More

    ಅಮೃತಧಾರೆ|ಆಹ್ಲಾದವನ್ನು ಹೆಚ್ಚಿಸಿಕೊಳ್ಳುವುದು ಹೇಗೆ?

    ಬಹಳಷ್ಟು ಜನರು ಅನುಭವಗಳನ್ನು ತುಂಬ ಕಾಲ ಹಿಡಿದಿಟ್ಟುಕೊಳ್ಳುವುದಿಲ್ಲ. ಉಲ್ಲಾಸವನ್ನು ಪ್ರಾಣದ ಮಟ್ಟಕ್ಕೆ ತೆಗೆದುಕೊಂಡು ಹೋಗುವುದಿಲ್ಲ. ಜೀವನದಲ್ಲಿ ಇಲ್ಲಿಯವರೆಗೆ ಬಹಳಷ್ಟು ಸಂತಸಕರ ವಿಷಯಗಳು ನಡೆದಿರುತ್ತವೆ, ಆದರೆ ಹಿಂದಕ್ಕೆ ತಿರುಗಿ ನೋಡಿದಾಗ, ಉಲ್ಲಾಸಮಯವಾಗಿ ಎಷ್ಟು ಹೊತ್ತು ಇದ್ದೀರೆಂದು ಪ್ರಶ್ನಿಸಿಕೊಳ್ಳಿ.

    ಅಮೃತಧಾರೆ|ಆಹ್ಲಾದವನ್ನು ಹೆಚ್ಚಿಸಿಕೊಳ್ಳುವುದು ಹೇಗೆ?ಒಬ್ಬ ಶ್ರೀಮಂತ ವ್ಯಕ್ತಿ ಸತ್ತುಹೋದ. ಆಗ ಶಂಕರನ್ ಪಿಳ್ಳೈಯ ನೆರೆಮನೆಯವನು ಕೇಳಿದ, ‘ಅವನು ಏನನ್ನು ಬಿಟ್ಟುಹೋದ..?’ ಪಿಳ್ಳೈ ನಕ್ಕು ಹೇಳಿದ, ‘ಒಂದೊಂದು ಪೈಸೆಯನ್ನೂ.’ ಪ್ರತಿಯೊಂದು ಪೈಸೆ, ಪ್ರತಿಯೊಂದು ಒಡವೆ, ಪ್ರತಿಯೊಂದು ಸಣ್ಣ ವಸ್ತು- ನಾವು ಇಲ್ಲಿ ಏನೆಲ್ಲ ಶೇಖರಿಸಿದ್ದೇವೆಯೋ ಅದಕ್ಕೆಲ್ಲ ಯಾವ ಮಹತ್ವವೂ ಇಲ್ಲ. ನಾವು ನಮ್ಮೊಳಗಿರುವ ಜೀವದ ಕುರಿತಾಗಿ ಏನನ್ನು ಮಾಡಿಕೊಳ್ಳುತ್ತೇವೆಯೋ ಅದೇ ಮಹತ್ವ ಹೊಂದಿರುತ್ತದೆ. ಜೀವನ್ಮುಖಿ ಆಗಿದ್ದರೆ, ಆಸೆ ಅಥವಾ ಮಮಕಾರಗಳು ಅಡ್ಡಿಯಾಗುವುದಿಲ್ಲ. ಕೋಪ, ದ್ವೇಷಗಳಿಗೆ ಸಮಯ ಇರುವುದಿಲ್ಲ. ಒಮ್ಮೆ ನಿಮ್ಮ ಅಸ್ತಿತ್ವದ ಮೌಲ್ಯ ನಿಮಗೆ ಅರ್ಥವಾದ ಮೇಲೆ ಉಲ್ಲಾಸ, ಪ್ರೀತಿ, ಆನಂದದಿಂದ ಇರಲು ಸಹಜವಾಗಿಯೇ ಸಾಧ್ಯವಾಗುವುದು.

