More

    ತ್ಯಜ ದುರ್ಜನ ಸಂಸರ್ಗಂ ಭಜ ಸಾಧು ಸಮಾಗಮಂ

    ತ್ಯಜ ದುರ್ಜನ ಸಂಸರ್ಗಂ ಭಜ ಸಾಧು ಸಮಾಗಮಂಮಹಾಜ್ಞಾನಿ ಆಚಾರ್ಯ ಚಾಣಕ್ಯರ ಪ್ರಕಾರ ಜೀವನದ ಪರಮಗುರಿಯಾದ ಮೋಕ್ಷ ಸಾಧನೆಗೆ ನಾಲ್ಕು ಮೆಟ್ಟಿಲುಗಳಿವೆ. ದುರ್ಜನರ ಸಂಗವನ್ನು ತ್ಯಜಿಸುವುದು ಹಾಗೂ ಸಾಧು-ಸಜ್ಜನರ ಸಹವಾಸವನ್ನು ಬೆಳೆಸಿಕೊಳ್ಳುವುದು ಮೊದಲೆರಡು ಮೆಟ್ಟಿಲುಗಳಾಗಿವೆ. ಅವುಗಳನ್ನಿಲ್ಲಿ ವಿವರಿಸಲಾಗಿದೆ.

    ಸನಾತನ ಧರ್ಮದ ಪ್ರಕಾರ ಮಾನವ ಜೀವನದ ನಾಲ್ಕು ಗುರಿಗಳೆಂದರೆ – ಧರ್ಮ, ಅರ್ಥ, ಕಾಮ ಹಾಗೂ ಮೋಕ್ಷ. ಎಂದರೆ, ಧರ್ಮಬದ್ಧ ಜೀವನ, ಧರ್ಮದ ಆಧಾರದಲ್ಲಿ ಧನ ಸಂಪಾದನೆ, ಧರ್ಮದ ಚೌಕಟ್ಟಿನಲ್ಲಿ ಕಾಮನೆಗಳನ್ನು ಈಡೇರಿಸಿಕೊಳ್ಳುವುದು ಮತ್ತು ಪ್ರಾಪಂಚಿಕ ಮೋಹಗಳ ತ್ಯಾಗದಿಂದ ಮೋಕ್ಷ ಸಂಪಾದನೆ. ಈ ನಾಲ್ಕರ ಪೈಕಿ ಜೀವನದ ಪರಮಗುರಿಯಾದ ಮೋಕ್ಷ ಸಾಧನೆಯ ವಿಧಾನವನ್ನು ತಿಳಿಸುವಂತೆ ಇತ್ತೀಚೆಗೆ ಒಬ್ಬ ಸಾಧಕರು ನನ್ನನ್ನು ಕೇಳಿದರು.

    ಹಲವು ಜ್ಞಾನಿಗಳ ಬೋಧನೆಗಳಲ್ಲಿ ಹಾಗೂ ಅನೇಕ ಆಧ್ಯಾತ್ಮಿಕ ಗ್ರಂಥಗಳಲ್ಲಿ ಮೋಕ್ಷ ಸಾಧನೆಗಾಗಿ ಹಲವಾರು ಪಥ-ವಿಧಾನಗಳನ್ನು ಕಾಣಬಹುದು. ಈ ಪೈಕಿ ಅತ್ಯಂತ ವ್ಯವಸ್ಥಿತವಾಗಿದ್ದು, ಅನುಷ್ಠಾನಕ್ಕೆ ತರಲು ಸುಲಭವಾದ ವಿಧಾನವನ್ನು ಮಹಾಜ್ಞಾನಿ ಆಚಾರ್ಯ ಚಾಣಕ್ಯ ಈ ಕೆಳಗಿನ ಶ್ಲೋಕದಲ್ಲಿ ಅತಿ ಸರಳವಾಗಿ ಬೋಧಿಸಿದ್ದಾರೆ:

    ತ್ಯಜ ದುರ್ಜನ ಸಂಸರ್ಗಂ/ ಭಜ ಸಾಧು ಸಮಾಗಮಂ

    ಕುರು ಪುಣ್ಯಂ ಅಹೋರಾತ್ರಂ/ ಸ್ಮರ ನಿತ್ಯಂ ಅನಿತ್ಯತಾಂ

    ‘ದುರ್ಜನರ ಸಂಗವನ್ನು ತ್ಯಜಿಸಿ ಸಾಧು-ಸಜ್ಜನರ ಸಹವಾಸವನ್ನು ಬೆಳೆಸಿಕೋ. ಹಗಲಿರುಳೂ ಪುಣ್ಯಕಾರ್ಯಗಳನ್ನು ಮಾಡು. ಜೀವನದಲ್ಲಿ ಯಾವುದು ಶಾಶ್ವತ ಹಾಗೂ ಯಾವುದು ಅಶಾಶ್ವತವೆಂಬುದರ ಬಗ್ಗೆ ಚಿಂತನೆ ಮಾಡು.’

