ಸತ್ಯ ಎಂದರೆ ವಿಶ್ವವ್ಯಾಪಕ ಒಳಗೊಳ್ಳುವಿಕೆ

ಖ್ಯಾತ ಚಲನಚಿತ್ರ ನಿರ್ದೇಶಕ, ನಟ ಮತ್ತು ನಿರ್ಮಾಪಕ ಶೇಖರ್ ಕಪೂರ್ ಅವರು ಸದ್ಗುರು ಜತೆ ಅಲೌಕಿಕ ಸಂಗತಿಗಳು, ಅಧ್ಯಾತ್ಮ ಜಿಜ್ಞಾಸೆ ಸೇರಿದಂತೆ ಹಲವು ವಿಷಯಗಳ ಕುರಿತಂತೆ ಸಂವಾದ ನಡೆಸಿದ್ದಾರೆ. ಅದರ ಪ್ರಶ್ನೋತ್ತರ ರೂಪದ ಎರಡನೇ ಭಾಗವನ್ನು ಇಲ್ಲಿ ನೀಡಲಾಗಿದೆ.

ಶೇಖರ್ ಕಪೂರ್: ಪಾಶ್ಚಿಮಾತ್ಯ ಜಗತ್ತಿನಲ್ಲಿ ಪ್ರಚಲಿತವಾದದ್ದೆಂದರೆ ಪ್ರೀತಿ ಮತ್ತು ಸತ್ಯ- ಪ್ರೀತಿಯೇ ಅಂತಿಮ ಸತ್ಯ. ಆದರೆ ನಮ್ಮ ಪ್ರಕಾರ, ಪ್ರೇಮವನ್ನು ನಾವು ಹೊಂದಿರುವುದಿಲ್ಲ, ಪ್ರೇಮವೇ ನಾವಾಗಿದ್ದೀವಿ, ಇದನ್ನೇ ನಾವು ನಮ್ಮ ಆತ್ಮೋನ್ನತಿಯ ಉದ್ದೇಶಕ್ಕಾಗಿ ಸಾಧನವನ್ನಾಗಿ ಬಳಸುತ್ತೇವೆ. ಇದನ್ನು ನೀವು ಒಪ್ಪುತ್ತೀರಾ? ಪ್ರೀತಿ, ಸತ್ಯ, ಆತ್ಮೋದ್ಧಾರ, ಉದ್ದೇಶ, ಸಂಪರ್ಕ….

ಸದ್ಗುರು: ಒಂದು ಸಮಾಜ ಹಸಿವಿನಿಂದ ಬಳಲುತ್ತಿದ್ದರೆ, ಆಗ ಆ ಸಮಾಜದಲ್ಲಿ ಆಹಾರವೇ ಪ್ರಮುಖ ಗುರಿಯಾಗುತ್ತದೆ. ನೀವು ಅನಾರೋಗ್ಯ ಪೀಡಿತರಾದರೆ ಆರೋಗ್ಯವೇ ನಿಮ್ಮ ಪ್ರಾಶಸ್ತ್ಯದ ಸಂಗತಿಯಾಗುತ್ತದೆ. ಬಡತನವಿದ್ದರೆ ಸಂಪತ್ತೇ ಪ್ರಮುಖವಾಗುತ್ತದೆ, ಪ್ರೇಮವಂಚಿತರಾದರೆ ಪ್ರೇಮವೇ ಪ್ರಮುಖ ಗುರಿಯಾಗುತ್ತದೆ. ಸಂತೋಷದಿಂದ ವಂಚಿತರಾದಾಗ ಅದೇ ಸಂತೋಷವೇ ಪ್ರಾಮುಖ್ಯ ಹೊಂದುತ್ತದೆ. ಯಾವುದರ ಕೊರತೆ ನಿಮ್ಮನ್ನು ಬಾಧಿಸುವುದೋ, ಆ ಕ್ಷಣ ನೀವು ಅದನ್ನೇ ಮುಖ್ಯವೆಂದುಕೊಳ್ಳುತ್ತೀರಿ. ಆದರೆ ನಂತರದಲ್ಲಿ, ನೀವು ಮುಖ್ಯವೆಂದುಕೊಂಡಿದ್ದೇ ಅಂತಿಮ ಗುರಿಯಲ್ಲ ಎಂಬುದನ್ನು ಮನಗಾಣುತ್ತೀರಿ.