    ದುರದೃಷ್ಟವಶಾತ್ ಪರಿಸ್ಥಿತಿ ಏನೆಂದರೆ, ಬಹಳಷ್ಟು ಜನರು ಚಿಕ್ಕಚಿಕ್ಕ ಸಂತೋಷವನ್ನು ಅನುಭವಿಸಲು ಕಷ್ಟಪಡುತ್ತಾರೆ. ಅವರು ಏಕೆ ಈ ಗುಣಗಳನ್ನು ತಮ್ಮೊಳಗೆ ನೆಲೆಗೊಳಿಸಿಕೊಳ್ಳಲಿಲ್ಲ ಎಂಬುದನ್ನು ತಾಂತ್ರಿಕ ದೃಷ್ಟಿಯಿಂದ ನೋಡೋಣ.

    ಉತ್ತೇಜಕ ಮತ್ತು ಸಂಸ್ಕಾರಗಳು: ಜೀವನದಲ್ಲಿನ ಎಲ್ಲ ಅನುಭವಗಳು ನಮಗೆ ಹೇಗೆ ಉಂಟಾಗುತ್ತವೆ? ತಣ್ಣನೆ ಗಾಳಿಯನ್ನು ಉಸಿರಾಡಿದಾಗ, ನಿಮಗದು ತಣ್ಣಗಿದೆ ಎಂದು ಹೇಗೆ ತಿಳಿದುಬರುತ್ತದೆ? ಸ್ಪರ್ಶ, ವಾಸನೆ, ರುಚಿ ಅಥವಾ ಯಾವುದೇ ಶಬ್ದವನ್ನು ಕೇಳಿಸಿಕೊಂಡಾಗ, ವಾಸ್ತವದಲ್ಲಿ, ಅದು ನಿಮ್ಮ ಇಂದ್ರಿಯಗಳನ್ನು ಮುಟ್ಟುತ್ತದೆ. ಅಲ್ಲಿಂದ, ನರಗಳು ಅದನ್ನು ಮಿದುಳಿಗೆ ಕಳಿಸುತ್ತದೆ ಮತ್ತು ಹಿತವಾದ ಅಥವಾ ಅಹಿತವಾದ ಅನುಭವವನ್ನು ಸೃಷ್ಟಿಸುತ್ತದೆ. ಹಿತ ಅಥವಾ ಅಹಿತವಾದ ಅನುಭವ ಹೊರಗಿಂದ ಬರುವ ಉತ್ತೇಜನೆಯ ಪರಿಣಾಮ ಮಾತ್ರವೇ ಅಲ್ಲ. ಆ ಕ್ಷಣದಲ್ಲಿ ನಿಮ್ಮ ಪರಿಸ್ಥಿತಿ ಕೂಡ ಅದಕ್ಕೆ ಕಾರಣವಾಗುತ್ತದೆ. ಉದಾಹರಣೆಗೆ, ಮಾನಸಿಕವಾಗಿ ಕ್ಷೋಭೆಯಲ್ಲಿ ಇದ್ದರೆ, ಆಗ ಯಾರಾದರೂ ಒಳ್ಳೆಯ ಸಂಗೀತವನ್ನು ಹಾಕಿದರೂ, ಅದು ನಿಮ್ಮನ್ನು ಕೋಪಕ್ಕೊಳಗಾಗಿಸುತ್ತದೆ. ಹಿತವಾದ ಸಂಗೀತ ಯಾವಾಗಲೂ ಹಿತವಾಗಿ ಇರಬೇಕಾಗಿಲ್ಲ- ಅದಕ್ಕೆ ನೀವು ತಯಾರಾಗಿರಬೇಕು.

