ಅಮೃತ ಮಹೋತ್ಸವ ಕಾರ್ಯಕ್ರಮ 25ರಂದು

ತುಂಗಭದ್ರಾ ರೈತಸಂಘದ ಅಧ್ಯಕ್ಷ ಪುರುಷೋತ್ತಮಗೌಡ ಹೇಳಿಕೆ | ತುಂಗಭದ್ರಾ ಅಣೆಕಟ್ಟೆಗೆ 75 ವರ್ಷ

ಬಳ್ಳಾರಿ: ತುಂಗಭದ್ರಾ ಅಣೆಕಟ್ಟೆ ನಿರ್ಮಿಸಿ 75 ವರ್ಷವಾಗಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಏ.25ರಂದು ಅಮೃತ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತುಂಗಭದ್ರಾ ರೈತ ಸಂಘದ ಅಧ್ಯಕ್ಷ ಪುರುಷೋತ್ತಮಗೌಡ ದರೂರು ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಏ.25ರಂದು ಬೆಳಗ್ಗೆ 10ಕ್ಕೆ ನಗರದ ಬಿಡಿಎ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದ ಸಾನ್ನಿಧ್ಯವನ್ನು ಕೊಟ್ಟೂರುಸ್ವಾಮಿ ಸಂಸ್ಥಾನ ಮಠದ ಜಗದ್ಗುರು ಸಂಗನಬಸವ ಸ್ವಾಮೀಜಿ ವಹಿಸಲಿದ್ದಾರೆ. ನಂದಿಪುರ ಕ್ಷೇತ್ರದ ಮಹೇಶ್ವರ ಸ್ವಾಮೀಜಿ ಉಪಸ್ಥಿತರಿರಲಿದ್ದಾರೆ. ಜಿಲ್ಲಾಧಿಕಾರಿ ವಿ.ರಾಮಪ್ರಸಾತ್ ಮನೋಹರ್ ಅಧ್ಯಕ್ಷತೆ ವಹಿಸಲಿದ್ದಾರೆ. ಎಸ್ಪಿ ಲಕ್ಷ್ಮಣ್ ನಿಂಬರಗಿ ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದಾರೆ.

ಅಣೆಕಟ್ಟೆಯ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಸರ್ಕಾರದಿಂದ ಆಚರಿಸಬೇಕಿತ್ತು. ಆದರೆ, ಸರ್ಕಾರ ನಿರ್ಲಕ್ಷೃ ವಹಿಸಿದ್ದರಿಂದ ತುಂಗಭದ್ರಾ ರೈತಸಂಘದಿಂದ ಆಯೋಜಿಸಲಾಗಿದೆ. ಜಲಾಶಯದ ಹೂಳು ಹಾಗೂ ನೀರಾವರಿ ವಿಷಯಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಯಲಿದೆ. ಕಾರ್ಯಕ್ರಮದಲ್ಲಿ ತುಂಗಭದ್ರಾ ಜಲಾಶಯದ ನಿವೃತ್ತ ಇಂಜಿನಿಯರ್‌ಗಳಾದ ವಿ.ಪಿ.ಉದ್ದಿಹಾಳ್, ಕೆ.ಗೋವಿಂದುಲು, ಕೆ.ಚನ್ನಪ್ಪ, ವೀರೇಶಯ್ಯ, ಚನ್ನಬಸಪ್ಪ, ರಾಮರಾವ್ ಹಾಗೂ ಬಿಐಟಿಎಂ ಕಾಲೇಜಿನ ಪ್ರಾಧ್ಯಾಪಕ ಎಚ್.ಮಹಾಬಲೇಶ್ವರ್‌ರನ್ನು ಸನ್ಮಾನಿಸಲಾಗುತ್ತದೆ ಎಂದು ಪುರುಷೋತ್ತಮಗೌಡ ದರೂರು ತಿಳಿಸಿದರು. ವೀರೇಶ್ ಗಂಗಾವತಿ, ಭೀಮನಗೌಡ, ಶರಣಬಸವನಗೌಡ, ಶ್ರೀಧರ್ ಜಾಲಿಹಾಳ ಹಾಗೂ ಇತರರು ಹಾಜರಿದ್ದರು.

ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೂಳಿನ ವಿಚಾರಕ್ಕೆ ಸಂಬಂಧಿಸಿದಂತೆ ಸಕಾರಾತ್ಮಕವಾಗಿ ಸ್ಪಂದಿಸಿರುವುದು ಸಂತಸದ ವಿಚಾರವಾಗಿದೆ. ಹೂಳು ತೆಗೆಯದಿದ್ದರೆ ಮುಂದಿನ ದಿನಗಳು ಕಷ್ಟದಾಯಕವಾಗಲಿದೆ ಎಂಬುದನ್ನು ರೈತರು ಅರ್ಥ ಮಾಡಿಕೊಳ್ಳಬೇಕಿದೆ. 12 ಲಕ್ಷ ಎಕರೆಗೆ ನೀರು ಪೂರೈಸುವ ಅಣೆಕಟ್ಟೆ ಹೂಳಿನಿಂದಾಗಿ ಮುಂದಿನ ದಿನಗಳಲ್ಲಿ ಕೇವಲ ಕುಡಿವ ನೀರಿಗೆ ಸೀಮಿತವಾದರೂ ಅಚ್ಚರಿಯಿಲ್ಲ. ಈ ಹಿನ್ನೆಲೆಯಲ್ಲಿ ರೈತರು ಹೋರಾಟಕ್ಕೆ ಕೈಜೋಡಿಸಬೇಕು.
| ಪುರುಷೋತ್ತಮಗೌಡ ದರೂರು ಅಧ್ಯಕ್ಷ, ತುಂಗಭದ್ರಾ ರೈತ ಸಂಘ

Leave a Reply

Your email address will not be published. Required fields are marked *