ಒಂದು ಉದಾಹರಣೆ ಮೂಲಕ ಇದನ್ನು ನೋಡೋಣ. ಕೈಗಾರಿಕಾ ಕ್ರಾಂತಿಯ ಪರಿಣಾಮದಿಂದ ಸ್ತ್ರೀಯರು ಮನೆಯಿಂದ ಉದ್ಯೋಗ ನಿಮಿತ್ತ ಹೊರಗೆ ಹೋಗಬೇಕಾದ ಸಂದರ್ಭದಲ್ಲಿ ಸಹಜವಾಗಿಯೇ ಸಾಂಸಾರಿಕವಾಗಿ ಕೆಲ ಬಿಕ್ಕಟ್ಟುಗಳು ತಲೆದೋರಿದವು. ಈ ಸಮಸ್ಯೆಗೆ ಪರಿಹಾರೋಪಾಯವಾಗಿ ಪುರುಷರೂ ಗೃಹಕೃತ್ಯ ನಿರ್ವಹಣೆಯಲ್ಲಿ ಸಣ್ಣ-ಪುಟ್ಟ ಹೊಂದಾಣಿಕೆ ಮಾಡಿಕೊಳ್ಳುವ ಪ್ರಮೇಯ ಉಂಟಾಯಿತು. ಕ್ರಮೇಣ ಪರಿಸ್ಥಿತಿಯಲ್ಲಿ ಸುಧಾರಣೆಯಾದರೂ, ಅಂದಿನ ಒಂದಿಡೀ ಜನಾಂಗದ ಮಕ್ಕಳು ಪ್ರೇಮವಂಚಿತರಾಗಬೇಕಾಯಿತು. ಕಾರಣ ಅಂದಿನ ಸಾಮಾಜಿಕ ಬದಲಾವಣೆಗಳು ಉಂಟುಮಾಡಿದ ಸಾಂಸಾರಿಕ ತಲ್ಲಣಗಳನ್ನು ನಿಭಾಯಿಸುವ ಬಗ್ಗೆ ಗೊಂದಲವಿತ್ತು. ಅದುವರೆಗೂ ಸ್ತ್ರೀಯರು ಮನೆಯೊಳಗೇ ಇದ್ದು ಮನೆವಾರ್ತೆಯ ಮತ್ತು ಮಕ್ಕಳ ಸಂಪೂರ್ಣ ಜವಾಬ್ದಾರಿ ನಿರ್ವಹಿಸುವ ಗ್ರಹಿಕೆಯಿತ್ತು. ಆದರೆ ಈ ರೂಢಿಯಲ್ಲಿನ ಸ್ಥಿತ್ಯಂತರದ ಪರಿಣಾಮ ಒಂದೆರಡು ತಲೆಮಾರು ಪ್ರೀತಿ ಮತ್ತು ಆರೈಕೆಗಳಿಂದ ವಂಚಿತರಾದರು.

ಇಂದು ಅನೇಕ ಬದಲಾವಣೆಗಳಾಗಿವೆ. ತಾಯಿಗೆ ಹೆರಿಗೆ ರಜೆಯಿರುವಂತೆಯೇ ತಂದೆಗೂ ರಜೆ ಸೌಲಭ್ಯವಿದೆ. ಅವರು ಮನೆಯಲ್ಲಿದ್ದು ಮಕ್ಕಳ ಯೋಗಕ್ಷೇಮ ನೋಡಿಕೊಳ್ಳಬಲ್ಲರು. ಸಾಂಸಾರಿಕ ದೃಷ್ಟಿಕೋನದಲ್ಲೂ ಬದಲಾವಣೆಯಾಗಿದೆ. ಜಗತ್ತಿನಲ್ಲಿ ಅನೇಕ ಬದಲಾವಣೆಗಳಾಗಿವೆ. ಆಧುನಿಕ ಆವಿಷ್ಕಾರಗಳ ಕಾರಣ ಸುಖಸೌಲಭ್ಯಗಳು ಲಭ್ಯವಾಗಿವೆ. ಸಾಮಾಜಿಕ ಪಲ್ಲಟದ ಕಾರಣದಿಂದ ಒಂದೆರಡು ತಲೆಮಾರಿನವರು ಪ್ರೀತಿರಹಿತರಾಗಿ ತವಕ-ತಲ್ಲಣಗಳನ್ನು ಅನುಭವಿಸಬೇಕಾಯಿತು. ಆ ಕಾರಣದಿಂದಲೇ, ಪ್ರೀತಿಯ ಕುರಿತು ಇಷ್ಟೊಂದು ಚಿಂತನೆಗಳು ಹುಟ್ಟಿಕೊಂಡದ್ದೆಂದು ನನ್ನ ಭಾವನೆ. ಹಾಗಂತ ನಾನೇನೂ ಪ್ರೀತಿಯ ಕುರಿತು ಕನಿಷ್ಠವಾಗಿ ಮಾತಾಡುತ್ತಿಲ್ಲ. ಜೀವನದಲ್ಲಿ ಪ್ರೀತಿಯು ಒಂದು ಬಹುಮುಖ್ಯವಾದ ಅಗತ್ಯ ಸಂಗತಿ ಎಂಬುದು ನಿರ್ವಿವಾದ.

