ಚಳಿಗಾಲದಲ್ಲಿ ಅದರಲ್ಲೂ ಡಿಸೆಂಬರ್‌ನಿಂದ ಫೆಬ್ರವರಿವರೆಗೆ ಕೆಲವು ಸ್ಥಳಗಳು ಅತ್ಯಂತ ಚಳಿ ಹಾಗೂ ಭಾರಿ ಹಿಮಪಾತ ಸಂಭವಿಸುತ್ತವೆ. ಅಪಾಯಕಾರಿ ಹವಾಮಾನದಿಂದ ಪ್ರವಾಸಕ್ಕೆ ಸೂಕ್ತವಲ್ಲ. ಹೀಗಾಗಿ ಇಂತಹ ಸ್ಥಳಗಳಿಗೆ ಹೋಗುವುದನ್ನು ತಪ್ಪಿಸಿ.
ಸ್ಪಿಟಿ ಕಣಿವೆ
ಹಿಮಾಚಲ ಪ್ರದೇಶದಲ್ಲಿರುವ ಸ್ಪಿಟಿ ಕಣಿವೆ ಚಳಿಗಾಲದಲ್ಲಿ ತುಂಬಾ ಅಪಾಯಕಾರಿ ಸ್ಥಳ. ಇಲ್ಲಿಗೆ ಭೇಟಿ ನೀಡುವುದು ನಿಜಕ್ಕೂ ಡೇಂಜರ್. ಏಕೆಂದರೆ, ಭಾರೀ ಹಿಮಪಾತ, ತೀವ್ರ ಶೀತ (ಸಾಮಾನ್ಯವಾಗಿ -20°C ಅಥವಾ ಕಡಿಮೆ) ಹಾಗೂ ರಸ್ತೆ ಬ್ಲಾಕ್ನಂತಹ ಸಮಸ್ಯೆಗಳು ಎದುರಾಗುತ್ತವೆ.
ಜಾಂಸ್ಕರ್ ಕಣಿವೆ
ಲಡಾಖ್ನಲ್ಲಿರುವ ಜಾಂಸ್ಕರ್ ಕಣಿವೆ ಚಳಿಗಾಲ ಪ್ರವಾಸಕ್ಕೆ ಸೂಕ್ತವಲ್ಲ. ಚಳಿಗಾಲದಲ್ಲಿ ಇಲ್ಲಿನ ಎಲ್ಲಾ ರಸ್ತೆಗಳು ಮುಚ್ಚಿಹೋಗುತ್ತವೆ. ತೀವ್ರ ಚಳಿ ಮತ್ತು ತಾಪಮಾನ ತಗ್ಗುವಿಕೆಯಿಂದ ಇಲ್ಲಿಗೆ ಭೇಟಿ ನೀಡುವುದು ಸೂಕ್ತವಲ್ಲ.
ರೋಹ್ತಾಂಗ್ ಪಾಸ್
ಹಿಮಾಚಲ ಪ್ರದೇಶದಲ್ಲಿರುವ ರೋಹ್ತಾಂಗ್ ಪಾಸ್ ಚಳಿಗಾಲದಲ್ಲಿ ಭಾರಿ ಹಿಮಪಾತದಿಂದ ಸಂಪೂರ್ಣ ಮುಚ್ಚಿಹೋಗುತ್ತದೆ. ಹೀಗಾಗಿ ಪ್ರವಾಸಿಗಳಿಗೆ ಚಳಿಗಾಲದಲ್ಲಿ ಪ್ರವೇಶ ನಿರ್ಬಂಧವಾಗಿರುತ್ತದೆ.
ಖಾರ್ದುಂಗ್ ಲಾ
ಲಡಾಖ್ನಲ್ಲಿರುವ ಖಾರ್ದುಂಗ್ ಲಾ ಜಗತ್ತಿನ ಅತ್ಯುನ್ನತ ಮೋಟಾರಬಲ್ ಬೆಟ್ಟದ ಹಾದಿಗಳಲ್ಲಿ ಒಂದು. ಆದರೆ, ಚಳಿಗಾಲದಲ್ಲಿ ಹಿಮಪಾತ ಮತ್ತು ಶೀತ ಬಿರುಗಾಳಿಯಿಂದ ಪ್ರವೇಶ ನಿರ್ಬಂಧ ಇರುತ್ತದೆ.
ಯುಮ್ತಾಂಗ್ ಕಣಿವೆ
ಸಿಕ್ಕಿಂನ ಯುಮ್ತಾಂಗ್ ಒಂದು ಸುಂದರ ಕಣಿವೆ. ಆದರೆ, ಚಳಿಗಾಲದಲ್ಲಿ ಈ ಕಣಿವೆ ಅಷ್ಟೇ ಅಪಾಯಕಾರಿ. ಇಲ್ಲಿನ ರಸ್ತೆಗಳು ಹಿಮದಿಂದ ಸಂಪೂರ್ಣ ಮುಚ್ಚಿಹೋಗುತ್ತವೆ. ಚಳಿಗಾಲದಲ್ಲಿ -15°C ಗಿಂತ ಕಡಿಮೆ ತಾಪಮಾನ ಇರುತ್ತದೆ.
