Monday, 10th December 2018  

Vijayavani

ಆರ್​ಬಿಐ ಗವರ್ನರ್​ ಸ್ಥಾನಕ್ಕೆ ಊರ್ಜಿತ್​ ಪಟೇಲ್​ ರಾಜೀನಾಮೆ- ವಿಜಯ ಮಲ್ಯ ಗಡಿಪಾರಿಗೆ ಯುಕೆ ನ್ಯಾಯಾಲಯ ಆದೇಶ        ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ -ಮೊದಲ ದಿನ ಕಲಾಪದಲ್ಲಿ ಅಗಲಿದ ಗಣ್ಯರಿಗೆ ಸಂತಾಪ -ಮೈತ್ರಿ ಸರ್ಕಾರ ವಿರುದ್ಧ ಬಿಜೆಪಿ ಗುಡುಗು        ಸರ್ಕಾರದ ವಿರುದ್ದ ರೈತರ ಹೋರಾಟ -ದೀಡ್ ದಂಡ ನಮಸ್ಕಾರ, ಬಾರುಕೋಲು ಚಳುವಳಿ -ಪೀಪಿ ಊದಿ ನಾಯಕರನ್ನು ಎಚ್ಚರಿಸಿದ ರೈತರು        ಚಿಕ್ಕಬಳ್ಳಾಪುರದಲ್ಲಿ ಒತ್ತುವರಿ ಅರಣ್ಯ ಭೂಮಿ ತೆರವು -ಜೆಸಿಬಿ ಮುಂದೆ ಬಿದ್ದು ಗೋಳಾಡಿದ ರೈತರು -ಬಿಗಿ ಪೊಲೀಸ್ ಭದ್ರತೆಯಲ್ಲಿ ಕಾರ್ಯಾಚರಣೆ        940 ದಿನಗಳ ನಿರಂತರ ವಿದ್ಯುತ್ ಉತ್ಪಾದನೆ -ಕೈಗಾ ಅಣುಸ್ಥಾವರದಿಂದ ವಿಶ್ವ ದಾಖಲೆ -ಸ್ಥಳೀಯರ ವಿರೋಧದ ನಡುವೆಯೂ ಸಾಧನೆ        ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ -ನಾಳೆ ವಾರ್ಡ್ ಗೆ ಶಿಫ್ಟ್ ಸಾಧ್ಯತೆ -ಅಲ್ಪಸಂಖ್ಯಾತ ವೈದ್ಯರ ಚಿಕಿತ್ಸೆ ಅಂತ ಪ್ರಸ್ತಾಪಿಸಿದ್ದ ಡಿಕೆಶಿ ಕ್ಷಮೆ        ಮಂಡ್ಯದ ನವದಂಪತಿಗೆ ವಿಶೇಷ ಗಿಫ್ಟ್ -ದೇಸೀ ಹಸು ಉಡುಗೊರೆ ನೀಡಿದ ಗೆಳೆಯರು -ಕಾಮಧೇನು ನೋಡಿ ಮದುಮಕ್ಕಳ ಸಂತಸ       
Breaking News

ಶೂನ್ಯವಾಗಬೇಕು ಅಥವಾ ಅನಂತವಾಗಬೇಕು

Friday, 20.07.2018, 3:03 AM       No Comments

| ಸದ್ಗುರು

ಪ್ರಶ್ನೆ-ದ್ವಂದ್ವ ಎಂದರೇನು?