ಆಹ್ಲಾದಕರ ಪರಿಸ್ಥಿತಿ ನಮ್ಮದಾಗಲಿ: ನೀವಿದನ್ನು ಈ ದೃಷ್ಟಿಯಲ್ಲಿ ಗ್ರಹಿಸಬೇಕೆಂದು ನಾನು ಆಶಿಸುತ್ತೇನೆ. ಜೀವನವು ಆನಂದದಾಯಕವಾಗಿರಬೇಕೆಂದು ಆಶಿಸುವುದು ಸಹಜ. ಆನಂದವೆಂದರೆ- ನಿಮ್ಮ ದೇಹವು ಆಹ್ಲಾದಕರವಾಗಿದ್ದರೆ, ನಾವದನ್ನು ಆರೋಗ್ಯವೆನ್ನುತ್ತೇವೆ. ತುಂಬ ಆಹ್ಲಾದವಾಗಿದ್ದರೆ ಆನಂದವೆನ್ನುತ್ತೇವೆ. ಮನಸ್ಸು ಆಹ್ಲಾದಕರವಾದರೆ ಅದನ್ನು ಶಾಂತಿಯೆನ್ನುತ್ತೇವೆ. ಹೆಚ್ಚಿನ ಸ್ಥಿತಿಯಲ್ಲಿ ಇದ್ದರೆ ಅದನ್ನು ಹರ್ಷವೆನ್ನುತ್ತೇವೆ. ಭಾವನೆಗಳು ಮಧುರವಾಗಿದ್ದರೆ ಅದನ್ನು ಪ್ರೀತಿಯೆನ್ನುತ್ತೇವೆ. ಅದರ ಉಚ್ಚಸ್ಥಿತಿಯನ್ನು ಅನುಕಂಪವೆನ್ನುತ್ತೇವೆ. ನಿಮ್ಮ ಜೀವಚೈತನ್ಯಗಳು ಆಹ್ಲಾದಕರವಾಗಿದ್ದರೆ ಅದನ್ನು ಪರಮಸುಖ, ಅತ್ಯಾನಂದವೆನ್ನುತ್ತೇವೆ. ಅದೇ ಉಚ್ಚಸ್ಥಿತಿಯನ್ನು ತಲುಪಿದರೆ ಆನಂದ ಪರವಶತೆ, ಹಷೋತ್ಕರ್ಷವೆನ್ನುತ್ತೇವೆ. ನಿಮ್ಮ ಬಾಹ್ಯ ಪರಿಸ್ಥಿತಿಗಳು ಆಹ್ಲಾದಕರವಾದರೆ ಅದನ್ನೇ ನಿಮ್ಮ ಪ್ರಗತಿಯೆನ್ನುತ್ತೇವೆ.