ಗುರುಡಾಂಗ್ಮಾರ್ ಸರೋವರ
ಸಿಕ್ಕಿಂನಲ್ಲಿರುವ ಗುರುಡಾಂಗ್ಮಾರ್ ಸರೋವರ ಅತಿ ಎತ್ತರದಲ್ಲಿ (17,000 ಅಡಿ) ಇರುವುದರಿಂದ ಅಲ್ಲಿ ಆಮ್ಲಜನಕ ಕಡಿಮೆ. ಅಲ್ಲದೆ, ಹಿಮಬಿರುಗಾಳಿ ಮತ್ತು ರಸ್ತೆಗಳು ಬ್ಲಾಕ್ ಆಗುವುದರಿಂದ ಚಳಿಗಾಲದಲ್ಲಿ ಪ್ರವಾಸ ನಿರ್ಭಂಧಿಸಲಾಗಿರುತ್ತದೆ.
ಡ್ರಾಸ್
ಲಡಾಖ್ನ ಡ್ರಾಸ್ ಕಣಿವೆ ಭಾರತದ ಅತ್ಯಂತ ಶೀತ ಸ್ಥಳಗಳಲ್ಲಿ ಒಂದು. ಇಲ್ಲಿನ ತಾಪಮಾನ -45°C ವರೆಗೆ ಇಳಿಯುತ್ತದೆ. ಹೀಗಾಗಿ ಚಳಿಗಾಲದಲ್ಲಿ ಪ್ರವಾಸ ಮಾಡಲು ಇದು ಉತ್ತಮ ಸ್ಥಳವಲ್ಲ.
ಲೇಹ್
ಲಡಾಖ್ನಲ್ಲಿರುವ ಲೇಹ್ ನಗರದಲ್ಲಿ ಚಳಿಗಾಲದಲ್ಲಿ ತೀವ್ರ ಚಳಿ (-35°C ವರೆಗೆ) ಇರುತ್ತದೆ. ಇಲ್ಲಿ ಭಾರಿ ಹಿಮಪಾತ ಮತ್ತು ಹೆಪ್ಪುಗಟ್ಟಿದ ಸರೋವರಗಳಿಂದಾಗಿ ಇಲ್ಲಿಗೆ ಪ್ರವಾಸ ಮಾಡುವುದು ತುಂಬಾನೇ ಕಷ್ಟ.
ದೆಹಲಿ ಮತ್ತು ಉತ್ತರ ಭಾರತದ ಬಯಲು ಪ್ರದೇಶ
ದೆಹಲಿ ಮತ್ತು ಉತ್ತರ ಭಾರತದ ಬಯಲು ಪ್ರದೇಶಗಳು ಚಳಿಗಾಲದಲ್ಲಿ ಶೀತ ಹಾಗೂ ಮಂಜಿನಿಂದ ಆವೃತಗೊಳ್ಳುತ್ತವೆ. ಹಿಮಾಲಯದ ಪ್ರಭಾವ, ದಟ್ಟವಾದ ಮಂಜು, ಹೆಚ್ಚಿನ ಮಾಲಿನ್ಯ (ಹೊಗೆ) ಮತ್ತು ಶೀತ ಅಲೆಗಳಿಂದಾಗಿ ತಾಪಮಾನ ಗಮನಾರ್ಹವಾಗಿ ಇಳಿಯುತ್ತದೆ. ಹೀಗಾಗಿ ಇಲ್ಲಿಗೆ ಪ್ರವಾಸ ಸೂಕ್ತವಲ್ಲ.
ಸೇಲಾ ಪಾಸ್
ಅರುಣಾಚಲ ಪ್ರದೇಶದಲ್ಲಿರುವ ಸೇಲಾ ಪಾಸ್ ಭಾರಿ ಹಿಮಪಾತದಿಂದ ಸಂಪೂರ್ಣವಾಗಿ ಮುಚ್ಚಿ ಹೋಗುತ್ತದೆ. ಈ ಸ್ಥಳದಲ್ಲಿ ಚಳಿಗಾಲದಲ್ಲಿ ತಾಪಮಾನ -15°C ಗಿಂತ ಕಡಿಮೆ ಇರುತ್ತದೆ.
ಸುರಕ್ಷತೆ ಮುಖ್ಯ
ಈ ಸ್ಥಳಗಳು ಚಳಿಗಾಲದಲ್ಲಿ ಅದ್ಭುತವಾಗಿ ಕಾಣಿಸಿಕೊಂಡರೂ, ನಿಮ್ಮ ಸುರಕ್ಷತೆಗಾಗಿ ಇಲ್ಲಿಗೆ ಹೋಗುವುದನ್ನು ತಪ್ಪಿಸಿ. ಬದಲಾಗಿ ಗೋವಾ, ಕೇರಳ, ಕರ್ನಾಟಕದಂತಹ ಸೌಮ್ಯ ಹವಾಮಾನದ ಸ್ಥಳಗಳಿಗೆ ಭೇಟಿ ನೀಡಿ.