ಹುಬ್ಬಳ್ಳಿ: ಕಲ್ಯಾಣ ಕರ್ನಾಟಕದ ಕಲಬುರಗಿಯಲ್ಲಿ ಸ್ಥಾಪಿಸಲು ಉದ್ದೇಶಿಸಿದ್ದ ಪ್ರತಿಷ್ಠಿತ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಏಮ್್ಸ)ಗೆ ಈಗ ಹುಬ್ಬಳ್ಳಿ- ಧಾರವಾಡದಲ್ಲಿ ಸ್ಥಳ ಗುರುತಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಮೂಲಕ ದೇಶದಲ್ಲಿಯೇ ಅತ್ಯಂತ ಪ್ರತಿಷ್ಠಿತವಾದ ವೈದ್ಯಕೀಯ ಕಾಲೇಜೊಂದು ಅವಳಿ ನಗರಕ್ಕೆ ಸ್ಥಳಾಂತರವಾಗುವ ಸಾಧ್ಯತೆ ಸ್ಪಷ್ಟವಾಗಿದ್ದು, ಈ ಭಾಗದ ಜನರಲ್ಲಿ ಸಂತಸಕ್ಕೆ ಕಾರಣವಾಗಿದೆ.
1400 ಕೋಟಿ ರೂ. ಅಂದಾಜು ವೆಚ್ಚದೊಂದಿಗೆ ವಿಶಾಲ ಪ್ರದೇಶದಲ್ಲಿ ಬೃಹದಾಕಾರವಾಗಿ ನಿರ್ವಣಗೊಂಡಿರುವ ಕಲಬುರಗಿ ಸೇಡಂ ರಸ್ತೆಯ ಸುಸಜ್ಜಿತ ಇಎಸ್ಐಸಿ ಆಸ್ಪತ್ರೆಯನ್ನು ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಎಐಐಎಂಎಸ್) ಆಗಿ ಮೇಲ್ದರ್ಜೆಗೇರಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಸಕ್ತಿ ತೋರಿದ್ದರು. ಆದರೀಗ ಹುಬ್ಬಳ್ಳಿ-ಧಾರವಾಡದಲ್ಲಿ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಲು ಸರ್ಕಾರ ಮುಂದಾಗಿದೆ ಎಂದು ತಿಳಿದುಬಂದಿದೆ. ಹುಬ್ಬಳ್ಳಿ-ಧಾರವಾಡದಲ್ಲಿ ಏಮ್ಸ್ಗೆ ಜಮೀನು ಗುರುತಿಸಿರುವ ಕುರಿತಂತೆ ಲೋಕಸಭೆಯಲ್ಲಿ ಸರ್ಕಾರ ಲಿಖಿತ ಉತ್ತರವನ್ನೂ ನೀಡಿದೆ ಎಂದು ಹೇಳಲಾಗಿದೆ. ಹುಬ್ಬಳ್ಳಿ- ಧಾರವಾಡದಲ್ಲಿ ಮೂರು ಸ್ಥಳಗಳ ಪರಿಶೀಲನೆ ನಡೆಸಲಾಗಿದ್ದು, ಒಂದನ್ನು ಅಂತಿಮಗೊಳಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ತಾರಿಹಾಳ, ಮುಮ್ಮಿಗಟ್ಟಿ, ತಡಸಿನಕೊಪ್ಪ ಪ್ರದೇಶದಲ್ಲಿ ದೆಹಲಿಯ ಏಮ್್ಸ ತಂಡ ಪರಿಶೀಲನೆ ನಡೆಸಿತ್ತು.