    ಇವನ್ನು ಮೋಕ್ಷ ಸಾಧನೆಗೆ ನಾಲ್ಕು ಸೋಪಾನ ಅಥವಾ ಮೆಟ್ಟಿಲುಗಳೆಂದು ಪರಿಗಣಿಸಬಹುದು.

    ಮೊದಲನೆಯ ಮೆಟ್ಟಿಲು: ತ್ಯಜ ದುರ್ಜನ ಸಂಸರ್ಗಂ 

    ದುರ್ಜನ ಸಂಗತ್ಯಾಗವೆಂದರೆ, ಭೌತಿಕ ಪ್ರಪಂಚವು ಮಾತ್ರ ಸತ್ಯ, ಆದ್ದರಿಂದ ಬದುಕಿರುವಾಗ ಇಂದ್ರಿಯ ಸುಖಗಳನ್ನು ಸಾಧ್ಯವಿದ್ದಷ್ಟೂ ಅನುಭವಿಸಬೇಕು, ಎಂದು ಪ್ರೇರೇಪಿಸಿ ನಮ್ಮನ್ನು ಪವಿತ್ರ ಆಧ್ಯಾತ್ಮಿಕಮಾರ್ಗದಿಂದ ವಿಚಲಿತಗೊಳಿಸಿ ಇಂದ್ರಿಯಭೋಗಗಳೆಡೆಗೆ ಸೆಳೆಯುವ ದುಷ್ಟರ ಸಹವಾಸ ಬಿಡುವುದು ಮಾತ್ರವಲ್ಲದೆ, ನಮ್ಮ ಮನಸ್ಸಿನಲ್ಲಿಯೇ ಇರುವ ಅಂತಹ ದುಷ್ಟ ಆಲೋಚನೆಗಳನ್ನೂ ತ್ಯಜಿಸಬೇಕು. ದೇಹ ಮಾತ್ರವೇ ಸತ್ಯ, ಆತ್ಮವೆಂಬುದೇ ಇಲ್ಲವೆಂದು ಭಾವಿಸುವುದೇ, ಆಧ್ಯಾತ್ಮಿಕಪಥದಲ್ಲಿ ಅಡ್ಡಿಯಾಗುವ ಅತ್ಯಂತ ದುಷ್ಟ ಆಲೋಚನೆ.

    ಹುಟ್ಟಿನಿಂದ ಪ್ರಾರಂಭವಾಗುವ ಈ ಬದುಕು ಸಾವಿನೊಂದಿಗೆ ಸಂಪೂರ್ಣವಾಗಿ ಅಂತ್ಯವಾಗುತ್ತದೆಯೆಂದು ‘YOLO – You-Only-Live-Once’ ಎಂಬ ಅಸತ್ಯದ ಭ್ರಮೆಯಲ್ಲಿಯೇ ಬದುಕುತ್ತಿರುವ ಇಂದಿನ ಪೀಳಿಗೆಯ ಜನರಿಗೆ ಆಧ್ಯಾತ್ಮಿಕತೆಯ ಯೋಚನೆಯೇ ಬರುವುದಿಲ್ಲವಷ್ಟೆ. ಆದರೆ, ಸತ್ಯವು ಈ ಜೀವನ ವಿಧಾನಕ್ಕೆ ಪೂರ್ಣ ಭಿನ್ನವಾಗಿದ್ದು, ನಾವು ದುಃಖದ ಈ ವಿಷವರ್ತಲದಿಂದ ಮೋಕ್ಷವನ್ನು ಪಡೆಯುವವರೆಗೆ ಪುನಃಪುನಃ ಹುಟ್ಟಿಬರುತ್ತಲೇ ಇರುತ್ತೇವೆಂದು ಸನಾತನ ಧರ್ಮವು ಬೋಧಿಸುತ್ತದೆ. ಇದನ್ನೇ ಮೃತ್ಯುವಿನ ಅಧಿದೇವತೆಯಾದ ಯಮಧರ್ಮರಾಯನು ಕಠೋಪನಿಷತ್ತಿನಲ್ಲಿ (ಮೊದಲನೆಯ ಅಧ್ಯಾಯ, ಎರಡನೆಯ ವಲ್ಲಿ, ಆರನೇ ಶ್ಲೋಕ) ಹೀಗೆ ಘೊಷಿಸಿದ್ದಾನೆ:

