Thursday, 15th November 2018  

Vijayavani

ಸಚಿವ ಸ್ಥಾನಕ್ಕಾಗಿ ಬಳ್ಳಾರಿ ಶಾಸಕರ ಲಾಬಿ - ತುಕಾರಾಂ ಸೇರಿದಂತೆ ಐವರ ಪೈಪೋಟಿ        RSS ಬೈಠಕ್​​ನಲ್ಲಿ ರಾಮಮಂದಿರ ಪ್ರತಿಧ್ವನಿ-ಶಬರಿಮಲೆ ಹೋರಾಟದಿಂದ ಹಿಂದೆ ಸರಿಯಲ್ಲ-ಷಾ ಸಮ್ಮುಖದಲ್ಲಿ ನಿರ್ಧಾರ        KRS ಬಳಿ 125 ಅಡಿ ಎತ್ತರದ ಕಾವೇರಿ ಮಾತೆ ಸ್ಟ್ಯಾಚ್ಯೂ ನಿರ್ಧಾರ-ಡಿಕೆಶಿ ನೇತೃತ್ವದ ಸಮಿತಿಯ ತೀರ್ಮಾನ        ರವಿ ಕೊಲೆ ಹಿಂದೆ ಸೈಲೆಂಟ್ ಸುನಿಲನ ನೆರಳು - ತುಮಕೂರು ಡಾಬಾದಲ್ಲೇ ನಡೆದಿತ್ತು ಹಂತಕ ಮೀಟಿಂಗ್        ತಮಿಳುನಾಡಿನಲ್ಲಿ ಗಜ ಆರ್ಭಟ-ಸಮುದ್ರದಲ್ಲಿ ಅಲೆಗಳ ಅಬ್ಬರ-ಬೆಂಗಳೂರಿನ ಹಲವೆಡೆ ಮಳೆ ಸಾಧ್ಯತೆ        ದೀಪ್​-ವೀರ್​​ ಕಲ್ಯಾಣೋತ್ಸವ-ನಿನ್ನೆ ಕೊಂಕಣಿ, ಇಂದು ಸಿಂಧಿ ಸ್ಟೈಲ್​ ಕಲ್ಯಾಣ-ಇಟಲಿಯಲ್ಲಿ ಅದ್ದೂರಿ ವಿವಾಹ       
Breaking News

ಸಂತೋಷ ಬೇಕೋ ಅಥವಾ ದುಃಖವೋ? ಆಯ್ಕೆ ನಮ್ಮದೇ…

Friday, 22.06.2018, 3:03 AM       No Comments

| ಸದ್ಗುರು

ಜೀವನ ಹಲವು ಸಂಕಷ್ಟ, ನೋವುಗಳನ್ನು ತರುತ್ತದೆ ನಿಜ. ಆದರೆ, ಸಂಕಷ್ಟದ ಪರಿಸ್ಥಿತಿಯಲ್ಲೂ ಸಂತೋಷವಾಗಿರಲು ಯತ್ನಿಸಿದರೆ ಗೆಲುವು ನಮ್ಮದೇ. ಮಹಾಜ್ಞಾನಿಯಾಗಿದ್ದ ಲಾವೋತ್ಸು ಸುಳ್ಳು ಅಪವಾದಗಳಿಂದ ಮಹಾಪರಾಧಗಳ ಆರೋಪ ಎದುರಿಸಬೇಕಾಗಿ ಬಂತು. ಸ್ಥಿತಪ್ರಜ್ಞನಾಗಿದ್ದ ಆತ ಜ್ಞಾನ, ಸಂತೋಷದ ಬಲದಿಂದಲೇ ಎಲ್ಲವನ್ನೂ ಗೆದ್ದ.

