ವಾರದ 7 ದಿನ ಯಾವ ಮರವನ್ನು ಪೂಜಿಸಬೇಕು?

ಮಮತಾ

ವಾರದ 7 ದಿನ ಯಾವ ಮರವನ್ನು ಪೂಜಿಸಬೇಕು?

ಹಿಂದೂ ಧರ್ಮದಲ್ಲಿ ಪ್ರಕೃತಿಯನ್ನು ದೇವರು ಎಂದು ಪೂಜಿಸಲಾಗುತ್ತದೆ. ಆಲದ ಮರ, ಬೇವಿನ ಮರ ಸೇರಿದಂತೆ ನಾನಾ ಮರಗಳಿಗೆ ಪ್ರತ್ಯೇಕವಾಗಿ ಪೂಜೆಯನ್ನು ಮಾಡಲಾಗುತ್ತದೆ. ವೇದ ಹಾಗೂ ಪುರಾಣಗಳ ಪ್ರಕಾರ ಒಂದೊಂದು ದಿನ ಒಂದು ಮರವನ್ನು ಪೂಜಿಸಲಾಗುತ್ತದೆ. ದೇವರನ್ನು ಆರಾಧಿಸಲಾಗುತ್ತದೆ. ಹಾಗಾದರೆ ಯಾವ ವಾರ ಯಾವ ಮರವನ್ನು ಪೂಜಿಸಿದರೆ ಫಲ ಸಿಗುತ್ತದೆ ಎನ್ನುವುದಕ್ಕೆ ಮಾಹಿತಿ ಇಲ್ಲಿದೆ.

ಭಾನುವಾರ- ಎಕ್ಕದ ಗಿಡ

ದಕ್ಷಿಣ ಭಾರತದಲ್ಲಿ ಎಕ್ಕದ ಗಿಡದ ಹೂವನ್ನು ವ್ಯಾಪಾರ ಸುಗಮವಾಗಲಿ ಎಂದು ಇಟ್ಟು ಪೂಜಿಸುತ್ತಾರೆ. ಈ ಗಿಡವನ್ನು ಭಾನುವಾರ ಪೂಜಿಸಬೇಕು. ಗಿಡಕ್ಕೆ ನೀರನ್ನು ಅರ್ಪಿಸಿ, ಗಾಯಿತ್ರಿ ಅಥವಾ ಸೂರ್ಯನ ಶ್ಲೋಕಗಳನ್ನು ಪಠಿಸಬೇಕು. ಇದರಿಂದ ಸಮಾಜದಲ್ಲಿ ಗೌರವ ನಾಯಕತ್ವದ ಗುಣ ಹೆಚ್ಚಾಗುತ್ತದೆ. ಜಾತದಲ್ಲಿ ಕಂಡು ಬರುವ ಸೂರ್ಯ ಗ್ರಹದ ದೋಷ ದೂರವಾಗುತ್ತದೆ

ಸೋಮವಾರ – ಬಿಲ್ವ ಪತ್ರೆ

ಸೋಮವಾರ ಪರಮಶಿವನನ್ನು ಪೂಜಿಸಲಾಗುತ್ತದೆ. ಶಿವನಿಗೆ ಇಷ್ಟವಾದ ಬಿಲ್ವಪತ್ರೆಯನ್ನು ಲಿಂಗದ ಬಳಿ ಇಟ್ಟು ಪೊಜಿಸಬೇಕು ಅಥವಾ ಮರ ಇರುವ ಕಡೆ ತೆರಳಿ ನೀರುಣಿಸಿ ಪೂಜೆ ಮಾಡಬೇಕು. ಪುರಾಣಗಳ ಪ್ರಕಾರ, ಬಿಲ್ವ ವೃಕ್ಷದಲ್ಲಿ ಸಾಕ್ಷಾತ್ ಶಿವನೇ ನೆಲೆಸಿದ್ದಾನೆ ಎನ್ನಲಾಗುತ್ತದೆ. ಜಲಾಭಿಷೇಕ ಮಾಡಿ 3 ಅಥವಾ 7 ಪ್ರದಕ್ಷಿಣೆ ಹಾಕುವುದರಿಂದ ಶಿವನ ಕೃಪೆ ಸದಾ ಇರುತ್ತದೆ. ಇದು ಕುಟುಂಬದಲ್ಲಿ ಶಾಂತಿ, ಮಾನಸಿಕ ನೆಮ್ಮದಿ ಮತ್ತು ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಮಂಗಳವಾರ – ಬೇವಿನ ಮರ

ಸಾಕಷ್ಟು ಔಷಧೀಯ ಗುಣವನ್ನು ಹೊಂದಿರುವ ಬೇವಿನ ಮರವನ್ನು ಪೂಜಿಸುವುದು ಅತ್ಯಂತ ಮಂಗಳಕರ. ಮಂಗಳವಾರ ಹನುಮಂತ ಮತ್ತು ಮಂಗಳ ಗ್ರಹಕ್ಕೆ ಸಂಬಂಧಿಸಿದ ದಿನ ಎಂದು ಪುರಾಣದ ಪ್ರಕಾರ ಪರಿಗಣಿಸಲಾಗುತ್ತದೆ. ಬೇವಿನ ಮರದ ಕೆಳಗೆ ಎಳ್ಳೆಣ್ಣೆ ಅಥವಾ ತುಪ್ಪದ ದೀಪ ಹಚ್ಚಿ ಪ್ರಾರ್ಥನೆ ಮಾಡೋದ್ರಿಂದ ನಕರಾತ್ಮಕ ಶಕ್ತಿಗೆ ಬ್ರೇಕ್​ ಹಾಕಬಹುದು ಇದು ಧೈರ್ಯ, ಆರೋಗ್ಯ ಮತ್ತು ಮನೆಯಲ್ಲಿ ಸುಖ-ಶಾಂತಿ ನೀಡುತ್ತದೆ.

