ಕಿಡ್ನಿ ಸ್ಟೋನ್​ ಆಗಲು ಈ ಹವ್ಯಾಸಗಳೇ ಕಾರಣ!

ವಿನಾಯಕ ನಾಯಕ

ಕಿಡ್ನಿ ಸ್ಟೋನ್​ ಆಗಲು ಈ ಹವ್ಯಾಸಗಳೇ ಕಾರಣ!

ಕಿಡ್ನಿಯಲ್ಲಿ ಕಲ್ಲು (Kidney Stones) ಸೃಷ್ಟಿಯಾಗಲು ನಮ್ಮ ದೈನಂದಿನ ತಪ್ಪು ಆಹಾರ ಪದ್ಧತಿ ಮತ್ತು ಕೆಟ್ಟ ಹವ್ಯಾಸಗಳೇ ಮುಖ್ಯ ಕಾರಣ. ಕಡಿಮೆ ನೀರು ಕುಡಿಯುವುದು, ಅತಿಯಾದ ಉಪ್ಪು, ಮಾಂಸಾಹಾರ ಹಾಗೂ ಸಕ್ಕರೆಯ ಬಳಕೆ ಕಿಡ್ನಿಯ ಆರೋಗ್ಯವನ್ನು ಹದಗೆಡಿಸುತ್ತದೆ.

ಕಡಿಮೆ ನೀರು ಕುಡಿಯುವುದು

ಇದು ಕಿಡ್ನಿಯಲ್ಲಿ ಕಲ್ಲಿನ ಉತ್ಪತ್ತಿಗೆ ಅತ್ಯಂತ ಪ್ರಮುಖ ಕಾರಣ. ದೇಹದಲ್ಲಿ ನೀರಿನಂಶ ಕಡಿಮೆಯಾದಾಗ, ಮೂತ್ರವು ಗಟ್ಟಿಯಾಗುತ್ತದೆ. ಇದರಿಂದ ಮೂತ್ರದಲ್ಲಿರುವ ಕ್ಯಾಲ್ಸಿಯಂ, ಆಕ್ಸಲೇಟ್ ಮತ್ತು ಯೂರಿಕ್ ಆಸಿಡ್‌ಗಳು ಒಂದಕ್ಕೊಂದು ಸೇರಿ ಕಲ್ಲಿನ ರೂಪ ಪಡೆಯುತ್ತವೆ.

ಅತಿಯಾದ ಉಪ್ಪಿನ ಬಳಕೆ

ಆಹಾರದಲ್ಲಿ ಉಪ್ಪಿನ (ಸೋಡಿಯಂ) ಪ್ರಮಾಣ ಹೆಚ್ಚಾದರೆ, ಅದು ಮೂತ್ರದಲ್ಲಿ ಕ್ಯಾಲ್ಸಿಯಂ ಪ್ರಮಾಣವನ್ನು ಹೆಚ್ಚಿಸುತ್ತದೆ. ಈ ಹೆಚ್ಚುವರಿ ಕ್ಯಾಲ್ಸಿಯಂ ಕಿಡ್ನಿಯಲ್ಲಿ ಕಲ್ಲಾಗಿ ಮಾರ್ಪಡುತ್ತದೆ.

ಅತಿಯಾದ ಮಾಂಸಾಹಾರ ಸೇವನೆ

ರೆಡ್ ಮೀಟ್ (ಕುರಿ, ದನ ಇತ್ಯಾದಿ ಮಾಂಸ), ಚಿಕನ್, ಮೊಟ್ಟೆ ಮತ್ತು ಸೀಫುಡ್‌ಗಳನ್ನು ಅತಿಯಾಗಿ ತಿನ್ನುವುದರಿಂದ ದೇಹದಲ್ಲಿ ಯೂರಿಕ್ ಆಸಿಡ್ ಪ್ರಮಾಣ ಹೆಚ್ಚಾಗುತ್ತದೆ. ಇದು ಯೂರಿಕ್ ಆಸಿಡ್ ಕಲ್ಲುಗಳು ಉಂಟಾಗಲು ಕಾರಣವಾಗುತ್ತದೆ.

ಸಾಫ್ಟ್ ಡ್ರಿಂಕ್ಸ್ ಕುಡಿಯುವುದು

ಕಾರ್ಬೊನೇಟೆಡ್ ಪಾನೀಯಗಳು ಮತ್ತು ಪ್ಯಾಕ್ ಮಾಡಿದ ಜ್ಯೂಸ್‌ಗಳಲ್ಲಿ ಫಾಸ್ಫೊರಿಕ್ ಆಸಿಡ್ ಮತ್ತು ಸಕ್ಕರೆ ಪ್ರಮಾಣ ಹೆಚ್ಚಿರುತ್ತದೆ. ಇವು ಕಿಡ್ನಿಯಲ್ಲಿ ಕಲ್ಲು ಉಂಟಾಗುವ ಸಾಧ್ಯತೆಯನ್ನು ದ್ವಿಗುಣಗೊಳಿಸುತ್ತವೆ.

ಅತಿಯಾದ ಸಿಹಿ ಪದಾರ್ಥಗಳ ಸೇವನೆ

ಸಕ್ಕರೆ, ಚಾಕೊಲೇಟ್ ಮತ್ತು ಬೇಕರಿ ತಿಂಡಿಗಳನ್ನು ಅತಿಯಾಗಿ ತಿನ್ನುವುದರಿಂದ ದೇಹದಲ್ಲಿ ಕ್ಯಾಲ್ಸಿಯಂ ಹೀರಿಕೊಳ್ಳುವ ಪ್ರಕ್ರಿಯೆಗೆ ತೊಂದರೆಯಾಗುತ್ತದೆ ಮತ್ತು ಮೂತ್ರದಲ್ಲಿ ಆಕ್ಸಲೇಟ್ ಪ್ರಮಾಣ ಹೆಚ್ಚಿ ಕಲ್ಲುಗಳು ಸೃಷ್ಟಿಯಾಗುತ್ತವೆ.