ಲಾವೋತ್ಸು ಪ್ರಾಚೀನ ಚೀನಾದ ಖ್ಯಾತ ದಾರ್ಶನಿಕನಾಗಿದ್ದ. ‘ದಾರ್ಶನಿಕ ತಾವೋಯಿಸಮ್ ಫಿಲಾಸಾಫಿಕಲ್ ತಾವೋಯಿಸಮ್ ಪಂಥವನ್ನು ಹುಟ್ಟುಹಾಕಿದ ಮಹಾನ್ ವ್ಯಕ್ತಿ. ಲಾವೋತ್ಸುನ ವಿವೇಕಯುತ ಸಲಹೆಗಳು ಅಪಾರ ಅನುಯಾಯಿಗಳನ್ನು ಆಕರ್ಷಿಸಿತು. ಆದರೆ ಅವನು ತನ್ನ ಆಲೋಚನೆ/ವಿಚಾರಗಳನ್ನು ಬರೆದಿಡಲು ನಿರಾಕರಿಸಿದ. ಬರೆದಿಟ್ಟ ವಿಚಾರಗಳು ಬದ್ಧ ಸಿದ್ಧಾಂತಗಳಾಗಿ ಸಂಪ್ರದಾಯಕ್ಕೆ ಎಡೆಮಾಡುವುದೆಂದು ಅವನ ಅಭಿಪ್ರಾಯವಿತ್ತು. ಮಾನವರ ದುಷ್ಟತೆಗೆ ಬೇಸತ್ತು ನಾಗರಿಕತೆಯನ್ನು ಹಿಂದೊತ್ತಿ ಲಾವೋತ್ಸು ಎಮ್ಮೆಯ ಮೇಲೇರಿ ಮರುಭೂಮಿಯ ಕಡೆಗೆ ಹೊರಟ. ರಾಜ್ಯದ ರಕ್ಷಣೆಗೆ ಕಟ್ಟಿದ್ದ ಮಹಾಗೋಡೆ (ಗ್ರೇಟ್ ವಾಲ್ ಆಫ್ ಚೀನಾ) ತಲುಪಿದ ಆತ ಅಲ್ಲಿನ ಕಾವಲುಗಾರನ ಬಲವಂತದ ಮೇರೆಗೆ ಬರೆದಿಟ್ಟ 81 ಉಕ್ತಿಗಳ ಸರಮಾಲೆಯೇ ‘ತಾವೊ- ತೆ ಚಿಂಗ್’ ಕಿರುಹೊತ್ತಿಗೆ. ಇದು ಆತನ ಕುರಿತಾದ ದಂತಕಥೆ.

ಶಾಂತ, ಸ್ಥಿತಪ್ರಜ್ಞ ಉತ್ತರ: ಪ್ರಪಂಚದಲ್ಲಿ ಆಗಿಹೋದ ಚಾರಿತ್ರಿಕ ಮಹಾವ್ಯಕ್ತಿಗಳಲ್ಲಿ ಲಾವೋತ್ಸು ಅದ್ಭುತವ್ಯಕ್ತಿ ಎನ್ನಬಹುದು. ಆತ ಸದಾ ಎಮ್ಮೆಯ ಮೇಲೆ ಕುಳಿತೇ ಪ್ರಯಾಣಿಸುತ್ತಿದ್ದುದು. ಅವನನ್ನು ನೋಡುತ್ತಲೇ ಜನರು ನಗುವಿನಲ್ಲಿ ತೇಲಾಡುತ್ತಿದ್ದರು. ಧಡೂತಿ ವ್ಯಕ್ತಿ ಭಾರಿ ಎಮ್ಮೆಯ ಮೇಲೆ ಸವಾರಿ ಮಾಡುತ್ತ ಊರಿಂದ ಊರಿಗೆ ಪ್ರಯಾಣ! ತೆಳ್ಳಗಿನದಾದರೂ ಕ್ರೀಡಾಪಟುವಿನ ದೇಹದ ಮೌನಿ ಗೌತಮನ ಸಂದೇಶ; ಎಮ್ಮೆಯನ್ನೇರಿ ಪಯಣಿಸುತ್ತ ಸದಾ ನಗುಮುಖ ಹೊತ್ತು ಅದೇ ಸಂದೇಶವನ್ನು ಸಾರುತ್ತಿದ್ದ ಭೀಮಾಕಾರದ ಮನುಷ್ಯ. ಅದೇ ಸಂದೇಶ, ಅದೇ ಸತ್ಯ- ಆದರೆ ಸಾರುತ್ತಿದ್ದ ರೀತಿ ಸಂಪೂರ್ಣ ವಿಭಿನ್ನ.