ಇದನ್ನೇ ಮಾನವ ಜೀವಿಗಳು ಎದುರು ನೋಡುತ್ತಿರುವುದು. ವ್ಯಕ್ತಿಯ ಭಾವನೆಗಳು ಮಧುರವಾಗಿದ್ದರೆ-ಪ್ರೇಮಮಯವೆನ್ನುವ ಅದೇ ಭಾವನೆಗಳೇ, ಇನ್ನೊಂದು ಜೀವದೊಂದಿಗೆ ಅಥವಾ ಯಾವುದರ ಕುರಿತಾದರೂ ಆಗಬಹುದು. ಈಗ, ಕೇವಲ ಭಾವನೆಗಳು ಮಧುರವಾಗಿದ್ದರೆ ನಿಮಗೆ ಸಾಕೇನು? ನಿಮಗೆ ಆರೋಗ್ಯ ಬೇಡವೇ? ಸುಖಜೀವನ ಬೇಡವೇ? ಆಹಾರ ಬೇಡವೇ? ಶಾಂತಿಯುತ ಜೀವನ? ಸ್ಪರ್ಧೆ? ಸಾಮರ್ಥ್ಯ? ನಿಮ್ಮ ಜೀವನದಲ್ಲಿ ಪ್ರೇಮ ಮಾತ್ರವಿದ್ದು ಬೇರೆಲ್ಲದರಲ್ಲೂ ಅಸಮರ್ಥರಾದರೆ- ದುರದೃಷ್ಟವಶಾತ್ ಹೆಚ್ಚಿನವರಲ್ಲಿ ಅದೇ ಆಗುವುದು, ಆಗ ಜನರೇನೂ ಪ್ರೇಮದಿಂದ ಸಂತಸಪಡಲಾರರು. ರುಚಿಸಲಾರರು, ಅಲ್ಲವೆ?

ಹಾಗಾಗಿ ಇಂದು ವಿಶ್ವದ ಕೂಗಾಗಿರುವ ಪ್ರೀತಿಯ ಕುರಿತಾದ ವ್ಯಾಖ್ಯಾನಗಳು ಒಂದು ರೀತಿಯಲ್ಲಿ ಒಳಗಿನ ಖಾಲಿತನದಿಂದ ಬಂದದ್ದಾಗಿದೆ. ಭಾರತೀಯ ಸಮಾಜದ ಸಾಂಪ್ರದಾಯಿಕ ಕುಟುಂಬದಲ್ಲಿ ಬೆಳೆದ ನಾವು ಪ್ರೀತಿಯ ಕುರಿತು ಎಂದೂ ಯೋಚಿಸಲಿಲ್ಲ. ಯಾಕೆಂದರೆ ನಮಗೆ ಯೋಚಿಸುವ ಅಗತ್ಯವೇ ಬರಲಿಲ್ಲ. ಯಾರೂ ನಮ್ಮನ್ನು ಪ್ರೀತಿಸುತ್ತೇವೆಂದು ಹೇಳಲಿಲ್ಲ. ನಮ್ಮ ತಾಯಿಯೂ ನಮ್ಮನ್ನು ಪ್ರೀತಿಸುತ್ತೇನೆಂದು ಎಂದೂ ಬಾಯಿಬಿಟ್ಟು ಹೇಳಲಿಲ್ಲ. ಅಥವಾ ಅವಳು ನಮ್ಮನ್ನು ಪ್ರೀತಿಸುತ್ತಾಳೋ ಇಲ್ಲವೋ ಎಂಬ ಪ್ರಶ್ನೆಯೇ ನಮ್ಮಲ್ಲಿ ಮೂಡಲಿಲ್ಲ. ಸಂಪೂರ್ಣ ವಾತಾವರಣವೇ ಹೇಗಿತ್ತೆಂದರೆ, ಯಾರಿಂದಲಾದರೂ ನಾನು ಪ್ರೀತಿಸಲ್ಪಡಬೇಕು ಎಂಬ ಭಾವನೆಯೇ ನನ್ನಲ್ಲಿ ಎಂದೂ ಹುಟ್ಟಲಿಲ್ಲ. ‘ಯಾರಾದರೂ ನನ್ನನ್ನು ಪ್ರೀತಿಸಬೇಕೆ?’ ಇಂಥ ಪ್ರಶ್ನೆಯೇ ನಮ್ಮಲ್ಲಿ ಏಳಲಿಲ್ಲ. ಅಂಥ ಕೊರತೆ ಕಾಣದ ವಾತಾವರಣವನ್ನು ನಾವು ಹೊಂದಿದ್ದೆವು. ಬಹುಶಃ ಇದು ಹೇಗೆಂದರೆ, ಮನೆಯಲ್ಲಿ ತೀರಾ ಬಡತನವಿದ್ದು ಸಾಕಷ್ಟು ಆಹಾರವಿಲ್ಲದಾಗ, ಆಗ ನಿಮ್ಮ ಚಿಂತನೆಗಳು ಆಹಾರದ ಬಗ್ಗೆಯೇ ಇದ್ದು, ಅದನ್ನು ಪಡೆಯುವ ಸಾಧ್ಯತೆಯ ಕುರಿತೇ ಆಗಿರುತ್ತದೆ. ಯಾವುದೇ ಒಂದು ನಮ್ಮಲ್ಲಿದ್ದಾಗ, ಅದರ ಕೊರತೆ ಕಾಣದಾಗ, ನಾವದರ ಕುರಿತೂ ಚಿಂತಿಸುವುದಿಲ್ಲ. ಅದನ್ನು ಪಡೆಯುವ ದಾರಿಗಳನ್ನೂ ಹುಡುಕುವುದಿಲ್ಲ. ಅಂತೆಯೇ, ಪ್ರೀತಿಯು ನಿಮ್ಮನ್ನು ಸುಲಭಸಾಧ್ಯವಾಗಿ ಆವರಿಸಿಕೊಂಡಿದ್ದಾಗ, ಅದನ್ನು ಎಲ್ಲಿಂದಲೋ ಪಡೆಯುವ, ಎಲ್ಲಿಂದಾದರೂ ಹೊಂದುವ ಕುರಿತು ಯೋಚನೆಯನ್ನೂ ನೀವು ಮಾಡಲಾರಿರಿ.

