ನಿರ್ವಲ್ಯಗಂಧಪುಷ್ಪಾದಿ ಸೌರಭಾಘ್ರಾಣನಂ ಪರಂ | ದ್ವಾವಿಂಶಕಂ ಸಮಾಖ್ಯಾತಮತಃ ಶ್ರೋತ್ರಗತಂ ಶೃಣು ||
ದೇವರಿಗೆ ಅರ್ಪಿಸಿ ತೆಗೆದ ಗಂಧಯುಕ್ತ ದ್ರವ್ಯ, ಪುಷ್ಪ ಮೊದಲಾದವುಗಳ ವಾಸನೆಯನ್ನು ಆಘ್ರಾಣಿಸುವುದು ಇಪ್ಪತ್ತೆರಡನೆಯ ಶೀಲ. ಇದು ಮೂಗಿಗೆ ಸಂಬಂಧಿಸಿದೆ. ಇಷ್ಟಲಿಂಗಕ್ಕೆ ಧರಿಸಿದ ಪರಿಮಳಯುಕ್ತ ವಿಭೂತಿ, ಶ್ರೀಗಂಧ, ಅಷ್ಟಗಂಧ ಮೊದಲಾದವುಗಳನ್ನು ತನ್ನ ಹಣೆ ಮತ್ತು ಭ್ರೂಮಧ್ಯಗಳಲ್ಲಿ ಧರಿಸಿಕೊಳ್ಳಬೇಕು.
ಅದಕ್ಕಿಂತ ಮೊದಲು ಮೂಗಿನಿಂದ ಆಘ್ರಾಣಿಸಬೇಕು. ಇದರಂತೆ ಪೂಜೆಯಲ್ಲಿ ಲಿಂಗಕ್ಕೆ ಧರಿಸಿದ ಪತ್ರಿ ಮತ್ತು ಪುಷ್ಪಗಳನ್ನು ಪೂಜೆಯ ಕೊನೆಗೆ ಲಿಂಗದ ಮೇಲಿಂದ ತೆಗೆದು ವಿಸರ್ಜಿಸುವ ಮೊದಲು ಭಕ್ತಿಯಿಂದ ಮೂಸಬೇಕು.