ಸುಡುವ ಬಿಸಿಲಲ್ಲೂ ನಿಮ್ಮ ಮಗು ಕೂಲ್ ಆಗಿರಬೇಕೆ? ಇಲ್ಲಿದೆ ಆರೋಗ್ಯದ ರಹಸ್ಯ
ಭಾನುಪ್ರಿಯ ಡಿ.ಕೆ
ಸುಡುವ ಬಿಸಿಲಲ್ಲೂ ನಿಮ್ಮ ಮಗು ಕೂಲ್ ಆಗಿರಬೇಕೆ? ಇಲ್ಲಿದೆ ಆರೋಗ್ಯದ ರಹಸ್ಯ
ನಗರಗಳಲ್ಲಿ ತೀವ್ರ ಬಿಸಿಲು ಮತ್ತು ಉಷ್ಣಾಂಶ ಹೆಚ್ಚಾಗಿರುವುದನ್ನು ನಾವು ಗಮನಿಸಿರುತ್ತೇವೆ. ಈ ಸಮಯದಲ್ಲಿ ಹವಮಾನಕ್ಕೆ ಹೊಂದಿಕ್ಕೊಳ್ಳಲಾಗದೇ, ಮಕ್ಕಳ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಹಾಗಾಗಿ ಈ ಮುನ್ನಚ್ಚರಿಕೆಗಳು ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ.
ಸಾಕಷ್ಟು ನೀರು ಕುಡಿಸಿ
ಮಕ್ಕಳು ಆಟದಲ್ಲಿ ಮುಳುಗಿ ಹೋದರೆ ಬಾಯಾರಿಕೆ ತೋರದೇ ಇರಬಹುದು. ಆದರೆ ನಿರ್ಜಲೀಕರಣ ಬೇಗ ಆಗುತ್ತದೆ. ಇದು ತಲೆಸುತ್ತು, ಆಯಾಸ, ಬಿಸಿಲಾಘಾತಕ್ಕೆ ಕಾರಣವಾಗಬಹುದು. ದಿನಕ್ಕೆ ವಯಸ್ಸಿಗೆ ತಕ್ಕಂತೆ 1–2 ಲೀಟರ್ ಅಥವಾ ಹೆಚ್ಚು ನೀರು ಕುಡಿಸಿ.
ಸೂರ್ಯನ ನೇರ ಬಿಸಿಲಿನಿಂದ ರಕ್ಷಣೆ ನೀಡಿ
ಮಧ್ಯಾಹ್ನ 10–11 ರಿಂದ ಸಂಜೆ 4 ಗಂಟೆಯವರೆಗೆ ನೇರ ಬಿಸಿಲು ತಪ್ಪಿಸಿ. ಇದು ಸೂರ್ಯನ UV ಕಿರಣಗಳು ತೀವ್ರವಾಗಿರುವ ಸಮಯ. ಈ ಸಮಯದಲ್ಲಿ ಹಗುರವಾದ ಹತ್ತಿ ಅಗಲ ಟೋಪಿ, ಸನ್‌ಗ್ಲಾಸ್ ಹಾಕಿ.
ನೆರಳಿನಲ್ಲಿ ಆಟವಾಡಲು ಪ್ರೋತ್ಸಾಹಿಸಿ
ಬಿಸಿಲು ತೀವ್ರವಾಗಿರುವಾಗ ಹೊರಗೆ ದೀರ್ಘಕಾಲ ಆಡದಂತೆ ನೋಡಿಕೊಳ್ಳಿ. ಬೆಳಿಗ್ಗೆ 8–10 ಮತ್ತು ಸಂಜೆ 4.30 ನಂತರ ಹೊರಗೆ ಆಡಲು ಅನುಮತಿಸಿ. ಪ್ರತಿ 30–45 ನಿಮಿಷಕ್ಕೊಮ್ಮೆ ನೆರಳಿನಲ್ಲಿ ವಿಶ್ರಾಂತಿ ತೆಗೆದುಕೊಳ್ಳಲು ಹೇಳಿ.
ತಂಪಾದ, ಸುಲಭ ಜೀರ್ಣವಾಗುವ ಆಹಾರ ನೀಡಿ
ಬೇಸಿಗೆಯಲ್ಲಿ ಜೀರ್ಣಕ್ರಿಯೆ ನಿಧಾನವಾಗುತ್ತದೆ, ಅತಿಸಾರ, ಹೊಟ್ಟೆ ನೋವು ಸಾಮಾನ್ಯ. ಹಾಗಾಗಿ ತಾಜಾ ಹಣ್ಣುಗಳು, ತರಕಾರಿ ಸಲಾಡ್, ಮೊಸರು-ಅಕ್ಕಿ, ಖಿಚ್ಡಿ, ತಂಪು ಸೂಪ್ ನೀಡಿ.
ಚರ್ಮ/ಹೊಟ್ಟೆ ರಕ್ಷಣೆ
ಬೇಸಿಗೆಯಲ್ಲಿ ಚರ್ಮದ ಸಮಸ್ಯೆ, ಫಂಗಲ್ ಇನ್‌ಫೆಕ್ಷನ್, ಅತಿಸಾರ ಹೆಚ್ಚಾಗುತ್ತದೆ. ಹಾಗಾಗಿ ದಿನಕ್ಕೆ 2 ಬಾರಿ ಸೌಮ್ಯ ಸೋಪಿನಿಂದ ಸ್ನಾನ ಮಾಡಿಸಿ. ಕೈಗಳನ್ನು ಆಗಾಗ ತೊಳೆಯುವಂತೆ ಹೇಳಿ. ಜೊತೆಗೆ ಶುದ್ಧ ನೀರು ಮತ್ತು ತಾಜಾ ಆಹಾರ ಮಾತ್ರ ನೀಡಿ