ಲಾವೋತ್ಸು ಬಹಳ ಸೌಮ್ಯ, ಮೃದು ಸ್ವಭಾವದವನು. ಗೌತಮ ಬುದ್ಧನಿಗಾದರೋ ಒಂದು ಯೋಜನೆ ಇತ್ತು. ಸರಳ ಜೀವನತತ್ವವನ್ನು ಪ್ರತಿಪಾದಿಸಲು ರಾಜ ಮಹಾರಾಜರು, ರಾಣಿಯರು ಸಹ ಬೀದಿಗಳಲ್ಲಿ ಭಿಕ್ಷೆ ಎತ್ತುವಂತೆ ಮಾಡಿದ. ಜನರು ಗೌತಮನ ಬಗ್ಗೆ ಕೋಪಗೊಳ್ಳುವಲ್ಲಿ ಆಶ್ಚರ್ಯವಿರಲಿಲ್ಲ. ಆದರೆ ಲಾವೋತ್ಸುಗೆ ಇಂತಹ ಯಾವುದೇ ಉದ್ದೇಶವಿರಲಿಲ್ಲ. ವ್ಯಕ್ತಿಗತ ಅಥವಾ ಧಾರ್ವಿುಕ ಕಾರ್ಯಭಾರಗಳೇನೂ ಇರಲಿಲ್ಲ. ಲಾವೋತ್ಸುನ ಬಳಿ ಇನ್ನೂ ಮದುವೆಯಾಗದ ಯುವತಿಯೊಬ್ಬಳು ಸುತ್ತುಕೆಲಸಕ್ಕೆ ಬರುತ್ತಿದ್ದಳು. ಅವಳು ಬಸುರಿಯಾದಳು. ಸುದ್ದಿ ತಿಳಿದ ಯುವತಿಯ ತಂದೆ ಅವಳನ್ನು ತರಾಟೆಗೆ ತೆಗೆದುಕೊಂಡು ಇದಕ್ಕೆ ಕಾರಣರಾದೆಂದು ಕೇಳಿದ. ಯುವತಿ ಸುಮ್ಮನಿದ್ದಳು. ಮನೆಯವರೆಲ್ಲ ಸೇರಿ ಅವಳನ್ನು ಹೊಡೆದು ಶಿಕ್ಷಿಸಿ ಕೇಳಿದಾಗ ಅವಳು ನೋವು ತಡೆಯಲಾರದೆ ಲಾವೋತ್ಸುನ ಹೆಸರು ಹೇಳಿದರೆ ಬಿಟ್ಟುಬಿಡುವರೆಂದು ಯೋಚಿಸಿ ‘ಲಾವೋತ್ಸು’ ಎಂದುಬಿಟ್ಟಳು. ಕೋಪದಿಂದ ಉರಿದೆದ್ದ ತಂದೆ ಹಳ್ಳಿಯ ಹಿರಿಯರನ್ನು ಕಲೆಹಾಕಿ ಅವರಿಗೆ ಮಗಳ ಸ್ಥಿತಿಯನ್ನು ತಿಳಿಸಿದ. ಅವರನ್ನೆಲ್ಲ ಕರೆದುಕೊಂಡು ಲಾವೋತ್ಸುನ ಮನೆಗೆ ಬಂದವನೇ-‘ತನ್ನ ಬಸಿರಿಗೆ ನೀನೇ ಕಾರಣ ಎಂದು ನನ್ನ ಮಗಳು ಹೇಳುತ್ತಿದ್ದಾಳೆ. ನಿಜವೇ? ಇದರ ಪರಿಣಾಮ ಏನೆಂದು ಬಲ್ಲೆಯಾ?’ ಎಂದು ಕೂಗಾಡಿದ.