ಉತ್ತರ: ಈಗ ನೀವು ಪ್ರಶ್ನೆ ಕೇಳುತ್ತಿರುವಿರಿ; ಅದು ದ್ವಂದ್ವ. ಎಂದರೆ, ಅದರಲ್ಲಿ ನಾನು ಮತ್ತು ನೀವು ಎಂಬುದಿದೆ. ನೀವು ನಿಮ್ಮನ್ನು ಒಂದು ಮತ್ತು ಬೇರೊಬ್ಬರನ್ನು ಮತ್ತೊಂದು ಎಂದು ನೋಡಿದಾಗ ಮಾತ್ರ ಪ್ರಶ್ನೆ ಕೇಳಲು ಸಾಧ್ಯ. ಇಲ್ಲಿ ದ್ವಂದ್ವ ಇದೆ. ಆದುದರಿಂದಲೇ ಪ್ರಶ್ನೆ ಮತ್ತು ಉತ್ತರ ಸಾಧ್ಯವಾಗಿದೆ. ಈಗ ನೀವು ನನ್ನ ಉತ್ತರ ಸಹಿಸಬೇಕು. ನನಗೆ ಪ್ರಶ್ನೆ ಸಹಿಸಬೇಕಾಗಿಲ್ಲ. ಏಕೆಂದರೆ, ನಾನು ನಿಮ್ಮನ್ನು ಬೇರೆಯಾಗಿ ಕಾಣುತ್ತಿಲ್ಲ. ನಾನು ಎಷ್ಟು ಪರಮಸ್ವಾರ್ಥಿ ಎಂದರೆ ಎಲ್ಲವೂ ‘ನಾನು’ ಆಗಿದ್ದೇನೆ. ನೀವು ಎಂತಹ ಪ್ರಶ್ನೆ ಕೇಳಿದರೂ ನನಗೆ ಅಸಹನೆ ಆಗುವುದಿಲ್ಲ. ಆದರೆ ನೀವು ನನ್ನನ್ನು ಬೇರೆಯಾಗಿ ಕಾಣುವುದರಿಂದ ನಿಮ್ಮ ನಿರೀಕ್ಷೆಯಂತೆ ಉತ್ತರಿಸದಿದ್ದರೆ ನೀವು ಅದನ್ನು ಸಹಿಸಬೇಕಾಗುತ್ತದೆ. ಇದೇ ರೀತಿ ಎಲ್ಲ ಸಂಬಂಧಗಳೂ ಸಹ. ಬೇರೆಯವರ ನಡಾವಳಿ ನಿಮ್ಮ ನಿರೀಕ್ಷೆಗೆ ಸರಿಹೊಂದದಿದ್ದರೆ ನೀವು ಅವರನ್ನು ಸಹಿಸುವುದು ಅನಿವಾರ್ಯವಾಗುತ್ತದೆ. ಇದೇ ತಾನೇ ದಾಂಪತ್ಯದಲ್ಲಿನ ಬಹುತೇಕ ಸಮಸ್ಯೆ!

ಫ್ರೆಂಚ್ ದಾರ್ಶನಿಕ ಜೀನ್ ಪಾಲ್ ಸಾತ್ರೆ ‘ಬೇರೆ ಎಂಬುದು ನರಕ’ ಎಂದನು. ಒಮ್ಮೆ ನಿಮ್ಮ ಜೀವನದಲ್ಲಿ ‘ಬೇರೆಯದು’ ಬಂದಿದ್ದೇ ಆದರೆ ಜೀವನ ನರಕವೇ ಸರಿ. ಯೋಗದಲ್ಲಿ ಇಲ್ಲದೆಹೋದರೆ- ಯೋಗ ಎಂದರೆ ಎಲ್ಲವೂ ನಿಮ್ಮೊಳಗೆ ಒಂದಾಗಿರುವುದು- ನೀವು ಈ ರೀತಿ ಇಲ್ಲದಿದ್ದರೆ ವೇದನೆ ತಪ್ಪಿದ್ದಲ್ಲ. ಜೀವನ ನಿರ್ವಹಿಸುವಲ್ಲಿನ ಸಾಮರ್ಥ್ಯವನ್ನು ಅವಲಂಬಿಸಿ ವೇದನೆ ಕಡಿಮೆ ಅಥವಾ ಹೆಚ್ಚಿಗೆ ಇರಬಹುದು, ಆದರೆ ವೇದನೆಯಂತೂ ಅನಿವಾರ್ಯ. ಈ ಕಾರಣಕ್ಕಾಗಿಯೇ ಜನರು ತಮ್ಮದೇ ಆದ ಸುರಕ್ಷೆಯ ಗೂಡನ್ನು ಕಟ್ಟಿಕೊಳ್ಳುವರು. ಜೀವನದಲ್ಲಿ ಕುಟುಂಬವು ಮಹತ್ವ ಪಡೆದಿರುವುದಕ್ಕೆ ಕಾರಣ ಅದು ಇಂತಹ ಸುರಕ್ಷೆಯ ಗೂಡನ್ನು ಮಾನವನಿಗೆ ಕಟ್ಟಿಕೊಡುವುದು. ಇದಿಲ್ಲದಿದ್ದರೆ ಎಂತೆಂತಹ ಸಂದರ್ಭ ಸನ್ನಿವೇಶಗಳನ್ನು ಎದುರಿಸಬೇಕಾಗುವುದೆಂದು ಒಮ್ಮೆ ಆಲೋಚಿಸಿ. ನಮ್ಮಲ್ಲಿ ಅಸುರಕ್ಷತೆಯ ಭಾವನೆ ಹೆಚ್ಚಿದಷ್ಟೂ ಕುಟುಂಬವು ಹೆಚ್ಚೆಚ್ಚು ಮಹತ್ವದ್ದಾಗುತ್ತದೆ. ಸಮಾಜ ನಿಮ್ಮನ್ನು ದಂಡಿಸಿದರೆ ನೀವು ಕುಟುಂಬದ ತೆಕ್ಕೆಗೆ ಸರಿಯುವಿರಿ. ಕುಟುಂಬವು ದಂಡಿಸಿದರೆ ಗೆಳೆಯ ಅಥವಾ ಮತ್ತಾರದೋ ತೆಕ್ಕೆಗೆ ಓಡುವಿರಲ್ಲವೇ?

