ಅಮೃತ್ ಕಾವಲ್ ಪ್ರಾಧಿಕಾರ ರಚನೆಗೆ ಆಗ್ರಹ

ಚಿಕ್ಕಮಗಳೂರು: ಐತಿಹಾಸಿಕ ಹಿನ್ನೆಲೆಯ ಅಮೃತ್ ಮಹಲ್ ತಳಿ ಅಭಿವೃದ್ಧಿ ಕೇಂದ್ರ ಹಾಗೂ ಕಾವಲು ಅಭಿವೃದ್ಧಿಗೆ ಪ್ರಾಧಿಕಾರ ರಚಿಸಬೇಕು. ಐಎಎಸ್ ದರ್ಜೆಯ ಅಧಿಕಾರಿಯನ್ನು ಮುಖ್ಯಸ್ಥರನ್ನಾಗಿ ನೇಮಿಸಬೇಕು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಲ್ಲಿ ಗ್ರಾಮ ವಾಸ್ತವ್ಯ ಮಾಡಿ ಸಮಸ್ಯೆ ಸರಿಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದರು.

ಅಜ್ಜಂಪುರದಲ್ಲಿ ಜಿಲ್ಲಾ ಪತ್ರಕರ್ತರ ಸಂಘ ಹಾಗೂ ಅಜ್ಜಂಪುರ ತಾಲೂಕು ಪತ್ರಕರ್ತರ ಸಂಘದಿಂದ ಆಯೋಜಿಸಿದ್ದ ಸಂವಾದದಲ್ಲಿ ಕೇಂದ್ರದ ಅಭಿವೃದ್ಧಿ ಕುರಿತು ಚರ್ಚೆ ನಡೆಸಿದರು.

ಗ್ರಾಪಂ ಸದಸ್ಯ, ರೈತ ಹೋರಾಟಗಾರ ಎಸ್.ಶಿವಾನಂದ್ ಮಾತನಾಡಿ, ಗೋವುಗಳ ಸಂರಕ್ಷಣೆಯಲ್ಲಿ ಸರ್ಕಾರ ಮತ್ತು ಇಲಾಖೆಗಳು ವಿಫಲವಾಗಿವೆ. ಅಮೃತ್ ಮಹಲ್​ಗೆ ಮೀಸಲಾಗಿರುವ 52 ಸಾವಿರ ಹೆಕ್ಟೇರ್ ಭೂಮಿ, ಪ್ರಾಕೃತಿಕ ಸಂಪತ್ತಾದ ಮರಳು, ಗ್ರಾನೈಟ್, ಮರಗಳನ್ನೂ ರಕ್ಷಿಸಬೇಕು. ಇದಕ್ಕಾಗಿ ಪ್ರಾಧಿಕಾರ ರಚಿಸಬೇಕು ಎಂದು ಆಗ್ರಹಿಸಿದರು.

ಐಎಎಸ್ ಗ್ರೇಡ್ ಅಧಿಕಾರಿಗಳು ಸೇರಿ, ಕೊರತೆ ಇರುವ ಸಿಬ್ಬಂದಿ ನೇಮಕವಾಗಬೇಕು. ಅಮೃತ್ ಮಹಲ್ ಕಾವಲು ಅವನತಿ ಅಂಚಿಗೆ ಸರಿದಿದೆ. ರಾಸುಗಳಿಗೆ ಕುಡಿಯುವ ನೀರು, ಮೇವಿನ ಕೊರತೆ ನೀಗಿಸಬೇಕು. ಈ ಕೇಂದ್ರದಲ್ಲಿ ರೈತರ ತರಬೇತಿ ಕೊಠಡಿ, ವಸತಿ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಜಿಪಂ ಮಾಜಿ ಸದಸ್ಯ ಎ.ಸಿ.ಚಂದ್ರಪ್ಪ ಮಾತನಾಡಿ, ಕೃಷಿ ಸಂಶೋಧನಾ ಕೇಂದ್ರ ಹಾಗೂ ಪಶುಪಾಲನೆಗೆ ಸಂಬಂಧಿಸಿ ಅಧ್ಯಯನ ಕೇಂದ್ರಗಳಾಗಬೇಕು. ಹಳೇ ವೈಭವ ಕಳೆದುಕೊಂಡಿರುವ ಅಮೃತ್​ವುಹಲ್ ಕಾವಲು ಪುನಶ್ಚೇತನಗೊಳಿಸಬೇಕು. ಇಲ್ಲಿನ 200 ಎಕರೆ ವಿಸ್ತೀರ್ಣದ ಕೆರೆ ಎಲ್ಲ ಸೌಕರ್ಯವಿದ್ದರೂ ಕಳೆಗುಂದುತ್ತಿದೆ. ಈ ಬಗ್ಗೆ ಸರ್ಕಾರ ಇನ್ನಾದರೂ ಗಮನ ಹರಿಸಲಿ ಎಂದರು.

Leave a Reply

Your email address will not be published. Required fields are marked *