    ನ ಸಾಂಪರಾಯಃ ಪ್ರತಿಭಾತಿ ಬಾಲಂ/ ಪ್ರಮಾದ್ಯಂತಂ ವಿತ್ತಮೋಹೇನ ಮೂಢಂ

    ಅಯಂ ಲೋಕೋ ನಾಸ್ತಿ ಪರ ಇತಿ ಮಾನೀ/ ಪುನಃ ಪುನಃ ವಶಮಾಪದ್ಯತೇ ಮೇ

    ‘ಇಹಜೀವನವನ್ನು ಮೀರಿ ನಿಂತಿರುವ ಸತ್ಯವು, ಕೇವಲ ಧನ ಸಂಪಾದನೆಯ ಭ್ರಮೆಯಲ್ಲಿಯೇ ಬಿದ್ದಿರುವ ವಿವೇಕಶೂನ್ಯನಾದ ಮೂಢನಿಗೆ ಎಂದಿಗೂ ಗೋಚರವಾಗುವುದಿಲ್ಲ. ಅಂತಹ ಅವಿವೇಕಿಯು, ಈ ಭೌತಿಕ ಪ್ರಪಂಚವು ಮಾತ್ರವೇ ಸತ್ಯ, ಇದಕ್ಕಿಂತ ಮಿಗಿಲಾದ ಸತ್ಯವು ಬೇರೊಂದಿಲ್ಲವೆಂದು ಭ್ರಮಾಲೋಕದಲ್ಲಿಯೇ ಬಿದ್ದಿರುತ್ತಾನೆ. ಇದೇ ಕಾರಣದಿಂದಾಗಿ ಅವನು ಪುನಃ ಪುನಃ ನನ್ನ ವಶಕ್ಕೆ ಸಿಕ್ಕಿ ಒದ್ದಾಡುತ್ತಿರುತ್ತಾನೆ.’

    ಆದರೂ, ದೇವರ ಅಸ್ತಿತ್ವ ಮತ್ತು ಮೋಕ್ಷವೆಂಬ ಪರಮಗುರಿಯನ್ನು ನಂಬದ ನಾಸ್ತಿಕರು ಅಸಂಬದ್ಧ ತರ್ಕದ ಆಧಾರದಲ್ಲಿ ವಿತಂಡವಾದಗಳನ್ನು ಮಂಡಿಸಿ, ಆಸ್ತಿಕರ ಮನಸ್ಸಿನಲ್ಲಿಯೂ ಸಂಶಯದ ಬೀಜಗಳನ್ನು ಬಿತ್ತುತ್ತಾರೆ. ಇಂದ್ರಿಯಗಳ ಅನುಭವಕ್ಕೆ ಗೋಚರವಾಗುವ ವಸ್ತು-ವಿಷಯಗಳು ಮಾತ್ರವೇ ಸತ್ಯವೆಂಬ ತಪ್ಪು ಕಲ್ಪನೆಯೇ ಅವರ ವಾದಕ್ಕೆ ಆಧಾರ. ಅವರಿಗೆ ಭೌತಿಕ ಪ್ರಪಂಚವನ್ನು ಮೀರಿದ ಅಲೌಕಿಕ ವಿಷಯಗಳಲ್ಲಿ ವಿಶ್ವಾಸವಿರುವುದಿಲ್ಲ.