ಲಾವೋತ್ಸು ‘ಹಾಗೆ ಆಯಿತೇನು?’ ಎಂದು ಸುಮ್ಮನಾದ. ‘ನೀನು ಒಳ್ಳೆಯವನಲ್ಲ. ನೀನು ಮಹಾಗುರುವೆಂದು ನಾವು ತಿಳಿದಿದ್ದೆವು. ಇಂಥ ಕೆಲಸ ಮಾಡಿದೆಯಲ್ಲ’ ಎಂದು ಹೀನಾಮಾನ ಬೈದರು. ‘ನೀನು ಜ್ಞಾನಿಯ ಸೋಗು ಹಾಕಿರುವ ಢಾಂಬಿಕ’ ಎಂದರು. ಅದಕ್ಕೂ ಲಾವೋತ್ಸು ‘ಹಾಗೆನ್ನುವಿರಾ?’ ಎಂದು ಸಮಾಧಾನದಿಂದ ಉತ್ತರಿಸಿದ. ಕೋಪೋದ್ರಿಕ್ತರಾದ ಜನ ಅವನ ಮನೆಯನ್ನು ಕೆಡವಿ, ಶಿಷ್ಯರನ್ನೂ ಚೆನ್ನಾಗಿ ಥಳಿಸಿ ಹೊರಹಾಕಿದರು. ಆದರೆ ಲಾವೋತ್ಸು ಅಲ್ಲೇ ಉಳಿದ. ದಿನೇದಿನೇ ಹುಡುಗಿಯ ಹೊಟ್ಟೆ ಬೆಳೆಯುತ್ತಿತ್ತು. ಅವಳ ಮನಸ್ಸಿನಲ್ಲಿ ತಪ್ಪಿತಸ್ಥ ಭಾವವೂ ಬೆಳೆಯಿತು. ಮಗು ಹುಟ್ಟುವ ದಿನ ಸಮೀಪಿಸಿತು. ಅವಳಿಗೆ ತಡೆಯಲಾರದೆ ತಂದೆಯ ಬಳಿ ‘ನನ್ನ ಬಸಿರಿಗೆ ಕಾರಣ ಲಾವೋತ್ಸು ಅಲ್ಲ’ ಎಂದು ನಿಜವನ್ನು ಹೇಳಿದಳು.

ಸತ್ಯವನ್ನು ಕೇಳಿ ತಂದೆಗೆ ಬಹಳ ದಿಗಿಲಾಯಿತು. ‘ನಿಜವನ್ನು ನಾನಾರಿಗೂ ಹೇಳಲಾರೆ. ಗುರುವಿಗೆ ನಾನು ಮಾಡಿರುವ ಅಪರಾಧ ತಿಳಿದರೆ ನನ್ನ ತಲೆ ಹೋಗುವುದು ಖಚಿತ’ ಎಂದು ಹೆದರಿ ಯಾರಿಗೂ ಸತ್ಯ ತಿಳಿಸಲಿಲ್ಲ. ಹುಟ್ಟಿದ ಮಗುವನ್ನು ಎಲ್ಲರೂ ಲಾವೋತ್ಸುನ ಮಗು ಎಂದೇ ಕರೆಯುತ್ತಿದ್ದರು. ಜನರು ಮಗುವನ್ನು ತಾಯಿಯಿಂದ ಸೆಳೆದುಕೊಂಡು ಲಾವೋತ್ಸುನ ಬಳಿಗೊಯ್ದು- ‘ಇದು ನಿನ್ನ ಮಗು, ಇದರ ಪೋಷಣೆ ನಿನ್ನ ಹೊಣೆ’ ಎಂದು ಅಲ್ಲಿಯೇ ಬಿಟ್ಟರು. ಆತ ಅದನ್ನು ನೋಡುತ್ತ, ‘ಇದು ನನ್ನ ಮಗುವೇ? ಸರಿ’ ಎಂದು ಮಗುವಿನ ರಕ್ಷಣೆ-ಪೋಷಣೆಯ ಹೊಣೆ ಹೊತ್ತ.

ಮಗುವಿನ ತಾಯಿಗೆ ತಡೆಯಲಾಗಲಿಲ್ಲ. ತಾನೇ ಖುದ್ದಾಗಿ ಊರಿನೆಲ್ಲ ಜನರಿಗೆ ನಿಜ ಹೇಳುತ್ತ-‘ನನ್ನ ಮಗುವಿನ ತಂದೆ ಲಾವೋತ್ಸು ಅಲ್ಲ. ಮೀನು ಮಾರುಕಟ್ಟೆಯಲ್ಲಿ ಕೆಲಸ ಮಾಡುವವ’ ಎಂದಳು. ಜನರೆಲ್ಲ ಲಾವೋತ್ಸುನ ಬಳಿಗೋಡಿ ಅವನ ಕಾಲು ಹಿಡಿದು ತಾವೆಸಗಿದ ಅಪರಾಧವನ್ನು ಒಪ್ಪಿಕೊಂಡು ಕ್ಷಮೆ ಬೇಡಿದರು. ‘ಇದು ನಿಮ್ಮ ಮಗುವಲ್ಲ. ನಿಮ್ಮನ್ನು ಅವಮಾನ ಮಾಡಿದೆವು, ಕ್ಷಮಿಸಿ’ ಎಂದರು. ಅದಕ್ಕೂ ಲಾವೋತ್ಸುವಿನದು ‘ಹಾಗೆನ್ನುವಿರೇನು?’ ಎಂಬ ಶಾಂತ ಉತ್ತರ. ಮಗುವು ಆಗಲೇ ಹಲವು ತಿಂಗಳು ಗುರುವಿನೊಂದಿಗೆ ಸಂತೋಷದಿಂದ ಕಳೆದಿತ್ತು. ಜನರು-‘ಇದು ನಿಮ್ಮ ಮಗುವಲ್ಲ. ಅದನ್ನಿಲ್ಲಿ ಕೊಡಿ. ನಿಮಗೆ ಸುಮ್ಮನೆ ತೊಂದರೆ ಕೊಟ್ಟೆವು’ ಎಂದರು. ಅದೇ ಶಾಂತಚಿತ್ತದಿಂದ ಮಗುವನ್ನು ಲಾವೋತ್ಸು ಮರಳಿಕೊಟ್ಟು ಎಂದಿನ ಜೀವನ ಸಾಗಿಸಿದ.