    ಅನುಭವ ಮೂಲಭೂತವಾಗಿ ಎರಡು ವಿಷಯಗಳ ಮೇಲೆ ಆಧಾರಿತವಾಗಿದೆ. ಒಂದು ಉತ್ತೇಜನೆ, ಇನ್ನೊಂದು ಆ ಸಮಯದಲ್ಲಿ ನೀವು ಹೇಗಿದ್ದೀರಿ ಎಂಬುದು, ಇದು ನಿಮ್ಮ ಪೂರ್ವ ಅನುಭವಗಳ ಮೇಲೆ ಆಧಾರಿತವಾಗಿ ಇರುತ್ತದೆ, ಬೇರೆ ಮಾತುಗಳಲ್ಲಿ ಹೇಳಬೇಕು ಎಂದರೆ ಅದು ನಿಮ್ಮ ಸಂಸ್ಕಾರ ಅಥವಾ ಕರ್ಮದ ಮೇಲೆ ಆಧಾರಿತವಾಗಿ ಇರುತ್ತದೆ. ಈ ಕ್ಷಣದಲ್ಲಿ, ನಿಮ್ಮ ಕರ್ಮ ಮಾನಸಿಕ ಕ್ಷೋಭೆ ಆಗಿದ್ದರೆ, ಯಾರಾದರೂ ನಿಮಗೆ ಒಳ್ಳೆಯ ಕೆಲಸ ಮಾಡಿದರೂ; ಅವರ ಮೇಲೆ ಕ್ಷೋಭೆಯನ್ನು ಹೊರಹಾಕುವಿರಿ. ಹೊರಗಿನ ಉತ್ತೇಜನೆ ಮತ್ತು ಕರ್ಮ ಸರಿದೂಗಿದರೆ ಉಲ್ಲಾಸದಿಂದ ಇರುವಿರಿ. ಒಂದು ಉತ್ತೇಜನೆ ಇಂದ್ರಿಯಗಳನ್ನು ಮುಟ್ಟಿದರೆ ಅದು ನರಗಳ ಮೂಲಕ ಮುಂದಕ್ಕೆ ಹೋಗುತ್ತಿರುವಾಗಲೇ, ಕೆಲವು ಪ್ರಕ್ರಿಯೆಗಳು ನಡೆಯುತ್ತವೆ. ನರಮಂಡಲವನ್ನು ಮೀರಿ ಪ್ರಾಣಮಯಕೋಶ ಇದೆ. ಇದು ನಿಮ್ಮ ನರಗಳಿಗಿಂತ ಹೆಚ್ಚು ವಿಸ್ತಾರವಾಗಿದೆ. ಅದು ನರಮಂಡಲಕ್ಕಿಂತ ನೂರಕ್ಕೆ ಒಂದರಷ್ಟು ನಿಧಾನವಾಗಿ ಚಲಿಸುತ್ತದೆ.

    ಉದಾಹರಣೆಗೆ, ಸೂರ್ಯೋದಯ ನೋಡಿದಾಗ ನರಗಳು ಉಲ್ಲಸಿತಗೊಳ್ಳುತ್ತವೆ. ಒಂದು ರೀತಿಯ ಉತ್ತೇಜನೆ ಬಂದು ನರಮಂಡಲಕ್ಕೆ ಪ್ರಸಾರವಾಗಿ ಆ ರೀತಿಯ ಅನುಭವವನ್ನು ಮಾಡಿಸುತ್ತದೆ, ಸಾಧಾರಣವಾಗಿ, ಜನರು ‘ಆಹಾ’ ಎಂದೋ ಅಥವಾ ಆ ತರಹ ಏನೋ ಒಂದು ಹೇಳುತ್ತಾರೆ ಮತ್ತು ಬೇಗ ಮುಂದಿನ ವಿಷಯಕ್ಕೆ ಹೋಗುತ್ತಾರೆ.

    ಇದನ್ನೂ ಓದಿ: ಮನೆ ತೊರೆದಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ನೆರವಾದ ‘ವಿಜಯವಾಣಿ’