ಕೇಂದ್ರ ಯುಪಿಎ ಸರ್ಕಾರದ 2ನೇ ಅವಧಿಯಲ್ಲಿ ಸಚಿವರಾಗಿದ್ದ ಹಾಲಿ ರಾಜ್ಯಸಭೆ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಕಲಬುರಗಿಯ ಇಎಸ್ಐಸಿಯನ್ನು ಏಮ್್ಸ ಆಗಿ ಮೇಲ್ದರ್ಜೆಗೇರಿಸುವ ಕುರಿತು ಸರ್ಕಾರದ ಮುಂದೆ ಪ್ರಸ್ತಾವನೆ ಮಂಡಿಸಿದ್ದರು. ಏಮ್್ಸ ಸ್ಥಾಪನೆಗೆ ಕಲಬುರಗಿಯೇ ಪ್ರಶಸ್ತವಾಗಿದೆ ಎಂದು ಕೇಂದ್ರದ ಮೇಲೆ ಬಲವಾದ ಒತ್ತಡ ಹೇರಿದ್ದರು. ಕೇಂದ್ರ ಮಟ್ಟದಲ್ಲಿ ಇದಕ್ಕೆ ತಾತ್ವಿಕ ಸಮ್ಮತಿ ಸಿಕ್ಕಿತ್ತಾದರೂ ಯುಪಿಎ ಸರ್ಕಾರದಲ್ಲಿ ಕಾರಣಾಂತರಗಳಿಂದ ಈ ಪ್ರಸ್ತಾಪ ನನೆಗುದಿಗೆ ಬಿದ್ದಿತ್ತು.
ಮಹಾನಗರವೇ ಆಗಬೇಕು: ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ರಾಮನಗರದಲ್ಲಿ ಏಮ್್ಸ ಸ್ಥಾಪನೆಯಾಗಬೇಕು ಎಂದು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ವಿಕ್ಟೋರಿಯಾ, ಜಯದೇವ ಸೇರಿ ಪ್ರಸಿದ್ಧ ಸರ್ಕಾರಿ ಆಸ್ಪತ್ರೆಗಳು, ಖಾಸಗಿ ವೈದ್ಯಕೀಯ ಸಂಸ್ಥೆಗಳು ಇರುವ ಬೆಂಗಳೂರಿನ ಪಕ್ಕದಲ್ಲೇ ಇರುವ ರಾಮನಗರಕ್ಕೆ ಏಮ್್ಸ ಕೇಂದ್ರ ಕೇಳಿದ್ದು ಟೀಕೆಗೂ ಗುರಿಯಾಗಿತ್ತು. ಅದರ ಬದಲು ಹುಬ್ಬಳ್ಳಿ-ಧಾರವಾಡದಲ್ಲಿ ಸ್ಥಾಪನೆಯಾಗಲಿ ಎಂದು ಅನೇಕರು ಒತ್ತಾಯಿಸಿದ್ದರು. ಕೇಂದ್ರದ ನಿಯಮಾವಳಿಗಳ ಪ್ರಕಾರ ಮಹಾನಗರದ ವ್ಯಾಪ್ತಿಯಲ್ಲಿ ಮಾತ್ರ ಏಮ್್ಸ ಸ್ಥಾಪಿಸಬಹುದಾಗಿದ್ದು, ರಾಮನಗರವು ನಗರಸಭೆಯಾಗಿದ್ದರಿಂದ ಎಚ್ಡಿಕೆ ಯತ್ನ ಫಲಿಸಿರಲಿಲ್ಲ. ನಂತರದಲ್ಲಿ ಬಿಜೆಪಿ ಸರ್ಕಾರವು ಕಲಬುರಗಿ ಅಥವಾ ಹುಬ್ಬಳ್ಳಿ- ಧಾರವಾಡ ಸೂಕ್ತ ಎಂಬ ಅಭಿಪ್ರಾಯಕ್ಕೆ ಬಂದಿತ್ತು. ಕಲಬುರಗಿಯಲ್ಲಿ ಇಎಸ್ಐಸಿ ಆಸ್ಪತ್ರೆ ಇರುವುದರಿಂದ ಏಮ್್ಸ ಅನ್ನು ಹುಬ್ಬಳ್ಳಿ-ಧಾರವಾಡಕ್ಕೆ ತರುವ ಇಲ್ಲಿಯ ಜನಪ್ರತಿನಿಧಿಗಳ ಯತ್ನ ಫಲ ನೀಡುವ ಹಂತದಲ್ಲಿದೆ ಎಂದು ತಿಳಿದುಬಂದಿದೆ.
ನಮ್ಮಲ್ಲಿ ಭೂಮಿಯನ್ನು ಗುರುತಿಸಿಲ್ಲ. ಆದರೆ, ಏಮ್್ಸ ಸ್ಥಾಪನೆಗಾಗಿ ಒದಗಿಸಲು ಜಾಗ ಇದೆ ಎಂದು ತಿಳಿಸಿದ್ದೇವೆ.
| ಪ್ರಲ್ಹಾದ ಜೋಶಿ ಕೇಂದ್ರ ಸಚಿವ