ಮಹಾಜ್ಞಾನಿಗೆ ನ್ಯಾಯಾಧೀಶನ ಪಟ್ಟ: ಲಾವೋತ್ಸುನ ಜೀವನದಲ್ಲಿ ಇಂತಹ ಅನೇಕ ಮಹಾಪರಾಧಗಳ ಸುಳ್ಳು ಅಪವಾದ ಬಂದಿತ್ತು. ಆದರೆ ಕಡೆಗೆ ಸಮಾಜದಲ್ಲಿ, ರಾಷ್ಟ್ರದಲ್ಲಿಯೇ ಮಹಾಜ್ಞಾನಿಯೆಂದು ಖ್ಯಾತಿ, ಮಾನ್ಯತೆ ಪಡೆದ. ಇದನ್ನರಿತ ರಾಜ ಅತ್ಯುತ್ಸಾಹಿತನಾಗಿ ಲಾವೋತ್ಸುನನ್ನು ಕರೆದು, ‘ನೀನು ದೇಶದ ಮಹಾಜ್ಞಾನಿ. ಆದ್ದರಿಂದ ನೀನು ದೇಶದ ಮುಖ್ಯ ನ್ಯಾಯಾಧೀಶ ಆಗಬೇಕು’ ಎಂದು ವಿನಂತಿಸಿದ. ‘ನಿನಗೆ ಖಚಿತವಿದೆಯೇ? ನನ್ನ ಜ್ಞಾನ ಮತ್ತು ಅಭಿರುಚಿ ನಿನ್ನ ಅಗತ್ಯಕ್ಕೆ ಸರಿಹೊಂದುವುದಿಲ್ಲವಲ್ಲ?’ ಎಂದು ಲಾವೋತ್ಸು ಸಂದೇಹ ವ್ಯಕ್ತಪಡಿಸಿದ. ‘ಇಲ್ಲ, ಇಲ್ಲ. ನೀನು ಮಹಾಜ್ಞಾನಿ. ನೀನು ತಪ್ಪು ಮಾಡುವ ಪ್ರಶ್ನೆಯೇ ಇಲ್ಲ. ನಿನ್ನನ್ನು ನ್ಯಾಯಾಧೀಶನಾಗಿ ಪಡೆಯುವುದು ದೇಶಕ್ಕೆ ಶ್ರೇಯಸ್ಸಿನ ಸಂಗತಿ’ ಎಂದ ರಾಜ. ಲಾವೋತ್ಸು ಒಪ್ಪಿಕೊಂಡ.

ಲಾವೋತ್ಸುಗೆ ಬಂದ ಮೊದಲ ವ್ಯಾಜ್ಯವು ಹೀಗಿತ್ತು. ಒಬ್ಬ ಧನವಂತನ ಮನೆಯಲ್ಲಿ ಯುವಕನೊಬ್ಬ ಜೀತದಾಳಿನಂತೆ ಕೆಲಸ ಮಾಡಿಕೊಂಡಿದ್ದ. ಬಾಲ್ಯದಿಂದಲೇ ಅವನು ಅಲ್ಲಿದ್ದ. ಅವನನ್ನು ಧನವಂತ ಜೀತಕ್ಕಾಗಿ ಕೊಂಡು ತಂದಿದ್ದ. ಯುವಕನಿಗೆ ಹೊಟ್ಟೆಗೆ ಆಹಾರ ಬಿಟ್ಟು ಮತ್ತೇನೂ ಅಲ್ಲಿ ಸಿಗುತ್ತಿರಲಿಲ್ಲ. ಹೀಗೆಯೇ 30 ವರ್ಷ ಕಳೆದಿದ್ದ. ಒಮ್ಮೆ ಮನೆಯಲ್ಲಿದ್ದ ಆಭರಣಗಳನ್ನು ಕದ್ದು ಓಡಿಹೋದ.