    ಅನುಭವಗಳನ್ನು ಹಿಡಿದಿಟ್ಟುಕೊಳ್ಳುವುದು: ಬಹಳಷ್ಟು ಜನರು ಅನುಭವಗಳನ್ನು ತುಂಬ ಕಾಲ ಹಿಡಿದಿಟ್ಟುಕೊಳ್ಳುವುದಿಲ್ಲ. ಉಲ್ಲಾಸವನ್ನು ಪ್ರಾಣದ ಮಟ್ಟಕ್ಕೆ ತೆಗೆದುಕೊಂಡು ಹೋಗುವುದಿಲ್ಲ. ಜೀವನದಲ್ಲಿ ಇಲ್ಲಿಯವರೆಗೆ ಬಹಳಷ್ಟು ಉಲ್ಲಾಸಮಯ ವಿಷಯಗಳು ನಡೆದಿರುತ್ತವೆ, ಆದರೆ ಹಿಂದಕ್ಕೆ ತಿರುಗಿ ನೋಡಿದಾಗ, ಉಲ್ಲಾಸಮಯವಾಗಿ ಎಷ್ಟು ಹೊತ್ತು ಇದ್ದೀರೆಂದು ಪ್ರಶ್ನಿಸಿಕೊಳ್ಳಿ. ಬಹುತೇಕರಿಗೆ ಆ ಅನುಭವವನ್ನು ಬಹಳ ಸಮಯ ಹಿಡಿದಿಡಲು ಸಾಧ್ಯವಾಗದು. ಅಷ್ಟೇ ಅಲ್ಲ, ಕೆಲವು ಗಂಟೆಗಳ ಕಾಲ ಯಾರೊಂದಿಗೂ ಮಾತನಾಡದೆ ಸುಮ್ಮನೆ ಕುಳಿತುಕೊಳ್ಳಲಾಗುವುದಿಲ್ಲ, ಯಾರಿಗೂ ಮೆಸೇಜ್ ಕಳುಹಿಸದೆ, ಇಂಟರ್ನೆಟ್ ನೋಡದೆ ಇರಲು ಸಾಧ್ಯವಾಗುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಏಕಾಗ್ರತೆಯನ್ನು ದೊಡ್ಡ ಪ್ರಮಾಣದಲ್ಲಿ ಹಾಳು ಮಾಡುತ್ತಿರುವುದು ನಿಮ್ಮ ಮೊಬೈಲ್ ಫೋನ್. ನಿಮ್ಮ ಫೋನನ್ನು ನಾವು ತೆಗೆದುಕೊಂಡು ಬಿಟ್ಟರೆ, ನೀವು ಧ್ಯಾನಿಯಾಗಿಬಿಡುವಿರಿ, ಮನಸ್ಸನ್ನು ದಾಟುವ ಅಂಚಿನವರೆಗೂ ಹೋಗಬಲ್ಲಿರಿ!

    ಹಾಗಾಗಿ, ಸೂರ್ಯೋದಯ ನೋಡಿ ಆಹ್ಲಾದಕರವಾದ ಅನುಭವವನ್ನು ಒಂದು ಕ್ಷಣ ಅನುಭವಿಸುತ್ತೀರಿ, ಅದರರ್ಥ ಅನುಭವವು ಇಂದ್ರಿಯ ಅಥವಾ ನರಗಳ ಆನಂದ. ಅದನ್ನು ಪ್ರಾಣದ ಒಂದು ಭಾಗವನ್ನಾಗಿ ಮಾಡಲು, ಅದನ್ನು ಇನ್ನೂ ಸ್ವಲ್ಪ ಕಾಲ ಹಿಡಿದಿರಬೇಕು. ಅದನ್ನು ಅಳೆಯಲು ಸಾಧ್ಯವಾಗದಿರುವುದರಿಂದ, ಅದು ಪ್ರಾಣಮಯಕೋಶದಲ್ಲಿ ನರಗಳಿಗಿಂತ ನೂರನೆಯ ಒಂದು ಭಾಗದಷ್ಟು ನಿಧಾನವಾಗಿ ಚಲಿಸುತ್ತದೆ. ಸಾಧಾರಣವಾಗಿ, ಯಾವುದೇ ಒಂದು ಒಳ್ಳೆಯ ಅನುಭವವನ್ನು ಹಿಡಿದಿಡಲು ಸಾಧ್ಯವಾದರೆ- ಅದು ರುಚಿ, ವಾಸನೆ, ಶಬ್ದ ಅಥವಾ ಸ್ಪರ್ಶವೇ ಆಗಿರಲಿ- 24 ನಿಮಿಷ ಹಿಡಿದಿಟ್ಟರೆ, ಅದು ಪೂರ್ಣ ಪ್ರಾಣಮಯಕೋಶವನ್ನು ಆವರಿಸುತ್ತದೆ.

