ನಿವೇದಿತಪ್ರಸಾದೀಯ ರಸಾಸ್ವಾದೋ ಯದನ್ವಹಂ | ಏಕವಿಂಶಕಮಿತ್ಯುಕ್ತಂ ಘ್ರಾಣಗತಮಥ ಶೃಣು ||
ಇಲ್ಲಿ ನಾಲಗೆಗೆ ಸಂಬಂಧಿಸಿದ ಶೀಲವನ್ನು ಹೇಳಲಾಗಿದೆ. ಪ್ರತಿನಿತ್ಯವೂ ಇಷ್ಟಲಿಂಗಕ್ಕೆ ಎಡೆ ಮಾಡಿದ ಪ್ರಸಾದದ ರಸವನ್ನೇ ನಾಲಗೆಯಿಂದ ಆಸ್ವಾದಿಸುವುದು ಇಪ್ಪತ್ತೊಂದನೆಯ ಶೀಲವೆಂದು ಹೇಳಲ್ಪಡುತ್ತದೆ.
ಪ್ರತಿಯೊಂದು ಪದಾರ್ಥವನ್ನೂ ಪರಮಾತ್ಮನಿಗೆ ನೈವೇದ್ಯ ಮಾಡಿ ಸೇವಿಸುವುದರಿಂದ ಪದಾರ್ಥಗಳಿಗೆ ಸಂಬಂಧಿಸಿದಂತೆ ನಮ್ಮ ಮನಸ್ಸಿನಲ್ಲಿರುವ ‘ಇದು ನನ್ನದು’ ಎಂಬ ಮಮಕಾರ, ‘ಇದನ್ನು ನಾನೇ ಉಪಭೋಗಿಸಬೇಕು’ ಎಂಬ ಸ್ವಾರ್ಥ ಮುಂತಾದ ಭಾವಗತದೋಷಗಳು ನಿವಾರಣೆಯಾಗುವುದರ ಜತೆಗೆ ಮನದಲ್ಲಿ ಸದಾ ಪ್ರಸನ್ನತೆ ನೆಲೆಸುತ್ತದೆ.