ಉಪ್ಪಿನಬೆಟಗೇರಿ: ಗ್ರಾಮದ ಕೆಲ ರೈತರ ಜಮೀನು ವಕ್ಪ್ ಆಸ್ತಿಗೆ ಒಳಪಟ್ಟಿದೆ ಎಂದು ಪಹಣಿ ಪತ್ರಿಕೆಯಲ್ಲಿ ನಮೂದಾಗಿರುವುದು ಸುದ್ದಿಯಾಗಿದೆ. ಈ ಕುರಿತು ಧಾರವಾಡ ತಹಸೀಲ್ದಾರ್ ಕಚೇರಿ ಎದುರು ಅ. 30ರಂದು ಶ್ರೀ ರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ ನೇತೃತ್ವದಲ್ಲಿ ನಡೆಯುವ ಧರಣಿಯಲ್ಲಿ ರೈತರೊಂದಿಗೆ ನಾವೂ ಭಾಗವಹಿಸಿ ಬೆಂಬಲ ನೀಡುತ್ತೇವೆ ಎಂದು ಮಾಜಿ ಶಾಸಕರಾದ ಅಮೃತ ದೇಸಾಯಿ ಹಾಗೂ ಸೀಮಾ ಮಸೂತಿ ರೈತರಿಗೆ ಭರವಸೆ ನೀಡಿದರು.
ಮಂಗಳವಾರ ಉಪ್ಪಿನಬೆಟಗೇರಿ ಗ್ರಾಮದ ಗಂಗಪ್ಪ ಜವಳಗಿ ಅವರ ಮನೆಗೆ ಭೇಟಿ ನೀಡಿ ಪಹಣಿ ಪತ್ರಿಕೆಯಲ್ಲಿ ವಕ್ಪ್ ಹೆಸರು ದಾಖಲಾಗಿದ್ದ ಕಾಗದ ಪತ್ರಗಳನ್ನು ವೀಕ್ಷಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ಸರ್ಕಾರವು ವಕ್ಪ್ ಬೋರ್ಡ್ಗೆ ಸಹಕಾರ ನೀಡುವ ಮೂಲಕ ಮುಗ್ಧ ರೈತರ ಆಸ್ತಿ ಕಬಳಿಸುವ ಹುನ್ನಾರ ನಡೆಸಿದೆ. ಉಪ್ಪಿನಬೆಟಗೇರಿ, ಗರಗ ಸೇರಿ ರಾಜ್ಯಾದ್ಯಂತ ಇಂಥಹ ಪ್ರಕರಣಗಳು ಬೆಳಕಿಗೆ ಬರುತ್ತಿವೆ ಎಂದರು.
ಉಪ್ಪಿನ ಬೆಟಗೇರಿ ಅಷ್ಟೇ ಅಲ್ಲದೆ, ಧಾರವಾಡ ತಾಲೂಕಿನ ಇನ್ನೂ ಕೆಲ ಹಳ್ಳಿಗಳಲ್ಲಿ ವಕ್ಪ್ ಆಸ್ತಿ ನಮೂದಾಗಿದ್ದರ ಬಗ್ಗೆಯೂ ಮಾಹಿತಿ ಪಡೆದುಕೊಂಡ ಮಾಜಿ ಶಾಸಕರು, ಸಂಘಟಿತ ಹೋರಾಟಕ್ಕೆ ರೈತರು ಸಜ್ಜಾಗಬೇಕಿದೆ ಎಂದರು.
ಗಂಗಪ್ಪ ಜವಳಗಿ, ವೀರಣ್ಣಾ ಪರಾಂಡೆ, ನಾಗರಾಜ ಗಾಣಿಗೇರ, ಸಂತೋಷಗೌಡ ಪಾಟೀಲ, ಶಿವಪ್ಪ ವಿಜಾಪೂರ, ಸೋಮಶೇಖರ ಗೋಡೆಕಟ್ಟಿ, ಶಿವಾನಂದ ದೇಶನೂರ, ಶ್ರೀಶೈಲ್ ಮಸೂತಿ, ನಿಂಗಪ್ಪ ದಿವಟಗಿ, ಮಲ್ಲಿಕಾರ್ಜುನ ಹುಟಗಿ, ಕರಬಸಪ್ಪ ಜವಳಗಿ, ಸಂಗನಗೌಡ ರಾಮನಗೌಡರ, ಕರಬಸಪ್ಪ ಓಂಕಾರಿ, ಅಣ್ಣಪ್ಪ ನೀಲವಾಣಿ, ಶಿವಾನಂದ ದೇಶನೂರ ಇದ್ದರು.