    ಇಂತಹ ಮೂಢರ ಮಾರ್ಗದರ್ಶನವು ಅಂಧರು ಅಂಧರಿಗೆ ದಾರಿ ತೋರಿಸಿದಂತೆ. ಅವರು ಎಂದಿಗೂ ಗಮ್ಯ ಸೇರಲು ಸಾಧ್ಯವಿಲ್ಲ, ಬದಲಿಗೆ ವಿನಾಶ ಹೊಂದುತ್ತಾರೆ. ಇದನ್ನೇ ಮುಂಡಕೋಪನಿಷತ್ತಿನಲ್ಲಿಯೂ (ಮೊದಲ ಮುಂಡಕ, ಎರಡನೇ ಖಂಡ, ಎಂಟನೇ ಶ್ಲೋಕ) ಉಲ್ಲೇಖಿಸಲಾಗಿದೆ:

    ಅವಿದ್ಯಾಯಾಮಂತರೇ ವರ್ತಮಾನಾಃ/ ಸ್ವಯಂ ಧೀರಾಃ ಪಂಡಿತಂ ಮನ್ಯಮಾನಾಃ/ ಜಂಘನ್ಯಮಾನಾಃ ಪರಿಯಂತಿ ಮೂಢಾಃ/ ಅಂಧೇನೈವ ನೀಯಮಾನಾ ಯಥಾಂಧಾಃ (1.2.8)

    ‘ಅಜ್ಞಾನಕೂಪದಲ್ಲಿ ಮುಳುಗಿರುವ ಮೂಢರು ತಮ್ಮನ್ನು ತಾವೇ ಜ್ಞಾನಿಗಳೆಂದು ಭಾವಿಸಿಕೊಂಡು ಇತರರಿಗೆ ತಮ್ಮ ಅಜ್ಞಾನವನ್ನೇ ಬೋಧಿಸಿ, ಅಂಧರಿಗೆ ಅಂಧರು ಮಾರ್ಗದರ್ಶನ ಮಾಡಿದಂತೆ, ಇತರರನ್ನೂ ದಾರಿತಪ್ಪಿಸುತ್ತಾರೆ. ಇಂತಹ ಮೂಢರು ಯಾವ ಗುರಿಯೂ ಇಲ್ಲದೆ ಭ್ರಾಂತಿಯ ಸುಳಿಯಲ್ಲಿ ಸಿಲುಕಿ ಸಂಸಾರಚಕ್ರದಲ್ಲಿ ಸುತ್ತುತ್ತಿರುತ್ತಾರೆ.’

    ಆದ್ದರಿಂದಲೇ, ಅಮೆರಿಕದ ಪ್ರಸಿದ್ಧ ಲೇಖಕ ಮಾರ್ಕ್ ಟ್ವೈನ್ ಹೇಳುವಂತೆ, ‘ಮೂರ್ಖ ಜನರೊಂದಿಗೆ ವಾದಕ್ಕಿಳಿಯಬೇಡಿ, ಏಕೆಂದರೆ ಅವರು ನಿಮ್ಮನ್ನು ತಮ್ಮ ಮಟ್ಟಕ್ಕೆ ಎಳೆದೊಯ್ಯುವುದು ಮಾತ್ರವಲ್ಲದೆ ತಮ್ಮ ಮೂರ್ಖತನದ ಪರಿಣತಿಯಿಂದಲೇ ನಿಮ್ಮನ್ನು ಸೋಲಿಸುತ್ತಾರೆ!’ ಅಂತಹವರ ಸಹವಾಸದಿಂದ ದೂರವಿರುವುದೇ ಮೇಲು.