    ತುಂಬ ಜನರಿಗೆ ಇದು ಸಾಧ್ಯವಾಗುವುದಿಲ್ಲ. ಇದಕ್ಕೆ ಕಾರಣ ಮನಸ್ಸಿನ ಚಾಂಚಲ್ಯ. ಆಧುನಿಕ ವಿಜ್ಞಾನ ಮನಸ್ಸಿನ ಬಗ್ಗೆ ತಿಳಿದುಕೊಂಡಿರುವುದು- ಅದರ ವರ್ತನೆಗಳು, ರಾಸಾಯನಿಕ ಬದಲಾವಣೆಗಳು ಮತ್ತು ನರಗಳ ವರ್ತನೆಯನ್ನು ಪರಿಶೀಲಿಸಿ. ಇವು ಯಾವುದೂ ಮನಸ್ಸಿನ ನಿಜಸ್ವರೂಪವನ್ನು ತೋರಿಸುವುದಿಲ್ಲ. ಭೌತಿಕ ಶರೀರ ಎನ್ನುವುದಿದೆ, ಇದನ್ನು ನಾವು ಈ ಭೂಮಿಯಿಂದ ಶೇಖರಿಸಿದ್ದೇವೆ. ಮಾನಸಿಕ ಶರೀರವಿದೆ, ಅದು ಮಾಹಿತಿಯ ಶೇಖರಣೆ. ಮತ್ತು ಪ್ರಜ್ಞೆ ಎನ್ನುವುದು ದೇಹ ಮತ್ತು ಮನಸ್ಸಿನ ಕ್ಷೇತ್ರದಿಂದ ಆಚೆ ಇರುವಂತಹುದು.

    ಇದನ್ನೂ ಓದಿ:  VIDEO: “ನಮಸ್ಕಾರ ಗೆಳೆಯರೆ.. “- ಕನ್ನಡದಲ್ಲೇ ಜಾಗೃತಿ ಮೂಡಿಸ್ತಿದ್ದಾರೆ ಕ್ರಿಕೆಟ್ ದೇವರು

    ಸಣ್ಣಪುಟ್ಟ ವಿಷಯಗಳನ್ನು ಗಮನಿಸುವುದು: ಮನಸ್ಸು ಪ್ರಜ್ಞೆಯ ಒಂದು ರೀತಿಯ ಚಟುವಟಿಕೆ. ಕರ್ಮದ ಅನುಸಾರವಾಗಿ ಪ್ರಜ್ಞೆ ಒಂದು ತರಹದ ಚಟುವಟಿಕೆ ಮಾಡುತ್ತಿರುತ್ತದೆ. ಬೇರೆ ಮಾತಿನಲ್ಲಿ ಹೇಳಬೇಕೆಂದರೆ, ಹೊರಗಿನ ಉತ್ತೇಜನೆಯ ಅನುಸಾರವಾಗಿ ಪ್ರಜ್ಞೆ ಕೆಲಸ ಮಾಡುತ್ತಿರುತ್ತದೆ. ಮುಂದಿನ ಬಾರಿ ಬೇಗ ಎದ್ದು, ಸೂರ್ಯೋದಯವನ್ನು ಸುಮ್ಮನೆ ನೋಡಿ, ‘ಆಹಾ ಇದು ನನಗೆ ಇಷ್ಟ’ ಎಂದು ಹೇಳದೆ ಅಥವಾ ಅದರ ಚಿತ್ರವನ್ನು ತೆಗೆದು ಹತ್ತು ಜನರಿಗೆ ಕಳಿಸದೆ ಅಥವಾ ಅಂತಹದೂ ಏನೋ ಒಂದು ಮಾಡದೆ ಸುಮ್ಮನೆ ನೋಡಿ. ಈ ಪ್ರಪಂಚದಲ್ಲಿ ಎಲ್ಲೆಡೆ ತಪ್ಪದೆ ಸೂರ್ಯೋದಯವಾಗುತ್ತದೆ- ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕುವ ಅವಶ್ಯಕತೆ ಇಲ್ಲ!

