿರುವ ಶಿಕ್ಷೆ ಮತ್ತು ದಂಡದ ಬಗ್ಗೆಯೂ ಮರುಪರಿಶೀಲನೆ ಮಾಡಬೇಕಾಗಿದೆ.

(ಲೇಖಕರು ಖ್ಯಾತ ಹಿರಿಯ ನ್ಯಾಯವಾದಿ, ಮಾಜಿ ಹೆಚ್ಚುವರಿ ಅಡ್ವೊಕೇಟ್ ಜನರಲ್)

Leave a Reply

Your email address will not be published. Required fields are marked *