ಬೇರೊಂದರಿಂದ ತಪ್ಪಿಸಿಕೊಳ್ಳುವ ತುಡಿತ: ಒಂದಿಲ್ಲೊಂದು ವಿಧದಲ್ಲಿ ಇಂತಹ ಗೂಡುಗಳನ್ನು ಕಟ್ಟುತ್ತಲೇ ಹೋಗುವಿರಿ. ಏಕೆಂದರೆ, ‘ಬೇರೊಂದು ನರಕ’. ಮನೆಯಾಗಿರಬಹುದು, ಆಶ್ರಮವೇ ಇರಬಹುದು ಬೇರೇನಾದರೂ ಇರಬಹುದು. ಮೂಲತಃ ಜಗತ್ತಿನಲ್ಲಿ ಯಾವುದೇ ಸಮಾಜದ ಅತಿ ಚಿಕ್ಕ ಘಟಕವೆಂದರೆ ಕುಟುಂಬ. ಅದಕ್ಕಿಂತ ದೊಡ್ಡದು ಪರಿವಾರ, ನಂತರ ನಗರ, ದೇಶ ಹೀಗೆ ವಿಸ್ತಾರಗೊಳ್ಳುವುದು. ಮೂಲ ಘಟಕವಾದ ಕುಟುಂಬಕ್ಕೆ ಅತಿಹೆಚ್ಚಿನ ಮಹತ್ವ ನಮ್ಮ ಮನಸ್ಸಿನಲ್ಲಿ, ಹೃದಯದಲ್ಲಿ ಬೇರೂರಿದೆ. ಕಾರಣ ‘ಬೇರೊಂದ’ರಿಂದ ತಪ್ಪಿಸಿಕೊಳ್ಳುವ ಇಚ್ಛೆ. ಕುಟುಂಬದಲ್ಲಿಯೂ ಸಹ ಆಳವಾಗಿ ನೋಡಿದರೆ ಸದಸ್ಯರೂ ‘ಬೇರೆ’. ನೆರೆಯವರು ತೊಂದರೆ ಕೊಟ್ಟರೆ ಕುಟುಂಬದ ಸದಸ್ಯರೆಲ್ಲ ‘ಒಂದಾಗಿ’ ಹೋಗುವುದನ್ನು ನೋಡಿರಬಹುದು. ಪಾಕಿಸ್ತಾನ ಕದನಕ್ಕೆ ಬಂದರೆ ದೇಶವೇ ಒಂದಾಗುವುದು. ಇತರ ದಿನಗಳಲ್ಲಿ ದೇಶದಲ್ಲಿ ನಾವು ಹೇಗೆ ಕಚ್ಚಾಡುತ್ತೇವೆ?