ಬುಧವಾರ ಕದಂಬ ವೃಕ್ಷ

ಬುಧವಾರವನ್ನು ಕೃಷ್ಣ ಮತ್ತು ಬುಧಗ್ರಹಕ್ಕೆ ಸಂಬಂಧಿಸಿದ ದಿನ ಎಂದು ಪರಿಗಣಿಸಲಾಗುತ್ತದೆ. ಕದಂಬ ವೃಕ್ಷವು ಶ್ರೀಕೃಷ್ಣನಿಗೆ ಅತ್ಯಂತ ಪ್ರಿಯ ಎಂದು ಪುರಾಣಗಳಲ್ಲಿ ಹೇಳಲಾಗುತ್ತದೆ. ಇದೇ ವೃಕ್ಷದ ಕೆಳಗೆ ವಿಶ್ರಮಿಸಿ ರಾಸಲೀಲೆಗಳನ್ನು ಮಾಡಿದ್ದಾನೆ ಎನ್ನುವ ಮನಂಬಿಕೆ ಇದೆ. ಈ ಮರವನ್ನು ಪೂಜಿಸುವುದರಿಂದ ವಿದ್ಯಾಭ್ಯಾಸ, ಜ್ಞಾನ ಮತ್ತು ಬುದ್ಧಿವಂತಿಕೆ ಹೆಚ್ಚುತ್ತದೆ. ಅಷ್ಟೇ ಅಲ್ಲದೆ, ವ್ಯಾಪಾರದಲ್ಲಿ ಪ್ರಗತಿ ಹಾಗೂ ಉತ್ತಮ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಇರಲಿದೆ.

ಗುರುವಾರ- ಬಾಳೆಗಿಡ

ಗುರವಾರವನ್ನು ಮಹಾವಿಷ್ಣಿವಿನ ದಿನ ಎನ್ನಲಾಗುತ್ತದೆ. ಮಹಿಳೆಯರು ಬಾಳೆಗಿಡವನ್ನು ಪೂಜಿಸುವುದು ಶ್ರೇಷ್ಠ ಎನ್ನಲಾಗುತ್ತದೆ.ಮಹಿಳೆಯರು ಗುರುವಾರ ಉಪವಾಸ ವ್ರತ ಆಚರಿಸಿ, ಬಾಳೆಗಿಡಕ್ಕೆ ಹಳದಿ ದಾರವನ್ನು ಕಟ್ಟಿ ಪೂಜೆ ಮಾಡುತ್ತಾರೆ. ಇದರಿಂದ ಸುಖಮಯ ದಾಂಪತ್ಯ ಜೀವನ, ಕುಟುಂಬದ ಶ್ರೇಯಸ್ಸು, ಸಂತಾನ ಭಾಗ್ಯ ಹಾಗೂ ವಿಷ್ಣು ದೇವರ ಸಂಪೂರ್ಣ ಅನುಗ್ರಹ ಲಭಿಸುತ್ತದೆ.

ಶುಕ್ರವಾರ – ನೆಲ್ಲಿಕಾಯಿ ಮರ

ಬೆಟ್ಟದ ನೆಲ್ಲಿಕಾಯಿ ಮರವನ್ನು ಶುಕ್ರವಾರ ಪೂಜಿಸೋದು ಶ್ರೇಷ್ಠ ಎಂದು ಪುರಾಣದ ಪ್ರಕಾರ ಹೇಳಲಾಗುತ್ತದೆ. ಇದು ಲಕ್ಷ್ಮಿ ದೇವಿಗೆ ಸಮರ್ಪಿತದಿನ. ಬೆಟ್ಟದ ನೆಲ್ಲಿಕಾಯಿ ಮರದಲ್ಲಿ ವಿಷ್ಣು ಹಾಗೂ ಲಕ್ಷ್ಮಿ ನೆಲೆಸಿದ್ದಾರೆ ಎನ್ನುವ ನಂಬಿಕೆ ಇದೆ. ಈ ದಿನ ನೆಲ್ಲಿಕಾಯಿ ಮರಕ್ಕೆ ನೀರನ್ನು ಅರ್ಪಿಸಿ ಪೂಜಿಸುವುದರಿಂದ ಐಶ್ವರ್ಯ, ಧನಸಂಪತ್ತು ಮತ್ತು ಕುಟುಂಬದ ಕಲ್ಯಾಣವಾಗುತ್ತದೆ. ಆರ್ಥಿಕ ಸಮಸ್ಯೆಗಳು ದೂರವಾಗುತ್ತದೆ.

ಶನಿವಾರ – ಅಶ್ವತ್ಥ ಮರ

ಶನಿವಾರ ಶನಿ ಮಹಾತ್ಮನಿಗೆ ಸಮರ್ಪಿತವಾದ ವಾರ ಎನ್ನಲಾಗುತ್ತದೆ. ಈ ದಿನ ಅಶ್ವತ್ಥ ಮರವನ್ನು ಪೂಜಿಸುವುದರಿಂದ ವಿಶೇಷ ಫಲಗಳು ಸಿಗುತ್ತವೆ. ಮರಕ್ಕೆ ಜಲಾಭಿಷೇಕ ಮಾಡಿಸಿ, ಸಾಸಿವೆ ಎಣ್ನೆಯ ದೀಪ ಹಚ್ಚಿ ಪ್ರದಕ್ಷಿಣೆ ಹಾಕೋದ್ರಿಂದ ಶನಿದೋಷ ಹಾಗೂ ಪಿತೃದೋಷ ನಿವಾರಣೆಯಾಗುತ್ತದೆ.