    ಎರಡನೆಯ ಹೆಜ್ಜೆ: ಭಜ ಸಾಧು ಸಮಾಗಮಂ

    ದುರ್ಜನರ ಸಹವಾಸವನ್ನು ತ್ಯಜಿಸುವುದಕ್ಕಿಂತಲೂ ಸಜ್ಜನರ ಸಹವಾಸದಲ್ಲಿ ಸೇರುವುದು ಹೆಚ್ಚು ಮುಖ್ಯ. ಜೀವನದಲ್ಲಿ ಎರಡು ವಿಷಯಗಳು ಬಹಳ ಪ್ರಧಾನ. ನಮ್ಮ ಮನಸ್ಸನ್ನು ನಮಗೆ ಕೆಡುಕು ಮಾಡುವ ವಿಷಯಗಳಿಂದ ದೂರವಿಡುವುದು ಹಾಗೂ ನಮಗೆ ಒಳಿತು ಮಾಡುವ ವಿಷಯಗಳಲ್ಲಿ ಮನಸ್ಸನ್ನು ತೊಡಗಿಸುವುದು. ದುಷ್ಟ ವಿಷಯಗಳಿಂದ ಮನಸ್ಸನ್ನು ದೂರವಿಡುವುದು ಕೆಲಸದ ಅರ್ಧಭಾಗ ಮಾತ್ರ; ಒಳ್ಳೆಯ ವಿಷಯಗಳಲ್ಲಿ ಮನಸ್ಸನ್ನು ತೊಡಗಿಸುವ ಉಳಿದ ಅರ್ಧಭಾಗದ ಕೆಲಸವನ್ನೂ ನಾವು ಕೂಡಲೇ ಮಾಡಬೇಕು. ಇಲ್ಲದಿದ್ದರೆ, ತನ್ನ ಹಳೆಯ ಜಾಡಿಗೇ ಪುನಃ ಹಿಂತಿರುಗುವುದು ಮನಸ್ಸಿನ ಒಂದು ಮೂಲ ಪ್ರವೃತ್ತಿ! ಕೆಲವರಿಗೆ ಸಜ್ಜನರ ಸಂಗವು ಪೂರ್ವಜನ್ಮದ ಸುಕೃತದ ಫಲವಾಗಿ ತಾನಾಗಿಯೇ ಒದಗಿ ಬರುವುದುಂಟು. ಆದರೆ, ಹೆಚ್ಚಿನವರು ಸತ್ಸಂಗವನ್ನು ಗಳಿಸಲು, ತಮಗೆ ಯಾವುದು ಜೀವನದಲ್ಲಿ ನಿಜಸುಖವನ್ನು ನೀಡುತ್ತದೆಯೆಂಬ ವಿವೇಕಯುತ ಆಯ್ಕೆ ಮಾಡಿ, ಪ್ರಜ್ಞಾಪೂರ್ವಕ ಪ್ರಯತ್ನ ಮಾಡಬೇಕಾಗಿರುತ್ತದೆ.

    ಮುಂಡಕೋಪನಿಷತ್ತು (ಪ್ರಥಮ ಮುಂಡಕ, ಎರಡನೇ ಖಂಡ, ಹನ್ನೆರಡನೆಯ ಶ್ಲೋಕ) ಹೇಳುವಂತೆ,

    ಪರೀಕ್ಷ್ಯ ಲೋಕಾನ್ ಕರ್ಮಚಿತಾನ್ ಬ್ರಾಹ್ಮಣೋ/ನಿರ್ವೆದಮಾಯಾತ್ ನಾಸ್ತಿ ಅಕೃತಃ ಕೃತೇನಾ/ ತದ್ವಿಜ್ಞಾನಾರ್ಥಂ ಸ ಗುರುಮೇವಾಭಿಗಚ್ಛೇತ್/ ಸಮಿತ್ಪಾಣಿಃ ಶ್ರೋತ್ರಿಯಂ ಬ್ರಹ್ಮನಿಷ್ಠಂ

    ‘ಬ್ರಹ್ಮಾನ್ವೇಷಣೆಯಲ್ಲಿ ಆಸಕ್ತನಾದ ಸಾಧಕನು, ಲೌಕಿಕ ಗಳಿಕೆಗಳಿಗಾಗಿ ಮಾಡುವ ಕರ್ಮಗಳಿಂದ ಅಲೌಕಿಕ ಪರಬ್ರಹ್ಮನನ್ನು ಹೊಂದಲು ಸಾಧ್ಯವಿಲ್ಲವೆಂಬ ಸತ್ಯವನ್ನು ತನ್ನ ವಿವೇಕ-ವಿಚಾರಗಳಿಂದ ಅರಿತು, ಪ್ರಪಂಚದ ಸುಖಭೋಗಗಳ ಬಗ್ಗೆ ವೈರಾಗ್ಯ ಬೆಳೆಸಿಕೊಳ್ಳುತ್ತಾನೆ. ಇಂದ್ರಿಯಗಳಿಗೆ ಅಗೋಚರವಾದ ಆ ಪರಮಸತ್ಯದ ದರ್ಶನಾಕಾಂಕ್ಷೆಯಿಂದ ಅವನು, ಕೈಯ್ಯಲ್ಲಿ ಸಮಿತ್ತು ಅಥವಾ ಒಣ ಕಟ್ಟಿಗೆಗಳನ್ನು ಹಿಡಿದು (ಕಾಮನೆಗಳಿಂದ ಮುಕ್ತವಾದ ಮನಸ್ಸಿನೊಂದಿಗೆ) ವೇದಗಳನ್ನರಿತ ಬ್ರಹ್ಮನಿಷ್ಠನಾದ ಸಮರ್ಥ ಗುರುವನ್ನು ಅರಸುತ್ತಾನೆ.’ ಸಾತ್ತಿ್ವಕ ಹಾಗೂ ಆಧ್ಯಾತ್ಮಿಕ ವ್ಯಕ್ತಿಗಳ ಸಹವಾಸವು ಮನುಷ್ಯನ ಮನಸ್ಸನ್ನು ಪರಿಶುದ್ಧಗೊಳಿಸಿ ಅವನ ಉದ್ಧಾರಕ್ಕೆ ಕಾರಣವಾಗುತ್ತದೆ. ಅಯಸ್ಕಾಂತದ ಸತತ ಸಹವಾಸದಿಂದ ತಾನೂ ಅಯಸ್ಕಾಂತವಾಗಿ ಬದಲಾಗುವ ಕಬ್ಬಿಣದ ತುಂಡಿನಂತೆ, ಒಬ್ಬ ವ್ಯಕ್ತಿಯು ಉತ್ತಮರ ಸಹವಾಸದಲ್ಲಿ ಹೆಚ್ಚು ಹೆಚ್ಚು ಕಾಲ ಕಳೆದಂತೆ ತಾನೂ ಉತ್ತಮನಾಗುತ್ತಾನೆ.