ಆದ್ದರಿಂದ ಇಂಥ ಕೆಲವು ಸಂಗತಿಗಳು- ನಿರ್ದಿಷ್ಟ ಮಾನಕದ ಕೊರತೆಯಿಂದಲೇ ಬಂದಿರುವಂಥದ್ದು. ಹೌದು, ಪ್ರೀತಿಯು ಮಾನವರ ಜೀವನಕ್ಕೆ ಮಧುರವಾದುದು, ಉತ್ತಮವಾದುದು. ಅದ್ಭುತವಾದುದು. ಆದರೆ ಅದೇ ವೇಳೆ, ಅದನ್ನೇನೂ ಮಿತಿಮೀರಿ ಉತ್ಪ್ರೇಕ್ಷೆ ಮಾಡಬೇಕಾದ ಅಗತ್ಯವಿಲ್ಲ.

ಈಗ ಎದುರಾಗಿರುವ ಪ್ರಶ್ನೆಯೆಂದರೆ ಪ್ರೀತಿ ಮತ್ತು ಸತ್ಯದ ಕುರಿತಾದುದು. ನೀವು ಯಾವುದನ್ನು ‘ಸತ್ಯ’ ಎಂದು ಹೇಳುತ್ತಿರುವಿರೋ ನನಗೆ ಗೊತ್ತಿಲ್ಲ. ನೀವು ಕಟ್ಟಕಡೆಯ ‘ಸತ್ಯ’ದ ಕುರಿತು ಮಾತಾಡುತ್ತಿದ್ದರೆ ಆ ‘ಸತ್ಯ’ವು ‘ವಿಶ್ವವ್ಯಾಪಿ’ಯಾದುದು. ಪೂರ್ಣಪ್ರಮಾಣದ ‘ಒಳಗೊಳ್ಳುವಿಕೆ’ ಕುರಿತಾದುದು. ‘ಪ್ರೀತಿ’ಯ ಅರ್ಥ- ಪ್ರೀತಿಸಲು ಇನ್ನೊಂದು ಜೀವ ಬೇಕು. ಪ್ರೀತಿಯಲ್ಲಿ ನೀವು ಒಳಗೊಳ್ಳಲು ನೋಡುತ್ತೀರಿ. ಒಳಗೊಳ್ಳುವಿಕೆಯ ನಂತರ ದೂರವಾಗುವಿಕೆ- ಅಂತರ ಏರ್ಪಡುವಿಕೆ ಸಹಜ. ಯಾವ ಪ್ರೇಮಿಗಳೂ ನಿರಂತರವಾಗಿ ಒಂದಾಗಿರುವ ಸ್ಥಿತಿಯನ್ನು ಕಾಣಲಾರೆವು. ಕ್ಷಣಗಳ ಸಂಪರ್ಕ, ನಂತರದಲ್ಲಿ ಅಂತರ. ‘ಹತ್ತಿರ’- ‘ದೂರ’ ಇದೇ ಜನರ ಅನುಭವಕ್ಕೆ ಬರುವಂಥದ್ದು.

