ವಿಜಯವಾಣಿ ಸುದ್ದಿ ಜಾಲ
ಇಂಗ್ಲೆಂಡ್ ನಾಯಕ ಹ್ಯಾರಿ ಬ್ರೂಕ್, ಇತ್ತೀಚೆಗೆ ಅಕ್ಟೋಬರ್ 22 ರಂದು ರಾವಲ್ಪಿಂಡಿಯಲ್ಲಿ ಶ್ರೀಲಂಕಾ ವಿರುದ್ಧ ನಡೆದ ಪಾಕಿಸ್ತಾನ ತ್ರಿಕೋನ ಸರಣಿಯಲ್ಲಿ ಕೇವಲ 114 ಎಸೆತಗಳಲ್ಲಿ ದ್ವಿಶತಕ ಪೂರೈಸಿ ಪುರುಷರ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಅತಿ ವೇಗದ ದ್ವಿಶತಕ ದಾಖಲಿಸಿದರು. ಇವರು 202 ರನ್ ಗಳಿಸಿ, ಏಕದಿನದಲ್ಲಿ ದ್ವಿಶತಕ ಸಿಡಿಸಿದ ಮೊದಲ ಇಂಗ್ಲಿಷ್ ಬ್ಯಾಟರ್ ಎನಿಸಿಕೊಂಡಿದ್ದಾರೆ.
2022 ಡಿಸೆಂಬರ್ 10 ರಂದು ಚಟ್ಟೋಗ್ರಾಮ್ನಲ್ಲಿ ಬಾಂಗ್ಲಾದೇಶ ವಿರುದ್ಧ ನಡೆದ ಪಂದ್ಯದಲ್ಲಿ ಇಶಾನ್ ಕಿಶನ್ ಕೇವಲ 126 ಎಸೆತಗಳಲ್ಲಿ ದ್ವಿಶತಕ ಬಾರಿಸಿ ಮಿಂಚಿದ್ದರು. ಅವರು 131 ಎಸೆತಗಳಲ್ಲಿ 210 ರನ್ ಸಿಡಿಸಿ ಭರ್ಜರಿ ಜಯ ತಂದುಕೊಟ್ಟಿದ್ದರು.
2023ರ ವಿಶ್ವಕಪ್ನಲ್ಲಿ ನವೆಂಬರ್ 7 ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಮ್ಯಾಕ್ಸ್ವೆಲ್ ಕೇವಲ 128 ಎಸೆತಗಳಲ್ಲಿ ದ್ವಿಶತಕ ಪೂರೈಸಿದರು. 91/7 ರನ್ಗಳಿಗೆ ಪ್ರಮುಖ ವಿಕೆಟ್ ಕಳೆದುಕೊಂಡಿದ್ದ ಆಸ್ಟ್ರೇಲಿಯಾವನ್ನು ತಮ್ಮ ಅಜೇಯ 201 ರನ್ಗಳ ಇನ್ನಿಂಗ್ಸ್ ಮೂಲಕ ಅವರು ಗೆಲುವಿನ ದಡ ಮುಟ್ಟಿಸಿದ್ದರು.‘
2024 ಫೆಬ್ರವರಿ 9ರಂದು ಪಲ್ಲೆಕೆಲೆಯಲ್ಲಿ ಅಫ್ಘಾನಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ ಪಥುಮ್ ನಿಸ್ಸಾಂಕ 136 ಎಸೆತಗಳಲ್ಲಿ ದ್ವಿಶತಕ ಪೂರೈಸುವ ಮೂಲಕ, ಪುರುಷರ ಏಕದಿನ ಕ್ರಿಕೆಟ್ನಲ್ಲಿ ದ್ವಿಶತಕ ಸಿಡಿಸಿದ ಶ್ರೀಲಂಕಾದ ಮೊಟ್ಟಮೊದಲ ಬ್ಯಾಟರ್ ಎಂಬ ಐತಿಹಾಸಿಕ ಸಾಧನೆ ಮಾಡಿದರು.
2015ರ ವಿಶ್ವಕಪ್ನಲ್ಲಿ ಕ್ಯಾನ್ಬೆರಾದ ಮನುಕಾ ಓವಲ್ನಲ್ಲಿ ಜಿಂಬಾಬ್ವೆ ವಿರುದ್ಧ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ನ ದೈತ್ಯ ಆಟಗಾರ ಕ್ರಿಸ್ ಗೇಲ್ 138 ಎಸೆತಗಳಲ್ಲಿ ದ್ವಿಶತಕ ಪೂರೈಸಿದರು. ಅಂದು ಇದುವೇ ಅತಿ ವೇಗದ ಏಕದಿನ ದ್ವಿಶತಕವಾಗಿತ್ತು. ಒಟ್ಟಾರೆ 147 ಎಸೆತಗಳಲ್ಲಿ 215 ರನ್ ಸಿಡಿಸಿದ ಅವರು 16 ಭರ್ಜರಿ ಸಿಕ್ಸರ್ಗಳನ್ನು ಸಿಡಿಸಿ ಮಿಂಚಿದ್ದರು.
2011ರ ಡಿಸೆಂಬರ್ನಲ್ಲಿ ಇಂದೋರ್ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಪಂದ್ಯದಲ್ಲಿ ಭಾರತದ ಸ್ಫೋಟಕ ಓಪನರ್ ವೀರೆಂದ್ರ ಸೆಹ್ವಾಗ್ ಕೇವಲ 140 ಎಸೆತಗಳಲ್ಲಿ ದ್ವಿಶತಕ ಪೂರೈಸಿದರು. 149 ಎಸೆತಗಳಲ್ಲಿ 25 ಬೌಂಡರಿ ಹಾಗೂ 7 ಸಿಕ್ಸರ್ಗಳೊಂದಿಗೆ 219 ರನ್ ಗಳಿಸಿದ ಇವರ ಈ ಸ್ಕೋರ್ ಆ ಸಮಯದಲ್ಲಿ ಏಕದಿನ ಕ್ರಿಕೆಟ್ನ ಅತ್ಯಧಿಕ ಮೊತ್ತವಾಗಿತ್ತು.