ಧನವಂತ ದೂರು ಕೊಡಲು ಯುವಕನನ್ನು ಹಿಡಿದು ನ್ಯಾಯಾಲಯಕ್ಕೆ ಕರೆತಂದಿದ್ದ. ಧನವಂತ ರೋಷಾವೇಶದಿಂದ ಬೈಗುಳದ ಸುರಿಮಳೆ ಸುರಿಸುತ್ತ-‘ಈ ಮೂರ್ಖನನ್ನು ಮಗುವಿನಿಂದಲೇ ಸಾಕಿ ಸಲಹಿದೆ. ಅವನಲ್ಲಿ ಏನೇನೂ ಇರಲಿಲ್ಲ. ನಾನೇ ಅವನನ್ನು ಬೀದಿಯಿಂದ ಎತ್ತಿತಂದು ಸಾಕಿದೆ. ಇಲ್ಲದಿದ್ದರೆ ಅವನು ಎಂದೋ ಸತ್ತಿರುತ್ತಿದ್ದ. ಅವನನ್ನು ದೊಡ್ಡವನಾಗಿ ಮಾಡಿ ಬದುಕಿಗೆ ಹಚ್ಚಿದೆ. ಈಗ ಇವನು ನನ್ನಲ್ಲೇ ಕಳ್ಳತನಕ್ಕೆ ಇಳಿದಿದ್ದಾನೆ. ಇವನಿಗೆ ಮರಣದಂಡನೆಯ ಶಿಕ್ಷೆ ಕೊಡಬೇಕು’ ಎಂದು ಕಿರುಚಾಡಿದ. ಲಾವೋತ್ಸು ಇಬ್ಬರ ಅಹವಾಲನ್ನೂ ಕೇಳಿದ ನಂತರ, ‘ಯುವಕನು ಕದ್ದಿರುವ ವಸ್ತುಗಳಲ್ಲಿ ಅರ್ಧವನ್ನು ಇಟ್ಟುಕೊಂಡು ಇನ್ನರ್ಧವನ್ನು ರಾಜ್ಯದ ಬೊಕ್ಕಸಕ್ಕೆ ಒಪ್ಪಿಸಬೇಕು. ಧನವಂತನನ್ನು 10 ವರ್ಷಗಳ ಕಾಲ ಜೈಲಿನಲ್ಲಿ ಇಡಬೇಕು’ ಎಂದು ತೀರ್ಪು ನೀಡಿದ. ಎಲ್ಲರೂ ದಂಗಾಗಿಹೋದರು. ರಾಜನ ಬಳಿ ಬಂದ ಜನರು, ‘ಲಾವೋತ್ಸು ಹುಚ್ಚನಿರಬೇಕು. ನಾವು ಕಳ್ಳನನ್ನು ಮಾಲಿನ ಸಮೇತ ಹಿಡಿದುಕೊಟ್ಟರೆ ಅವನಿಗೆ ಅರ್ಧದಷ್ಟು ಮರಳಿಸಿ ಇನ್ನರ್ಧ ಬೊಕ್ಕಸಕ್ಕೆ ಎಂದ. ಸಾಲದೆಂದು ಧನವಂತನಿಗೆ ಜೈಲುವಾಸ ವಿಧಿಸಿದ್ದಾನೆ’ ಎಂದು ದೂರಿತ್ತರು. ರಾಜನೂ ಬೆರಗಾದ.