ಬಹಳ ಮಂದಿಯನ್ನು ಒಂದುಗೂಡಿಸುವ ಅಂಶ ಯಾವುದು ಗೊತ್ತಾ? ಸಮಸ್ಯೆಗಳು. ಅಚ್ಚರಿಯಾಯಿತಾ? ಹೌದು, ಅವರಿಗೆ ಸಮಸ್ಯೆಗಳು ಬಹಳ ಮಹತ್ವದ್ದಾಗಿರುತ್ತವೆ. ಅವರು ಸಮಸ್ಯೆಗಳಿಗೆ ಬೆಲೆ ಕೊಡುವುದರಿಂದ ಕೊನೆಯಿಲ್ಲದೆ ಸಮಸ್ಯೆಗಳು ಬಳಿಗೆ ರುತ್ತಿರುತ್ತವೆ. ಒಮ್ಮೆ ನೀವು ಯಾವುದಕ್ಕಾದರೂ ಬೆಲೆ ಕೊಟ್ಟರೆ ಸಹಜವಾಗಿ ನೀವು ಅದನ್ನು ಸೃಷ್ಟಿಸಲು ತೊಡಗುವಿರಿ. ಸಮಸ್ಯೆ ಉದ್ಭವಿಸಿದಾಗ ಮಾತ್ರ ಕುಟುಂಬದ ಹಿರಿಯ, ‘ನಾನು ನಿಮಗೆಲ್ಲ ಹೇಳಲಿಲ್ಲವೇ? ಈ ಬೇರೆಯವರ ಎದುರು ನಾವು ಒಂದಾಗಿ ನಿಲ್ಲಬೇಕು’ ಎಂದು ಎಚ್ಚರಿಸುವುದು ಸಾಮಾನ್ಯ. ಜಗತ್ತಿನಲ್ಲಿ ಸಮಸ್ಯೆಗಳು ಹೇರಳವಾಗಿರುವುದಕ್ಕೆ ಕಾರಣ ಜನ ಸಮಸ್ಯೆಗಳನ್ನು ಮಹತ್ವದ್ದಾಗಿಸಿರುವುದು. ಹಿಮಾಲಯಕ್ಕೆ ಹೋಗಿ ನೋಡಿ; ಅಲ್ಲಿ ಕುಳಿತಿರುವ ಸಾಧುವಿಗೆ ಯಾವುದೇ ಸಮಸ್ಯೆ ಇಲ್ಲ. ಅವನಿಗೆ ಸಮಸ್ಯೆ ದೊಡ್ಡದಲ್ಲ. ಅವನು ಉತ್ತರಕ್ಕಾಗಿ ಶೋಧನೆ ನಡೆಸಿದ್ದಾನೆ. ಅವನಿಗೆ ಸಮಸ್ಯೆಗಳ ಬಗ್ಗೆ ಪರಿವೆಯಿಲ್ಲ.

ಜೀವನಕ್ಕೆ ವಿರುದ್ಧವಾಗಿ ಹೋಗಬೇಡಿ: ಸಮಸ್ಯೆಗಳು ತೋರಿಬರುವುದಕ್ಕೆ ಕಾರಣ, ನಿಮ್ಮ ಸೀಮಿತ ದೇಹದೊಂದಿಗೆ ಗುರುತಿಸಿಕೊಂಡಿದ್ದೀರಿ. ಸ್ವಲ್ಪ ಯೋಚಿಸಿ ನೋಡಿದರೆ ಸುಲಭವಾಗಿ ತಿಳಿಯುವುದು- ಈ ದೇಹವನ್ನು ಈ ಗ್ರಹದಿಂದ ಹೆಕ್ಕಿಕೊಂಡಿರುವಿರಿ. ಅದು ನಿರಂತರ ಆವರ್ತನೆ ಪಡೆಯುತ್ತಿದೆ. ದಿನವೂ ದೇಹದಿಂದ ಏನಾದರೊಂದು ಹೋದರೆ ಮತ್ತೊಂದೇನೋ ಸೇರುತ್ತಿದೆ. ಮೂರು ದಿನಗಳವರೆಗೆ ದೇಹಕ್ಕೆ ಹೊಸದಾಗಿ ಏನನ್ನೂ ಸೇರಿಸದಿದ್ದರೆ ದೇಹದಿಂದ ಹೊರಹೋಗುತ್ತಿರುವುದರ ಅರಿವಾಗುವುದು. ದೇಹ ಎಲ್ಲೋ ಬಿದ್ದುಹೋಗುವುದಿಲ್ಲ. ಬದಲಿಗೆ, ಕುಗ್ಗುವುದು. ಆದ್ದರಿಂದ, ನಿರಂತರ ಏನನ್ನಾದರು ಕಳೆದುಕೊಂಡು ಮತ್ತೇನನ್ನೋ ಪುನಃ ಸೇರಿಸಿಕೊಳ್ಳುತ್ತಿರುವಿರಿ. ಪುನರಾವೃತ್ತಿಯಲ್ಲಿ ಇರುವಿರಿ. ಜೀವನವೇ ಪುನರಾವೃತ್ತಿಯಲ್ಲಿ ಸದಾಕಾಲ ತೊಡಗಿರುವುದು. ನಾವು ಅದನ್ನು ನಕಲಿಸುವುದಷ್ಟೇ. ಆದರೆ ನಾವು ಅನೇಕ ರೀತಿಯಲ್ಲಿ ಜೀವನಕ್ಕೆ ವಿರುದ್ಧವಾಗಿ ಹೋಗುತ್ತಿದ್ದೇವೆ.