    ನಿಮ್ಮಲ್ಲಿ ಉಲ್ಲಾಸದ ಒಂದು ಅನುಭವವನ್ನು ತರಿಸುವುದು ಸುಲಭವಲ್ಲ! ಬಹಳ ಷರತ್ತುಗಳನ್ನು ನೆರವೇರಿಸಬೇಕು. ನಿಮ್ಮ ಸಂಗಾತಿ ನೀವು ಏನನ್ನು ಆಶಿಸುತ್ತಿರೋ ಅದನ್ನು ಮಾಡಬೇಕು; ಮಕ್ಕಳು ಶಾಲೆಯಲ್ಲಿ ಮೊದಲ ರ್ಯಾಂಕ್ ಬರಬೇಕು; ಬ್ಯಾಂಕ್ ಬ್ಯಾಲೆನ್ಸ್ ಜಾಸ್ತಿ ಇರಬೇಕು; ಷೇರು ಮಾರ್ಕೆಟ್ ಚೆನ್ನಾಗಿರಬೇಕು- ಬಹಳ ವಿಷಯಗಳು ನಡೆಯಬೇಕು. ಬೆಳಗಿನ ಸೂರ್ಯೋದಯದ ದೃಶ್ಯ ಬಹಳಷ್ಟು ಜನರಿಗೆ ಉಲ್ಲಾಸ ಮೂಡಿಸಲು ಸಾಲದು. ಈ ಎಲ್ಲ ಅಂಶಗಳು ಒದಗಿ ಉಲ್ಲಾಸಮಯ ಅನುಭವ ಸೃಷ್ಟಿಸಿದಾಗ, ನೀವು ಅದನ್ನು ಹೇಗೋ ಮಾಡಿ 24 ನಿಮಿಷ ಹಿಡಿದಿರಬೇಕು.

    ಬಹುತೇಕರಿಗೆ ಆನಂದದಿಂದ ಇರಲು ಸಾಧ್ಯವಾಗದೇ ಇರುವುದಕ್ಕೆ ಕಾರಣ ಅವರು ಸರಳ ವಿಷಯಗಳನ್ನು ಗುರುತಿಸದೆ ಇರುವುದು. ಉದಾಹರಣೆಗೆ, ನಾನು ಅಮೆರಿಕಕ್ಕೆ ಮೊದಲನೆಯ ಬಾರಿ ಹೋದಾಗ, ಬೇಸಿಗೆ ಶಿಬಿರಗಳನ್ನು ನಾವು ಶಾಲೆಗಳಲ್ಲಿ ನಡೆಸುತ್ತಿದ್ದೆವು. ಆಗ ಗಮನಿಸಿದ್ದೇನೆಂದರೆ ಎಲ್ಲ ಕಡೆ ಉಸಿರು ಹೋಗುವಂಥ ತುರ್ತು ಪರಿಸ್ಥಿತಿ ಇರುತ್ತಿತ್ತು. ಸ್ವಿಮ್ಮಿಂಗ್ ಪೂಲ್​ನಲ್ಲಿ ಮುಳುಗಿದರೆ ಹಾಗಾಗಬಹುದೆಂದು ನನಗೆ ಅರ್ಥವಾಗುತ್ತದೆ. ನಾವು ಈಜುವುದನ್ನು ಕಲಿಯಬೇಕು; ಇಲ್ಲದಿದ್ದರೆ ಮುಳುಗುತ್ತೇವೆ. ಆದರೆ ಜನರು ತಿನ್ನುವಾಗ ಏಕೆ ಉಸಿರು ಹಿಡಿಯುತ್ತದೆ? ಇದಕ್ಕೆ ಮುಖ್ಯ ಕಾರಣ, ಅವರು ತಿನ್ನುವಾಗ ಹೆಚ್ಚು ಮಾತನಾಡುತ್ತಿರುತ್ತಾರೆ. ತಿನ್ನುವಾಗ ಮಾತನಾಡಿದರೆ ಅದು ತಪ್ಪುದಾರಿಯಲ್ಲಿ ಹೋಗುತ್ತದೆ, ನಿಸ್ಸಂಶಯವಾಗಿ ನೀವು ಎರಡನ್ನೂ ಒಂದೇ ಸಾರಿ ಮಾಡಲು ಸಾಧ್ಯವಿಲ್ಲ. ಮಾಡಬೇಕಾಗಿರುವುದು ಇಷ್ಟೇ-ಸುಮ್ಮನೆ ತಿನ್ನಬೇಕು ಮತ್ತು ಅದನ್ನು ಆನಂದಿಸಬೇಕು. ಕೆಲವು ತುತ್ತುಗಳನ್ನು ತಿಂದ ಮೇಲೆ, ನಿಮ್ಮಲ್ಲಿ ಎಷ್ಟು ಜನ ಅದರ ರುಚಿಯನ್ನು ಇನ್ನೂ ಆಸ್ವಾದಿಸುತ್ತೀರಿ? ಸೂರ್ಯೋದಯದ ಎರಡು ನಿಮಿಷಗಳ ನಂತರ ಎಷ್ಟು ಜನ ಅದನ್ನು ಹೆಚ್ಚು ಸಮಯ ಆಸ್ವಾದಿಸುತ್ತೀರಿ? ಸಂಗೀತ ಕೇಳುತ್ತ ನಿಮಿಷಗಳಾದ ಮೇಲೆ ನಿಮ್ಮಲ್ಲಿ ಎಷ್ಟು ಜನರಿಗೆ ಇನ್ನೂ ರೋಮಾಂಚನ ಇರುತ್ತದೆ?

