ಅಭಿನಂದನ್​ ಮರಳಿ ಭಾರತಕ್ಕೆ ಆಗಮಿಸಿದ ಸನ್ನಿವೇಶವನ್ನು ಹಿಡಿದಿಟ್ಟ ಅಮುಲ್​ ಕಾರ್ಟೂನ್​

ನವದೆಹಲಿ: ಪಾಕಿಸ್ತಾನದಲ್ಲಿ ಬಂಧಿತರಾಗಿದ್ದ ವಿಂಗ್​ ಕಮಾಂಡರ್​ ಅಭಿನಂದನ್​ ವರ್ಧಮಾನ್​ ಸ್ವದೇಶಕ್ಕೆ ಮರಳುತ್ತಿದ್ದಂತೆ ದೇಶದಲ್ಲೆಡೆ ಸಂಭ್ರಮ ಮನೆ ಮಾಡಿದೆ. ಹಾಗೇ ಅಮುಲ್​ ಸಹ ತನ್ನ ಮುದ್ದಾದ ಕಾರ್ಟೂನ್​ ಮೂಲಕ ಅಭಿನಂದನ್​ಗೆ ಸ್ವಾಗತ ಕೋರಿದ್ದು, ಅವರು ಗಡಿದಾಟಿ ಬಂದ ಸಂದರ್ಭವನ್ನು ಈ ಚಿತ್ರದ ಮೂಲಕ ಹಿಡಿದಿಟ್ಟಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟೆ ವೈರಲ್​ ಆಗಿದೆ.

ಅಭಿನಂದನ್​ ಆದಷ್ಟು ಬೇಗ ತಾಯ್ನೆಲಕ್ಕೆ ಆಗಮಿಸಲಿ ಎಂದು ಇಡೀ ದೇಶ ಕಾಯುತ್ತಿತ್ತು. ದೇಶದ ಜನರ ಭಾವನೆಗೆ ಪ್ರತಿಧ್ವನಿಯಾಗಿ ಈ ಕಾರ್ಟೂನ್​ ಚಿತ್ರಿಸಲಾಗಿದೆ.

ಪಾಕ್​ ಗಡಿ ದಾಟಿ ಬಂದ ವೀರ ಯೋಧ, ವಿಂಗ್​ ಕಮಾಂಡರ್​ ಅಭಿನಂದನ್​ ಅವರಿಗೆ ಹೂವಿನ ಹಾರ ಹಾಕಲಾಗಿದೆ. ಅಮುಲ್​ ಸಿಹಿ ತಿಂಡಿ ತಿನ್ನಿಸುತ್ತಿರುವಂತೆ ಹಾಗೇ ಅಮುಲ್​ ಬೇಬಿ ಕೈಯಲ್ಲಿ ಪೂಜಾ ತಟ್ಟೆ ಹಿಡಿದಿರುವಂತೆ ಕಾರ್ಟೂನ್​ ಚಿತ್ರಿಸಲಾಗಿದೆ. ಅಂದರೆ ಗೆದ್ದು ಬಂದ ಅಭಿನಂದನ್​ಗೆ ಆರತಿ ಎತ್ತಿದಂತೆ ಎಂಬ  ಸಂದೇಶವಿದ್ದು ಕೋಟ್ಯಂತರ ಜನರ ಭಾವನೆಯನ್ನು ಇದು ಹಿಡಿದಿಟ್ಟಿದೆ. ಹಾಗೇ ಈ ಚಿತ್ರದೊಂದಿಗೆ ಸಹೋದರನೇ ನಮ್ಮ ಬಳಿಗೆ ಬಾ (Aa bhi jao humare pass…) ಎಂದು ಟ್ಯಾಗ್​ ಲೈನ್​ ನೀಡಲಾಗಿದೆ.

ಈ ಚಿತ್ರವನ್ನು ಅಮುಲ್​ ಟ್ವಿಟರ್​ನಲ್ಲಿ ಅಪ್​ಲೋಡ್ ಮಾಡುತ್ತಿದ್ದಂತೆ ಲಕ್ಷಾಂತರ ಜನರ ಗಮನ ಸೆಳೆದಿದ್ದು, ಸಿಕ್ಕಾಪಟೆ ಶೇರ್​ ಆಗಿದೆ.