ಹಾಗಾಗಿ ‘ಸತ್ಯ’ದ ವ್ಯಾಖ್ಯೆಯೆಂದರೆ- ಅದು ‘ವಿಶ್ವವ್ಯಾಪಕ’ ಒಳಗೊಳ್ಳುವಿಕೆ, ತಾದಾತ್ಮ್ಯ ಹೊಂದುವಿಕೆ. ಅದನ್ನು ‘ಪ್ರೀತಿ’ ಎನ್ನುವ ಪದದಿಂದ ಅರ್ಥೈಸಲಾಗದು. ಆ ದಾರಿಯಲ್ಲಿ ‘ಪ್ರೀತಿ’ ಒಂದು ಪ್ರಯತ್ನ ಮಾತ್ರ. ಹರ್ಷವೂ ಹಾಗೆಯೇ. ಶಾಂತಿಯೂ ಹಾಗೆಯೇ. ನೀವು ಶಾಂತರಾಗಿರುವಾಗ, ವಾಸ್ತವವಾಗಿ ನೀವು ಎಲ್ಲದರ ಜೊತೆಗೂ ತಾದಾತ್ಮ್ಯ ಭಾವದಲ್ಲಿರುತ್ತೀರಿ. ಹರ್ಷದ ಸ್ಥಿತಿಯಲ್ಲಿರುವಾಗ, ಯಾರೊಂದಿಗಾದರೂ ಕುಳಿತು ಸಂಭಾಷಿಸುವಾಗ, ನಕ್ಕು ನಲಿಯುವಾಗ, ನೀವಿಬ್ಬರೂ ಒಂದು ಎಂಬ ಭಾವನೆಯಿಂದ, ಒಂದಾಗಿರುವೆವು ಎನ್ನಿಸದೆ?

ಶೇಖರ್ ಕಪೂರ್: ಸದ್ಗುರುಗಳೇ ತೀವ್ರತೆಯ ಬಗ್ಗೆ ನಿಮ್ಮಲ್ಲೊಂದು ಪ್ರಶ್ನೆಯಿದೆ. ಅಧ್ಯಾತ್ಮವನ್ನು ಆಳವಾದ ತಾದಾತ್ಮ್ಯದಿಂದ ಮಾತ್ರವೇ ಸಿದ್ಧಿಸಿಕೊಳ್ಳಲು ಸಾಧ್ಯ. ನಾನು ಅನೇಕ ಸಂಗತಿಗಳಲ್ಲಿ ಗಾಢ (ತೀವ್ರತೆ)ತಲ್ಲೀನತೆಯಿಂದ ಭಾಗವಹಿಸುತ್ತೇನೆ. ಆದರೆ ನಾನು ಬೆಂಬತ್ತಿರುವ ಸಂಗತಿಗಳು ನನ್ನನ್ನು ಅಧ್ಯಾತ್ಮದತ್ತ ಮುನ್ನಡೆಸುವುದೋ ಅಥವಾ ನನ್ನಲ್ಲಿನ ಅಹಂನ್ನು ವೃದ್ಧಿಸುವುದೋ ನನಗೆ ಸ್ಪಷ್ಟವಾಗದು. ನಾನು ನನ್ನ ಮಾರ್ಗದಲ್ಲಿ ತಾದಾತ್ಮ್ಯದಿಂದಿದ್ದೇನೆ. ಇದು ತಪ್ಪೆ?