ಈ ದೇಹ ಆವರ್ತನೆಗೊಳ್ಳುತ್ತಿರುವುದು ಗೊತ್ತು. ನೀವು ‘ನಾನು’ ಎಂದುಕೊಳ್ಳುವುದು ಒಳಬಂದು ಹೊರಹೋಗುವುದು ನಿರಂತರವಾಗಿ ನಡೆಯುತ್ತಿದೆ. ಈ ದೇಹವನ್ನು ಹಿಡಿದಿಡಲಾರಿರಿ. ಸಾಯುವ ದಿನದ ಕಡೆಯ ಕ್ಷಣದಲ್ಲಿ ಮಾತ್ರವಲ್ಲ, ದಿನವೂ ದೇಹವನ್ನು ಹಿಡಿದಿಡಲು ಸಾಧ್ಯವಾಗದು. ಅದು ಅರಿವಿಗೆ ನಿಲ್ಲದೆ ಜಾರಿಹೋಗುತ್ತಿರುವುದು. ನೀವದನ್ನು ಪುನಃ ಹೊಸದರಿಂದ ಪುನರುಜ್ಜೀವಿಸುವಿರಿ. ಈ ಸತ್ಯವನ್ನು ಕೇವಲ ಬೌದ್ಧಿಕವಾಗಿ ತಿಳಿಯದೆ, ಅನುಗಾಲ ಅರಿವಿನಲ್ಲಿ ಹೊಂದಿದ್ದರೆ ನೀವು ದೇಹವೇ ‘ನಾನು’ ಎಂದು ತಿಳಿಯುವುದಿಲ್ಲ. ದೇಹ ನಾನಲ್ಲ ಎಂಬ ಅರಿವು ಸ್ಥಿರವಾದರೆ ನಂತರ ಬರುವುದು ಯೋಚನಾ ಪ್ರಕ್ರಿಯೆ. ಅದೂ ಕೂಡ ಅವೃತ್ತಿಗೊಳ್ಳುವ ಕ್ರಿಯೆ. ಇದು ನಮ್ಮೆಲ್ಲರ ಅನುಭವಕ್ಕೆ ಬಂದಿರುವ ಸತ್ಯ. ಕೆಲವು ವರ್ಷ ಕಳೆದರೆ ಹಿಂದಿನ ಯೋಚನೆ, ಅಭಿಪ್ರಾಯಗಳು ಹೋಗಿ, ಹೊಸದು ಹುಟ್ಟಿಕೊಳ್ಳುವುವು. ಒಂದೇ ವಿಚಾರಧಾರೆಗೆ ಸದಾ ಅಂಟಿಕೊಂಡಿರುವಿರೇನು? ಇಲ್ಲವಲ್ಲ.