ಲಾವೋತ್ಸುನನ್ನು ಕೇಳಿದಾಗ ಆತ, ‘ಹೌದು, ಈ ಯುವಕ ಧನವಂತನ ಮನೆಯಲ್ಲೇ ಬೆಳೆದಿದ್ದಾನೆ. ಮನೆಯ ಮಗನಾಗಿದ್ದಾನೆ. ಬೇರೆಡೆ ಹುಟ್ಟಿದ್ದರೂ ಮನೆಯವರು ಅವನನ್ನು ಬೆಳೆಸಿದ್ದಾರೆ. ತನ್ನ ಸುತ್ತ ಧನಕನಕ, ಒಳ್ಳೆಯ ಆಹಾರವನ್ನು ನೋಡುತ್ತಲೇ ಬಂದಿದ್ದಾನೆಯೇ ಹೊರತು ಅವನಿಗೆ ಏನನ್ನೂ ಮುಟ್ಟಲೂ ಅವಕಾಶವಿಲ್ಲ. 30 ವರ್ಷದಿಂದ ಸಿರಿವಂತರಲ್ಲಿ ಇದ್ದೂ ಹೀನಾಯ ದಾರಿದ್ರ್ಯ ಅನುಭವಿಸುತ್ತಿದ್ದಾನೆ. ಅದಕ್ಕೇ ಅವನು ಕದ್ದ. ಮನೆಯ ಮಗನಾಗಿ ಆ ಆಭರಣಗಳ ಮೇಲೆ ಇವನಿಗೆ ಹಕ್ಕುಂಟು. ಮನೆಯ ಮಾಲೀಕನಿಗೆ ಹೇಳದೇ ಹೋದುದರಿಂದ ಅರ್ಧದಷ್ಟನ್ನು ಅವನಿಂದ ಹಿಂತೆಗೆದುಕೊಂಡು ರಾಜಬೊಕ್ಕಸಕ್ಕೆ ಕೊಡಲಾಗಿದೆ. ಮನೆಯಲ್ಲಿ ಮಗುವನ್ನು ಬೆಳೆಸುವಾಗ ಅವನಲ್ಲಿ ಆಸೆ ಹುಟ್ಟಿಸಿ ಕೊಡದೆ ಹಿಂಸಿಸಿದ್ದಕ್ಕೆ 10 ವರ್ಷದ ಜೈಲುವಾಸ ವಿಧಿಸಲಾಗಿದೆ’ ಎಂದು ವಿವರಿಸಿದ. ಇಂದು ನಾವೇನಾದರೂ ಈ ನಿಟ್ಟಿನಲ್ಲಿ ಯೋಚಿಸುತ್ತ ತೀರ್ಪು ನೀಡಿದರೆ ಜಗತ್ತಿನಲ್ಲಿ ಏನಾಗಬಹುದು ಯೋಚಿಸಿ?!

ತನ್ನ 84ನೇ ವರ್ಷದಲ್ಲಿ ಮರಣಶಯ್ಯೆಯಲ್ಲಿದ್ದ ಲಾವೋತ್ಸು ಬಳಿ ಶಿಷ್ಯರೆಲ್ಲರೂ ಕಡೆಯ ಸಂದೇಶಕ್ಕಾಗಿ ಸೇರಿ ‘ಗುರುವೇ, ನಿಮ್ಮ ಸಂತೋಷದ ಗುಟ್ಟೇನು? ನೀವು ಬಹಳ ಸಂಕಟದ ಪರಿಸ್ಥಿತಿಯಲ್ಲಿದ್ದಾಗಲೂ ಸಂತೋಷವಾಗಿಯೇ ಅವನ್ನು ಎದುರಿಸಿದಿರಿ, ಹೇಗೆ?’ ಎಂದು ಪ್ರಶ್ನಿಸಿದರು. ಗುರು ಹೇಳಿದ- ‘ಅದರಲ್ಲೇನೂ ಗುಟ್ಟಿಲ್ಲ. ದಿನವೂ ಬೆಳಗ್ಗೆ ಎದ್ದೊಡನೆ ಇವತ್ತು ಸಂತೋಷವಾಗಿರಬೇಕೋ ಅಥವಾ ದುಃಖವೋ? ಎಂದು ಪ್ರಶ್ನೆಯೇಳುತ್ತಿತ್ತು. ಇವತ್ತಿನವರೆಗೆ ನಾನು ಸಂತೋಷವನ್ನೇ ಆಯ್ದುಕೊಂಡಿದ್ದೆ ಅಷ್ಟೇ!’

(ಸದ್ಗುರು ಅವರು ಯೋಗಿ, ದಾರ್ಶನಿಕ, ಆಧ್ಯಾತ್ಮಿಕ ನಾಯಕ. www.isha.sadhguru.org) (ಸದ್ಗುರುಗಳ ಇತರ ಪುಸ್ತಕ/ವಿವರಗಳಿಗೆ ಸಂರ್ಪಸಿ- [email protected])

Leave a Reply

Your email address will not be published. Required fields are marked *

Back To Top