ಸದ್ಗುರು: ಇಲ್ಲ. ಯಾವುದನ್ನೂ ನಾವು ಅಷ್ಟೊಂದು ಗಾಢವಾಗಿ ಬೆಂಬತ್ತಬೇಕಾಗಿಲ್ಲ. ‘ನಾನು ಏನನ್ನಾದರೂ ಗಾಢವಾಗಿ ಬೆಂಬತ್ತಿದ್ದೇನೆ’ ಎಂದು ನೀವು ಹೇಳುವಾಗ, ಬಹುಶಃ ನೀವು ಆ ‘ಏನನ್ನೋ’ ಭ್ರಾಂತರಾಗಿ ಬೆಂಬತ್ತಿದ್ದೀರಿ ಎಂದರ್ಥ. ನೀವು ನಿಮ್ಮಲ್ಲಿಯೇ ತಾದಾತ್ಮ್ಯ ಸಾಧಿಸಬೇಕಾಗುತ್ತದೆ. ನಿಮ್ಮ ಇರುವಿಕೆಯ ಕುರಿತು, ನಿಮ್ಮ ಮನಸ್ಸಿನ ಕುರಿತು ನಿಮ್ಮನ್ನು ನೀವೇ ಗ್ರಹಿಸಲು ಸಾಧ್ಯವಾದಾಗ, ಸಹಜವಾಗಿಯೇ ನೀವು ಏನನ್ನಾದರೂ ಸಾಧಿಸಬಲ್ಲಿರಿ. ಬಲವಂತವಾಗಿ ಬೆಂಬತ್ತಿದಾಗ, ಅರ್ಥಹೀನವಾಗಿ ಕೊನೆಗೊಳ್ಳಬಹುದು. ಬೇಗ ಬಳಲಿ ಸೋಲುವಿರಿ. ಅನಗತ್ಯವಾಗಿ ಶಕ್ತಿವ್ಯಯವಾಗಬಹುದು. ನಿಮ್ಮ ಜೈವಿಕತೆಯನ್ನು ಗಾಢವಾಗಿ ಗ್ರಹಿಸಿದರೆ ಸಾಕು, ಇನ್ನೇನೂ ಮಾಡಬೇಕಾದ ಅಗತ್ಯವಿಲ್ಲ. ಸ್ವ-ಗ್ರಹಿಕೆಯಿಂದ- ನಿಮ್ಮೆಲ್ಲ ಕ್ರಿಯೆಗಳು, ಸರಾಗವಾಗಿ, ಸುಲಭವಾಗಿ, ಅಷ್ಟೇ ‘ತಾದಾತ್ಮ್ಯ’ದಿಂದ ಏಕಕಾಲಕ್ಕೆ ಸಾಧಿಸಬಹುದಾಗಿದೆ. ಗಾಢತೆ ಅನಾಯಾಸವಾಗಿಲ್ಲದೆ ಹೋದಾಗ ನೀವೇ ದಹಿಸಿಹೋಗಬಹುದು.

ಶೇಖರ್ ಕಪೂರ್: ಅದ್ಭುತ! ಈ ಅಂಶವನ್ನು ನನ್ನ ಚಲನಚಿತ್ರ ನಿರ್ವಣದಲ್ಲಿ ಅಳವಡಿಸಿಕೊಳ್ಳುತ್ತೇನೆ. ಅದು ಹೇಗೆ ಫಲ ನೀಡಬಹುದು ಎಂದು ಆಲೋಚಿಸುತ್ತಿದ್ದೇನೆ. ನಿಮ್ಮೊಂದಿಗೆ ನಾನು ಸಹಮತ ಹೊಂದಿದ್ದೇನೆ. ನಾವುಗಳು ತುಂಬ ಗಾಢವಾದ ತೀವ್ರತೆಯಿಂದ ಇರಬೇಕಾದ ಅವಶ್ಯಕತೆ ಇದೆ.

ಸದ್ಗುರು : ನೀವೊಬ್ಬ ‘ತೀವ್ರತರ’ವಾದ ವ್ಯಕ್ತಿಯಾಗಿರಬೇಕೇ ಹೊರತು, ‘ಏನನ್ನೋ’ ತೀವ್ರವಾಗಿ ಬೆನ್ನಟ್ಟುವ ಅಗತ್ಯವಿಲ್ಲ.

(ಸದ್ಗುರು ಅವರು ಯೋಗಿ, ದಾರ್ಶನಿಕ, ಆಧ್ಯಾತ್ಮಿಕ ನಾಯಕ. www.isha.sadhguru.org)

(ಸದ್ಗುರುಗಳ ಇತರ ಪುಸ್ತಕ/ವಿವರಗಳಿಗೆ ಸಂರ್ಪಸಿ- [email protected])

Leave a Reply

Your email address will not be published. Required fields are marked *