ಅನಂತದಲ್ಲಿ ದ್ವಂದ್ವವಿಲ್ಲ: ಈ ಆವೃತ್ತಿಗಳೊಂದಿಗೆ ಗುರುತಿಸಿಕೊಳ್ಳಲು ಸಾಧ್ಯವಿದ್ದರೆ ಈ ಭೂಮಿಯೊಂದಿಗೇ ಏಕೆ ಗುರುತಿಸಿಕೊಳ್ಳಬಾರದು? ಎಲ್ಲವೂ ಪುನರಾವೃತ್ತಿ ಹೊಂದುತ್ತಿರುವಾಗ ಇಡೀ ವಿಶ್ವದೊಂದಿಗೇ ಏಕೆ ಗುರುತಿಸಿಕೊಳ್ಳಬಾರದು? ಶಕ್ತಿಯ ಸ್ತರದಲ್ಲೂ ನಮ್ಮೊಳಗೆ ನಿರಂತರ ಪುನರಾವೃತ್ತಿ ಆಗುತ್ತಿದೆ. ಇದು ಹರಿಯದೆ ನಿಂತ ದೇಹದ ತುಣುಕಲ್ಲ. ಸದಾ ಹರಿಯುತ್ತಿರುವ ಗತಿಶೀಲ ಕಾರ್ಯವಿಧಾನ. ಎಲ್ಲವೂ ಗತಿಶೀಲ ಆವೃತ್ತಿಯೆಂದು ಅನುಭವಕ್ಕೆ ಬಂದರೆ-ಪ್ರಾಣಶಕ್ತಿ, ಶರೀರ ಅಥವಾ ನಿಮ್ಮ ಮನಸ್ಸೇ ನೀವು ಅಲ್ಲ; ಎಲ್ಲವೂ ಆವೃತ್ತಿಗೊಳ್ಳುವ ಅಂಶಗಳು ಎಂದು ಅರಿವಿಗೆ ಬಂದರೆ ಯಾವುದರೊಂದಿಗೆ ಗುರುತಿಸಿಕೊಳ್ಳಲು ಸಾಧ್ಯ? ಯಾವುದೇ ಗುರುತೂ ಇಲ್ಲದೆ ಸುಮ್ಮನೆ ಇರುವಿರಿ ಅಥವಾ ಸಮಸ್ತ ವಸ್ತುವಿಷಯದೊಂದಿಗೆ ಗುರುತಿಸಿಕೊಳ್ಳುವಿರಿ. ಇವೆರಡೇ ಆಯ್ಕೆ. ನಾವು ಸೊನ್ನೆ ಆಗಬೇಕು ಇಲ್ಲವೇ ಅನಂತವಾಗಬೇಕು. ಇವೆರಡರ ನಡುವಿರುವುದು ಒಂದು ದೊಡ್ಡ ಸುಳ್ಳು. ‘ಇಲ್ಲ, ನಾನು ನೂರೊಂದು’ ಎಂದುಕೊಂಡರೆ ಸುಳ್ಳದು. ನೂರೆಂಟು ಎಂದರೆ ಅದಿನ್ನೂ ದೊಡ್ಡ ಸುಳ್ಳು. ಶೂನ್ಯ ಮತ್ತು ಅನಂತದ ನಡುವಿನ ಸಮಸ್ತವೂ ಭಾರಿ ಸುಳ್ಳು. ಇದೇ ದ್ವಂದ್ವದ ‘ಮಾಯಾ’. ಸೊನ್ನೆಯಲ್ಲಿ ದ್ವಂದ್ವ ಇಲ್ಲ. ಅನಂತದಲ್ಲೂ ದ್ವಂದ್ವವಿಲ್ಲ. ಸೊನ್ನೆಯನ್ನು ನಾವು ರಚಿಸಲಿಲ್ಲ. ಅದನ್ನು ಕಂಡುಹಿಡಿಯಲಾಯಿತು. ಅನಂತವನ್ನೂ ನಾವು ಸೃಷ್ಟಿ ಮಾಡಲಿಲ್ಲ. ಅದೂ ಕಂಡುಹಿಡಿದುದೇ! 1, 2, 3, 4, 5- ಇವನ್ನು ಮಾನವ ಸೃಷ್ಟಿ ಮಾಡಿದುದು. ಈ ಸಂಖ್ಯೆಗಳು ಸುಳ್ಳು. ಆದ್ದರಿಂದ ನಿಮ್ಮ ದ್ವಂದ್ವ ಒಂದು ದೊಡ್ಡ ಸುಳ್ಳು. ನೀವು ಸುಳ್ಳಿನೊಂದಿಗೆ ಗುರುತಿಸಿಕೊಂಡರೆ ಸತ್ಯವನ್ನು ಹೇಗೆ ಅರಿಯುವಿರಿ? ಅದನ್ನು ನಿಮಗೆ ಬಾಟಲಿಯಲ್ಲಿ ಮಾರಾಟ ಮಾಡುವರಷ್ಟೇ! ಅದೂ ಒಂದು ಸುಳ್ಳು.