    ಇಂದ್ರಿಯಗಳ ಅನುಭವದ ಆನಂದದ ಜೊತೆ ಸಾಕಷ್ಟು ಸಮಯ ಇದ್ದರೆ, ಅದು ನರಮಂಡಲದಿಂದ ಪ್ರಾಣಮಯ ಕೋಶಕ್ಕೆ ಪ್ರವೇಶಿಸುತ್ತದೆ. ಒಮ್ಮೆ ಆ ಉಲ್ಲಾಸ ಪ್ರಾಣಮಯ ಕೋಶವನ್ನು ಆವರಿಸಿದರೆ ಅದು ಪ್ರೇಮವಾಗಲೀ ಸಂತೋಷವಾಗಲೀ ಆನಂದವಾಗಲೀ- ಅದು ಪ್ರಾಣಶಕ್ತಿಯ ಲಕ್ಷಣವಾಗುತ್ತದೆ. ಪ್ರಾಣಶಕ್ತಿಯೂ ಹಿತವಾದ ಮೇಲೆ ಆನಂದ ಸಹಜವಾಗಿಯೇ ಬರುತ್ತದೆ. ನೀವು ಆನಂದದಿಂದ ಇರಬೇಕಾದರೆ ಏನನ್ನೂ ಮಾಡಬೇಕಾಗಿಲ್ಲ. ಆನಂದ ನಿಮ್ಮ ಲಕ್ಷ್ಯ ಅಲ್ಲ- ಅದು ನಿಮ್ಮ ಸಹಜ ಸ್ಥಿತಿ ಎಂಬುದನ್ನು ಅರ್ಥ ಮಾಡಿಕೊಂಡರೆ ಸಾಕು.
    (ಸದ್ಗುರು ಅವರು ಯೋಗಿ, ದಾರ್ಶನಿಕ, ಆಧ್ಯಾತ್ಮಿಕ ನಾಯಕ. www.isha.sadhguru.org)

    ಮಾಜಿ ಕ್ರಿಕೆಟಿಗ ರಾಬಿನ್ ಸಿಂಗ್ ಕಾರು ಜಪ್ತಿ ಮಾಡಿದ ಚೆನ್ನೈ ಪೊಲೀಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts