ಚಳಿಗಾಲ: ಹೊರಗೆ ಅಲೆದಾಡುವಾಗ ಇವುಗಳನ್ನು ಪಾಲಿಸಿ

ರಮೇಶ್​ ಕುಮಾರ್​​ ಬಿ ಎಡಮೋಳೆ

ಚಳಿಗಾಲ: ಹೊರಗೆ ಅಲೆದಾಡುವಾಗ ಇವುಗಳನ್ನು ಪಾಲಿಸಿ

ಕೊರೆಯುವ ಚಳಿಯಲ್ಲಿ ಮನೆಯಿಂದ ಹೊರಗೆ ಕಾಲಿಡುವಾಗ ಒಂದಿಷ್ಟು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಆರೋಗ್ಯದ ಮೇಲೆ ಚಳಿಯು ತೀವ್ರ ಪರಿಣಾಮ ಬೀರುತ್ತದೆ. ಹಾಗಾದರೆ, ಯಾವೆಲ್ಲ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಅನ್ನೋದನ್ನು ತಿಳಿದುಕೊಳ್ಳೋಣ.

ಉಷ್ಣ ಬಟ್ಟೆಗಳನ್ನು ಧರಿಸಿ

ಚಳಿಗಾಲದಲ್ಲಿ ಮಂದವಾದ ಬಟ್ಟೆಗಳನ್ನು ಧರಿಸಿ. ಹೆಚ್ಚಾಗಿ ಉಣ್ಣೆಯಿಂದ ಮಾಡಿದ ಬಟ್ಟೆಗಳನ್ನು ಧರಿಸುವುದು ಒಳಿತು. ಅಲ್ಲದೆ, ಮನೆಯಿಂದ ಹೊರಗೆ ಹೋಗುವಾಗ ವಾಟರ್‌ಪ್ರೂಫ್ ಮತ್ತು ವಿಂಡ್‌ಪ್ರೂಫ್ ಜಾಕೆಟ್ ಧರಿಸುವುದನ್ನು ಮರೆಯಬೇಡಿ.

ತಲೆ, ಕಿವಿ, ಕೈ-ಕಾಲುಗಳನ್ನು ಮುಚ್ಚಿ

ದೇಹದ ಶಾಖದ ಶೇ. 40 ರಿಂದ 50 ರಷ್ಟು ಉಷ್ಣಾಂಶ ತಲೆಯಿಂದ ಹೋಗುತ್ತದೆ. ಹೀಗಾಗಿ ಉಣ್ಣೆಯ ಟೋಪಿ, ಕಿವಿ ಮಫ್ಲರ್, ಗ್ಲೌಸ್, ಉದ್ದನೆಯ ಸಾಕ್ಸ್ ಮತ್ತು ವಾಟರ್‌ಪ್ರೂಫ್ ಬೂಟು ಧರಿಸಿ.

ಮುಖಕ್ಕೆ ಸ್ಕಾರ್ಫ್

ಶೀತ ಗಾಳಿಯಿಂದ ಮೂಗು ಹಾಗೂ ಗಂಟಲು ಒಣಗದಂತೆ ಮತ್ತು ಮುಖ ಒಡೆಯದಂತೆ ರಕ್ಷಣೆ ಮಾಡಿಕೊಳ್ಳಲು ನಿಮ್ಮ ಮುಖಕ್ಕೆ ಸ್ಕಾರ್ಫ್​ ಧರಿಸುವುದನ್ನು ಯಾವುದೇ ಕಾರಣಕ್ಕೂ ತಪ್ಪಿಸಬೇಡಿ.

ಮಾಯಿಶ್ಚರೈಸರ್ ಮತ್ತು ಲಿಪ್ ಬಾಮ್

ಚಳಿಗಾಲದಲ್ಲಿ ತ್ವಚೆ ಒಣಗುವುದು ಸಾಮಾನ್ಯ. ಇದರಿಂದ ಚರ್ಮ ಸೀಳುತ್ತದೆ. ಆದ್ದರಿಂದ ಮನೆಯಿಂದ ಹೊರಡುವ ಮೊದಲು ಮಾಯಿಶ್ಚರೈಸರ್ ಮತ್ತು ಲಿಪ್ ಬಾಮ್ ಹಚ್ಚುವುದನ್ನು ಮರೆಯದಿರು.

ಸಾಕಷ್ಟು ನೀರು ಕುಡಿಯಿರಿ

ಚಳಿಯಲ್ಲಿ ಬಾಯಾರಿಕೆ ಕಡಿಮೆ ಎನಿಸುತ್ತದೆ. ಹಾಗಂತ ನೀರು ಕುಡಿಯುವುದನ್ನು ಕಮ್ಮಿ ಮಾಡಬೇಡಿ. ಇದರಿಂದ ಡಿಹೈಡ್ರೇಶನ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ಅಗತ್ಯ ಪ್ರಮಾಣದಲ್ಲಿ ನೀರು ಕುಡಿಯಿರಿ.

ಹೈಪೋಥರ್ಮಿಯಾ ಬಗ್ಗೆ ಎಚ್ಚರ

ಚಳಿಗಾಲದಲ್ಲಿ ಹೊರಗೆ ಅಡ್ಡಾಡುವಾಗ ಶೀತ ಗಾಳಿಯಿಂದ ತೀವ್ರ ನಡುಕ, ಆಯಾಸ, ಚರ್ಮ ಗಟ್ಟಿಯಾಗುವ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ಬೆಚ್ಚಗಿನ ಸ್ಥಳಕ್ಕೆ ಹೋಗಿ.

ರಸ್ತೆಯಲ್ಲಿ ನಡೆಯುವಾಗ ಎಚ್ಚರ

ಚಳಿಗಾಲದಲ್ಲಿ ರಸ್ತೆಗಳ ಮೇಲೆ ಹಿಮ ಅಥವಾ ಮಂಜುಗಟ್ಟಿರುತ್ತದೆ. ಹೀಗಾಗಿ ರಸ್ತೆಯಲ್ಲಿ ನಿಧಾನವಾಗಿ ನಡೆಯಿರಿ. ಬೈಕ್​ನಲ್ಲಿ ಹೋಗುವಾಗಲೂ ಎಚ್ಚರಿಕೆ ವಹಿಸಿ. ಐಸ್ ಗ್ರಿಪ್ ಇರುವ ಶೂ ಧರಿಸಿ.

ವಾಹನ ಸವಾರರು ಹುಷಾರ್​

ಚಳಿಗಾಲದಲ್ಲಿ ನಿಮ್ಮ ವಾಹನಗಳಲ್ಲಿ ಕಡ್ಡಾಯವಾಗಿ ಬ್ಲಾಂಕೆಟ್, ಹೆಚ್ಚುವರಿ ಬಟ್ಟೆಗಳು, ಮೊಬೈಲ್​ ಚಾರ್ಜರ್ ಹಾಗೂ ತಿನ್ನಲು ಏನಾದರೂ ಇಟ್ಟುಕೊಳ್ಳಿ.

ಅಲ್ಪಾವಧಿಗೆ ಹೊರಗೆ ಇರಿ

ತೀವ್ರ ಚಳಿಯಿದ್ದರೆ ಗಂಟೆಗಟ್ಟಲೆ ಹೊರಗೆ ಇರಬೇಡಿ. ಪದೇಪದೆ ಬೆಚ್ಚಗೆ ಇರುವ ಪ್ರದೇಶಕ್ಕೆ ಬಂದು ವಿಶ್ರಾಂತಿ ತೆಗೆದುಕೊಳ್ಳಿ.

ಅನಾರೋಗ್ಯವಿದ್ರೆ ಹೋಗಬೇಡಿ

ಜ್ವರ, ಕೆಮ್ಮು, ಉಸಿರಾಟದ ಸಮಸ್ಯೆ ಇದ್ದರೆ ಚಳಿಯಲ್ಲಿ ಹೊರಗೆ ಹೋಗುವುದನ್ನು ತಪ್ಪಿಸಿ. ಬದಲಾಗಿ ಮನೆಯಲ್ಲೇ ವಿಶ್ರಾಂತಿ ತೆಗೆದುಕೊಳ್ಳಿ. ಈ ಎಲ್ಲ ಮುನ್ನೆಚ್ಚರಿಕೆಗಳನ್ನು ಪಾಲಿಸಿದರೆ ಚಳಿಗಾಲದಲ್ಲಿಯೂ ಸುರಕ್ಷಿತವಾಗಿ ಮತ್ತು ಸಂತೋಷವಾಗಿ ನೀವು ಹೊರಗೆ ತಿರುಗಾಡಬಹುದು.