ಈ ಸುಳ್ಳಿನಿಂದ ಹೊರಬರುವುದು ಹೇಗೆ? ಬಾಟಲಿಯಿಂದ ಹೊರಬರಲು ಅದರ ಗುಣವನ್ನು ತಿಳಿಯಬೇಕು. ಅದರಲ್ಲಿ ಅನೇಕಾನೇಕ ರಂಧ್ರಗಳಿದ್ದರೆ ಯಾವುದರಿಂದಾದರೂ ಹೊರಗೆ ಬರಬಹುದು. ತಂಪು ಪಾನೀಯ ಬಾಟಲಿಗೆ ಇರುವುದೊಂದೇ ದಾರಿ. ಆದರೆ ಈ ಶರೀರದ ಬಾಟಲಿಗೆ ನೂರಾರು ರಂಧ್ರಗಳು. ಯಾವ ತೂತಿನಿಂದಾದರೂ ಹೊರಬರಬಹುದು. ಪ್ರಯೋಗ ಮಾಡಿ ನೋಡಬೇಕೆಂದರೆ ಮುಂದಿನ ಒಂಭತ್ತು ದಿನ ಏನನ್ನೂ ತಿನ್ನಬೇಡಿ. ನವರಾತ್ರಿಯಲ್ಲಿ ಉಪವಾಸ ಮಾಡುವಿರಲ್ಲವೇ? ಹಾಗೆಯೇ. ಶರೀರದಲ್ಲಿರುವುದು ಎಲ್ಲ ರಂಧ್ರಗಳಿಂದ ಹೊರಬರುವುದನ್ನು ನಿಧಾನವಾಗಿ ಕಾಣುವಿರಿ. ಶರೀರ ಕುಗ್ಗುತ್ತ ಹೋಗುವುದು. ಹಾಗೆಯೇ ಹೋಗಿಬಿಡುವುದು. ಶರೀರವನ್ನು ಒಡೆಯಬೇಕಿಲ್ಲ ಅಥವಾ ನಾಶ ಮಾಡಬೇಕಿಲ್ಲ. ಈ ‘ಬಾಟಲಿ’ (ಶರೀರ)ಯೂ ಒಂದು ವಾಹನದಂತೆ; ಅದರೊಳಗೆ ನಾವು ಹುದುಗಿದ್ದೇವೆ ಎಂಬ ಅರಿವು ಬಂದರೆ ಸಾಕು.

ಈ ಸತ್ಯವನ್ನು ಬೌದ್ಧಿಕ ಸ್ತರದಲ್ಲಿ ಅರ್ಥ ಮಾಡಿಕೊಂಡರೆ ಸಾಲದು. ಅನುಭವಾತ್ಮಕವಾಗಿ ಇದರ ಅರಿವು ಆಗಬೇಕು. ಆಗ ನಾವು 1, 2, 3, 4ಗಳ ಸಂಗಡ ಆಟವಾಡಬಹುದು. ಇದೊಂದು ಆಟವಷ್ಟೇ ಎಂಬುದು ಮನದಟ್ಟಾದರೆ ಸಮಸ್ಯೆ ಕಷ್ಟಗಳು ಇರುವುದಿಲ್ಲ. ಯಾವ ಬಗೆಯ ಆಟವನ್ನಾದರೂ ನಿಶ್ಚಿಂತೆಯಿಂದ ಆಡಬಹುದು. ತೊಂದರೆಯಿಲ್ಲ. ಅವು ಸತ್ಯ ಸಂಗತಿಗಳೆಂದಾಗ ಮಾತ್ರ ಆಪತ್ತು. ಆಗ ನೀವು ಭ್ರಮೆಗೆ ಸಿಲುಕುವಿರಿ.

(ಸದ್ಗುರು ಅವರು ಯೋಗಿ, ದಾರ್ಶನಿಕ, ಆಧ್ಯಾತ್ಮಿಕ ನಾಯಕ. www.isha.sadhguru.org) (ಸದ್ಗುರುಗಳ ಇತರ ಪುಸ್ತಕ/ವಿವರಗಳಿಗೆ ಸಂರ್ಪಸಿ- [email protected])

Leave a Reply

Your email address will not be published. Required fields are marked *

Back To Top