    ಆದಿ ಶಂಕರಾಚಾರ್ಯರು ‘ಭಜ ಗೋವಿಂದಂ’ನಲ್ಲಿ ಪ್ರತಿಪಾದಿಸಿರುವಂತೆ,

    ಸತ್ಸಂಗತ್ವೇ ನಿಸ್ಸಂಗತ್ವಂ ನಿಸ್ಸಂಗತ್ವೇ ನಿಮೋಹತ್ವಂ

    ನಿಮೋಹತ್ವೇ ನಿಶ್ಚಲತತ್ವಂ ನಿಶ್ಚಲತತ್ವೇ ಜೀವನ್ಮುಕ್ತಿಃ

    ‘ಸಜ್ಜನರ ಸಹವಾಸವು ಲೌಕಿಕ ಸುಖಗಳಲ್ಲಿ ಅನಾಸಕ್ತಿಯನ್ನುಂಟು ಮಾಡುತ್ತದೆ. ಅನಾಸಕ್ತಿಯಿಂದ ಅವನ ಮೋಹವು ನಾಶವಾಗುತ್ತದೆ. ನಿಮೋಹ ಹಾಗೂ ನಿರ್ಮಲ ಮನಸ್ಸು ಪರಮಾತ್ಮತತ್ವದಲ್ಲಿ ನಿಶ್ಚಲವಾಗಿ ನೆಲೆಗೊಳ್ಳುತ್ತದೆ. ಇಂತಹ ನಿಶ್ಚಲಾತ್ಮಕನಾದ ಸಾಧಕನು ಶಾಶ್ವತವಾದ ಜೀವನ್ಮುಕ್ತಿಯನ್ನು ಪಡೆಯುತ್ತಾನೆ.’

    ಹೀಗೆ, ಸಜ್ಜನರ ಸಹವಾಸವು ಮೋಕ್ಷಸಾಧನೆಯ ಪಥದಲ್ಲಿ ಪ್ರಧಾನ ಸೋಪಾನವಾಗಿದೆ. ಧೂಳು ನೀರಿನ ಸಹವಾಸವನ್ನು ಮಾಡಿದಾಗ ಭೂಮಿಗಿಳಿಯುತ್ತದೆ. ಆದರೆ, ಅದೇ ಧೂಳು ಗಾಳಿಯ ಸಹವಾಸದಿಂದ ಆಕಾಶಕ್ಕೇರುತ್ತದೆ. ಅಂತೆಯೇ ಮನಸ್ಸು ಸತ್ಸಂಗದಿಂದ ಅಧ್ಯಾತ್ಮ ಶಿಖರಕ್ಕೇರುತ್ತದೆ ಹಾಗೂ ದುಸ್ಸಂಗದಿಂದ ಅದು ಅಧೋಗತಿಗಿಳಿಯುತ್ತದೆ.

    (ಲೇಖಕರು ಸಾಮಾಜಿಕ ಹಾಗೂ ಆಧ್ಯಾತ್ಮಿಕ ಗುರುಗಳು)

    ‘ನಾನು ಯೂಟ್ಯೂಬರ್ ಆಗಿದ್ದು ಯಾಕೆ?’ ಅಂತ ಖುದ್ದು ಡಾ.ಬ್ರೋ ಅವರೇ ಹಂಚಿಕೊಂಡಿದ್ದಾರೆ ಇಲ್ಲಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts